ಮಂಗಳೂರು: ಬಂಟ್ಸ್‌ ಪ್ರೀಮಿಯರ್ ಲೀಗ್ ಸೀಸನ್ 2 ಕ್ರೀಡಾಕೂಟಕ್ಕೆ ಅದ್ದೂರಿಯ ಚಾಲನೆ

Upayuktha
0

ಮೊದಲ ದಿನ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದ 8 ಪಂದ್ಯಗಳು



ಮಂಗಳೂರು: ಬಂಟ್ಸ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿಯ ಕ್ರಿಕೆಟ್ ಪಂದ್ಯಾಟಕ್ಕೆ ಅಡ್ಯಾರಿನ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ ಅದ್ದೂರಿಯ ಚಾಲನೆ ನೀಡಲಾಯಿತು.


ಇಂಟರ್ ನ್ಯಾಷನಲ್ ಬಂಟರ ವೆಲ್ ಫೇರ್ ಟ್ರಸ್ಟ್ ಅಧ್ಯಕ್ಷರಾದ ಡಾ. ಎ. ಸದಾನಂದ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷರು ಹಾಗೂ ಮುಂಬಯಿ ಉದ್ಯಮಿ ಐಕಳ ಹರೀಶ್ ಶೆಟ್ಟಿ,  ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಸುಂದರ್ ಶೆಟ್ಟಿ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ರವಿರಾಜ್ ಶೆಟ್ಟಿ, ಇಂಟರ್ ನ್ಯಾಷನಲ್ ಬಂಟರ ವೆಲ್‌ಫೇರ್ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ ರೈ, ಇಂಟರ್ ನ್ಯಾಷನಲ್ ಬಂಟರ ವೆಲ್‌ಫೇರ್ ಟ್ರಸ್ಟ್‌ನ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಚಂದ್ರಹಾಸ ಶೆಟ್ಟಿ, ತಂಡಗಳ ಮಾಲೀಕರಾದ ಅಡ್ವೊಕೇಟ್ ರವೀಂದ್ರನಾಥ ರೈ, ಮಹೇಶ್ ವಿಕ್ರಮ ಹೆಗ್ಡೆ, ಸಂಘಟಕರಾದ ಸಚಿನ್ ರಾಜ್ ರೈ, ಪ್ರಸಾದ್ ಶೆಟ್ಟಿ, ಮೋಹಿತ್ ಮಲ್ಯ, ಅಜಯ್ ಶೆಟ್ಟಿ, ಸುರೇಶ್ ಚಂದ್ರ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಚಿನ್ ರಾಜ್ ರೈ ಎಲ್ಲರನ್ನೂ ಸ್ವಾಗತಿಸಿದರು. ಜಯಕರ ಶೆಟ್ಟಿ ಇಂದ್ರಾಳಿ, ಶಾಸಕರಾದ ಡಾ. ಭರತ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಮೇಯರ್ ಮನೋಜ್ ಕುಮಾರ್ ಮುಂತಾದ ಗಣ್ಯರು ಆಗಮಿಸಿ ಪಂದ್ಯಾಟಕ್ಕೆ ಶುಭ ಹಾರೈಸಿದರು.


