ತಾಯಿ ನೇತ್ರಾವತಿ ಸಮೃದ್ಧವಾಗಿ ಹರಿಯಲಿ: ಮೇಯರ್ ಮನೋಜ್ ಕುಮಾರ್

Upayuktha
0

ತುಂಬೆ ಕಿಂಡಿ ಆಣೆಕಟ್ಟಿಗೆ ಬಾಗಿನ ಅರ್ಪಣೆ




ಮಂಗಳೂರು: ತುಂಬೆ ಕಿಂಡಿ ಆಣೆಕಟ್ಟು ಬಳಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿ ಗಂಗಾಪೂಜೆಯನ್ನು ನೆರವೇರಿಸಲಾಯಿತು.

 

ಬಳಿಕ ಮಾತಾಡಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಅವರು, “ಮಂಗಳೂರಿಗೆ ಅನೇಕ ವರ್ಷಗಳಿಂದ ನೀರುಣಿಸುತ್ತಿರುವ ನೇತ್ರಾವತಿ ನದಿ ನಮಗೆ ತಾಯಿ ಸಮಾನ. ಜನರಿಗೆ ಕೃಷಿಗೆ, ಬದುಕಿಗೆ ಬೇಕಾದ ನೀರು ನಿರಂತರವಾಗಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ಸದ್ಯ ಆರು ಮೀಟರ್ ನೀರಿದೆ. ಹೀಗಾಗಿ ಈ ಬಾರಿ ನೀರಿನ ಕೊರತೆ ಉಂಟಾಗುವ ಸಾಧ್ಯತೆ ತೀರಾ ಕಡಿಮೆ. ದೇವರ ದಯೆಯಿಂದ ಈ ಬಾರಿಯೂ ಜನರಿಗೆ ನೀರು ಬೇಕಾದಷ್ಟು ಸಿಗಲಿ. ಎಡಿಬಿ 780 ಕೋಟಿ ರೂ. ವೆಚ್ಚದಲ್ಲಿ ಜಲಸಿರಿಯ ಕಾಮಗಾರಿ ನಡೆಯುತ್ತಿದ್ದು ಅದು ಪೂರ್ಣಗೊಂಡಲ್ಲಿ ದಿನದ 24 ಗಂಟೆಯೂ ಮಂಗಳೂರಿಗೆ ನೀರು ಸಿಗಲಿದೆ. ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ್ದು ನದಿ ಸಮೃದ್ಧವಾಗಿ ಹರಿಯಲಿ, ಮಂಗಳೂರಿನ ಜನರ ಬದುಕು ಹಸನಾಗಲಿ“ ಎಂದರು. 


ಪಾಲಿಕೆ ವಿಪಕ್ಷ ನಾಯಕ ಅನಿಲ್ ಕುಮಾರ್ ಮಾತಾಡಿ, ”ಪ್ರತೀ ವರ್ಷ ವಾಡಿಕೆಯಂತೆ ಗಂಗಾಪೂಜೆ ನೆರವೇರಿಸಿದ್ದೇವೆ. 2019ರ ಬಳಿಕ ನಮಗೆ ಅಷ್ಟಾಗಿ ನೀರಿನ ಸಮಸ್ಯೆ ಎದುರಾಗಿಲ್ಲ. ಸೆಖೆ, ಒಣಹವೆ ಹೆಚ್ಚಾದಂತೆ ನೀರು ಆವಿಗೊಳ್ಳುತ್ತದೆ, ಹೀಗಾಗಿ ಈ ಬಾರಿ ಯಾವುದೇ ಸಮಸ್ಯೆ ಬಾರದಿರಲಿ ಎಂದು ಒಮ್ಮತದಿಂದ ಪೂಜೆ ಮಾಡಿದ್ದೇವೆ“ ಎಂದರು.


ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತಾಡಿ, “ಜನರಿಗೆ ನೀರು ಪೂರೈಕೆ ಮಾಡುವಲ್ಲಿ ರಾಜ್ಯದಲ್ಲೇ ಮಂಗಳೂರು ಮಹಾನಗರ ಪಾಲಿಕೆ ಪ್ರಥಮ ಸ್ಥಾನದಲ್ಲಿದೆ. ಬೇರೆಲ್ಲಾ ಪಾಲಿಕೆಗಳು ಮೂರು ದಿನಕ್ಕೊಮ್ಮೆ ನೀರು ಕೊಡುತ್ತಿವೆ. ಆದರೆ ಇಲ್ಲಿ ಅಂತಹ ಸ್ಥಿತಿಯಿಲ್ಲ. ನೀರಿನ ಪೂರೈಕೆಗಾಗಿ ಪಾಲಿಕೆಯಿಂದ ಅನೇಕ ಹೊಸ ಕಾಮಗಾರಿಗಳು ನಡೆಯುತ್ತಿವೆ. ಇವೆಲ್ಲ ಪೂರ್ಣಗೊಂಡಲ್ಲಿ ಜನರಿಗೆ ಯಾವುದೇ ಸಮಸ್ಯೆ ಬಾರದು. ಈ ಬಾರಿಯೂ ನೇತ್ರಾವತಿ ನದಿಗೆ ಪೂಜೆ ಮಾಡಿದ್ದು ಜನರಿಗೆ ನೀರಿನ ಸಮಸ್ಯೆ ಎದುರಾಗದಿರಲಿ“ ಎಂದರು. 


ವೇದಿಕೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಉಪ ಮೇಯರ್ ಭಾನುಮತಿ, ಪಾಲಿಕೆಯ ಆಯುಕ್ತ ರವಿಚಂದ್ರ ನಾಯ್ಕ್, ಪಾಲಿಕೆ ಸಚೇತಕ ಪ್ರೇಮಾನಂದ ಶೆಟ್ಟಿ, ಜಯಾನಂದ ಅಂಚನ್, ಭಾಸ್ಕರ್ ಮೊಯಿಲಿ, ಕದ್ರಿ ಮನೋಹರ್ ಶೆಟ್ಟಿ, ಸುಮಿತ್ರಾ, ವೀಣಾ ಮಂಗಳ, ಸರಿತಾ ಶಶಿಧರ್, ವರುಣ್ ಚೌಟ, ಶ್ವೇತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top