ಬೆಂಗಳೂರು: ದಾಸರ ಪದಗಳಲ್ಲಿರುವ ಸರಳ ಕನ್ನಡ ಸಾಹಿತ್ಯದ ಸಾರ ಅರಿತು ಹಾಡಿದಾಗ ಮಾತ್ರ ಅದರ ಮಾಧುರ್ಯ ತಿಳಿಯುತ್ತದೆ. ಅಧ್ಯಾತ್ಮ ಸಾಧನೆಗೂ ಪೂರಕವಾಗುತ್ತದೆ ಎಂದು ಹಿರಿಯ ವಿದ್ವಾಂಸ ಮತ್ತು ಪೂರ್ಣಪ್ರಜ್ಞ ವಿದ್ಯಾಪೀಠದ ನಿವೃತ್ತ ಪ್ರಾಚಾರ್ಯ ಡಾ. ಹರಿದಾಸ ಭಟ್ಟ ಹೇಳಿದರು.
ನಗರದ ಬಸವನಗುಡಿಯ ಪುತ್ತಿಗೆ ಮಠದಲ್ಲಿ ಶ್ರೀ ಅನುಗ್ರಹ ಸಂಗೀತ ಮಹಾ ವಿದ್ಯಾಲಯದ 25ನೇ ವರ್ಷದ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಮತ್ತು ಸದ್ಗುರು ತ್ಯಾಗರಾಜ ಸ್ವಾಮಿಗಳ ಆರಾಧನಾ ಮಹೋತ್ಸವದ ಸಮಾರೋಪ ಸಂದೇಶ ನೀಡಿದರು.
ಮಕ್ಕಳು, ಯುವಜನರು, ಮಾತೆಯರು ಮತ್ತು ಹಿರಿಯ ನಾಗರಿಕರು- ಎಲ್ಲರೂ ಅನುಗ್ರಹ ವಿದ್ಯಾಲಯದ ಉಚಿತ ಶಿಬಿರದಲ್ಲಿ ಕಳೆದ 25 ವರ್ಷಗಳಿಂದ ದೇವರನಾಮ ಕಲಿಯುತ್ತ ಇದ್ದಾರೆ.ಕಲಿಕಾ ಶಿಬಿರ ಶತಮಾನೋತ್ಸವವನ್ನೂ ಆಚರಿಸಲಿ ಎಂದು ಹಾರೈಸಿದರು. ಈ ನಿಟ್ಟಿನಲ್ಲಿ ವಿದ್ವಾನ್ ಶ್ರೀಕಂಠ ಭಟ್ ಸಾಧನೆ ದೊಡ್ಡದು ಎಂದರು. ರಾಜ್ಯಾದ್ಯಂತ ಇಂಥ ಶಿಬಿರ ನಡೆದು ಮನೆ- ಮನೆಗೆ ದಾಸ ಸಾಹಿತ್ಯ ಪ್ರವೇಶ ಮಾಡಬೇಕು ಎಂದು ಅವರು ನುಡಿದರು.
ಪಠ್ಯಕ್ರಮದಲ್ಲಿ ಸಂಗೀತವೂ ಸೇರಲಿ:
ಸನ್ಮಾನ ಸ್ವೀಕರಿಸಿ ಮಾತನಾಡಿದ ವೀಣಾ ವಿದುಷಿ ರೇವತಿ ಕಾಮತ್, ಪಠ್ಯಕ್ರಮದಲ್ಲಿ ಸಂಗೀತವೂ ಸೇರ್ಪಡೆಯಾಗಬೇಕು ಎಂದರು. ಸಂಗೀತದಿಂದ ರಂಜನೆಯೊಂದಿಗೆ ಶಾಂತಿ, ನೆಮ್ಮದಿ ದೊರಕುತ್ತದೆ ಎಂಬುದು ಜಗತ್ತಿಗೇ ಅರಿವಾಗಿದೆ. ಹಾಗಿರುವಾಗ ಶಾಲಾ ಪಠ್ಯದಲ್ಲಿ ಸಂಗೀತದ ಕಲಿಕೆಗೂ ಅವಕಾಶ ಒದಗಿಸಿಕೊಡುವತ್ತ ಶಿಕ್ಷಣ ತಜ್ಞರು, ಸರ್ಕಾರ ಚಿಂತನೆ ನಡೆಸಬೇಕು. ಮಕ್ಕಳಿಗೆ ಎಳವೆಯಲ್ಲೇ ಸಂಗೀತ ಪಾಠವಾಗಬೇಕು. ಈ ನಿಟ್ಟಿನಲ್ಲಿ ತಾಯಿ ಪಾತ್ರ ಮುಖ್ಯ. ಹಾಗಾಗಿ ಶ್ರೀಕಂಠ ಭಟ್ಟರು ಮಾತೆಯರಿಗೆ ಶಿಬಿರ ನಡೆಸಿರುವುದು ಇಡೀ ಕುಟುಂಬಕ್ಕೆ ಸಂಸ್ಕಾರ ನೀಡಿದಂತಾಗಿದೆ ಎಂದರು. ಹರಿದಾಸರ ಪದಗಳು ಅಧ್ಯಾತ್ಮಿಕ ಅನುಭೂತಿ ನೀಡುತ್ತವೆ ಎಂದವರು ನುಡಿದರು.
