ಇದೀಗ ಉನ್ನತ ಶೈಕ್ಷಣಿಕ ವಲಯದಲ್ಲಿ ಗಟ್ಟಿಯಾಗಿ ಧ್ವನಿಸುತ್ತಿರುವ ಮಾತೆಂದರೆ ರಾಜ್ಯದ 9 ವಿಶ್ವವಿದ್ಯಾಲಯಗಳಿಗೆ ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ ಅನ್ನುವುದರ ಕುರಿತಾಗಿ. ಅಂದರೆ ನಾವು ಇಲ್ಲಿ ಗಂಭೀರವಾಗಿ ಆಲೇೂಚನೆ ಮಾಡಬೇಕಾದ ವಿಷಯಗಳೆಂದರೆ; ಸದ್ಯಕ್ಕೆ ಈ ಒಂಭತ್ತು ವಿಶ್ವವಿದ್ಯಾಲಯಗಳ ದ್ವಾರಗಳನ್ನು ಮುಚ್ಚುವ ಪರಿಸ್ಥಿತಿ ಯಾಕೆ ಬಂದಿದೆ ಮಾತ್ರವಲ್ಲ ಇದಕ್ಕೆಲ್ಲ ಕಾರಣ ಯಾರು? ಒಂದಂತೂ ನಾವು ಅರ್ಥಮಾಡಿಕೊಳ್ಳಬೇಕು, ಇದಕ್ಕೆಲ್ಲ ರಾಜಕೀಯ ತಂದು ಅಂಟಿಸುವ ಕೆಲಸ ಬೇಡ. ಬದಲಾಗಿ ಇದುವರೆಗೆ ನಾವು ತೆಗೆದುಕೊಂಡ ಕೆಲವೊಂದು ಶೈಕ್ಷಣಿಕ ನಿರ್ಧಾರಗಳು. ಸದ್ಯದ ವಾಸ್ತವಿಕ ಪರಿಸ್ಥಿತಿಯೇ ಈ ವಿವಿಗಳನ್ನು ಮುಚ್ಚುವ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾವೆ ಅನ್ನುವುದು ರಾಜಕೀಯ ಮೀರಿ ನಾವೆಲ್ಲರೂ ಶೈಕ್ಷಣಿಕವಾಗಿ ಚಿಂತನೆ ಮಾಡಬೇಕಾದ ಕಾಲ ಕೂಡಿ ಬಂದಿದೆ.
1. ಬಹು ಹಿಂದೆ ವಿ.ವಿ.ಗಳನ್ನು ಹುಟ್ಟಿಸುವ ಸಂದರ್ಭದಲ್ಲಿ ಇಂತಿಷ್ಟು ಕಾಲೇಜುಗಳು ಮತ್ತು ವಿದ್ಯಾರ್ಥಿಗಳು ಆಯಾಯ ವಿ.ವಿ. ವ್ಯಾಪ್ತಿಯಲ್ಲಿ ಇರ ಬೇಕು ಅನ್ನುವ ನಿಯಮವಿತ್ತು ಹೊರತು ಅದೊಂದು ಭೌಗೋಳಿಕ ವ್ಯಾಪ್ತಿಯ ರಚನೆಯಾಗಿರಲಿಲ್ಲ. ಉದಾ: ಇಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕಾಲೇಜುಗಳು ಮೈಸೂರು ವಿ.ವಿ.ವ್ಯಾಪ್ತಿಯ ಅಡಿಯಲ್ಲಿ ಸಂಯೇೂಜನೆಗೊಂಡಿದ್ದವು. ತದನಂತರದಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಕಾಲೇಜುಗಳ ಸಂಖ್ಯೆಗಳು ಜಾಸ್ತಿ ಯಾಯಿತು. ಹಾಗಾಗಿ ಮೂರು ನಾಲ್ಕು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಂದು ವಿ.ವಿ. ಸ್ಥಾಪನೆಯಾದ ಉದಾಹರಣೆಗಳು ನಮ್ಮಮುಂದಿದೆ. ಆಗ ಪ್ರತಿಯೊಂದು ವಿ.ವಿ.ಗಳಿಗೂ ವಿದ್ಯಾರ್ಥಿಗಳ ಕೊರತೆ ಕಾಡಲೇ ಇಲ್ಲ. ಹಾಗಾದರೆ ವಿದ್ಯಾರ್ಥಿಗಳ ಕೊರತೆ ಕಾಡಲು ಪ್ರಾರಂಭವಾಗಿದ್ದು ಯಾವಾಗ ಕೇಳಿದರೆ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಹೆಚ್ಚು ಹೆಚ್ಚು ಉದಾರೀಕರಣ ಮಾಡುತ್ತಾ ತಾಲ್ಲೂಕು ಮಟ್ಟಕ್ಕೆ ವಿ.ವಿ.ಗಳನ್ನು ವಿಸ್ತರಣೆ ಮಾಡಲು ಸರ್ಕಾರಗಳು ಮುಂದಾದಾಗ ವಿದ್ಯಾರ್ಥಿಗಳ ಸಂಖ್ಯೆ ಸಮಸ್ಯೆ ಕಾಡಲು ಪ್ರಾರಂಭವಾಯಿತು.
