- ತನು, ಮನದ ಪ್ರತಿ ಹೆಜ್ಜೆಯಲ್ಲೂ ಅಮ್ಮನ ಕನಸುಗಳಿಗೆ ಸ್ಪಂದಿಸುವ 'ತನು'ಶ್ರೀ
- ವಿದುಷಿ ಕೃಪಾ ಫಡ್ಕೆ ಶಿಷ್ಯೆ
ವರದಿ: ಶ್ರೀ ರಾಮ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಖ್ಯಾತ ಸಂಸ್ಥೆ ನೃತ್ಯ ಗಿರಿ- ಪ್ರದರ್ಶಕ ಕಲೆಗಳ ಸಂಶೋಧನಾ ಕೇಂದ್ರವು ಫೆ. 9ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಯುವ ಕಲಾವಿದೆ ತನುಶ್ರೀ ಎಸ್.ಚಿನ್ನಯ್ಯ ಭರತನಾಟ್ಯ ರಂಗ ಪ್ರವೇಶ ಮಾಡಲಿದ್ದಾರೆ. ಮೈಸೂರಿನ ವಿನೋಬಾ ರಸ್ತೆಯ ಕರ್ನಾಟಕ ಕಲಾಮಂದಿರದಲ್ಲಿ ಸಂಜೆ 5:30ಕ್ಕೆ ರಂಗಾರೋಹಣ ಸಂಪನ್ನಗೊಳ್ಳಲಿದೆ.
ರಂಗಕರ್ಮಿ ಮತ್ತು ಚಿತ್ರನಟ ಮಂಡ್ಯ ರಮೇಶ್, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ನಿರ್ದೇಶಕಿ ಡಾ. ಎಂ. ಪುಷ್ಪಾವತಿ, ಚಾಮರಾಜನಗರ ಜಿಲ್ಲಾ ಡಿಡಿಪಿಐ ರಾಮಚಂದ್ರ ರಾಜೇ ಅರಸ್ ಸಾಕ್ಷಿಯಾಗಲಿದ್ದಾರೆ. ಹಿರಿಯ ವಿದುಷಿ, ನೃತ್ಯ ಗಿರಿ ಸಂಸ್ಥೆ ನಿರ್ದೇಶಕಿ ಕೃಪಾ ಫಡ್ಕೆ, ಚಿನ್ನಯ್ಯ, ಸುಮಲತಾ ಹಾಜರಿರಲಿದ್ದಾರೆ.
ಗುರುವಂದನೆ: ಇದೇ ಸಂದರ್ಭ ಹಿರಿಯ ವಿದುಷಿಯರಾದ ಡಾ. ಆರ್.ಎನ್. ಶ್ರೀಲತಾ, ಡಾ. ಕೃಪಾ ಫಡ್ಕೆ ಮತ್ತು ಕೆ.ಆರ್. ಶ್ರೀಲತಾ ವಲ್ಲೀಶ ಅವರಿಗೆ ಗುರುವಂದನೆ ಸಮರ್ಪಣೆಯೂ ನೆರವೇರಲಿದೆ.
ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ತೃತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ತನುಶ್ರೀ, ಭರತನಾಟ್ಯ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವತ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ವಿವಿಧೆಡೆ ಕಲಾ ಪ್ರಸ್ತುತಿ:
ತಿರುಪತಿ ಬ್ರಹ್ಮೋತ್ಸವ, ವಿಶ್ವವಿಖ್ಯಾತ ಮೈಸೂರು ದಸರಾ, ಮಹಾಶಿವರಾತ್ರಿ ಉತ್ಸವ, ಶೃಂಗೇರಿ ಶಂಕರ ಮಠದ ಶರನ್ನವರಾತ್ರಿ ಮಹೋತ್ಸವ ಸೇರಿದಂತೆ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ತನುಶ್ರೀ ಈಗಾಗಲೇ ಸಂಗೀತ- ನೃತ್ಯ ಪ್ರದರ್ಶನ ನೀಡಿದ ಸಾಧನೆಗೆ ಪಾತ್ರರಾದ್ದಾರೆ. ತನುಶ್ರೀ ರಂಗಪ್ರವೇಶಕ್ಕೆ ವಿದ್ವಾಂಸರಾದ ಪೂಜಾ ಸುಗಂ ನಟವಾಂಗ, ಆರ್. ರಾಜೀವ್ ಗಾಯನ, ಜಿ.ಎಸ್. ನಾಗರಾಜ್ ಮೃದಂಗ ಮತ್ತು ಎ.ಪಿ. ಕೃಷ್ಣಪ್ರಸಾದ್ ಕೊಳಲು ವಾದನದ ಹಿಮ್ಮೇಳ ಸಹಕಾರ ನೀಡಲಿದ್ದಾರೆ.
ಕಲಿತಿದ್ದೇನೆ ಎಂಬ ಅಹಂಕಾರ ಬೇಡವೇ ಬೇಡ...
ಕಲಾ ರಂಗದಲ್ಲಿ ಸಾಧನೆ ಎಂಬುದು ಅನಂತವಾಗಿದೆ. ಮಾಡಿದಷ್ಟೂ ಇನ್ನೂ ಮಾಡಬೇಕು ಎನಿಸುತ್ತದೆ. ಸದಾ ಕಲಿಯುತ್ತಲೇ ಇರುವುದು, ಅದರಲ್ಲಿ ಅಲ್ಲಲ್ಲಿ ಆನಂದ ಕಾಣುವುದು, ‘ಕಲಿತುಬಿಟ್ಟಿದ್ದೇನೆ’ ಎಂಬ ಅಹಂಕಾರದಿಂದ ದೂರ ಇರುವುದು ಉತ್ತಮ ಎಂಬುದು ನನ್ನ ಅಭಿಮತ ಎನ್ನುತ್ತಾರೆ ಯುವ ಕಲಾವಿದೆ ತನುಶ್ರೀ. ಅಮ್ಮನ (ಸುಮಲತಾ) ಉತ್ಕಟ ಅಪೇಕ್ಷೆಗಳನ್ನು ಈಡೇರಿಸಲು ಸಂಗೀತ- ಭರನತಾಟ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಿರುವ ಈಕೆಗೆ ವಾಕ್ ಮತ್ತು ಶ್ರವಣ ವಿಷಯದ ಪದವಿ ಅಧ್ಯಯನ ಬಿಟ್ಟರೆ ಕಲಾ ಪ್ರಪಂಚವೇ ಕಾಣುವುದು ಒಂದು ವಿಶೇಷ. ಅದರಲ್ಲಿ ಹೆಮ್ಮೆ ಮತ್ತು ಖುಷಿ ಇದೆ ಎನ್ನುತ್ತಾರೆ. ಆಧುನಿಕ ಬದುಕಿನ ಆಡಂಬರಗಳಿಂದ ದೂರ ಇರಬೇಕು. ಗುರುವನ್ನು ಇನ್ನೂ, ಇನ್ನೂ ಅನುಸರಿಸಬೇಕು ಎಂಬುದೇ ಈಕೆಯ ಧ್ಯೇಯ.
ಶಿಕ್ಷಕನ ಪುತ್ರಿ ಸದಾ ವಿದ್ಯಾರ್ಥಿ...
ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಚಿನ್ನಯ್ಯ- ಅಭಿಯೋಜನಾ ಇಲಾಖೆ ಪ್ರಥಮ ದರ್ಜೆ ಸಹಾಯಕಿ ಸುಮಲತಾ ಅವರ ಪುತ್ರಿ ತನುಶ್ರೀಗೆ ಬಾಲ್ಯದಲ್ಲಿಯೇ ಸಂಗೀತ ಮತ್ತು ನೃತ್ಯಗಳ ಬಗ್ಗೆ ವಿಶೇಷ ಆಸಕ್ತಿ ಮೂಡಿತ್ತು. ವಿದುಷಿ ಲೋಲಾಕ್ಷಿ ಹಾಸನ ಅವರಲ್ಲಿ ನೃತ್ಯದ ಪ್ರಥಮ ಹೆಜ್ಜೆಗಳನ್ನು ಕಲಿತುಕೊಂಡ ಈಕೆ ತನ್ನ ಐದನೇ ವರ್ಷದಲ್ಲಿ ಮೈಸೂರಿನ ವಿದುಷಿ ಕೃಪಾ ಫಡ್ಕೆ ಅವರ ಶಿಷ್ಯತ್ವ ಸ್ವೀಕರಿಸಿದರು.
17 ವರ್ಷದಿಂದ ನರ್ತನ ಅಭ್ಯಾಸ ಮಾಡಿ, ಜೂನಿಯರ್, ಸೀನಿಯರ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದಿದ್ದು ಹೆಮ್ಮೆ. ಇದರೊಂದಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೂ ವಿದುಷಿ ಲತಾ ವಲ್ಲೀಶ, ನಂತರದಲ್ಲಿ ವಿದುಷಿ ಡಾ. ಆರ್.ಎನ್. ಶ್ರೀಲತಾ ಅವರಲ್ಲಿ ಅಭ್ಯಾಸ ಮಾಡಿದ್ದಾರೆ. ಸಂಗೀತ- ನೃತ್ಯ ಎರಡರಲ್ಲೂ ವಿದ್ವತ್ ಪರೀಕ್ಷೆಗೆ ತಾಲೀಮು ನಡೆಸುತ್ತಿರುವುದು ಇನ್ನೊಂದು ಹೆಚ್ಚುಗಾರಿಕೆ. ಈ ನಡುವಿನ ಅವಧಿಯಲ್ಲಿ ರಂಗಾರೋಹಣ ಸಂಭ್ರಮ.
* **
ಅಮ್ಮನೂ ನನಗೋಸ್ಕರ ನೃತ್ಯ ಕಲಿತಳು...
ನಾನು ಎಷ್ಟೇ ಕಲಿತರೂ, ಯಾವುದೇ ವೇದಿಕೆಯಲ್ಲಿ ಕಲಾಭಿವ್ಯಕ್ತಿ ಮಾಡಿದರೂ ಅಮ್ಮನಿಗಂತೂ ‘ಸಂಪೂರ್ಣ ತೃಪ್ತಿ’ ಎಂಬುದೇ ಆಗುವುದಿಲ್ಲ. ಚನ್ನಾಗಿತ್ತು. ಆದರೆ ಇನ್ನೂ ಚನ್ನಾಗಿ ಭಾವ ತುಂಬಬೇಕಿತ್ತು ಎಂಬಲ್ಲಿಗೆ ಅಮ್ಮನ ವಿಮರ್ಷೆ ನಿಲ್ಲುತ್ತದೆ. ಇದು ಪ್ರತೀ ಹಂತದಲ್ಲಿ ನನ್ನ ಬೆಳವಣಿಗೆಯನ್ನು ಆರಂಭಿಸುತ್ತದೆ. ಅಮ್ಮನ ಖುಷಿ ಮತ್ತು ತೃಪ್ತಿಗಾಗಿ ನಾನು ಮತ್ತೆ ಮತ್ತೆ ಹೊಸ ಹೊಸ ಕಲಿಕೆಗೆ ತೆರೆದುಕೊಳ್ಳುವೆ ಎನ್ನುವಾಗ ತನುಶ್ರೀ ಕಣ್ಣುಗಳು ತೇವಗೊಂಡಿದ್ದವು. ಮಕ್ಕಳಲ್ಲಿ ಇಂಥ ಸಂಸ್ಕಾರ ಇರುವುದೂ ಇಂದಿನ ಕಾಲದಲ್ಲಿ ಬಹು ಅಪರೂಪ!
