ಕುಲಗಿರಿಗಳೊಳು ಮೇರು, ಗ್ರಹ ಸಂ--
ಕುಲದೊಳಗೆ ದಿನನಾಥ, ವೃಕ್ಷಾ--
ವಳಿಗಳೊಳು ಸುರಭೂಜ, ಗೋವುಗಳೊಳಗೆ ಸುರಧೇನು |
ಜಲನಿಧಿಯೊಳಿಂಗಡಲು ಮಿಗೆ ವೆ--
ಗ್ಗಳಿಸಿದಂತಖಿಲ ವ್ರತಂಗಳ
ತಿಲಕವಹ ಶಿವರಾತ್ರಿ ಬಂದುದು ಮಾಘಮಾಸದಲಿ ||
(ಬ್ರಹ್ಮೋತ್ತರ ಖಂಡದೊಳಗಣ ಶಿವಪುರಾಣದ 3೦ನೇ ಸಂಧಿಯ 3ನೇ ಪದ್ಯವಿದು)
ಸರ್ವ ವ್ರತಗಳಿಗೂ ತಿಲಕಪ್ರಾಯವಾಗಿರುವ ಶಿವರಾತ್ರಿಯು ಹೇಗೆ ವೆಗ್ಗಳದ ವ್ರತವಾಗಿದೆಯೆಂಬುದನ್ನು ಕವಿ ತುಲನಾತ್ಮಕವಾಗಿ ಇಲ್ಲಿ ಪ್ರತಿಪಾದಿಸಿರುವುದನ್ನು ನಾವು ಕಾಣಬಹುದು. ಸ್ಕಂದ ಪುರಾಣ, ಲಿಂಗಪುರಾಣ, ಪದ್ಮಪುರಾಣಗಳೇ ಮೊದಲಾದ ಹಲವು ಪುರಾಣಗಳಲ್ಲಿ ಶಿವರಾತ್ರಿ ಮಹಾತ್ಮೆಯ ಕುರಿತು ವಿಶದವಾದ ವಿವರಣೆಗಳಿವೆ.
ಮಾಘಮಾಸದ ತ್ರಯೋದಶಿಯ ರಾತ್ರಿಯಲ್ಲಿಯೂ ಚತುರ್ದಶಿಯ ಹಗಲಿನಲ್ಲಿಯೂ ಬೆಸೆದುಕೊಂಡಿರುವ ವಿಶಿಷ್ಟವಾದ ಹಬ್ಬವೇ ಶಿವರಾತ್ರಿ. ನಮ್ಮೊಳಗಿನ ಅಜ್ಞಾನವೆಂಬ ಕತ್ತಲೆಯನ್ನು ತೊಡೆದುಹಾಕಿ ಸುಜ್ಞಾನವೆಂಬ ಬೆಳಕನ್ನು ಕರುಣಿಸುವ ಭಗವಂತನಾದ ಪರಶಿವನನ್ನು ಪೂಜಿಸುವ ಮಹಾಶಿವರಾತ್ರಿಯ ಪರ್ವಕಾಲವಿಂದು ಬಂದಿದೆ.
ಹಗಲಿಡೀ ನಿಷ್ಠೆಯಿಂದ ಉಪವಾಸವಿದ್ದು ರಾತ್ರಿ ಪೂರ್ತಿ ಜಾಗರಣೆ ಮಾಡುತ್ತಾ ಶಿವನನ್ನು ಆರಾಧಿಸುವುದು ಶಿವರಾತ್ರಿಯ ವೈಶಿಷ್ಟ್ಯ. ಶಿವನು ತ್ರಿಮೂರ್ತಿಗಳಲ್ಲೊಬ್ಬನಾಗಿದ್ದಾನೆ. ಆತ ಪರಮೇಶ್ವರ, ಶಂಕರ, ಸರ್ವಮಾನ್ಯ, ಸರ್ವವಂದ್ಯ. ನಮ್ಮ ಕಷ್ಟಗಳೆಲ್ಲವನ್ನೂ ಪರಿಹರಿಸಿ ಆಯುರಾರೋಗ್ಯ ಭಾಗ್ಯಗಳನ್ನು ಕರುಣಿಸಿ ಸದಾಕಾಲವೂ ರಕ್ಷಣೆಮಾಡಬೇಕೆಂದು ಪ್ರಾರ್ಥಿಸುತ್ತಾ ಶಿವನನ್ನು ಆರಾಧಿಸುವವರ ಜನ್ಮ ಸಾರ್ಥಕವಾಗುವ ಶುಭದಿನವಿಂದು.
