ಇಂದು ವಿಶ್ವ ರೇಡಿಯೋ ದಿನ: ಸಂಗ್ರಹ ಯೋಗ್ಯ ಮಾಹಿತಿಗಳ ಹರಿಕಾರ ಬಾನುಲಿ

Upayuktha
0



ರೇಡಿಯೋ ಅತ್ಯಂತ ಹಳೆಯ ಹಾಗೂ ಇಂದಿಗೂ ಚಾಲ್ತಿಯಲ್ಲಿರುವ ಸಂವಹನ ಮಾಧ್ಯಮವಾಗಿದ್ದು, ಸಂಪರ್ಕ ಮಾಧ್ಯಮದಲ್ಲಿ ಬಹಳ ಪರಿಣಾಮಕಾರಿಯಾಗಿ ಆಬಾಲವೃದ್ಧರಾದಿಯಾಗಿ ಎಲ್ಲಾ ವಿಷಯಗಳನ್ನು ತಲುಪಿಸುವ ವಿಶ್ವಾಸ ಗಳಿಸಿರುವ ಮಾಧ್ಯಮವಾಗಿದೆ.     


ಏಕೆಂದರೆ ಇಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಯಾವಾಗಲೂ ಕೂಡ ಮನರಂಜನೆ, ಮಾಹಿತಿ, ಶಿಕ್ಷಣ ಇವುಗಳನ್ನ ಒಳಗೊಂಡಿರುತ್ತದೆ. ಜೊತೆಗೆ ಏನೇ ಕಾರ್ಯಕ್ರಮ ಪ್ರಸಾರ ಮಾಡಬೇಕಾದರೂ ಕೂಡ ಯೋಚಿಸಿ, ಚಿಂತಿಸಿ, ಚರ್ಚಿಸಿ ಪ್ರಸಾರ ಮಾಡಲಾಗುತ್ತದೆ. ಪ್ರಸಾರವಾಗುವ ಎಲ್ಲಾ ಮಾಹಿತಿಗಳು ಕೂಡ ಸಂಗ್ರಹ ಯೋಗ್ಯವಾಗಿರುತ್ತವೆ.  


ಇಂದಿಗೂ ಕೂಡ ರೇಡಿಯೋ ಕೇಳುವ ಮೂಲಕ ದೇಶದಲ್ಲಿ ನಡೆಯುತ್ತಿರುವ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಮಾಹಿತಿಗಳನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿರುವ ರೇಡಿಯಗೂ ಒಂದು ದಿನ ಮೀಸಲಿಡಲಾಗಿದ್ದು, ಅದುವೇ ಫೆಬ್ರವರಿ 13 ವಿಶ್ವ ರೇಡಿಯೋ ದಿನ. ಹಾಗಾದ್ರೆ ವಿಶ್ವ ರೇಡಿಯೋ ದಿನ ಇತಿಹಾಸ ಹಾಗೂ ಮಹತ್ವವೇನು? ಈ ಕುರಿತಾದ  ಮಾಹಿತಿ ತಿಳಿದುಕೊಳ್ಳಲೇಬೇಕು.


ವಿಶ್ವ ರೇಡಿಯೋ ದಿನದ ಇತಿಹಾಸ ಬಗ್ಗೆ ಹೇಳುವುದಾದರೆ...

ಫೆಬ್ರವರಿ 13 ರಂದು 1946 ರಲ್ಲಿ ಅಮೆರಿಕದಲ್ಲಿ ಮೊದಲ ರೇಡಿಯೋ ಪ್ರಸರಣ ಸಂದೇಶವನ್ನು ಕಳುಹಿಸಲಾಯಿತು. 2010ರಲ್ಲಿ ಸ್ಪೇನ್‌ನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ಅದೇ ದಿನದಂದು ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬಗ್ಗೆ ತನ್ನ ಅಭಿಪ್ರಾಯವನ್ನು ಯುನೆಸ್ಕೋದ ಮುಂದೆ ಪ್ರಸ್ತಾಪಿಸಲಾಯಿತು. 2012 ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರೇಡಿಯೋ ದಿನವು ಆಚರಿಸಲು ಮುಂದಾಯಿತು. ಹಾಗಾಗಿ 2012ರ ಫೆಬ್ರವರಿ 13ರಿಂದ ಪ್ರತಿ ವರ್ಷವು ವಿಶ್ವ ರೇಡಿಯೋ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.