ನನ್ನನ್ನು ಗುರು ಕೃಪಾ ಅವರಲ್ಲಿ ನೃತ್ಯ ಅಭ್ಯಾಸಕ್ಕೆ ಸೇರಿಸಿದ ಅಮ್ಮನಿಗೆ ಮೊದಲಿನಿಂದಲೂ ನರ್ತನದ ಬಗ್ಗೆ ವಿಶೇಷ ಪ್ರೀತಿ. ನಾನು ಕಲಿತದ್ದನ್ನು ಮನೆಯಲ್ಲಿ ತಿದ್ದಲೇಬೇಕು ಎಂಬ ಛಲ. ಈ ಉತ್ಕಟತೆಗೇ ಆಕೆಯೂ ಭರತನಾಟ್ಯ ತರಗತಿ ಸೇರಿದರು. ಜೂನಿಯರ್ ಪಾಸ್ ಮಾಡಿಕೊಂಡರು. ನಾನು ಅಭ್ಯಾಸ ಮಾಡುವಾಗಲೆಲ್ಲಾ ಎದುರಿಗೆ ಕುಳಿತು, ಕಲಾ ಪ್ರದರ್ಶನಗಳಲ್ಲಿ ಮುಂದಿನ ಸಾಲಿನಲ್ಲೇ ಉಪಸ್ಥಿತಿ ಪಡೆದು ನನ್ನ ತಪ್ಪು ಹುಡುಕಿ ಹೇಳಿ, ‘ಕಡೆಗೆ ಚೆನ್ನಾಗಿ ಬಂತು...’ ಎಂದಷ್ಟೇ ಹೇಳುವುದು, ಇನ್ನೂ ಚಂದ ಮಾಡಬಹುದಿತ್ತು ಎಂಬಲ್ಲಿಗೆ ಅಲ್ಪ ವಿರಾಮ ಹಾಕುವುದು.... ನನ್ನ ಈ ಹಂತದ ಸಾಧನೆಗೆ ಬದುದೊಡ್ಡ ಸ್ಫೂರ್ತಿ ಎಂಬುದು ತನುಶ್ರೀ ಅಂತರಂಗದ ನುಡಿ. ಆಕೆ ಮುದ್ದು, ಮಮತೆಗಾಗಿ ಎಂದೋ ಒಂದು ದಿನ ‘ನೀನೇ ಪರಿಪೂರ್ಣ’ ಎಂದುಬಿಟ್ಟಿದ್ದರೆ ನನ್ನ ಬೆಳವಣಿಗೆ ಅಂದೇ ನಿಲ್ಲುತ್ತಿತ್ತು. ಆಕೆಗೆ ಪರಿಪೂರ್ಣ ತೃಪ್ತಿ ಆಗುವಲ್ಲೀವರೆಗೂ ನಾನು ವಿದ್ಯಾರ್ಥಿಯೇ ಎಂಬುವಾಗ ತನುಶ್ರೀ ಅದಮ್ಯ ಉತ್ಸಾಹ ಪ್ರಕಟವಾಗುತ್ತದೆ.
