ಕನ್ನಡ ಚಿತ್ರರಂಗದ ಅಧ್ಭುತ ಸಾಹಿತಿಗಳ ಪೈಕಿ ವಿಜಯನಾರಸಿಂಹ ಅವರು ಮರೆಯಲಾರದ ಚಿತ್ರ ಸಾಹಿತಿಯಾಗಿ ಜನಮನದಲ್ಲಿ ಅಚ್ಚೊತ್ತಿದ ಸಾಹಿತಿ. ಪ್ರಸಿದ್ಧ ಕನ್ನಡ ಚಲನಚಿತ್ರಗಳ ನಿರ್ದೇಶಕರಾಗಿದ್ದ ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ ಅವರ ಅನೇಕ ಚಿತ್ರಗಳಿಗೆ ಚಿತ್ರ ಸಾಹಿತಿಯಾಗಿ ಶೋಭೆ ತಂದ ಮಹನೀಯರು. ಬಹುತೇಕ ಚಿತ್ರಗಳು ಯಶಸ್ವಿಯಾಗಿ ಜನ ಮನದಲ್ಲಿ ಇವರ ಸಾಹಿತ್ಯ ಅಗ್ರಪಂಕ್ತಿಯಲ್ಲಿ ಇರುವುದು ಅವಿಸ್ಮರಣೀಯ.
ವಿಜಯನಾರಸಿಂಹ ಅವರು ಮಂಡ್ಯ ಜಿಲ್ಲೆಯ ಮೇಲುಕೋಟೆ ಸಮೀಪ ಹಳೇಬೀಡು ಗ್ರಾಮದಲ್ಲಿ ತಾ॥ 16-1-1927 ರಂದು ಜನಿಸಿದರು. ಬಾಲ್ಯದಲ್ಲಿಯೇ ಕವನ, ನಾಟಕ, ಕಾದಂಬರಿ, ಕಥೆ ಬರೆಯುವ ಹವ್ಯಾಸದಿಂದ ಇವರು ಸಹಜವಾಗಿ ಸಾಹಿತ್ಯ ದಿಗ್ಗಜರಾದ ಪುತಿನ, ಗೋಪಾಲಕೃಷ್ಣ ಅಡಿಗ ಮುಂತಾದವರ ನಿಕಟವತಿ೯ಯಾಗಿದ್ದುದು ವಿಶೇಷ. ಕೆಲವು ಕಾಲ ವಿಜಯ ನಾರಸಿಂಹ ಅವರು ಪತ್ರಕರ್ತರಾಗಿಯೂ ಸಹ ಕೆಲಸ ಮಾಡಿದರು. ಮೊಟ್ಟ ಮೊದಲು ಇವರನ್ನು ಚಿತ್ರ ಸಾಹಿತಿಯಾಗಿ ಪ್ರೇರೇಪಿಸಲು 1953 ರಲ್ಲಿ ಜಿ.ಕೆ ವೆಂಕಟೇಶ್ ತಮ್ಮ "ಒಹಿಲೇಶ್ವರ" ಚಿತ್ರಕ್ಕೆ ಅವಕಾಶ ನೀಡಿದರು. ಈ ಚಿತ್ರದ ಚಿತ್ರ ಗೀತೆ "ಈ ದೇಹದಿಂದ ದೂರನಾದೆ ಏಕೆ ಆತ್ಮನೇ" ಪ್ರಸಿದ್ದವಾದ ಗೀತೆಯಾಗಿ, ಜನಮನದಲ್ಲಿ ಆಗ ಬಸ್ ನಿಲ್ದಾಣದ ಭಿಕ್ಷುಕನಿಂದ ಹಿಡಿದು ಆಧ್ಯಾತ್ಮಿಕ ಲೋಕದಲ್ಲಿ ಆತ್ಮವನ್ನು ಅರಸುವ ಭಕ್ತರಿಗೂ ಮೋಡಿ ಮಾಡಿದ ಅದ್ಭುತ ಮರೆಯಲಾಗದ ಗೀತೆಯಾಗಿತ್ತು.
ತದನಂತರ ವಿಜಯನಾರಸಿಂಹ ಬರೆದ ಬಹು ಮುಖ್ಯವಾದ ಗೀತೆಗಳ ಪೈಕಿ "ನೀ ನಡೆವ ಹಾದಿಯಲ್ಲಿ, ನಗೆಹೂವು ಬಾಡದಿರಲಿ, ನೋಡು ಬಾ ನೋಡು ಬಾ ನಮ್ಮೂರ, ಪಂಚಮ ವೇದ ಪ್ರೇಮದ ನಾದ, ಬಾರೆ ಬಾರೆ ಚಂದದ ಚೆಲುವಿನ ತಾರೆ, ಆಸೆಯ ಭಾವ ಒಲವಿನ ಜೀವ, ವಸಂತ ಬರೆದನು ಒಲವಿನ ಓಲೆ, ವಿರಹಾ ನೂರು ನೂರು ತರಹ, ಆಡೋಣ ನೀನು ನಾನು, ನೀತಿವಂತ ಬಾಳಲೇ ಬೇಕು, ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ,ಭಾರತ ಭೂಶಿರ ಮಂದಿರ ಸುಂದರಿ, ಆ ದೇವರೆ ನುಡಿದ ಮೊದಲ ನುಡಿ, ಯಾವ ತಾಯಿಯು ಹಡೆದ ಮಗಳಾದರೇನು, ನಿನ್ನ ಸವಿನೆನಪೇ ಮನದಲ್ಲಿ ಆರಾಧನೆ, ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ, ಸಂದೇಶ ಮೇಘ ಸಂದೇಶ, ಹದಿನಾಲ್ಕು ವರುಷ ವನವಾಸದಿಂದ ಮರಳಿ ಬಂದಳು ಸೀತೆ- ಮಂತಾದ ಗೀತೆಗಳು ಕನ್ನಡ ಚಲನಚಿತ್ರಪ್ರಿಯರಿಗೆ ಮರೆಯಲಾಗದ ಗೀತೆಗಳಾಗಿವೆ.