ಶಿವನು ಅಭಿಷೇಕ ಪ್ರಿಯ. ಶಿವಲಿಂಗಕ್ಕೆ ಶ್ರದ್ಧಾಭಕ್ತಿಗಳಿಂದ ರುದ್ರಾಭಿಷೇಕ ಮಾಡುವುದರಿಂದ ಶಿವನು ಪ್ರಸನ್ನನಾಗುತ್ತಾನೆ. ಶಿವಭಜನೆ, ಶಿವ ಸಹಸ್ರನಾಮ ಪಾರಾಯಣ, ಶಿವಕಥಾ ಶ್ರವಣಗಳನ್ನು ಭಕ್ತಿಯಿಂದ ಮಾಡುವುದು ಶಿವರಾತ್ರಿಯ ಹಬ್ಬದಲ್ಲಿ ಹಾಸುಹೊಕ್ಕಾಗಿದೆ.
ಪೌರಾಣಿಕ ಹಿನ್ನೆಲೆಗಳ ಆಧಾರದಲ್ಲಿ, ಶಿವನು ಆನಂದದಿಂದ ತಾಂಡವವಾಡಿದ ದಿನವೆಂದೂ ಹಾಲಾಹಲವನ್ನು ಕುಡಿದು ಲೋಕನಾಶದ ಭೀತಿಯನ್ನು ನಿವಾರಿಸಿದ ದಿನವೆಂದೂ ಪ್ರತೀತಿಗಳಿವೆ. 'ಶಿವ' ಎಂದರೆ 'ಮಂಗಲ' ಅಥವಾ 'ಶುಭ' ಎಂದರ್ಥ. ಶಿವ ಅರ್ಧನಾರೀಶ್ವರ. ಆದುದರಿಂದ ಶಿವ-ಶಿವೆಯರ ಆರಾಧನೆಗೆ ಹೆಚ್ಚಿನ ಮಹತ್ವವಿದೆ. ವಾಕ್ ಮತ್ತು ಅರ್ಥದ ಹಾಗಿರುವ ಅವರೇ ಜಗತ್ತಿನ ಮಾತಾಪಿತರು.
ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ
ಜಗತಃ ಪಿತರೌ ವಂದೇ ಪಾರ್ವತೀ ಪರಮೇಶ್ವರೌ ||
ಎಂಬ ವೇದೋಕ್ತಿಯನ್ನು ತಿಳಿಯದವರಿಲ್ಲ.
'ಸರ್ವಂ ಶಿವ ಮಯಂ' ಎಂದರೆ ಶಿವನಿಲ್ಲದ ಎಡೆಯೇ ಇಲ್ಲ. ಕೇವಲ ಒಂದು ಶಿಲೆಯನ್ನು ಶಿವಲಿಂಗವೆಂದು ಭಾವಿಸಿ ಪೂಜಿಸಿದರೂ ಶಿವನ ಸಾಕ್ಷಾತ್ಕಾರ ಖಂಡಿತ. 'ಸತ್ಯಂ ಶಿವಂ ಸುಂದರಂ' ಎಂಬ ಪದಗಳೇ ಬಹಳ ಆಪ್ಯಾಯಮಾನವಾಗಿವೆ.
ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಕೂಡಲ ಸಂಗಮ ದೇವಾ
ನಿಮ್ಮ ಚರಣಕಮಲದೊಳಗಾನು ತುಂಬಿ ||
ಎಂಬ ಬಸವಣ್ಣನವರ ವಚನದಂತೆ ಅನನ್ಯ ಭಕ್ತಿಯಿಂದ ಶಿವನನ್ನು ಸ್ತುತಿಸುತ್ತಾ ವ್ರತ, ಉಪವಾಸ, ಶಿವನಾಮ ಸಂಕೀರ್ತನಾದಿಗಳ ಮೂಲಕ 'ಓಂ ನಮಃ ಶಿವಾಯ' ಎಂಬ ಪಂಚಾಕ್ಷರೀ ಮಂತ್ರವನ್ನು ಉಚ್ಚರಿಸುತ್ತಾ ಜಾಗರಣೆಯಿಂದ ಕಾಲಯಾಪನೆ ಮಾಡಬೇಕು. ಶಿವನನ್ನು ತ್ರಿಕರಣ ಪೂರ್ವಕವಾಗಿ ಪ್ರಾರ್ಥಿಸಿ ಪುಣ್ಯಭಾಜನರಾಗಬೇಕಾದ ಪರ್ವದಿನವೆಂದರೆ ಶಿವರಾತ್ರಿಯೇ ಸರಿ.