======
ಕುಟುಂಬ ಮಾಡರ್ನ್ ಆಗಿಲ್ಲ
ಹಲವು ಕುಟುಂಬ ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ‘ಮಾಡರ್ನ್’ ಆಗಿಬಿಟ್ಟಿವೆ. ಆದರೆ ನನ್ನ ಅಪ್ಪ- ಅಮ್ಮ ಬದುಕಿನ ಅರ್ಥ ಮತ್ತು ಆಳ ಅರಿತು ಎಂದೂ ಬಣ್ಣದ ಜೀವನಕ್ಕೆ ಮರುಳಾಗಿಲ್ಲ. ಹಾಗಾಗಿ ಇಬ್ಬರೂ ಪೂಜ್ಯರು. ಮತ್ತು ಅಮ್ಮನಷ್ಟೇ ಪ್ರೀತಿ ಭರಿಸುವ ನನ್ನ ಗುರು ಕೃಪಾ ಮೇಡಂ ಶ್ರೇಷ್ಠರು. ಕಲಾ ವಿದ್ಯಾರ್ಥಿಗಳಾದ ನಾವು ಹಲವು ಪ್ರಸಂಗದಿಂದ ಪಾಠ ಕಲಿತು ‘ಮಾಡಿಫೈ ಮತ್ತು ಬ್ಯೂಟಿಫೈ’ ಆಗಬೇಕು ಎಂಬುದು ತನುಶ್ರೀ ಅಭಿಮತ.
==========
ವೃತ್ತಿ ಮತ್ತು ಪ್ರವೃತ್ತಿ ಸಮನ್ವಯ ಮಾಡುವೆ
ವಾಕ್ ಮತ್ತು ಶ್ರವಣ ಪದವಿ ನಂತರ ಪೆಥಾಲಜಿಸ್ಟ್ ಆಗುವ ನಾನು ವೃತ್ತಿ ಮತ್ತು ಕಲಾ ಪ್ರವೃತ್ತಿಯನ್ನು ಸರಿಸಮನಾಗಿ ದುಡಿಸಿಕೊಂಡು ಹೋಗುವ ಸಂಕಲ್ಪ ಮಾಡಿದ್ದೇನೆ ಎನ್ನುತ್ತಾಳೆ ಈ ಯುವ ಕಲಾವಿದೆ. ಆಯಿಷ್‌ನಲ್ಲಿ ಅನೇಕ ಅಂಗವಿಕಲ ಮತ್ತು ಮಾತನಾಡಲು ಬಾರದ ಚಿಕ್ಕ ಚಿಕ್ಕ ಮಕ್ಕಳನ್ನು ನೋಡಿದಾಗ ಕರುಳು ಚುರುಕ್ ಎನ್ನುತ್ತದೆ. ಸಂಗೀತ- ನೃತ್ಯದ ಪಟ್ಟುಗಳನ್ನು ಬಳಸಿಕೊಂಡು ಥೆರಪಿ ಮಾಡಿ, ವಿಕಲಚೇತನರನ್ನೂ ಮುಖ್ಯವಾಹಿನಿಗೆ ತರಬೇಕು ಎಂಬ ದೊಡ್ಡ ಕನಸು ಇದೆ. ಇದಕ್ಕಾಗಿ ಸಮಾಜದ ಹತ್ತು ಹಲವು ಸಾಧಕ, ದಾನಿ, ಕಲಾ ಪ್ರೇಮಿಗಳನ್ನು ಒಂದೆಡೆ ಸಂಗಮ ಮಾಡಿ, ನಾನೇ ಒಂದು ಸೇವಾ ಸಂಸ್ಥೆ ಸ್ಥಾಪಿಸಿ ಸಮಾಜಕ್ಕೆ ಏನಾದರೂ ಉತ್ತಮ ಕೊಡುಗೆ ನೀಡಬೇಕೆಂಬ ಹೆಬ್ಬಯಕೆಯನ್ನು ಈಕೆ ಈ ಸಂದರ್ಭ ಹರವಿ ಇಟ್ಟಿರುವುದು ಮಹತ್ವಪೂರ್ಣ ಆಶಾಭಾವದ ಪ್ರತೀಕ ಎನಿಸಿದೆ.
ಬಹುಮುಖಿ: ಸಂಗೀತ- ನೃತ್ಯದೊಂದಿಗೆ ತನುಶ್ರೀಗೆ ಸ್ಕೇಟಿಂಗ್, ಚಿತ್ರಕಲೆ, ವರ್ಣಕಲೆ, ನಿಸರ್ಗ ಛಾಯಾಗ್ರಹಣದ ಹವ್ಯಾಸವೂ ಇದೆ.