ಭಾರತದಲ್ಲಿ ರೇಡಿಯೋದ ಇತಿಹಾಸ:

ಭಾರತದಲ್ಲಿ ರೇಡಿಯೋ ಪ್ರಸಾರವು ಆಕಾಶವಾಣಿ ಅಸ್ತಿತ್ವಕ್ಕೆ ಬರುವ ಸರಿ ಸುಮಾರು 13 ವರ್ಷಗಳ ಮೊದಲೇ ಪ್ರಾರಂಭವಾಯಿತು. ಜೂನ್ 1923 ರಲ್ಲಿ, ಬಾಂಬೆ ರೇಡಿಯೋ ಕ್ಲಬ್ ದೇಶದಲ್ಲಿ ಮೊದಲ ರೇಡಿಯೋ ಪ್ರಸಾರವನ್ನು ಮಾಡಿತು. ಆದಾದ ಐದು ತಿಂಗಳ ನಂತರದಲ್ಲಿ, ಕಲ್ಕತ್ತಾ (ಈಗ ಕೋಲ್ಕತ್ತಾ) ರೇಡಿಯೋ ಕ್ಲಬ್ ನ್ನು ಸ್ಥಾಪಿಸಲಾಯಿತು. ಭಾರತೀಯ ಪ್ರಸಾರ ಕಂಪನಿ (ಐಬಿಸಿ) ಜುಲೈ 23, 1927 ರಂದು ಅಸ್ತಿತ್ವಕ್ಕೆ ಬಂದಿತು, ಆದರೆ ಮೂರು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ನಷ್ಟವನ್ನು ಅನುಭವಿಸಿತು. 


ನಂತರದಲ್ಲಿ ಏಪ್ರಿಲ್ 1930 ರಲ್ಲಿ, ಕೈಗಾರಿಕೆಗಳು ಮತ್ತು ಕಾರ್ಮಿಕ ಇಲಾಖೆಯ ಅಡಿಯಲ್ಲಿ ಭಾರತೀಯ ಪ್ರಸಾರ ಸೇವೆಯು ಪ್ರಾಯೋಗಿಕ ಆಧಾರದ ಮೇಲೆ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆಗಸ್ಟ್ 1935 ರಲ್ಲಿ ಲಿಯೋನೆಲ್ ಫೀಲ್ಡೆನ್ ಅವರನ್ನು ಮೊದಲ ಪ್ರಸಾರ ನಿಯಂತ್ರಕರನ್ನಾಗಿ ನೇಮಿಸಲಾಯಿತು. ಆದಾದ ಒಂದೇ ತಿಂಗಳಿಗೆ ಮೈಸೂರಿನಲ್ಲಿ ಖಾಸಗಿ ರೇಡಿಯೋ ಕೇಂದ್ರವಾದ ಆಕಾಶವಾಣಿ ಸ್ಥಾಪನೆಯಾಯಿತು. ಜೂನ್ 8, 1936 ರಂದು, ‘ಭಾರತೀಯ ರಾಜ್ಯ ಪ್ರಸಾರ ಸೇವೆ’ ಆಲ್ ಇಂಡಿಯಾ ರೇಡಿಯೋ ಪ್ರಾರಂಭವಾಯಿತು.


ವೈವಿಧ್ಯಮಯ ಸಾಹಿತ್ಯ, ಮನರಂಜನೆ ನೀಡುವ "ಆಕಾಶವಾಣಿ" ಎನ್ನುವ ವಿಶಿಷ್ಟ ಪ್ರಪಂಚ!.


ಈಗಲೂ ಕೂಡ ಹಿರಿಯರು ಹೇಳುತ್ತಾರೆ... ಯಾವಾಗಲೂ ನಾವು ತಾಳ್ಮೆಯಿಂದ ಕೇಳಿಸಿಕೊಳ್ಳಬೇಕು ಎಂದು. ಈ "ಕೇಳ್ಮೆ" ಎನ್ನುವುದು ಮಹತ್ವವಾದದ್ದು. "ಕೇಳಿಸಿಕೊಂಡವನು ಬಾಳಿಯಾನು"- ಎನ್ನುವ ಆಧುನಿಕ ನುಡಿ ಸೇರಿಸಬೇಕು. ಆಕಾಶವಾಣಿಯಲ್ಲಿ ಚಿತ್ರಗೀತೆಗಳನ್ನು ಮೆಚ್ಚಿ, ಕಾರ್ಯಕ್ರಮಗಳನ್ನು ಮೆಚ್ಚಿ ಪತ್ರ ಬರೆದಾಗ ಅವರು ನಮ್ಮ ಹಾಗೂ ಸ್ನೇಹಿತರ ಹೆಸರನ್ನು ಓದಿದಾಗ ಸ್ವರ್ಗ ಸುಖ ನಮಗೆ ಸಿಗುತ್ತಿತ್ತು. ಬಾಲ್ಯದಿಂದಲೂ ಕೂಡ ಆಕಾಶವಾಣಿಯೇ ನಮಗೆ ನೆಚ್ಚಿನ ಗೆಳೆಯ.