ಸಹಸ್ರಾರು ಹಾಡುಗಳನ್ನು ಬರೆದು ಚಿತ್ರರಂಗದಲ್ಲಿ ಶಾಶ್ವತ ಹೆಸರುಗಳಿಸಿದ ಮಹಾನ್ ಚಿತ್ರಗೀತೆಯ ರಚನೆಕಾರರು. ಇವರು ಬರೆದ "ಗಜ ಮುಖನೇ ಗಣಪತಿಯೆ ನಿನಗೆ ವಂದನೆ" ನಂಬರ್ ಒನ್ ಗೀತೆಯಾಗಿ ಎಲ್ಲಾ ಕಾರ್ಯಕ್ರಮಗಳಲ್ಲಿ ಹಾಡು ಕೇಳುವ ಅದ್ಭುತ ಭಕ್ತಿ ಗೀತೆಯಾಗಿದೆ. ಭಾದ್ರಪದ ಶುಕ್ಲದ ಚೌತಿ ಗೀತೆಯ ಸಿ ಡಿ, ಕ್ಯಾಸೆಟ್ ದಾಖಲೆ ಗಳಿಸಿದ ಮರೆಯಲಾಗದ ಗೀತೆಯು ಪ್ರತಿ ಸಂದರ್ಭದಲ್ಲಿ ಕೇಳುವ ಗೀತೆಯಾಗಿದೆ. ಕಾಶಿಯಲ್ಲಿ ಬಂದನಿಲ್ಲಿ ವಿಶ್ವನಾಥ ಮತ್ತೊಂದು ಪ್ರಖ್ಯಾತ ಗೀತೆಯಾಗಿದೆ.
ನಾಲ್ಕು ಸಾವಿರಕ್ಕೂ ಹೆಚ್ಚು ಕನ್ನಡ ಚಿತ್ರ ಗೀತೆಗಳನ್ನು, ಭಕ್ತಿಗೀತೆಗಳನ್ನು ಬರೆದು, ಸಾಹಿತ್ಯ ಕ್ಷೇತ್ರದಲ್ಲಿ ಅಮರರಾದ ಮಹನೀಯರು. ಸಾವಿರಾರು ಗೀತೆಗಳನ್ನು ಬರೆದರೂ ಸಹ ಇವರು ಬಡತನದ ರೇಖೆಯಿಂದ ಮೇಲಕ್ಕೆತ್ತಿ ಬರಲು ಅಸಾಧ್ಯವಾಯಿತು.
ಇವರು ಬರೆದ ಕಾದಂಬರಿಗಳಲ್ಲಿ, ಭೈರಾಗಿ, ಶ್ರೀಮಾನ್ ಚಕ್ರಾಯಣ, ಸಂಜೆಗೆಂಪು ಮತ್ತು ಪುಟ್ಟಣ್ಣ ಅವರ ಅನೇಕ ಚಿತ್ರಗಳಿಗೆ ಸಾಹಿತಿಯಾಗಿ, ಪುಟ್ಟಣ್ಣ ಕಣಗಾಲ್ ಅವರ ಬದುಕಿನ ಚರಿತ್ರೆ ಬರೆದು ಪ್ರಖ್ಯಾತರಾದರು. ಸರಸ್ವತಿ ಇವರ ಧಮ೯ಪತ್ನಿ ಮತ್ತು ಸಹೋದರ ಹೆಚ್ ಆರ್ ಶಾಸ್ತ್ರಿ ಅವರು ಮತ್ತು ಮರಿಮೊಮ್ಮಗಳು ಚಿತ್ರ ನಟಿ ಅನು ಪ್ರಭಾಕರ್ ಕುಟುಂಬದಲ್ಲಿ ಸದಸ್ಯರು ಎಂಬುದು ವಿಶೇಷ! ತಮಿಳು ಚಿತ್ರಗಳಿಗೂ ಹಾಡನ್ನು ಬರೆದ ಸಾಹಿತಿ. ಸುಮಾರು 30 ಅಧ್ಭುತ ಕನ್ನಡ ಚಲನಚಿತ್ರಗಳಿಗೆ ಮರೆಯಲಾಗದ ಗೀತರಚನೆಕಾರರಾಗಿ ಹೆಸರುಗಳಿಸಿದ ಮಹನೀಯರು.
ಕನ್ನಡ ಚಿತ್ರಗೀತೆಗಳನ್ನು ಸುಂದರ ಸಾಹಿತ್ಯದೊಂದಿಗೆ ರಚಿಸಿ,ಮುದನೀಡಿ ಮರೆಯಲಾರದ ಅನುಭವ, ಸಂತೋಷ ನೀಡಿ ವಿಜಯನಾರಸಿಂಹ ಅವರು ಕನ್ನಡ ನಾಡನ್ನು ತಾ॥ 31-10-2001 ರಂದು ಅಗಲಿ ಬೆಂಗಳೂರಿನಲ್ಲಿ ನಿಧನರಾದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