ಮಂಗಳೂರು: ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದಲ್ಲಿ ಭಾರತದ ವಿಜ್ಞಾನ ಸಮೂಹ ಸಂಸ್ಥೆಗಳ (Indian National Science Academy) ಸಹಭಾಗಿತ್ವದಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರಗಳ ವೈಜ್ಞಾನಿಕ ವಿಚಾರಗಳ ಮೇಲೆ ನಡೆಯಲಿರುವ ವಿಜ್ಞಾನ ಕಮ್ಮಟದ ಉದ್ಘಾಟನೆ ಇತ್ತೀಚೆಗೆ ವಿವಿಯ ಎಲ್ ಸಿ ಆರ್ ಐ ಸಭಾಂಗಣದಲ್ಲಿ ನಡೆಯಿತು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ನಿವೃತ್ತ ಹಿರಿಯ ವಿಜ್ಞಾನಿ ಹಾಗೂ ಪ್ರೊಫೆಸರ್ ಎನ್. ಸೂರ್ಯಪ್ರಕಾಶ್ ಅವರು ಮುಖ್ಯ ಅತಿಥಿಗಳಾಗಿದ್ದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುತ್ತ ವಿದ್ಯಾರ್ಥಿಗಳ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಸಂಶೋಧನೆ ಕಡೆಗೆ ಅವರ ಗಮನವನ್ನು ಸೆಳೆಯುವತ್ತ ಭಾರತದ ವಿಜ್ಞಾನ ಸಮೂಹ ಸಂಸ್ಥೆಗಳು ನಡೆಸುವ ವೈಜ್ಞಾನಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಪ್ರೊಫೆಸರ್ ಸೂರ್ಯಪ್ರಕಾಶ್ ರವರು ಈ ಎರಡು ದಿವಸಗಳ ಕಮ್ಮಟದ ಸಂಚಾಲಕರಾಗಿದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವೈಜ್ಞಾನಿಕ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿರುವ ಐದು ಜನ ವಿಜ್ಞಾನಿಗಳ ಸಾಧನೆಯನ್ನು ಪರಿಚಯಿಸುತ್ತಾ ಇವರ ಉಪನ್ಯಾಸಗಳು ಯುವ ವಿಜ್ಞಾನದ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.
ಯುವ ವಿದ್ಯಾರ್ಥಿಗಳ್ ಒಳ್ಳೆಯ ಸಂಶೋಧನೆಗಳ ಮೂಲಕ ಜಗತ್ತಿಗೆ ಕೊಡುಗೆಯನ್ನು ನೀಡುವತ್ತ ಪ್ರಯತ್ನಿಸಬೇಕೆಂದರು. ಎನ್.ಎಮ್.ಆರ್. ಸ್ಪೆಕ್ಟ್ರೋಸ್ಕೋಪಿ ಪರಮಾಣುವಿನ ನಿಖರತೆಯನ್ನು ಕಂಡು ಹಿಡಿಯಲು ಅತೀ ಅಗತ್ಯವಾಗಿದೆ ಅಂತೆಯೇ ಎನ್.ಎಮ್.ಆರ್. ಅಧ್ಯಯನದಿಂದ ಅನೇಕ ವಸ್ತುಗಳ ಇರುವಿಕೆಯನ್ನು ದೃಢಪಡಿಸುವುದರೊಂದಿಗೆ, ಅನೇಕ ಉಪಯೋಗಗಳನ್ನು ಕಂಡುಕೊಂಡಿದೆ.