ಈಗಲೂ ಒಂದು ಆಶ್ಚರ್ಯಕರ ವಿಷಯವೆಂದರೆ... ಆಕಾಶವಾಣಿಯಲ್ಲಿ ಬರುವ ಕಾರ್ಯಕ್ರಮಗಳನ್ನು ನಾವು ಕೇಳುತ್ತಿದ್ದಾಗ ನಮ್ಮ ಮನೆಯಲ್ಲಿ ದೊಡ್ಡ ರೇಡಿಯೋ ಇತ್ತು. ಅದಕ್ಕಾಗಿ ಒಂದು ಬಾಕ್ಸ್ ಕೂಡ ಮಾಡಿದ್ದರು. ಅಲ್ಲಿ ತರ ತರಹ ಧ್ವನಿಗಳು, ಸಂಗೀತ ಎಲ್ಲವೂ ಬರುತ್ತಿತ್ತು. ಆಗ ನಮಗೆ ಕುತೂಹಲ!. ಈ ರೇಡಿಯೋ ಹಿಂದಗಡೆ ಯಾರೋ ಕುಳಿತು ಮಾತನಾಡುತ್ತಿದ್ದಾರೆ ಎಂದು!. ಆಗ ನಮಗೆ ಅಷ್ಟು ತಿಳಿಯುತ್ತಿರಲಿಲ್ಲ. ದೊಡ್ಡವರಾದ ನಂತರ ಆಕಾಶವಾಣಿಯ ಶ್ರಮ ಎಷ್ಟು ಎಂದು ತಿಳಿಯಿತು. ಗಡಿಯಾರದಂತೆ ಆಕಾಶವಾಣಿ ನನ್ನ ಮಧುರ ವಾಣಿ ನುಡಿಯುತ್ತಿತ್ತು. 


ನಾನು ಕಾಳಿಹುಂಡಿ ಶಿವಕುಮಾರ್ ಈ ಹೆಸರಿನಲ್ಲಿ ಫೋನ್-ಇನ್- ನೇರ ಪ್ರಸಾರದ ಕಾರ್ಯಕ್ರಮ, ಕೇಳುಗರ ಕೋರಿಕೆ, ಆಕಾಶವಾಣಿಯ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಇದು ನನ್ನ ದಿನಚರಿಯಾಗಿದೆ. ಏಕೆಂದರೆ ನಾನು ಕಳೆದ 30 ವರ್ಷಗಳಿಂದಲೂ ಕೂಡ ಆಕಾಶವಾಣಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಕೇಳುತ್ತಾ ಬರುತ್ತಿದ್ದೇನೆ.


ಕೆಲವರು ಹೇಳುತ್ತಾರೆ, ಆಕಾಶವಾಣಿಯನ್ನು ದಿನಾಲು ಕೇಳುತ್ತೀಯಲ್ಲ ಎಂದು. ಆಗ ಅವರು ನನ್ನನ್ನೂ ನೋಡುವ ಮನೋಭಾವವೇ ಬೇರೆ ಆಗಿರುತ್ತದೆ. ನಾನು ಏನು ತೋರ್ಪಡಿಸಿಕೊಳ್ಳದೆ  ನನ್ನ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. 


ಆಕಾಶವಾಣಿಯಿಂದ ನನ್ನ ಜೀವನದ ಶೈಲಿಯೇ ಬದಲಾಗಿದೆ. ಸಮಯಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದೇನೆ. ಸದಾಭಿರುಚಿಯ ಕಾರ್ಯಕ್ರಮಗಳು ದಿನಂಪ್ರತಿ ಪ್ರಸಾರವಾಗುತ್ತಿವೆ. ಆಬಾಲರುದ್ಧರಾಗಿಯಾಗಿ ಕಾರ್ಯಕ್ರಮಗಳು ಮಾಹಿತಿಗಳ ಮಹಾಪೂರವನ್ನು ಹರಿಸುತ್ತಿವೆ. ನಿರಂತರವಾಗಿ ಆಕಾಶವಾಣಿಯನ್ನು ಕೇಳಿದ್ದರಿಂದ ನನಗೆ ಒಂದು ಹೆಸರು ಕೂಡ ಬಂದಿದೆ!. 1997 ನೇ ಇಸವಿಯಲ್ಲಿ ಕೆ ಎಸ್ ನಿರ್ಮಲಾದೇವಿ ರವರು ನಿಲಯ ನಿರ್ದೇಶಕಿಯಾಗಿದ್ದ ಕಾಲಘಟ್ಟದಲ್ಲಿ ಮೈಸೂರು ಆಕಾಶವಾಣಿಯು ನನ್ನನ್ನು "ಅತ್ಯುತ್ತಮ ಕೇಳುಗ" ಎಂದು ಗೌರವಿಸಿದೆ. 