9ನೇ ತರಗತಿ ವ್ಯಾಸಂಗದ ಸಂದರ್ಭದಲ್ಲೇ ಪಾಲಕರು ನನಗೆ ರಂಗ ಪ್ರವೇಶ ಮಾಡಿಸುವ ನಿರ್ಧಾರ ಮಾಡಿದ್ದರು. ಆದರೆ ನನಗೆ ಆ ಹಂತದ ಕಲಿಕೆ ತೃಪ್ತಿ ನೀಡಿರಲಿಲ್ಲ. ಮುಂದೆ ಯಾವಾಗಲಾದರೂ ಮಾಡೋಣ ಎಂದುಕೊಂಡು ಸುಮ್ಮನಾಗಿದ್ದೆ. ನೃತ್ಯಕ್ಕೆ ಸಂಗೀತವೂ ಅತಿ ಅನಿವಾರ್ಯ ಎಂದರಿತು ಅಲ್ಲೂ ತಾಲೀಮು ಮಾಡಿದೆ. ನನ್ನ ಮನಸ್ಸಿಗೆ ಹಿತಕೊಡುವಷ್ಟೂ ವೇಳೆ ಕಲಿಯುತ್ತಲೇ ಇರಬೇಕು ಎಂಬ ಸಂಕಲ್ಪ ನನ್ನದಾಗಿ.
ತನುಶ್ರೀ, ಯುವ ಕಲಾವಿದೆ
ಬೇಸರದ ಪ್ರಸಂಗವೇ ಇಲ್ಲ
ಕಳೆದ ವರ್ಷ ನಮ್ಮ ನೃತ್ಯಗಿರಿ ವಾರ್ಷಿಕೋತ್ಸವ ದಲ್ಲಿ ಪೂತನಿ ಪಾತ್ರ ಮಾಡಿದೆ. ಆಗ ಅಮ್ಮನ ಕಣ್ಣಲ್ಲಿ ಧಾರಾಕಾರ ನೀರು ಬಂದಿತ್ತು. ಅಮ್ಮನಿಗೆ ಪಾತ್ರ ಅತ್ಯಂತ ಪ್ರಿಯವಾಗಿತ್ತಂತೆ. ಅದೇ ನನ್ನ ಬದುಕಿನ ಅತ್ಯಂತ ಸಂತೋಷದ ಕ್ಷಣ. ಇನ್ನು ನನಗೆ ಬೇಸರ ಎಂಬ ಪದವೇ ಗೊತ್ತಿಲ್ಲ. ಹಾಗೇನಾದರೂ ಅಂಥಾ ಪ್ರಸಂಗ ಬಂದಿದ್ದರೆ ಅದನ್ನು ಮರೆತುಬಿಡುವೆ.
ಪ್ರಾಥಮಿಕ ಶಾಲೆಯಲ್ಲಿ ಹಲವು ಮಿತ್ರರು ನನ್ನನ್ನು ‘ಕಪ್ಪು’ ಎಂದು ಮೊದಲಿಸಿದರೂ ಅಮ್ಮ ‘ನೀನು ಕೃಷ್ಣನ ಹಾಗೆ’ ಎಂದು ಹುರಿದುಂಬಿಸುತ್ತಿದ್ದಳು. ನಾನು ಏನೆಂಬುದು ನನ್ನ ಅಂತರಾತ್ಮಕ್ಕೆ ಗೊತ್ತು. ಹಾಗಾಗಿ ಹೊರಗಿನ ಯಾವುದೇ ಟೀಕೆ ಮೂದಲಿಕೆ, ಕಪ್ಪು- ಬಿಳುಪು, ಬಣ್ಣಗಳ ಗೊಡವೆಯೇ ಬೇಡ. ಎಲ್ಲವನ್ನೂ ಧನಾತ್ಮಕವಾಗಿ ಕಂಡು ದಿಟ್ಟ ಸಾಧನೆಎಡೆಗೆ, ಧೀರೋದ್ದಾತವಾಗಿ ಸಾಗಬೇಕು ಎಂದು ಹೇಳುವಾಗ ಬದುಕಿನ ಬಗ್ಗೆ ಈಕೆಯ ಉತ್ಕಟ ಆಕಾಂಕ್ಷೆ ಪ್ರತಿಫಲಿಸುತ್ತದೆ. ಹಾಗಾಗಿಈಕೆ ಯುವಜನರಿಗೆ ಒಂದು ಮಾದರಿಯೂ ಹೌದು.