ಬಂಟ್ಸ್ ಪ್ರೀಮಿಯರ್ ಲೀಗ್ ಸೀಸನ್ 2 ಈಗ ತಾನೇ ಉದ್ಘಾಟನೆಗೊಂಡಿದೆ. ಇದರ ಆಯೋಜನೆಗಾಗಿ ಬಹಳಷ್ಟು ಶ್ರಮಪಟ್ಟ ಸಂಘಟಕರಾದ ಸಚಿನ್ ರಾಜ್ ರೈ ಮತ್ತು ಪ್ರಸಾದ್ ಶೆಟ್ಟಿಯವರಿಗೆ, ಎಲ್ಲ ಆಟಗಾರರಿಗೆ ಅಭಿನಂದನೆಗಳು. ಸಂಘಟಕರಿಗೆ ಮಾರ್ಗದರ್ಶಕರಾಗಿ ರಾಜಗೋಪಾಲ್ ರೈ ಅವರ ಪಾತ್ರ ಅತ್ಯಂತ ಶ್ಲಾಘನೀಯ ಎಂದು ಉದ್ಘಾಟಕರಾದ ಡಾ. ಎ. ಸದಾನಂದ ಶೆಟ್ಟಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಅಜಿತ್ ಕುಮಾರ್ ಮಾಲಾಡಿ ಅವರು ಮಾತನಾಡಿ, 'ವೇದಿಕೆಯಲ್ಲಿರುವ ಎಲ್ಲ ಗಣ್ಯರೂ ಬಾಲ್ಯದಿಂದಲೇ ನನ್ನ ಒಡನಾಡಿಗಳು. ಈ ಕ್ರೀಡಾಕೂಟ ನಡೆಯುತ್ತಿರುವ ಈ ಪ್ರದೇಶ ನನ್ನ ಬಾಲ್ಯದ ಓಡಾಟ, ಒಡನಾಟದ ಸ್ಥಳವಾಗಿತ್ತು. ಈ ಕ್ರೀಡಾಕೂಟದ ಆಯೋಜನೆಗೆ ಬಹಳ ಶ್ರಮವಹಿಸಿದ್ದಾರೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ ಒಂದೇ ಒಂದು ದುಃಖದ ವಿಚಾರವೆಂದರೆ ಸಾರ್ವಜನಿಕರ ಸ್ಪಂದನದ ಕೊರತೆ. ನಿರೀಕ್ಷಿತ ಸಂಖ್ಯೆಯಲ್ಲಿ ಪ್ರೇಕ್ಷಕರು ಕಾಣಿಸದಿರುವುದು ವಿಷಾದನೀಯ. ಈ ಪರಿಸ್ಥಿತಿ ಇಲ್ಲಿ ಮಾತ್ರವಲ್ಲ, ಯಾವ ಊರಲ್ಲಿ ಕ್ರೀಡಾ ಚಟುವಟಿಕೆಗಳು ನಡೆದರೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದೆ. ಜನ ಯಕ್ಷಗಾನಕ್ಕೆ ಬರುತ್ತಾರೆ, ಭೋಜನ ಸಮಾರಂಭಗಳಿಗೆ ಬರುತ್ತಾರೆ, ಆದರೆ ಕ್ರೀಡಾಕೂಟಗಳಿಗೆ ಬರುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಯಾವುದೇ ಕಾರಣವಿರಲಿ, ಮುಂದಿನ ಕ್ರೀಡಾಕೂಟಗಳಿಗೆ ಜನರನ್ನು ಬರುವಂತೆ ಮಾಡುವ ನಿಟ್ಟಿನಲ್ಲಿ ಸಂಘಟಕರು ಇನ್ನಷ್ಟು ಗಮನಹರಿಸಲಿ ಎಂದು ಕಿವಿಮಾತು ಹೇಳಿದರು.


ಐಕಳ ಹರೀಶ್ ಶೆಟ್ಟಿ ಅವರು ಮಾತನಾಡಿ, ಯಾವುದೇ ಕಾರ್ಯಕ್ರಮಗಳು ಯಶಸ್ವಿಯಾಗಬೇಕಾದರೆ ಯುವಶಕ್ತಿಯ ಬೆಂಬಲ ಬೇಕು. ನಮ್ಮಂತಹ ಹಿರಿಯರಿಗೆ ವಯೋಸಹಜ ಕಾರಣಗಳಿಂದ ಶಕ್ತಿ ಕಡಿಮೆಯಾಗುತ್ತಿದೆ. ಹಾಗಾಗಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ಸಮಾಜದ ಸಂಘಟನೆ ಹಾಗೂ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ವಿವಿಧ ಊರುಗಳಲ್ಲಿ ಬಂಟರ ಸಂಘಗಳು ತ್ರೋಬಾಲ್, ವಾಲಿಬಾಲ್, ಹಗ್ಗಜಗ್ಗಾಟದಂತಹ ಕ್ರೀಡೆಗಳನ್ನು ಆಯೋಜಿಸುತ್ತಾರೆ. ಆದರೆ ಅಂತಾರಾಷ್ಟ್ರೀಯ ಕ್ರೀಡೆಯಾದ ಕ್ರಿಕೆಟ್ ಪಂದ್ಯಾಟ ಆಯೋಜಿಸುವುದು ಕಡಿಮೆ. ಹಾಗಿರುವಾಗ ಇಲ್ಲಿನ ಸಂಘಟಕರು ಮೂರು ದಿನಗಳ ಕಾಲ ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸಿರುವುದು ಮತ್ತು ವಿದೇಶಗಳಿಂದಲೂ ಆಟಗಾರರು ಬಂದು ಭಾಗವಹಿಸಿರುವುದು ಶ್ಲಾಘನೀಯ. ಇಂದಿನ ಈ ಕ್ರೀಡಾಕೂಟವನ್ನು ಅತ್ಯಂತ ಅಚ್ಚುಕಟ್ಟಾಗಿ, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ, ವೃತ್ತಿಪರವಾಗಿ ಆಯೋಜಿಸಿದ್ದಾರೆ ಎಂದರು. ನಾವು ರಾಜಕೀಯ ಬಿಟ್ಟು ಯುವಶಕ್ತಿಗೆ ಬೆಂಬಲ ನೀಡಬೇಕು ಎಂದು ಕರೆ ನೀಡಿದರು.