ಆಕಾಶವಾಣಿ ನನ್ನ ಹೆಸರನ್ನು ಎಲ್ಲೆಡೆ ಪ್ರಚಾರ ಮಾಡಿದೆ. ಜೊತೆಗೆ ಆಕಾಶವಾಣಿ ಒಂದು ರೀತಿಯಲ್ಲಿ ಹರಿಯುವ ನೀರಿನಂತೆ... ದಿನಂಪ್ರತಿ ಏನಾದರೊಂದು ಕಾರ್ಯಕ್ರಮವನ್ನು ಅದು ಮೌಲಿಕವಾಗಿ, ಬಹಳ ಪರಿಣಾಮಕಾರಿಯಾಗಿ ಎಲ್ಲರ ಅಭಿರುಚಿಗೆ ತಕ್ಕಂತೆ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬರುತ್ತಿದೆ.


ಇದು ಆಕಾಶವಾಣಿಯ ಒಂದು ಕಾರ್ಯಕ್ಷಮತೆ. ಐದು ನಿಮಿಷದ ಕಾರ್ಯಕ್ರಮ ಆಗಿರಬಹುದು. ಅರ್ಧ ಗಂಟೆಯ ಕಾರ್ಯಕ್ರಮವಾಗಿರಬಹುದು ಜೊತೆಗೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಪೂರ್ವ ತಯಾರಿಯಲ್ಲಿ ತೊಡಗಲೇಬೇಕು. ಜೊತೆಗೆ ಅದು ಪ್ರಸಾರಕ್ಕೆ ಯೋಗ್ಯವೇ ಎಂದು ಚಿಂತಿಸಿ, ಚರ್ಚಿಸಿ ನಂತರ ಪ್ರಸಾರ ಮಾಡುತ್ತಾರೆ. 


ಇದರಿಂದಾಗಿ ಆಕಾಶವಾಣಿಯಲ್ಲಿ ಏನೇ ಕಾರ್ಯಕ್ರಮವು ಬಿತ್ತರವಾದರೂ ಕೂಡ ಮೌಲಿಕವಾಗಿರುತ್ತವೆ. ಟಿವಿ, ಮೊಬೈಲ್ ಗಳಿಂದ ನಮ್ಮ ಯುವ ಜನತೆ ಹೊರಬಂದು ಇದರ ಸಂಪೂರ್ಣ ಸವಲತ್ತುಗಳನ್ನು ಪಡೆಯಬೇಕು. 


ಇನ್ನೊಂದು ಮುಖ್ಯ ವಿಷಯವೆಂದರೆ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಾ ನಾವು ಇತರೆ ಕೆಲಸಗಳನ್ನು ಕೂಡ ಮಾಡಬಹುದು. ಒಂದೆಡೆ ಮಾಹಿತಿಗಳ ಮಹಾಪೂರ ಹರಿಸುತ್ತದೆ. ಇನ್ನೊಂದೆಡೆ ಮನರಂಜನೆ. ಇವೆಲ್ಲದರ ಜೊತೆಗೆ ನಮ್ಮ ಸಮಯಕ್ಕೆ ಹೆಚ್ಚಿನ ಮಹತ್ವ ಕೊಡುವುದನ್ನು ನಾವು ಕಲಿತುಕೊಳ್ಳಬಹುದು. ಇದನ್ನೆಲ್ಲ ನಾನು ಪಡೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ.