ಗುರು ಇದ್ದರೆ ಹೀಗಿರಬೇಕು...
ಕಲಾ ಚಟುವಟಿಕೆಗಳಲ್ಲಿ ಇರುವವರು ತಮ್ಮನ್ನು ತಾವು ಅಂತರ್ಗತವಾಗಿ ಶೋಧನೆಗಳನ್ನು ಮಾಡಿಕೊಳ್ಳುತ್ತಲೇ ಇರಬೇಕು ಆ ನಿಟ್ಟಿನಲ್ಲಿ ನನ್ನನ್ನು ನಾನು ಅವಲೋಕಿಸಿಕೊಂಡಾಗ ಕುಳಿತರೆ, ನಿಂತರೆ ನನ್ನ ಗುರು ಕೃಪಾ ಅವರ ಮಹಾ ಕೃಪೆಯೇ ಕಣ್ಣೆದುರಿಗೆ ಬರುತ್ತದೆ. ಇಂಥವರ ಗರಡಿಯಲ್ಲಿ ಪಳಗಿ ನಾನು ರಾಷ್ಟ್ರಮಟ್ಟದ ಕಲಾವಿದೆ ಆಗಬೇಕು. ನಾಟಕ, ಧಾರಾವಾಹಿ, ಸಿನಿಮಾ ಯಾವುದೇ ಅವಕಾಶ ಬಂದರೂ ಅದನ್ನು ನಿಯಮಿತವಾಗಿ ಬಳಸಿ, ಬದುಕಿನ ಪ್ರಮುಖ ಉದ್ದೇಶಕ್ಕೆ ಮನ್ನಣೆ ನೀಡಬೇಕು ಎಂಬುದು ತನುಶ್ರೀ ದಿಟ್ಟ ನಿಲುವು.
ವಂಶದಲ್ಲಿ ಕಲಾ ಸಾಧಕರು ಇಲ್ಲದಿದ್ದರೂ ತನುಶ್ರೀ ಕಲಾಭಿರುಚಿ, ಸಾಧನೆ ಉತ್ತಮವಾಗಿದೆ. ಕಲೆಗೆ ಉತ್ತೇಜಿಸುವ ಗುಣ ತಂದೆ ಚಿನ್ನಯ್ಯಗೆ, ಸಾಹಿತ್ಯ, ಸಂಗೀತ ಒಲವು ತಾಯಿ ಸುಮಲತಾಗೆ ಇರುವುದೇ ಮಗಳ ಕಲಾಭಿವ್ಯಕ್ತಿಗೆ ಪ್ರೇರಕವಾಗಿದೆ. ತನುಶ್ರೀ ಕಲಾಯಾನ ಇನ್ನಷ್ಟು ಮೈಲಿಗಲ್ಲು ಸಾಧಿಸಲಿ.
-ವಿದುಷಿ ಕೃಪಾ ಫಡ್ಕೆ
ಭರತನಾಟ್ಯ ಗುರು, ನೃತ್ಯಗಿರಿ ಸಂಸ್ಥೆ ನಿರ್ದೇಶಕಿ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