ಶಿವನಿಗೆ ಬಿಲ್ವಪತ್ರೆ ಬಹಳ ಇಷ್ಟ. ಅದು ಪರಮ ಪವಿತ್ರ. ಬಿಲ್ವಾಷ್ಟಕ ಸ್ತೋತ್ರದಲ್ಲಿ ಅದರ ಮಹತ್ವವನ್ನು ಹೀಗೆ ವರ್ಣಿಸಿದ್ದಾರೆ--
ಲಕ್ಷ್ಮೀಯಾಶ್ಚ ಸ್ತನ ಉತ್ಪನ್ನಂ ಮಹಾದೇವ ಸದಾ ಪ್ರಿಯಮ್
ಬಿಲ್ವವೃಕ್ಷಂ ಪ್ರಯಚ್ಛಾಮಿ ಏಕ ಬಿಲ್ವಂ ಶಿವಾರ್ಪಣಮ್ ||
ದರ್ಶನಂ ಬಿಲ್ವ ವೃಕ್ಷಾಯ ಸ್ಪರ್ಶನಂ ಪಾಪನಾಶನಮ್
ಅಘೋರ ಪಾಪ ಸಂಹಾರಂ ಏಕ ಬಿಲ್ವಂ ಶಿವಾರ್ಪಣಮ್ ||
ತ್ರಿದಲಂ ತ್ರಿಗುಣಾಕಾರಂ ತ್ರಿನೇತ್ರಂಚ ತ್ರಿಯಾಯುಧಮ್
ತ್ರಿಜ್ಞಾನ ಪಾಪ ಸಂಹಾರಂ ಏಕ ಬಿಲ್ವಂ ಶಿವಾರ್ಪಣಮ್ ||
ಬಿಲ್ವಪತ್ರೆಯನ್ನು ಶಿವನಿಗರ್ಪಿಸಿದರೆ ಮೂರುಜನ್ಮಗಳ ಪಾಪಗಳೂ ನಾಶವಾಗಿ ಶಿವಸಾಯುಜ್ಯ ಪ್ರಾಪ್ತವಾಗುತ್ತದೆಯೆಂಬ ನಂಬಿಕೆ ಭಕ್ತಜನರಲ್ಲಿದೆ. ತ್ರಿದಳದ ಬಿಲ್ವಪತ್ರೆಯು ತ್ರಿಕಾಲ, ತ್ರಿಮೂರ್ತಿ, ತ್ರಿನೇತ್ರ, ತ್ರಿಶಕ್ತಿ, ತ್ರಿಶೂಲ, ಓಂಕಾರಗಳ ದಿವ್ಯ ಸಂಕೇತವಾಗಿದೆ. ಪಂಚದಳ ಬಿಲ್ವಪತ್ರೆಯೂ ಶಿವನಿಗೆ ಅತ್ಯಂತ ಪ್ರಿಯವಾಗಿದೆ.