ಹೀಗೆ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತಾ, ಕೇಳುತ್ತಾ ನನಗೆ ಅನೇಕ ಸ್ನೇಹಿತರು ಸಿಕ್ಕರು. ಆಕಾಶವಾಣಿ ಅನೇಕ ಅಧಿಕಾರಿ /ಸಿಬ್ಬಂದಿ ವರ್ಗದವರು ಕೂಡ ಎಲ್ಲಿಯಾದರೂ ಸಿಕ್ಕರೆ ಅವರನ್ನು ಮಾತನಾಡಿಸಿದರೆ ಒಂದು ರೀತಿಯಲ್ಲಿ ಸಂತಸ ಸಿಗುತ್ತದೆ. ಅವರೆಲ್ಲರೂ ಸೇರಿ ಸಮುದ್ಯತಾ ಕೇಳುಗರ ಬಳಗವನ್ನೇ ನಿರ್ಮಾಣ ಮಾಡುವ ಒಂದು ವೇದಿಕೆಯಾಗಿದೆ ಎಂದರೆ ನಿಮಗೆಲ್ಲ ಅಚ್ಚರಿ ಮೂಡಿಸಬಹುದು. 


ಈಗಲೂ ಕೂಡ ಬಳಗ ಸಕ್ರಿಯವಾಗಿ ಆಕಾಶವಾಣಿಯ ಜೊತೆಗೂಡಿ ಅನೇಕ ಕಾರ್ಯಕ್ರಮಗಳನ್ನು ಮಾಡಿಕೊಳ್ಳುತ್ತಾ ಬರುತ್ತಿದೆ. ನಮಗೆ ಯಾವ ಯಾವ ಕಾರ್ಯಕ್ರಮ ಬೇಕು ಜೊತೆಗೆ ಅವರು ಪ್ರಸಾರ ಮಾಡಿದ ಕಾರ್ಯಕ್ರಮಗಳ ಬಗ್ಗೆ ವಿಮರ್ಶೆ ನಡೆಯುತ್ತಲೇ ಇರುತ್ತದೆ. ಇದರಿಂದ ಇಬ್ಬರಲ್ಲೂ ಕೊಡು-ಕೊಳ್ಳುವಿಕೆ ಇರುತ್ತದೆ.


ಗುಣಮಟ್ಟದ ಕಾರ್ಯಕ್ರಮಗಳು ಹೆಚ್ಚಾಗಿ ಪ್ರಸಾರವಾಗಲೂ ಕೂಡ ನಮ್ಮ ಕೇಳುಗರ ಬಳಗ ಕಾರಣವಾಗಿದೆ. ಅದೇ ರೀತಿ ಕೇಳುಗರ ಅಭಿರುಚಿಗೆ ತಕ್ಕಂತಹ ಕಾರ್ಯಕ್ರಮಗಳನ್ನು ಆಕಾಶವಾಣಿ ಪ್ರಸಾರ ಮಾಡುವುದರೊಂದಿಗೆ ಮತ್ತಷ್ಟು ಕೇಳುಗರ ವರ್ಗವನ್ನು ನೇರವಾಗಿ ತಲುಪುತ್ತಿದೆ. 


ಗ್ರಾಮೀಣ ಭಾಗದಲ್ಲಿ ಆಕಾಶವಾಣಿಯೇ ಪ್ರಬಲ ಮಾಧ್ಯಮವಾಗಿತ್ತು. ಆಕಾಶವಾಣಿಯೇ ಸಮಯದಂತಿತ್ತು. ಈಗಲೂ ಕೂಡ ನನ್ನ ದಿನಚರಿ ಪ್ರಾರಂಭವಾಗುವುದು ಆಕಾಶವಾಣಿಯ ಕಾರ್ಯಕ್ರಮವನ್ನು ಕೇಳುವುದರ ಮೂಲಕ. ಜೊತೆಗೆ ನನ್ನ ದಿನಚರಿ ಅವತ್ತಿಗೆ ಮುಗಿಯುವುದು  ಕೂಡ ಆಕಾಶವಾಣಿ ಕಾರ್ಯಕ್ರಮವನ್ನು ಕೇಳಿದ ನಂತರವೇ!. 


ಈಗ ಮತ್ತೆ ಆಕಾಶವಾಣಿಯ ಶಕೆ ಆರಂಭವಾಗಿದೆ. ಎಲ್ಲರೂ ರೇಡಿಯೋ ಕೇಳುವುದನ್ನು ಪ್ರಾರಂಭಿಸಿದ್ದಾರೆ. ಸುಲಭವಾಗಿ ನಾವು ಆಕಾಶವಾಣಿಯ ಕಾರ್ಯಕ್ರಮಗಳನ್ನು ಮೊಬೈಲ್ ಯಾಪ್ ಗಳ ಮೂಲಕವೇ ಕೇಳಬಹುದಾಗಿದೆ.


