ಪ್ರಶ್ನಿಸದೆ ಉತ್ತರ ದೊರೆಯಲು ಸಾಧ್ಯವಿಲ್ಲ, ಕೆಲವೊಮ್ಮೆ ಪ್ರಶ್ನೆಗಳು ನಮ್ಮಲ್ಲಿ ಅಡಗಿಸಿಕೊಂಡು ಉತ್ತರದ ಹುಡುಕಾಟದಲ್ಲಿ ತೊಡಗುತ್ತೇವೆ, ಅದೆಷ್ಟು ಸರಿ ಎನ್ನುವುದನ್ನು ಅರಿಯುವ ಮನಸ್ಥಿತಿ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಒಮ್ಮೆ ಆಳ್ವಾಸ್ ಕಾಲೇಜಿನಲ್ಲಿ ಡಾ.ಎಂ. ವೀರಪ್ಪ ಮೊಯಿಲಿಯವರ ವಿಶ್ವ ಸಂಸ್ಕೃತಿಯ ಮಹಾಯಾನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಶ್ನೆಯನ್ನು ಮಾಡುವ ಮನೋಭಾವ ನಮ್ಮನ್ನು ಎತ್ತರ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನುವುದನ್ನು ಅವರ ಜೀವನದ ಘಟನೆಯೇ ಸಾಕ್ಷಿ ಎನ್ನುವಂತೆ ವಿವರಿಸಿ, ಬದುಕಿನ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡಾಗ ಮಾತ್ರ ಬದುಕಿಗೊಂದು ಅರ್ಥ ಕಲ್ಪಿಸಿಕೊಳ್ಳಲು ಸಾಧ್ಯ ಎನ್ನುವ ಅರಿವು ಮೂಡಿಸಿದರು. ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವ ಮನೋಭಾವ ಸಂವಾದ ಮಾಡುವ ಕುತೂಹಲ, ಹಸಿವು, ಆಶ್ರಯದ ಅರ್ಥ ಪ್ರತಿಯೊಬ್ಬ ವಿದ್ಯಾರ್ಥಿಯು ಕೂಡ ತಿಳಿದಿರಬೇಕು.
ವಿಶ್ವಸಂಸ್ಕೃತಿಯ ಮಹಾಯಾನ ಸಂಪುಟ-2 ಪ್ರತಿಪುಟಗಳು ಪ್ರಶ್ನೋತ್ತರ ರೂಪದಲ್ಲಿದೆ ಎನ್ನುವುದು ನನ್ನನ್ನು ಆಕರ್ಷಿಸಿತು. ವಿದ್ಯಾರ್ಥಿಗಳಲ್ಲಿ ಇಂದು ಪ್ರಶ್ನಿಸುವ ಮನೋಭಾವ ಕಡಿಮೆಯಾಗುತ್ತಿದೆ. ವಾಸ್ತವದಲ್ಲಿ ವಿದ್ಯಾರ್ಥಿಗಳಿಗೆ ನೀಡಬೇಕಾಗಿರುವುದು ಪ್ರಶ್ನೆಗಳನ್ನು ಕೇಳುವ ಪರಿಣತಿ. ಪ್ರಶ್ನೆಗಳನ್ನು ಕೇಳಿದಾಗ ಮಾತ್ರ ಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯ. ಉತ್ತರ ತಿಳಿದುಕೊಳ್ಳುವ, ಜ್ಞಾನ ಪಡೆಯುವ ಹುಮ್ಮಸ್ಸಿದ್ದಾಗ ಮಾತ್ರ ಪ್ರಶ್ನೆಗಳು ನಮ್ಮನ್ನು ಆವರಿಸಲು ಆರಂಭಿಸುತ್ತದೆ. ಅದನ್ನು ಅರ್ಥೈಸಿಕೊಂಡು ಉತ್ತರ ಹುಡುಕುವುದೇ ಸಾಧನೆಯ ಮೊದಲ ಮೆಟ್ಟಿಲು. ವಿದ್ಯಾರ್ಥಿ ಜೀವನದಲ್ಲಿ ಖಾಲಿ ಹಾಳೆಯಂತೆ ಇರುವ ನಾವು ಕೊನೆಯಲ್ಲಿ ವಿದ್ಯಾರ್ಥಿ ಜೀವನ ಮುಗಿಸುತ್ತಾ ಬರುವಾಗ ಹಾಳೆಗಳಲ್ಲಿ ಅಕ್ಷರಗಳನ್ನು ಬರೆಯಲು ಜಾಗವಿಲ್ಲದಂತಾಗಬೇಕು. ಅದು ಹೇಗೆ ಸಾಧ್ಯ ಎನ್ನುವುದು ಜ್ಞಾನ ಸಂಪಾದಿಸುವುದರ ಮೇಲೆ ಅವಲಂಬಿತವಾಗಿರುತ್ತದೆ.
ಪ್ರತಿಯೊಬ್ಬ ಗುರು ಸಹ ಅಪಾರಜ್ಞಾನವನ್ನು ಹೊಂದಿರುತ್ತಾರೆ. ಅವರ ಜ್ಞಾನವನ್ನು ಪಡೆದುಕೊಳ್ಳುವ ಹುಮ್ಮಸ್ಸು ವಿದ್ಯಾರ್ಥಿಗಳಲ್ಲಿರಬೇಕು. ಪ್ರತಿಯೊಬ್ಬ ಮನುಷ್ಯನಲ್ಲೂ ಕೂಡ ಪ್ರಶ್ನೆ ಎನ್ನುವುದು ಬಂದೇ ಬರುತ್ತದೆ ಧೈರ್ಯದಿಂದ ಪ್ರಶ್ನಿಸುವ ಛಲವಿರಬೇಕು. ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೋದಾಗ ಮಾತ್ರ ವಿಚಾರಗಳ ಮೇಲೆ ಆಳವಾದ ಜ್ಞಾನವನ್ನು ಸಂಪಾದಿಸಲು ಸಾಧ್ಯ. ಪ್ರಶ್ನಿಸುವ ಮನೋಭಾವ, ಛಲ, ಹಟ, ಇವುಗಳೇ ವಿದ್ಯಾರ್ಥಿಗಳ ಸಂಪತ್ತು. ಪ್ರಶ್ನೆಯ ತೂಕ ಜ್ಞಾನವನ್ನು ಕಲೆ ಹಾಕುವ ಮೆಟ್ಟಿಲು. ಪ್ರತಿ ಪ್ರಶ್ನೆಯು ಕೂಡ ಅರ್ಥಗರ್ಭಿತವಾಗಿದ್ದರೆ, ಉತ್ತರ ಹೊಸತನ್ನು ಕಲಿಸುತ್ತದೆ. ಕಲಿಕೆಯ ಮುನ್ನುಡಿಯೇ ಪ್ರಶ್ನೆ. ಜಾಲತಾಣಗಳಲ್ಲಿ ಸಿಕ್ಕಿಹಾಕಿಕೊಂಡು ಜೀವನವನ್ನು ಕೊನೆಗೊಳಿಸಿಕೊಳ್ಳುವ ಬದಲು ನಮ್ಮಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಿ ಕೊಳ್ಳುತ್ತಾ ಸಮಯ ಕಳೆಯೋಣ.
- ರಕ್ಷಿತಾ
ಆಳ್ವಾಸ್ ಕಾಲೇಜು ಮೂಡುಬಿದಿರೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