2. ಇದಕ್ಕೆ ಸರಿಯಾಗಿ ವಿ.ವಿ.ಗಳಲ್ಲಿನ ಕಲಿಕೆಯ ಪ್ರಮುಖ ವಿಷಯಗಳೆಂದರೆ ಮಾನವಿಕ ಶಾಸ್ತ್ರ, ಮೂಲ ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದ ವಿಷಯಗಳು. ಆದರೆ ಇದೆ ಕಾಲಘಟ್ಟದಲ್ಲಿ ಇಂತಹ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಉನ್ನತ ಪದವಿಗಳಿಸುವರ ಆಸಕ್ತಿಯೂ ಕಡಿಮೆಯಾಗುತ್ತಾ ಬಂದು ಹೆಚ್ಚಿನ ವಿದ್ಯಾರ್ಥಿಗಳು ಪದವಿಪೂರ್ವ ಹಂತದಲ್ಲಿ ವಿಜ್ಞಾನ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಇಂಜಿನಿಯರಿಂಗ್ ಮೆಡಿಕಲ್ ಪ್ಯಾರಾ ಮೆಡಿಕಲ್ ಹಾಗೂ ಇನ್ನಿತರ ಉದ್ಯೋಗ ಆಧರಿಸಿದ ವಿಷಯಗಳ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಖಮಾಡಿದಾಗ ಅದಕ್ಕೆ ಅನುಗುಣವಾಗಿ ಸರ್ಕಾರ ಕೂಡ ತಾಂತ್ರಿಕ ಕೌಶಲಾಧರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂತು. ಈ ಕಾರಣದಿಂದ ಮಾನವಿಕ ಮೂಲ ವಿಜ್ಞಾನ ವಾಣಿಜ್ಯ ವಿಷಯಗಳ ಅಧ್ಯಯನದ ಕಾಲೇಜುಗಳಿಗೆ ವಿ.ವಿ.ಗಳಿಗೆ ಗಣನೀಯವಾಗಿ ವಿದ್ಯಾರ್ಥಿ ಸಂಖ್ಯೆ ಕಡಿಮೆಯಾಯಿತು ಇದು ಸಹಜ ಕೂಡಾ.
3. ವಿ.ವಿ. ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಯಿತು ಅಂದರೆ ಅರ್ಥವೇನು? ಪ್ರತಿ ಹಳ್ಳಿ ಹಳ್ಳಿ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೇಂದ್ರಗಳು ಹುಟ್ಟಿ ಕೊಂಡವು. ಹಾಗಾಗಿ ನಮ್ಮ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗಾಗಿ ದೂರದ ವಿಶ್ವ ವಿದ್ಯಾಲಯಗಳ ಪೀಠಗಳನ್ನು ಹುಡುಕಿಕೊಂಡು ಹೇೂಗುವ ಅಗತ್ಯವಾದರೂ ಏನ್ನಿದೆ?ಮಾತ್ರವಲ್ಲ ಇದಾಗಲೇ ಪದವಿ ಕಾಲೇಜಿನಲ್ಲಿ ಪ್ರಾರಂಭಗೊಂಡ ಸ್ನಾತಕೋತ್ತರ ಕೇಂದ್ರಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಪರಿಸ್ಥಿತಿಗೆ ಬಂದು ನಿಂತಿದ್ದಾವೆ. ಈ ಎಲ್ಲಾ ಕಾರಣದಿಂದಲೂ ಕೂಡಾ ಇದಾಗಲೇ ಹುಟ್ಟಿಕೊಂಡ ವಿವಿಗಳು ವಿದ್ಯಾರ್ಥಿಗಳಿಲ್ಲದೆ ಬಿಕೇೂ ಅನ್ನುವ ಪರಿಸ್ಥಿತಿಗೆ ಬಂದು ನಿಲ್ಲುವ ಪರಿಸ್ಥಿತಿ ಬಂದು ನಿಂತಿದೆ.
4. ವಿವಿಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಲು ಇನ್ನೂ ಒಂದು ಸ್ವಯಂಕೃತ ಕಾರಣವೆಂದರೆ ಇತ್ತೀಚೆಗೆ ವಿ.ವಿ.ವ್ಯಾಪ್ತಿಯಲ್ಲಿರುವ ಅತ್ಯಂತ ಪ್ರತಿಷ್ಠಿತ ಮತ್ತು ಅತೀ ಹೆಚ್ಚಿನ ವಿದ್ಯಾರ್ಥಿಗಳನ್ನು ಹೊಂದಿರುವ ಕಾಲೇಜುಗಳು ವಿ.ವಿ.ಗಳಿಂದ ಶೈಕ್ಷಣಿಕ ಬೇರ್ಪಟ್ಟು ಸ್ವಾಯತ್ತತೆ ಶೈಕ್ಷಣಿಕ ಸಂಸ್ಥೆಗಳಾಗಿ ಪರಿವತ೯ನೆಯಾಗುತ್ತಿರುವುದು ಕೂಡಾ ವಿ.ವಿ.ಗಳ ಶೈಕ್ಷಣಿಕ ಮತ್ತು ಆರ್ಥಿಕ ಶಕ್ತಿಯನ್ನೆ ಕಸಿದುಕೊಂಡಿದ್ದಾವೆ ಅಂದರೂ ತಪ್ಪಾಗಲಾರದು. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೆ ಪ್ರತ್ಯೇಕ ವಿ.ವಿ.ಗಳು ಬೇಕಾ ಅನ್ನುವ ಪ್ರಶ್ನೆ ಹುಟ್ಟಿ ಕೊಂಡರು ಆಶ್ಚರ್ಯ ಪಡ ಬೇಕಾಗಿಲ್ಲ.
ಇದಕ್ಕೆ ಸರಿಯಾಗಿ ಪದವಿ ನೀಡಲು ಮುಕ್ತ ವಿ.ವಿ.ಗಳು ಬಾಗಿಲು ತೆರೆದು ಕೈ ಬೀಸಿ ಕರೆಯುತ್ತಿದ್ದಾವೆ. ಹಾಗಾಗಿ ಪ್ರಸ್ತುತ ವಿದ್ಯಾರ್ಥಿಗಳ ಕೊರತೆಯಿಂದ ಬಳಲುತ್ತಿರುವ ವಿ.ವಿ.ಗಳನ್ನು ಯಾವ ಪುರುಷಾರ್ಥಕ್ಕೆ ಮುಂದುವರಿಸ ಬೇಕು ಅನ್ನುವ ಬಹು ದೊಡ್ಧ ಸರ್ಕಾರದ ಮುಂದೆ ಬಂದು ನಿಂತಿದೆ. ವಿ.ವಿ.ಗಳನ್ನು ಸಾಕುವುದೆಂದರೆ ಸುಲಭವಲ್ಲ. ಉಪಕುಲಪತಿಗಳು ಅದೆಷ್ಟೋ ಆಡಳಿತ ಪರೀಕ್ಷಾಂಗ ಅಧಿಕಾರಿಗಳು ವಿವಿಧ ವಿಷಯಗಳಿಗೆ ಪ್ರಾಧ್ಯಾಪಕರುಗಳು. ಅವರುಗಳಿಗೆ ಪಾಠ ಮಾಡಲು ಸಾಕಷ್ಟು ವಿದ್ಯಾರ್ಥಿಗಳು ಇಲ್ಲದಿರುವ ಪರಿಸ್ಥಿತಿ. ವಿ.ವಿ.ಅಂದರೆ ನೂರಾರು ಎಕರೆ ಜಾಗ ಅದಕ್ಕಾಗಿಯೇ ಕಟ್ಟಡಗಳು ಪರಿಸರ ಪರಿಕರಗಳನ್ನು ನಿರ್ಮಿಸುವ ಹೊಣೆ ಸರ್ಕಾರದ್ದು. ವಿದ್ಯಾರ್ಥಿಗಳೇ ಇಲ್ಲದ ಮೇಲೆ ಈ ಸ್ಥಿತಿಯಲ್ಲಿ ನಮಗೆ ಇಂತಹ ವಿ.ವಿ.ಗಳು ಬೇಕಾ ಅನ್ನುವ ಮೂಲಭೂತ ಪ್ರಶ್ನೆ ಹುಟ್ಟಿಕೊಂಡಿರಲೂಬಹುದು. ಅಂತೂ ನಾವು ಗಂಭೀರವಾಗಿ ಮರು ಚಿಂತನೆ ಮಾಡಬೇಕಾದದ್ದು ಏನೆಂದರೆ ನಮ್ಮ ಉನ್ನತ ಶಿಕ್ಷಣ ಮತ್ತು ವಿ.ವಿ.ಗಳ ಇಂದಿನ ಈ ಪರಿಸ್ಥಿತಿಗೆ ಕಾರಣ ಯಾರು ಅನ್ನುವುದು ಪ್ರಮುಖವಾದ ಪ್ರಶ್ನೆ.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