ಆ ನಡುವೆ ನನಗೆ ಸಮಯ ಸಿಕ್ಕಾಗಲಿಲ್ಲ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳುತ್ತೇನೆ. ಮೊದಲು ನಾವು ಆಕಾಶವಾಣಿಯನ್ನು ಸ್ವಲ್ಪಮಟ್ಟಿಗಾದರೂ ಕೇಳುವುದನ್ನು ರೂಢಿಸಿಕೊಳ್ಳಬೇಕು. ಕಳೆದ 30 ವರ್ಷಗಳಿಂದಲೂ ಕೂಡ ತಾಳ್ಮೆಯಿಂದ ಕೇಳಿದ್ದಕ್ಕೆ ಈಗ ಆಕಾಶವಾಣಿಯ ಮೂಲಕ ಅನೇಕ ಪ್ರಯೋಜನವನ್ನು ನಾನು ಪಡೆದಿದ್ದೇನೆ. 


ಆಕಾಶವಾಣಿ ಒಂದು ರೀತಿಯಲ್ಲಿ ಸ್ನೇಹಿತನಿದ್ದಂತೆ ಜೊತೆಗೆ ವಿಶ್ವವಿದ್ಯಾಲಯವನ್ನು ಮೀರಿಸುವಂತಹ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿವೆ. ಏಕೆಂದರೆ ಆಕಾಶವಾಣಿಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳು ಪುಸ್ತಕ ರೂಪದಲ್ಲಿ ಬಂದರೆ ವಿಪುಲವಾದ ಸಾಹಿತ್ಯ ಸುಧೆ ಹರಿದುಬಿಡುತ್ತದೆ. ಆಕಾಶವಾಣಿಯ ಸಾಹಿತ್ಯ ಬಹಳ ಪರಿಣಾಮಕಾರಿಯಾಗಿದೆ. 

 

ನಮ್ಮ ನೆಚ್ಚಿನ ಅನೇಕ ಹಿರಿಯ ಸಾಹಿತಿಗಳು ಕೂಡ ಆಕಾಶವಾಣಿಯ ಮೂಲಕವೇ ಬೆಳೆದಿದ್ದಾರೆ. ತಮ್ಮ ಬಾಲ್ಯದಿಂದಲೂ ಆಕಾಶವಾಣಿ ಕಾರ್ಯಕ್ರಮಗಳನ್ನು ಕೇಳುತ್ತಾ ತಾವು ಕೂಡ ಅದರಲ್ಲಿ ಭಾಗವಹಿಸುತ್ತಾ, ತಮ್ಮ ಸಾಹಿತ್ಯ ಕೃಷಿ ಆರಂಭಿಸಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇವೆ. 


ಇದರಿಂದಾಗಿ ನನ್ನ ಸಲಹೆ ಎಂದರೆ... ಈ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಾವು ಏನಾದರೊಂದು ಸಾಧನೆ ಮಾಡಬೇಕು ಎಂದರೆ ಆಕಾಶವಾಣಿಯ ಕಾರ್ಯಕ್ರಮಗಳನ್ನು ಕೇಳಲೇಬೇಕು. ಇಲ್ಲಿ ಅಬ್ಬರದ ಧ್ವನಿ ಇರುವುದಿಲ್ಲ. ಪ್ರಸಾರವಾಗುವ ಕಾರ್ಯಕ್ರಮಗಳು ಕಳಪೆ ಎನ್ನುವುದು ಇಲ್ಲ. ಎಲ್ಲಾ ಕಾರ್ಯಕ್ರಮವನ್ನು ನಿಯಮಿತವಾಗಿ ಕೇಳಿದರೆ ಅದರಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಸಿಗುತ್ತದೆ.  ಕಾರ್ಯಕ್ರಮ ನಡೆಸುವವರು ಒಮ್ಮೆ ಸಣ್ಣಪುಟ್ಟ ತಪ್ಪುಗಳನ್ನು ಮಾಡಬಹುದು ಅಷ್ಟೇ. ಆದರೆ ಆಗಲು ಕೂಡ ಅದನ್ನು ತಿದ್ದುಕೊಂಡು ಮುಂದೆ ಮರುಕಳಿಸಿದಂತೆ ಎಚ್ಚರ ವಹಿಸುತ್ತಾರೆ. 


ಈಗಲೂ ಕೂಡ ಆಕಾಶವಾಣಿಯ ಮೂಲಕ ಕನ್ನಡದ ಅಥವಾ ಹಿಂದಿ ಚಿತ್ರಗೀತೆಗಳನ್ನು ಕೇಳುವುದೇ ಒಂದು ರೀತಿಯಲ್ಲಿ ರೋಮಾಂಚನ ಅನುಭವ ಸಿಗುತ್ತದೆ. ಎಲ್ಲರಿಗೂ ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿ ಬಿಡುತ್ತದೆ. 


