ಮಂಗಳೂರು: ಮಡಿವಾಳ ಮಾಚಿದೇವ ಜಯಂತಿ

Upayuktha
0


ಮಂಗಳೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ದ. ಕ ಮಡಿವಾಳ ಸಂಘದ ಸಹಕಾರದೊಂದಿಗೆ ಮಡಿವಾಳ ಮಾಚಿದೇವ ಜಯಂತಿ  ಶನಿವಾರ ತುಳುಭವನದಲ್ಲಿ ನಡೆಯಿತು.


ಮೇಯರ್ ಮನೋಜ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಸಾಮಾಜಿಕ ಕ್ರಾಂತಿಕಾರರಾದ ಮಾಚಿದೇವ ಮೇಲು-ಕೀಳು, ಜಾತಿಭೇದ, ಮಹಿಳೆಯರ ಶೋಷಣೆ, ಅಸಮಾನತೆ ಇದರ ವಿರುದ್ಧವಾಗಿ ಹೋರಾಡಿದ್ದಾರೆ. ಈ ಸಮಾಜದಲ್ಲಿನ ಎಲ್ಲಾ ಪಿಡುಗುಗಳನ್ನು ತೊಲಗಿಸುವ ಕಾರ್ಯದಲ್ಲಿ ಮಾಚಿದೇವರ ಕೊಡುಗೆ ಅಪಾರ ಎಂದರು.


ಸಂಪನ್ಮೂಲ ವ್ಯಕ್ತಿಯಾದ ಕೆನರಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಘು ಇಡ್ಕಿದು ಮಾತನಾಡಿ, ಮಡಿವಾಳ ಮಾಚಯ್ಯನವರು ಜನಾಂಗದ ನೆಲೆಯಿಂದ ಗುರುತಿಸಿಕೊಂಡವರಲ್ಲ, ಸಾಮಾಜಿಕ ಕ್ರಾಂತಿಗಳನ್ನು ಮತ್ತು ಸಮಾಜಕ್ಕೆ ಒಳಿತಾಗುವಂತಹ ಕೆಲಸವನ್ನು ಮಾಡಿ ಗುರುತಿಸಿಕೊಂಡವರು. ಸಮಾಜ ಕಟ್ಟುವ ಕೆಲಸವನ್ನು ಅವರು ಮಾಡಿದ್ದಾರೆ. ಸಮಾಜದಲ್ಲಿ ಜನರು ಹೇಗೆ ಬೆಳೆಯಬೇಕು ಎಂಬ ಅಗತ್ಯ ವಿಷಯಗಳನ್ನು ಅವರು ತಮ್ಮ ವಚನದಲ್ಲಿ ಸಾರಿದ್ದಾರೆ ಎಂದರು.


ವೃತ್ತಿಯಲ್ಲಿ ಎಲ್ಲವೂ ಶ್ರೇಷ್ಠವಾದದ್ದು ಎಂದು ಮಡಿವಾಳ ಮಾಚಿದೇವ ‘ಅರಸುತನ ಮೇಲಲ್ಲ ಅಗಸತನ ಕೀಳಲ್ಲ’ ಎಂಬ ಮಾತಿನಲ್ಲಿ ವೃತ್ತಿಯ ಶ್ರೇಷ್ಠತೆಯನ್ನು ಸಾರಿದ್ದಾರೆ.ತಮ್ಮ ಶರಣ ತತ್ವಗಳನ್ನು, ವಚನಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಸಂಘರ್ಷಗಳು ನಡೆದಾಗ ಅವುಗಳನ್ನು ಉಳಿಸಿಕೊಳ್ಳುವಲ್ಲಿ ಮಾಚಿದೇವರ ಪಾತ್ರ ಮಹತ್ವವಾದದ್ದು. ಮನುಷ್ಯರು ಮಾನವ ತತ್ವಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ಕೆಟ್ಟ ವಿಚಾರಗಳಿಂದ ದೂರವಿದ್ದು ಒಳ್ಳೆಯ ಗುಣಗಳನ್ನು ಬೆಳೆಸಿದರೆ ಸಮಾಜ ಕಟ್ಟುವ ಕೆಲಸವಾಗುತ್ತದೆ ಎಂದು ಅವರು ಹೇಳಿದರು. ತಮ್ಮ ವಚನಗಳ ಮೂಲಕ ಮೂಢನಂಬಿಕೆ, ಕೆಟ್ಟ ಆಚಾರ ವಿಚಾರಗಳನ್ನು ನಾವು ಬದಿಗಿಟ್ಟು ವೈಚಾರಿಕತೆಯನ್ನು ರೂಢಿಸಿಕೊಳ್ಳಬೇಕು. ಮಾಚಿದೇವ ತೋರಿಸಿದಂತಹ ಬದುಕು ಕಟ್ಟಿಕೊಳ್ಳುವ ವೈಚಾರಿಕ ನೆಲೆಗಳನ್ನು ನಮ್ಮೊಳಗೆ ತುಂಬಿಕೊಂಡು ಬದುಕನ್ನು ಯಶಸ್ವಿಗೊಳಿಸಬೇಕು. ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಅವರು ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಮಾತನಾಡಿ, ವಚನಗಳನ್ನು ನಾಶ ಮಾಡುವ ಕ್ರಾಂತಿ ನಡೆದಾಗ ಅವುಗಳನ್ನು ಎದುರಿಸಿ ವಚನಗಳನ್ನು ಉಳಿಸಿದಂತಹ ಶಕ್ತಿವಂತ, ಧೀರತ್ವದ ವ್ಯಕ್ತಿ ಮಡಿವಾಳ ಮಾಚಿದೇವ. ಅವರ ತತ್ವಗಳನ್ನು, ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.


ಮಡಿವಾಳ ಸಂಘದ ಅಧ್ಯಕ್ಷ ಪ್ರಕಾಶ್ ಬಿ.ಎನ್ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ವಾರುಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top