ಸಮಯವಿದ್ದರೆ ಬಳಿಗೆ ಬಾ
ಒಬ್ಬರನ್ನೊಬ್ಬರು ಅಪ್ಪಿಕೊಂಡು ಅತ್ತು ಬಿಡೋಣ
ಭಾವ ಅಳಿದು ಎದೆಯ ತಂತಿ ಮಿಡಿದು
ಹೃದಯ ನಿಶ್ಯಬ್ಧವಾಗಲಿ
ಬಿಸಿ ಉಸಿರಿನ ಶಾಖ
ತನುವ ತಂಪಿಗೆ ಹಿತವೆನಿಸಲಿ
ತಲೆಯ ನೂರು ಭಾರ
ಜರ್ರನೇ ಇಳಿಯದಿದ್ದರೂ
ಮೆಲ್ಲನೆ ಹದಗೊಳ್ಳಲಿ
ಜಡತೆ ಜಾಡ್ಯದ ಜೇಡ ಬಲೆ ಮನಸು
ಬಿಡಿಸೆ ನಿರಾಳವಾಗಲಿ
ದುಗುಡ ತುಂಬಿದ ಖಾಲಿ ತುಂಬು ರೆಕ್ಕೆ ಕೊಡವಿ
ದಿಗ್ಗನೆ ದಿಗಿಣಗೊಳಿಸುವ ತವಕ
ದಿಂಕಿಟ ನಾದ ದ್ವಿಗುಣಗೊಳ್ಳಲಿ
ಎದೆ ಬಡಿತ ಲಯ ತಪ್ಪದಂತೆ
ಬಿಗಿದ ತೋಳು ಸಡಿಲಗೊಳ್ಳದಂತೆ ಮತ್ತೇ ಬಿಡದಂತೆ
ಬಳಿಯಲಿ ತೊರೆ ನದಿ ಇದ್ದರೆ
ತುಸು ಜೋಪಾನ...
ಭಾಷ್ಪಧಾರೆ ಹರಿವಿಗೆ ತುಂಬಿ ಹರಿದು
ಊರು ಮುಳುಗಿಸಿದರೆ ?
ಸಮಯವೆಷ್ಟೇ ಸರಿಯಲಿ ಬಂಧ ಬಿಗಿಯಲಿ
ಬಿಡದೆ ಬಳಸುವೆ ಒಮ್ಮೆ ಬಂದು ಬಿಡು
-ಕವಿತಾ ಉಮೇಶ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