ಆಕಾಶವಾಣಿಯಲ್ಲಿ ಹಲವು ನೇರ ಪ್ರಸಾರದ ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಉದಾಹರಣೆಗೆ ದಸರಾ ಜಂಬೂ ಸವಾರಿಯ ವೀಕ್ಷಕ ವಿವರಣೆ, ತಲಕಾವೇರಿ ತೀರ್ಥೋದ್ಬೋವದ ವೀಕ್ಷಕ ವಿವರಣೆ, ಕ್ರಿಕೆಟ್ ವೀಕ್ಷಕ ವಿವರಣೆ, ಅಲ್ಲದೆ ಕನ್ನಡ ನಾಡಿನಾದ್ಯಂತ ನಡೆಯುವ ಅನೇಕ ಸಾಹಿತ್ಯ ಕಾರ್ಯಕ್ರಮಗಳ ನೇರ ವೀಕ್ಷಕ ವಿವರಣೆ ಅಥವಾ ಧ್ವನಿಮುದ್ರಣ ಪ್ರಸಾರ ಮಾಡುತ್ತಾ ಬರುತ್ತಿದೆ. 


ಅದರಲ್ಲೂ ತನ್ನ ಧ್ವನಿ ಮುದ್ರಣ ಭಂಡಾರದಲ್ಲಿ ಸಂಗ್ರಹಿಸಿದ ಹಲವು ಸಂಗೀತ, ಸಾಹಿತ್ಯ ಕಾರ್ಯಕ್ರಮಗಳ ದೊಡ್ಡಪಟ್ಟಿಯೇ ಆಕಾಶವಾಣಿಯಲ್ಲಿವೆ. ಖ್ಯಾತ ಸಂಗೀತಗಾರರ ವಿದ್ವಾಂಸರ ಕಾರ್ಯಕ್ರಮಗಳು ಇವೆ. ಜೊತೆಗೆ ಆರೋಗ್ಯ, ಸಾಹಿತ್ಯ, ಸಂಗೀತ, ನಾಟಕ, ಕೃಷಿ, ಮಹಿಳೆ, ಯುವಕರು, ಮಕ್ಕಳು, ವಯಸ್ಕರು- ಹೀಗೆ ಎಲ್ಲರಿಗೂ ಎಲ್ಲ ವಿಷಯಗಳಿಗೂ ಕೂಡ ತಕ್ಕುದಾದ ಕಾರ್ಯಕ್ರಮಗಳನ್ನು ಆಕಾಶವಾಣಿ ಪ್ರಸಾರ ಮಾಡುತ್ತಾ ಬರುತ್ತಿವೆ. ತಂತ್ರಜ್ಞಾನ ಬೆಳೆದಂತೆ ಆಕಾಶವಾಣಿಯು ಕೂಡ ತನ್ನ ಕಾರ್ಯಕ್ರಮದ ಪ್ರಸಾರದ ಗುಣಮಟ್ಟವನ್ನು ಕೂಡ ಹೆಚ್ಚಿಸಿದೆ.


ರಾಜ್ಯ ವ್ಯಾಪಿ ಕಾರ್ಯಕ್ರಮಗಳು ಕೂಡ ಪ್ರಸಾರವಾದಾಗ ರಾಜ್ಯದ ಇನ್ನಿತರ ಆಕಾಶವಾಣಿಯ ಸದಭಿರುಚಿಯ ಕಾರ್ಯಕ್ರಮಗಳನ್ನು ಕೂಡ ಕೇಳಬಹುದು. ಚಿಂತನಾ, ಚರ್ಚೆ, ಭಾಷಣ, ನಾಟಕ, ಸಂಗೀತ, ಹೀಗೆ ಒಂದೇ ಎರಡೇ? ಕರ್ನಾಟಕ ರಾಜ್ಯದಲ್ಲಿರುವ ಆಕಾಶವಾಣಿ ಕೇಂದ್ರಗಳಾದ ಬೆಂಗಳೂರು, ಮೈಸೂರು, ಹಾಸನ, ಧಾರವಾಡ, ಚಿತ್ರದುರ್ಗ, ಭದ್ರಾವತಿ, ಮಂಗಳೂರು, ರಾಯಚೂರು, ಕಲಬುರ್ಗಿ, ಬಿಜಾಪುರ, ಹೊಸಪೇಟೆ, ಕಾರವಾರ, ಮಡಿಕೇರಿ, ಬಳ್ಳಾರಿ ಒಂದೊಂದು ನಿಲಯದಲ್ಲೂ ಕೂಡ ವಿಭಿನ್ನ ಕಾರ್ಯಕ್ರಮಗಳ ಭಾಷಾ ಸೊಗಡಿನ ಶೈಲಿ ಭಿನ್ನವಾದದ್ದು. 


