ನಮ್ಮ ಭಾರತೀಯ ಪರಂಪರೆಯು ಅನಾದಿಕಾಲದಿಂದ ಕೂಡು ಕುಟುಂಬವಾಗಿ ಜೀವನವನ್ನು ಸಾಗಿಸಿಕೊಂಡು ಬಂದಿದೆ. ಆಗಿನ ಕಾಲದಲ್ಲಿ ಜೇನಿನ ಗೂಡಿನಂತಿದ್ದ ಈ ಕೂಡು ಕುಟುಂಬವು ಈಗ ಎಲ್ಲೋ ಕಣ್ಮರೆಯಾಗಿದೆ. ಈಗಿನ ಕಾಲದಲ್ಲಿ ಹುಡುಕಿದರೂ ಕಾಣ ಸಿಗುವುದು ಅಪರೂಪವಾಗಿದೆ.
ಕೂಡು ಕುಟುಂಬ ಎಂದ ತಕ್ಷಣ ನಮಗೆ ನೆನಪಾಗುವುದು ಅಜ್ಜ ಅಜ್ಜಿ ಹಾಗೂ ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಒಂದು ಕಡೆ ಸೇರಿ ತಮ್ಮ ಖುಷಿ, ನೋವು, ಹಾಗೆ ಆಟ ಇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮವರೊಂದಿಗೆ ಖುಷಿ ಕಾಣುತ್ತಾರೆ.
ಈಗಿನ ಕಾಲದ ಮಕ್ಕಳಲ್ಲಿ, ಈ ಕೂಡು ಕುಟುಂಬ ಎಂಬ ಭಾವನೆಯನ್ನು ಬಿಟ್ಟರು ತಮ್ಮ ತಂದೆ ತಾಯಿಯ ಜೊತೆಗೆ ಇರುವ ಸಂಬಂಧಗಳು ಮರೆತಂತಿವೆ. ಹಿಂದೆ ಒಂದು ಕಾಲವಿತ್ತು, ಆಗ ಮಕ್ಕಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಆಟವಾಡಲು ಬಯಸುತ್ತಿದ್ದರು. ಮಕ್ಕಳು ತಮ್ಮ ಮನೆಯಲ್ಲಿದ್ದ ಹಿರಿಯರಿಂದ ಕಥೆ ಕವನಗಳನ್ನು ಕೇಳಲು ಇಚ್ಚಿಸುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಮಕ್ಕಳಲ್ಲಿ ಸಂಬಂಧಗಳ ಭಾವನೆಯೆ ಮರೆಯಾಗಿದೆ. ಇದು ಕೇವಲ ಮೊಬೈಲ್‌ನಲ್ಲಿಯೇ ಸೀಮಿತವಾಗಿದೆ. ಈಗಿನ ಕಾಲದ ವಿವಾಹಿತರು ತಮ್ಮ ಕುಟುಂಬದೊಂದಿಗೆ ಇರಲು ಇಚ್ಚಿಸುವುದಿಲ್ಲ ತಾವೇ ಈ ಕೂಡು ಕುಟುಂಬದಿಂದ ದೂರ ಉಳಿಯುತ್ತಾರೆ.
ರಕ್ತ ಹಂಚಿಕೊಂಡ ಸಹೋದರ ಸಹೋದರಿಯಾಗಿ ಒಂದೇ ತಾಯಿಯ ಮಡಿಲಲ್ಲಿ ಬೆಳೆದಂತಹ ಮಕ್ಕಳು ಆಸ್ತಿ- ಅಧಿಕಾರಕ್ಕಾಗಿ ಮನಸ್ತಾಪ ಮಾಡಿಕೊಂಡು ಬಾಂಧವ್ಯವನ್ನೇ ಕಳೆದುಕೊಳ್ಳುತ್ತಾರೆ. ಜೇನಿನ ಗೂಡಿನಂತಿದ್ದ ಕುಟುಂಬದಿಂದ ದೂರ ಹೋಗಿ ಈ ಕೂಡು ಕುಟುಂಬವನ್ನು ಒಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಆಸ್ತಿಯನ್ನು ಹಂಚಿಕೊಂಡ ಹಾಗೆ ತಂದೆ ತಾಯಿಯರನ್ನು ಮಕ್ಕಳು ಹಂಚಿಕೊಳ್ಳುತ್ತಿದ್ದಾರೆ.
ತಂದೆ ತಾಯಿಯರನ್ನು ಕೆಲವು ಕಾಲ ಒಬ್ಬ ಮಗ ನೋಡಿಕೊಂಡರೆ ಇನ್ನು ಸ್ವಲ್ಪ ಕಾಲ ತನ್ನ ಮತ್ತೊಬ್ಬ ಮಗನೊಂದಿಗೆ ಹೋಗಬೇಕಾದ ಪರಿಸ್ಥಿತಿಯು ಇದೆ. ಕೆಲವರು ಕೆಲಸದ ವಿಷಯವಾಗಿಯೂ ಹಣದ ವಿಷಯವಾಗಿಯೂ ಈ ಕೂಡು ಕುಟುಂಬದಿಂದ ದೂರ ಉಳಿಯುವಂತಹ ಸಂಭವವು ಇದೆ. ಅಂದರೆ ತಮ್ಮ ಜೀವನವನ್ನು ತಾವೇ ರೂಪಿಸಿಕೊಂಡು ತಾವೇ ಒಂದು ಸಣ್ಣದಾದ ಮನೆಯನ್ನು ಕಟ್ಟಿ ಅಲ್ಲಿ ತಮ್ಮ ಪುಟ್ಟ ಕುಟುಂಬದೊಂದಿಗೆ ವಾಸಿಸಲು ಇಚ್ಚಿಸುತ್ತಾರೆ.
