ಧರ್ಮಸ್ಥಳ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ಪ್ರಾಚೀನ ಭಾರತದ ನಾಣ್ಯಗಳ ಪ್ರದರ್ಶನಕ್ಕೆ ಚಾಲನೆ

Upayuktha
0



ಧರ್ಮಸ್ಥಳ: ಪ್ರಾಚೀನ ಕಾಲದ ನಾಣ್ಯಗಳು ನೋಡಲು ಸಿಗುವುದು ಅಪರೂಪ. ಅಂತಹ ನಾಣ್ಯಗಳನ್ನು ನೋಡುವುದರ ಜೊತೆಗೆ ಅವುಗಳ ಬಗ್ಗೆ ಮಾಹಿತಿ ಪಡೆಯುವ ವ್ಯವಸ್ಥೆಯನ್ನು ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಅಚ್ಚುಕಟ್ಟಾಗಿ ಮಾಡಿದ್ದಾರೆ. 


ಹೆಗ್ಗಡೆಯವರ ಪುರಾತನ ವಸ್ತುಗಳ ಸಂಗ್ರಹಗಳ ಜೊತೆಗೆ ಮೂಡಿಗೆರೆಯ ಎಂ. ಎಲ್. ಅಶೋಕ್ ಅವರು ಸಂಗ್ರಹಿಸಿದ ಪ್ರಾಚೀನ ಕಾಲದ ನಾಣ್ಯಗಳ ಪ್ರದರ್ಶನವನ್ನು ಆಯೋಜಿಸಿದ್ದು ಶಾಲಾ ಮಕ್ಕಳಿಗೆ, ಆಸಕ್ತರಿಗೆ ನಾಣ್ಯಗಳ ಮೂಲಕ ಇತಿಹಾಸವನ್ನು ತಿಳಿದುಕೊಳ್ಳಲು ಇರುವ ಅವಕಾಶವಾಗಿದೆ ಎಂದು ಕ್ಷೇತ್ರ ಧರ್ಮಸ್ಥಳ ದೇವಳದ ಪಾರುಪತ್ಯಗಾರರಾದ ಲಕ್ಷ್ಮಿನಾರಾಯಣರವರು ಹೇಳಿದರು.


ಅವರು ಧರ್ಮಸ್ಥಳದ ಮಂಜೂಷಾ ಮ್ಯೂಸಿಯಂನಲ್ಲಿ ಫೆ.17 ರಿಂದ ಮಾರ್ಚ್ 1ರವರೆಗೆ ನಡೆಯಲಿರುವ ಪ್ರಾಚೀನ ಕಾಲದ ನಾಣ್ಯ ಹಾಗೂ ಅಂಚೆ ಚೀಟಿಗಳ ವಿಶೇಷ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.


ನಾಣ್ಯಗಳ ಸಂಗ್ರಹಕಾರರಾದ ಮೂಡಿಗೆರೆಯ ಎಂ. ಎಲ್. ಅಶೋಕ್ ಮಾತನಾಡಿ ನನ್ನ ಪ್ರಾಚೀನ ವಸ್ತುಗಳ ಸಂಗ್ರಹಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರು ಹಾಗೂ ಅವರ ಮಂಜೂಷಾ ವಸ್ತು ಸಂಗ್ರಹಾಲಯವೇ ಪ್ರೇರಣೆ. ಅವಕಾಶ ಮಾಡಿಕೊಟ್ಟ ಪೂಜ್ಯರಿಗೆ ಹಾಗೂ ಮಂಜೂಷಾದ ಸಿಬಂದಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. 


ಪ್ರಾಚೀನ ಭಾರತದಿಂದ ಆರಂಭಗೊಂಡು ಮೊನ್ನೆ ಮೊನ್ನೆಯಷ್ಟೇ ಬಿಡುಗಡೆಗೊಂಡ ನಾಣ್ಯಗಳವರೆಗೆ ಸಂಗ್ರಹಿಸಲಾದ1೦೦೦ಕ್ಕೂ ಹೆಚ್ಚಿನ ನಾಣ್ಯಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ರಾಜ-ಮಹಾರಾಜರ ಕಾಲ, ಸ್ವಾತಂತ್ರ್ಯ ಪೂರ್ವ, ಸ್ವತಂತ್ರ ಭಾರತದ ಕಾಲದಿಂದ ಹಿಡಿದು ವಿಶೇಷ ಸಂದರ್ಭಗಳಲ್ಲಿ ಸರಕಾರವು ಬಿಡುಗಡೆಗೊಳಿಸಿದ ನಾಣ್ಯಗಳು, ಅಂಚೆ ಚೀಟಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಚಿನ್ನ, ಬೆಳ್ಳಿ, ತಾಮ್ರ ಹೀಗೆ ಹಲವು ರೀತಿಯ ನಾಣ್ಯಗಳನ್ನು ನೋಡಬಹುದು ಎಂದು ಹೇಳಿದರು.


ಧರ್ಮಸ್ಥಳದಲ್ಲಿರುವ ಮಂಜೂಷಾ ಮ್ಯೂಸಿಯಂನಲ್ಲಿ ವೀರೇಂದ್ರ ಹೆಗ್ಗಡೆಯವರ ಸಂಗ್ರಹಗಳ ಪ್ರದರ್ಶನದ ಜೊತೆಗೆ ವಿವಿಧ ಚಟುವಟಿಕೆ, ಕಾರ್ಯಾಗಾರಗಳ ಮೂಲಕ ಶಾಲಾ ಮಕ್ಕಳಿಗೆ, ಆಸಕ್ತರಿಗೆ ಪುರಾತನ ವಸ್ತುಗಳ ಮಾಹಿತಿ ಒದಗಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 


ವಸ್ತು ಸಂಗ್ರಹಾಲಯವು  ಜ್ಞಾನ ಹೆಚ್ಚಿಸುವುದರ ಜೊತೆಗೆ ಪ್ರಾಚೀನ ವಸ್ತುಗಳ ಬಗ್ಗೆ ಅರಿವು ಮೂಡಿಸಿ, ಇನ್ನಷ್ಟು ಆಸಕ್ತಿ, ಕುತೂಹಲ ಹೆಚ್ಚಲು ಪ್ರೇರಣೆಯಾಗಿವೆ ಎಂದು  ಡಿ. ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ. ವೀರು ಶೆಟ್ಟಿ ಹೇಳಿದರು.


ಈ ಸಂದರ್ಭದಲ್ಲಿ ಮಂಜೂಷಾ ವಸ್ತು ಸಂಗ್ರಹಾಲಯದ ಉಪ ನಿರ್ದೇಶಕ ರಿತೇಶ್ ಶರ್ಮಾ ಎಸ್‌ಡಿಎಂ ಸಂಸ್ಕೃತಿ ಮತ್ತು ಸಂಶೋಧನಾ ಪ್ರತಿಷ್ಠಾನದ ಡಾ. ಪವನ್ ಕುಮಾರ್ ಹಾಗೂ ಇತರ ಸಿಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top