ಗುರುವಿನ ಸ್ಥಾನ ದೊಡ್ಡದು: ವಿದ್ಯಾಲಯದ ಪ್ರಾಚಾರ್ಯ ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ ಮಾತನಾಡಿ, ಪ್ರತಿ ಧರ್ಮದಲ್ಲೂ ‘ಗುರು’ ವಿಗೆ ಉನ್ನತ ಸ್ಥಾನವಿದೆ. ಗುರು ಎಂಬುದು ಕೇವಲ ವ್ಯಕ್ತಿಯಲ್ಲ, ಅದೊಂದು ದಿವ್ಯ ಶಕ್ತಿ. ಹಾಗಾಗಿಯೇ ನಮ್ಮ ವಿದ್ಯಾಲಯ ರಜತ ಮಹೋತ್ಸವ ಅಂಗವಾಗಿ ‘ಶ್ರೀಗುರು ಪೂರ್ಣಮಾರ್ಚನಂ’ ಕೃತಿ ಲೋಕಾರ್ಪಣೆ ಮಾಡಿದೆ ಎಂದರು. ವೀಣೆಗೂ ಗಾಯನಕ್ಕೂ ಅವಿನಾo ಸಂಬಂಧವಿದೆ. ವೀಣೆಯ ನಾದವನ್ನು ಗ್ರಹಿಸಿ ಅದಕ್ಕೆ ಕಂಠದಲ್ಲಿ ಶಕ್ತಿ ತುಂಬಿದಾಗ ಮಧುರಗಾಯನವಾಗುತ್ತದೆ ಎಂದು ಶ್ರೀಕಂಠ ಹೇಳಿದರು. ವಸುಮತಿ ಭಟ್, ಸುಬ್ಬುಕೃಷ್ಣ, ಆರ್ಯ, ಬಿ.ಆರ್.ವಿ. ಪ್ರಸಾದ್ ಹಾಜರಿದ್ದರು. ದೇವರ ನಾಮ ಉಚಿತ ಕಲಿಕಾ ಶಿಬಿರದ ಶಿಬಿರಾರ್ಥಿಗಳು ದೇವರ ಏಕ ಕಂಠದಿಂದ ದೇವರ ನಾಮಗಳನ್ನು ಹಾಡಿದರು. ಡಾ. ಹರಿದಾಸ ಭಟ್ಟರು ವಿಶೇಷ ವ್ಯಾಖ್ಯಾನ ನೀಡಿದರು.
ವಿದ್ವಾನ್ ಜೆ.ಎಸ್. ಶ್ರೀಕಂಠ ಭಟ್ಟರು ಕಲ್ಪತರು ನಾಡು ತುಮಕೂರಿನಲ್ಲಿ ಮತ್ತು ರಾಜಧಾನಿ ಬೆಂಗಳೂರಿನಲ್ಲಿ ಉಚಿತ ದೇವರನಾಮದ ಶಿಬಿರಗಳನ್ನು 25 ವರ್ಷದಿಂದ ನಡೆಸುತ್ತಾ ಹೊಸ ಕ್ರಾಂತಿ ಮಾಡುತ್ತಿದ್ದಾರೆ. ಅವರಿಂದ ಸಮಾಜಕ್ಕೆ ಬಹು ದೊಡ್ಡ ಕೊಡುಗೆಯಾಗುತ್ತಿದೆ. ವಿವಿಧ ಕ್ಷೇತ್ರದ ಗಣ್ಯರನ್ನು ಗುರುತಿಸಿ ಗೌರವಿಸುವುದು, ಗಾಯನ ಸಮಾರಾಧನೆಗಳು, ಕೃತಿ ಲೋಕಾರ್ಪಣೆ ಮೂಲಕ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ ಮಾದರಿ ಸೇವೆ ಮಾಡುತ್ತ ಇದೆ.
- ರಾಜಗುರು ದ್ವಾರಕಾನಾಥ್
ಪ್ರಖ್ಯಾತ ಜ್ಯೋತಿಷಿ ಮತ್ತು ಅಂಕಣಕಾರರು, ಬೆಂಗಳೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