ನಮ್ಮ ಜೀವನದಲ್ಲಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ನೆಮ್ಮದಿಯೂ ಮಹತ್ವದ ಪಾತ್ರವನ್ನು ವಹಿಸುತ್ತದೆ. "ಚಿಂತೆಯಿಲ್ಲದವನಿಗೆ ಸಂತೆಯಲ್ಲಿಯೂ ನಿದ್ದೆ" ಎಂಬಂತೆ ಮಾನಸಿಕ ನೆಮ್ಮದಿಯೂ ಮುಖ್ಯವಾಗಿದೆ. ಖಿನ್ನತೆ, ಕೋಪ, ಅಭದ್ರತೆಯ ಭಾವನೆ, ಕೀಳರಿಮೆ ಇವು ಮಾನಸಿಕ ನೆಮ್ಮದಿಗೆ ಭಂಗ ತರುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಆದರೆ ನಮ್ಮ ಮಾನಸಿಕ ನೆಮ್ಮದಿ ಹಾಳಾಗಲು ನಮ್ಮ ತಲೆಯ ಮೇಲೆ ಆಕಾಶವೇ ಕಳಚಿ ಬೀಳುವ ಅವಶ್ಯಕತೆ ಇಲ್ಲ. ಪಕ್ಕದ್ಮನೆಯವರು ಮನೆ ಕಟ್ಟಿಸಿದರೂ ನಾವು ಅಸೂಯೆಯಿಂದ ಭುಸುಗುಡುತ್ತೇವೆ. ನಮ್ಮ ಸಂಬಂಧಿಕರ ಮಕ್ಕಳು ನಮ್ಮ ಮಕ್ಕಳಿಗಿಂತ ಒಂದು ಮಾರ್ಕ್ಸ್ ಹೆಚ್ಚು ತೆಗೆದು ಕೊಂಡರೂ ನಮ್ಮಲ್ಲಿ ದ್ವೇಷಾಗ್ನಿ ಭುಗಿದೇಳುತ್ತದೆ. ಯಾರದೋ ಮನೆಯ ಗೃಹ ಪ್ರವೇಶದಲ್ಲಿ ಸಂಭ್ರಮದಲ್ಲಿ ಓಡಾಡುತ್ತೇವೆ. ಆದರೆ ನಮ್ಮ ಹತ್ತಿರದ ಸಂಬಂಧಿಗಳು ಮನೆ ಕಟ್ಟಿಸಿದರೆ ಅವರ ಆದಾಯವನ್ನು ಕೆದಕುತ್ತೇವೆ. ವಿನಾ ಕಾರಣ ನಮ್ಮ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಚಡಪಡಿಸುತ್ತೇವೆ.
ನಮ್ಮ ಮನಸ್ಸು ಎಷ್ಟು ಪ್ರಬಲವೆಂದರೆ ನಮ್ಮ ಶರೀರದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ. ಸಾವಿನ ಸಮೀಪ ಹೋಗಿ ಬಂದು ನೆಮ್ಮದಿಯ ಜೀವನ ನಡೆಸಲು. ಮತ್ತು ಎಲ್ಲ ಇದ್ದೂ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ಕಡೆಗೆ ಸಾಗಲು ಪ್ರಬಲ ಮನಸ್ಸು ಮತ್ತು ದುರ್ಬಲ ಮನಸ್ಸುಗಳೇ ಕಾರಣ.
ನಮ್ಮ ಮನಸ್ಸು ಆರೋಗ್ಯಕರ ಚಿಂತನೆಗಳತ್ತ ಸಾಗುತ್ತಿದ್ದರೆ ನಾವು ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಿದ್ದೇವೆ ಎಂದು ಹೇಳಬಹುದು. ದೈಹಿಕ ಆರೋಗ್ಯ ಕೆಟ್ಟರೆ ಔಷಧಿಗಳಿಂದ ಗುಣ ಪಡಿಸಿಕೊಳ್ಳ ಬಹುದು. ಆದರೆ ಮಾನಸಿಕ ಆರೋಗ್ಯ ಕೆಟ್ಟರೆ ನಾವು ಮೊದಲಿನ ಸ್ಥಿತಿ ತಲುಪಲು ತುಂಬ ಸರ್ಕಸ್ ಮಾಡಬೇಕಾಗುತ್ತದೆ.
ದೇವರು ನಮ್ಮ ಮಾನಸಿಕ ನೆಮ್ಮದಿಗಾಗಿ ಒಂದು ಹಿಂಟ್ ಕೊಟ್ಟಿದ್ದಾನೆ. ನಮ್ಮ ಶರೀರವನ್ನು ಹಾಗೆಯೇ ರೂಪಿಸಿದ್ದಾನೆ. ಬಹಳ ಹೊತ್ತು ಮೇಲೆ ನೋಡಿದರೆ ನಮ್ಮ ಕತ್ತು ನೋವಾಗುತ್ತದೆ. ಹಾಗೆಯೇ ನಾವು ನಮಗಿಂತ ಮೇಲಿನವರನ್ನು ನೋಡಿ ನೆಮ್ಮದಿ ಕೆಡಿಸಿಕೊಳ್ಳುವ ಬದಲು, ನಮಗಿಂತ ಕೆಳಗಿನವರನ್ನು ನೋಡಿ ಸಮಾಧಾನ ಪಟ್ಟುಕೊಳ್ಳಬೇಕು. ನಮ್ಮ ಮಾನಸಿಕ ನೆಮ್ಮದಿ ಕೆಡಿಸಲಿಕ್ಕೆಂದೇ ಹುಟ್ಟಿರುವ ಜನರಿಂದ ದೂರವಿದ್ದು ಆರಾಮವಾಗಿ ಇರೋಣ. ಏನಂತೀರಾ?
- ಗಾಯತ್ರಿ ಸುಂಕದ, ಬದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