ಸ್ಕಂದ ಪುರಾಣದ ಪ್ರಕಾರ - ಒಂದು ದಿನ ಪಾರ್ವತಿಯ ಹಣೆಯಿಂದ ಬೆವರಿನ ಕೆಲವು ಹನಿಗಳು ಮಂದರ ಪರ್ವತದ ಮೇಲೆ ಬಿದ್ದುವು. ತಕ್ಷಣ ಅಲ್ಲೊಂದು ಬಿಲ್ವಪತ್ರೆಯ ಮರ ಹುಟ್ಟಿತು. ಆ ಮರದ ಬೇರಿನಲ್ಲಿ ಗಿರಿಜೆಯೂ ಕಾಂಡದಲ್ಲಿ ಮಹೇಶ್ವರಿಯೂ ಗೆಲ್ಲುಗಳಲ್ಲಿ ದಾಕ್ಷಾಯಿಣಿಯೂ ಎಲೆಗಳಲ್ಲಿ ಪಾರ್ವತಿಯೂ ಕಾಯಿಗಳಲ್ಲಿ ಕಾತ್ಯಾಯಿನಿಯೂ ಹೂಗಳಲ್ಲಿ ಗೌರಿಯೂ ವಾಸವಾಗಿದ್ದಾರೆ. ಅದರ ಅಸಂಖ್ಯಾತ ಮುಳ್ಳುಗಳಲ್ಲಿ ವಿವಿಧ ಶಕ್ತಿಗಳು ನೆಲಸಿವೆ. ಲಕ್ಷ್ಮೀದೇವಿ ಕೂಡಾ ಬಿಲ್ವಪತ್ರೆ ವೃಕ್ಷದಲ್ಲಿ ನೆಲಸಿದ್ದಾಳೆಂಬ ಪ್ರತೀತಿಯಿದೆ. ಆದುದರಿಂದ ಶಿವಪೂಜೆಯಲ್ಲಿ ಬಿಲ್ವಪತ್ರೆಯನ್ನು ಸಮರ್ಪಿಸಿದರೆ ಎಲ್ಲ ಶಕ್ತಿಗಳೂ ಸಂಪನ್ನಗೊಂಡು ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ.
ಶಿವನು ಭಸ್ಮಲೇಪಧಾರಿ. ಭಸ್ಮ ಅಥವಾ ವಿಭೂತಿ ಬಹಳ ಮಹತ್ಪಪೂರ್ಣವಾದುದು. ವಿಭೂತಿಯನ್ನು ತಯಾರಿಸುವ ಕ್ರಮವೇ ವಿಶಿಷ್ಟವಾದುದು. ಗೋವಿನ ಶುದ್ಧವಾದ ಬೆರಣಿಯನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿ ಬಿಸಿಲಲ್ಲಿ ಒಣಗಿಸಿ ಶಿವರಾತ್ರಿಯಂದು ಅದನ್ನು ಸುಟ್ಟು ಭಸ್ಮಗೊಳಿಸಬೇಕು. ಮರುದಿನ ಆ ಭಸ್ಮವನ್ನು ಶುದ್ಧವಾದ ಬಟ್ಟೆಯಲ್ಲಿ ಗಾಳಿಸಿ ಸ್ವಚ್ಛಗೊಳಿಸಬೇಕು. ಅನಂತರ ಗೋಮೂತ್ರದಲ್ಲಿ ಕಲಸಿ ಚಿಕ್ಕ ಗಾತ್ರದ ಉಂಡೆಗಳನ್ನಾಗಿ ಮಾಡಿ ಚೆನ್ನಾಗಿ ಬಿಸಿಲಲ್ಲಿ ಒಣಗಿಸಿ ಜಾಗ್ರತೆಯಾಗಿ ತೆಗೆದಿರಿಸಬೇಕು. ಅವುಗಳನ್ನು ಮುಂದಿನ ವರ್ಷದ ಶಿವರಾತ್ರಿಯಂದು ಬೆರಣಿ ಸುಡುವಾಗ ಆ ಬೆರಣಿಯ ಮಧ್ಯದಲ್ಲಿರಿಸಿ ಸುಟ್ಟು ವಿಶಿಷ್ಟವಾಗಿ ಸಂಸ್ಕಾರಗೊಳಿಸಬೇಕು. ಅಂತಹ ಭಸ್ಮ ಬಹಳ ಪವಿತ್ರ. ಅದುವೇ ವಿಭೂತಿ. ಅದನ್ನು ದೇಹದ ವಿವಿಧ ಭಾಗಗಳಿಗೆ ಶಾಸ್ತ್ರೀಯವಾಗಿ ಲೇಪಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ವೈಜ್ಞಾನಿಕ ಸತ್ಯ.
(ಕೆಲವು ವರ್ಷಗಳ ಹಿಂದೆ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರಗಳಿಂದ ಪ್ರಸಾರವಾದ ಚಿಂತನವಿದು)
- ವಿ.ಬಿ.ಕುಳಮರ್ವ, ಕುಂಬ್ಳೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