ಎಂದೋ ಬಿತ್ತರಗೊಂಡ ಕಾರ್ಯಕ್ರಮಗಳನ್ನು ನಾನು ರೆಕಾರ್ಡ್ ಮಾಡಿಕೊಂಡಿದ್ದೇನೆ. ಅವುಗಳನ್ನು ಸಮಯ ಸಿಕ್ಕಾಗ ಕೇಳಿ ಸಂಭ್ರಮಿಸುತ್ತೇನೆ. ಮಾಹಿತಿ ಪಡೆಯುತ್ತೇನೆ. ಅನೇಕ ಅಪರೂಪದ ಸಾಹಿತಿಗಳು, ನಮ್ಮ ನಾಡು- ನುಡಿ ಸಂಸ್ಕೃತಿಗೆ ದುಡಿದವರು ನಮ್ಮನ್ನಗಲಿದ್ದಾರೆ. ಆದರೆ ಅವರ ಧ್ವನಿ ಆಕಾಶವಾಣಿಯ ಅಂತರಂಗದಲ್ಲಿ ಭದ್ರವಾಗಿ ಅಡಗಿದೆ. ಅನೇಕ ಸಂಗೀತ ಪರಿಕರಗಳು ಕೂಡ ಒಂದು ಮ್ಯೂಸಿಯಂ ರೀತಿಯಲ್ಲಿ ಸಂಗ್ರಹವಾಗಿವೆ. ಮನದ ಪಿಸುಮಾತು ಈ ಆಕಾಶವಾಣಿ. ಜಗದ ಜಗುಲಿ ಈ ಬಾನುಲಿ.


ಆಕಾಶವಾಣಿ ಮೌನವಾಗಿದ್ದುಕೊಂಡು ಚಿತ್ರಗೀತೆಗಳ ಮೂಲಕ, ಕಾರ್ಯಕ್ರಮಗಳ ಮೂಲಕ ಆಯ ದಿನದ ಮಹತ್ವವನ್ನು ಕೂಡ ಸಾರುತ್ತದೆ.  ನಮ್ಮ ಮೈಸೂರಿನಲ್ಲಿ ಆಕಾಶವಾಣಿಯ ಕೇಳುಗರ ಬಳಗವೇ ಇದೆ. ಅದೇ "ಸಮುದ್ಯತಾ ಕೇಳುಗರ ಬಳಗ". 


ಈ ನಿಟ್ಟಿನಲ್ಲಿ ಆಕಾಶವಾಣಿಯ ಕಾರ್ಯಕ್ರಮಗಳು ಪ್ರಸಾರವಾಗಿ ನಮ್ಮ ಕಿವಿಗೆ ತಲುಪುವ ಹಂತದಲ್ಲಿ ಏನೆಲ್ಲಾ ಪೂರ್ವ ತಯಾರಿಯಲ್ಲಿ ತೊಡಗುತ್ತಾರೋ ಎಲ್ಲಾ ತಂತ್ರಜ್ಞರಿಗೆ, ನಿರೂಪಕರಿಗೆ, ಸಂಕಲನಕಾರರಿಗೆ, ಸಂಗೀತಗಾರರಿಗೆ, ಭಾಗವಹಿಸುವ ಗಣ್ಯರಿಗೆ, ಸಾಹಿತಿಗಳಿಗೆ, ನಿಲಯದ ಸಿಬ್ಬಂದಿ ವರ್ಗದವರಿಗೆ, ಅಧಿಕಾರಿ ವರ್ಗದವರಿಗೆ ವಿಶೇಷ ಧನ್ಯವಾದಗಳನ್ನ ಅರ್ಪಿಸುತ್ತೇನೆ. ಮರೆತಿದ್ದೆ! ಕೇಳುಗ ವರ್ಗದವರನ್ನು ಕೂಡ ಈ ನಿಟ್ಟಿನಲ್ಲಿ ಧನ್ಯವಾದಗಳು ಅರ್ಪಿಸುತ್ತೇನೆ.


-ಕಾಳಿಹುಂಡಿ ಶಿವಕುಮಾರ್, ಮೈಸೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top