ಮೆಡಿಕಲ್ ಕ್ಷೇತ್ರ, ವಿಮಾನ ತಂತ್ರಜ್ಞಾನ, ಇವೇ ಮೊದಲಾದ ಕ್ಷೇತ್ರದಲ್ಲಿ ಎನ್.ಎಮ್.ಆರ್. ತಂತ್ರಜ್ಞಾನ ಅತಿಯಾಗಿ ಬಳಕೆಯಾಗುತ್ತಿದೆ ಎಂದರು. ಅಂತೆಯೇ ಇತರ ವಿಜ್ಞಾನಿಗಳೂ ಸಾದರ ಪಡಿಸಲಿರುವ ಕ್ವಾಂಟಮ್ ಕ್ರಿಪ್ಟೋಗ್ರಾಫಿ, ಮಾಸ್ ಸ್ಪೆಕ್ಟ್ರೋಮೆಟ್ರಿ ಲಿಕ್ವಿಡ್ ಕ್ರಿಸ್ಟಲ್ಸ್ ಹಾಗೂ ಸ್ಟೀರಿಯೋ ಕೆಮಿಸ್ಟ್ರಿ ಇಂದಿನ ತಂತ್ರಜ್ಞಾನದ ಬೆಳವಣಿಗೆಗೆ ತುಂಬ ದೊಡ್ಡ ಕೊಡುಗೆಯನ್ನು ನೀಡುತ್ತಿದೆ ಎಂದರು.
ವಿಶ್ವವಿದ್ಯಾನಿಲಯದ ಸಹಕುಲಪತಿಗಳಾದ ರೆ. ಡಾ. ಮೆಲ್ವಿನ್ ಡಿಕುನ್ಹಾ ತಮ್ಮ ಅಧ್ಯಕ್ಷೀಯ ಮಾತುಗಳ ಮೂಲಕ ಯುವ ವಿಜ್ಞಾನದ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಕ್ಷೇತ್ರಕ್ಕೆ ತಮ್ಮ ಕೊಡುಗೆಗಳನ್ನು ಕೊಡಬೇಕೆಂದರು. ಅಂತೆಯೇ ತಂತ್ರಜ್ಞಾನದ ಬಳಕೆಯೊಂದಿಗೆ ಮನುಕುಲದ ಒಳಿತನ್ನು ಮನದಲ್ಲಿ ಇಟ್ಟುಕೊಳ್ಳಬೇಕೆಂದು ಸಲಹೆ ನೀಡಿದರು. ತಂತ್ರಜ್ಞಾನದ ಬೆಳವಣಿಗೆಯಿಂದ ಮನುಕುಲಕ್ಕೆ ಒಳಿತಾಗಲೆಂದು ಹಾರೈಸಿದರು.
ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ರೊನಾಲ್ಡ್ ನಜರೆತ್ ಅವರು ಸಮಕಾಲೀನ ವಿಜ್ಞಾನ ಕ್ಷೇತ್ರದಲ್ಲಿ ಯುವ ವಿದ್ಯಾರ್ಥಿಗಳು ಉತ್ತಮ ತಿಳುವಳಿಕೆಯನ್ನು ಪಡಕೊಳ್ಳಬೇಕೆಂದರು. ಇನ್ನೋರ್ವ ಕುಲಸಚಿವರಾದ ಡಾ. ಆಲ್ವಿನ್ ಡೇಸಾ ಹಾಗೂ ಸ್ಕೂಲ್ ಆಫ್ ಫಿಸಿಕಲ್ ಸೈನ್ಸ್ನ ಡೀನ್ ಡಾ. ಅರುಣಾ ಕಲ್ಕೂರ್ರವರು ಉಪಸ್ಥಿತರಿದ್ದರು. ಇನ್ನೋರ್ವ ವಿಜ್ಞಾನಿ ಪ್ರೊ. ಕೃಷ್ಣ ಕುಮಾರ್ ಕೂಡ ಉಪಸ್ಥಿತರಿದ್ದರು.
ಕ್ಸೇವಿಯರ್ ಬ್ಲಾಕಿನ ನಿರ್ದೇಶಕ ಡಾ. ಈಶ್ವರ ಭಟ್ ಕಮ್ಮಟದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಕಮ್ಮಟದ ಸ್ಥಳೀಯ ಸಂಯೋಜಕ ಡಾ. ರೋಶನ್ ಡಿಸೋಜ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