ಗುರುಕಿರಣ್ ಶೆಟ್ಟಿ ಅವರು ಮಾತನಾಡಿ, ಬಂಟ್ಸ್‌ ಪ್ರೀಮಿಯರ್ ಲೀಗ್ ಮುಂದಿನ ದಿನಗಳಲ್ಲಿ ರಾಜ್ಯಮಟ್ಟ, ರಾಷ್ಟ್ರಮಟ್ಟ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಲಿ ಎಂದು ಹಾರೈಸಿದರು.


ಈ ಕ್ರಿಕೆಟ್ ಪಂದ್ಯಾಟವನ್ನು ಆಪ್ ಮೂಲಕ ಲೈವ್ ಪ್ರಸಾರ ಮಾಡಲಾಗುತ್ತಿದೆ.



ವೇದಿಕೆಯ ಕಾರ್ಯಕ್ರಮ ಮುಗಿದ ಬಳಿಕ ಕ್ರೀಡಾಂಗಣದಲ್ಲಿ ಪಂದ್ಯಾಟಕ್ಕೆ ಅದ್ದೂರಿಯ ಚಾಲನೆ ನೀಡಲಾಯಿತು. ಆಕರ್ಷಕ ಸುಡುಮದ್ದು ಪ್ರದರ್ಶನ, ಡ್ರೋನ್‌ಗಳ ಹಾರಾಟ, ಚೆಂಡೆ, ವಾದ್ಯಗಳ ಮೇಳವನ್ನು ಪ್ರದರ್ಶಿಸಲಾಯಿತು.


ಇದೇ ಸಂದರ್ಭದಲ್ಲಿ ಆಹಾರ ಮೇಳ ಹಾಗೂ ಬೋಟಿಂಗ್ ಮೇಳವನ್ನು ಆಯೋಜಿಸಲಾಗಿದೆ.


ಮೊದಲ ದಿನ 8 ಪಂದ್ಯಗಳನ್ನು ನಡೆಸಲಾಯಿತು. ಮೊದಲ ಪಂದ್ಯಾಟದಲ್ಲಿ ರಾಯಲ್ ಸುರಗಿರಿ ತಂಡ ವಿಕ್ರಮ ವಾರಿಯರ್ಸ್ ತಂಡವನ್ನು 51 ರನ್‌ಗಳ ಅಂತರದಿಂದ ಸೋಲಿಸಿತು. 19 ರನ್ ಮತ್ತು 2 ವಿಕೆಟ್‌ಗಳನ್ನು ಪಡೆದ ಮನೀಶ್ ಅವರು ಮ್ಯಾನ್‌ ಆಫ್‌ ದ ಮ್ಯಾಚ್ ಆಗಿ ಆಯ್ಕೆಯಾದರು.