ಹಬ್ಬ ಹರಿದಿನಗಳಲ್ಲಿ ಕೂಡು ಕುಟುಂಬದಲ್ಲಿ ಒಟ್ಟಾಗಿ ಸೇರಿ ಸಡಗರದಿಂದ ಆಚರಣೆ ಮಾಡುತ್ತಿದ್ದೆವು, ಆದರೆ ಈಗ ಇಂತಹ ಸಂಪ್ರದಾಯಗಳೇ ನಮ್ಮಿಂದ ದೂರವಾಗಿವೆ. ಕಾರಣವೇನೆಂದರೆ ತಮ್ಮ ತಮ್ಮ ಕೆಲಸದಲ್ಲಿ, ಹಣ ಸಂಪಾದಿಸುವ ನಿಟ್ಟಿನಲ್ಲಿ ತಮ್ಮ ಕುಟುಂಬವನ್ನೇ ಮರೆತಿದ್ದಾರೆ. ಚಿಕ್ಕಂದಿನಲ್ಲಿ ಈ ಹಬ್ಬ ಹರಿದಿನಗಳಿಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದವರು ಇವರೇ. ಇಂತಹ ಬದಲಾವಣೆಯನ್ನು ನೋಡುವಾಗಲೇ ಅರ್ಥವಾಗುತ್ತದೆ.
ಈ ಕಾಲ ಎಷ್ಟು ರೂಪಾಂತರಗೊಂಡಿದೆ ಎಂದು.ಈ ಕೂಡು ಕುಟುಂಬಕ್ಕೆ ಹಿರಿಯರೊಬ್ಬರು ಮುಖ್ಯಸ್ಥರಾಗಿರುತ್ತಾರೆ, ಮತ್ತು ಅವರು ಶಿಸ್ತುಬದ್ಧವಾಗಿ ಈ ಕುಟುಂಬವನ್ನು ನಿಯಂತ್ರಿಸುತ್ತಿರುತ್ತಾರೆ. ಇಂತಹ ಕುಟುಂಬಗಳಲ್ಲಿ ಸಂಪ್ರದಾಯಗಳನ್ನು ಆಚರಿಸಿಕೊಂಡು ಬಂದಿರುತ್ತಾರೆ. ಒಂದೇ ಮನೆಯಲ್ಲಿ ಇದ್ದರೂ ಕೂಡ ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಲು ಸಮಯ ಕೂಡ ಇರುವುದಿಲ್ಲ. ಕೆಲಸದ ವಿಷಯದಲ್ಲಿ ತಲ್ಲೀನರಾಗಿರುತ್ತಾರೆ ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಕುಟುಂಬದಿಂದ ದೂರ ಇರಬೇಕಾದಂತಹ ಪರಿಸ್ಥಿತಿಯು ಬರಬಹುದು.
ಕೆಲವೊಂದು ಸಂದರ್ಭಗಳಲ್ಲಿ ಮಕ್ಕಳು ತಮ್ಮ ವಿದ್ಯಾಭ್ಯಾಸಕ್ಕೋಸ್ಕರ ಕುಟುಂಬದಿಂದ ದೂರ ಉಳಿಯಬೇಕಾದಂತಹ ಪರಿಸ್ಥಿತಿಯು ಬಂದೊದಗುತ್ತದೆ. ಇಂತಹ ಸಮಯದಲ್ಲಿ ಕೆಲವೊಮ್ಮೆ ಕಷ್ಟ ಬಂದಾಗ ತಮ್ಮ ಮನೆಯವರ ನೆನೆದು ದುಃಖಕ್ಕೀಡಾಗುತ್ತಾರೆ. ಹೀಗಾಗಿ ಎಷ್ಟೋ ಜನರಿಗೆ ಎಲ್ಲರೂ ಇದ್ದರೂ ತಾನು ಒಂಟಿ ಎಂಬ ಭಾವನೆ ಬರುತ್ತದೆ.
ಈ ರೀತಿಯಲ್ಲಿ ತಮ್ಮ ಕುಟುಂಬಸ್ಥರಿಗೆ ತಾವೇ ಅಪರಿಚಿತರಾಗಿಬಿಡುತ್ತಾರೆ. ಕುಟುಂಬದಲ್ಲಿ ಜಗಳ ತರುವಂತಹ ಮಾತುಗಳನ್ನು ಕೇಳದೆ, ನಮ್ಮವರೊಂದಿಗೆ ನಾವಿರಬೇಕು. ನಮ್ಮ ಕುಟುಂಬದವರಲ್ಲಿ ನಮಗೆ ನಂಬಿಕೆ ಇರಬೇಕು. ಪ್ರೀತಿ ಬಾಂಧವ್ಯದಿಂದ ಎಲ್ಲರ ಮನವನ್ನು ಅರಿತು ಅವರಿಗೆ ಕಷ್ಟಕಾಲದಲ್ಲಿ ಆಸರೆಯಾಗಿ ನಿಲ್ಲಬೇಕು ಬರುವ ಕಷ್ಟಗಳನ್ನೆಲ್ಲ ನಿಭಾಯಿಸಿ ಸುಖವನ್ನು ಜೊತೆಗೂಡಿ ಅನುಭವಿಸಿ ನಡೆದಾಗ ಈ ಕೂಡು ಕುಟುಂಬ ಛಿದ್ರಗೊಳ್ಳುವ ಮಾತೇ ಬರುವುದಿಲ್ಲ.
- ದೀಪಿಕಾ, ದೋಳ
ಪ್ರಥಮ ಪತ್ರಿಕೋದ್ಯಮ ವಿಭಾಗ ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