ಎರಡನೇ ಪಂದ್ಯಾಟದಲ್ಲಿ ಎಜೆ ರಾಯಲ್ಸ್ ತಂಡ ಕರಾವಳಿ ಚಾಲೆಂಜರ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. 10 ರನ್ ಮತ್ತು 2 ವಿಕೆಟ್ ಪಡೆದ ಅಮೃತ್‌ ಮ್ಯಾನ್ ಆಫ್‌ ದ ಮ್ಯಾಚ್ ಆಗಿ ಆಯ್ಕೆಯಾದರು.


ಮೂರನೇ ಪಂದ್ಯಾಟದಲ್ಲಿ ರಾಯಲ್ ಬಂಟ್ಸ್ ಸುರತ್ಕಲ್ ತಂಡ, ಲೆಜೆಂಡ್ ಬಂಟ್ಸ್ ತಂಡವನ್ನು 14 ರನ್‌ಗಳಿಂದ ಸೋಲಿಸಿತು. 34 ರನ್ ಹಾಗೂ 2 ವಿಕೆಟ್ ಪಡೆದ ರಾಜಶೇಖರ್ ಮ್ಯಾನ್‌ ಆಫ್‌ ದ ಮ್ಯಾಚ್ ಆಗಿ ಆಯ್ಕೆಯಾದರು.


ನಾಲ್ಕನೇ ಪಂದ್ಯದಲ್ಲಿ ಲೋಟಸ್ ಸೂಪರ್ ಕಿಂಗ್ಸ್ ತಂಡವು ಮೇಲಾಂಟ ಮಾವೆರಿಕ್ಸ್ ತಂಡವನ್ನು 19 ರನ್‌ಗಳಿಂದ ಸೋಲಿಸಿತು. 17 ರನ್‌ಗಳನ್ನು ಪಡೆದ ರವೀಂದ್ರ ಮ್ಯಾನ್‌ ಆಫ್‌ ದಿ ಮ್ಯಾಚ್ ಆದರು.


ಐದನೇ ಪಂದ್ಯದಲ್ಲಿ ರಾಯಲ್ ಸುರಗಿರಿ ಬಂಟ್ಸ್ ತಂಡವು ಅಡ್ಯಾರ್ ಕಿಂಗ್ಸ್‌ ತಂಡವನ್ನು 21 ರನ್‌ಗಳಿಂದ ಸೋಲಿಸಿತು.


ಆರನೇ ಪಂದ್ಯದಲ್ಲಿ ಕರಾವಳಿ ಚಾಲೆಂಜರ್ಸ್ ತಂಡವು ತುಳುನಾಡು ಟೈಗರ್ಸ್ ತಂಡವನ್ನು 1 ರನ್ ನಿಂದ ಸೋಲಿಸಿ ರೋಚಕ ಜಯ ಸಾಧಿಸಿತು. 34 ರನ್ ಪಡೆದ ಶ್ರೀಕಾಂತ್ ಶೆಟ್ಟಿ ಮ್ಯಾನ್‌ ಆಫ್‌ ದಿ ಮ್ಯಾಚ್ ಆದರು.


ಏಳನೇ ಪಂದ್ಯದಲ್ಲಿ ಲೆಜೆಂಡ್ ಬಂಟ್ಸ್ ತಂಡವು ವಿಕ್ರಮ ವಾರಿಯರ್ಸ್‌ ತಂಡವನ್ನು 15 ರನ್‌ಗಳಿಂದ ಸೋಲಿಸಿತು. 3 ವಿಕೆಟ್‌ಗಳನ್ನು ಪಡೆದ ಸಂಪತ್ ಮ್ಯಾನ್‌ ಆಫ್‌ ದಿ ಮ್ಯಾಚ್ ಆದರು.


ಎಂಟನೇ ಪಂದ್ಯದಲ್ಲಿ ಎಜೆ ರಾಯಲ್ಸ್ ತಂಡವು ಲೋಟಸ್ ಸೂಪರ್ ಕಿಂಗ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿತು. 22 ರನ್ ಹಾಗೂ 1 ವಿಕೆಟ್ ಪಡೆದ ದೀಕ್ಷಿತ್ ಮ್ಯಾನ್‌ ಆಫ್‌ ದಿ ಮ್ಯಾಚ್ ಆದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top