ಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ಭಗವಂತನ ಸೇವೆ: ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು

Upayuktha
0

ಪೇಜಾವರ ಶ್ರೀಗಳ 61ನೇ ಜನ್ಮ ನಕ್ಷತ್ರ ಸಂದರ್ಭದಲ್ಲಿ ಮಂಗಳೂರಿನ ಭಕ್ತರಿಂದ ಗುರುವಂದನೆ



ಮಂಗಳೂರು: ದೀನ ದಲಿತರಿಗೆ, ಕಷ್ಟದಲ್ಲಿರುವವರಿಗೆ ನೆರವಾಗುವುದೇ ನಿಜವಾದ ದೇವರ ಸೇವೆ ಎಂದು ಶ್ರೀ ಪೇಜಾವರ ಮಠದ ಯತಿವರ್ಯರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದರು.


ತಮ್ಮ 61ನೇ ಜನ್ಮನಕ್ಷತ್ರದ ಸಂದರ್ಭದಲ್ಲಿ ಇಂದು (ಫೆ.19) ಮಂಗಳೂರಿನ ಭಕ್ತ ಜನತೆ ಶ್ರೀ ಶರವು ದೇವಸ್ಥಾನದ ಪಕ್ಕದಲ್ಲಿರುವ ಬಾಳಂಭಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


ಹಿಂದೂಗಳ ಶತಮಾನದ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಆದರೆ ಈಗ ರಾಮರಾಜ್ಯ ನಿರ್ಮಾಣವಾಗಬೇಕಿದೆ. ಭಗವಂತ ಮಂದಿರದಲ್ಲಿ ಮಾತ್ರವಲ್ಲ, ಎಲ್ಲೆಲ್ಲೂ ಇದ್ದಾನೆ. ಎಲ್ಲ ಜೀವಿಗಳಲ್ಲೂ ಅವನಿದ್ದಾನೆ. ನೊಂದವರಿಗೆ ನೆರವಾದರೆ ಭಗವಂತನ ನಿಜವಾದ ಸೇವೆಯ ಫಲ ದೊರಕುತ್ತದೆ. ಮಂದಿರದಲ್ಲಿ ಪೂಜಾದಿ ಸೇವೆಗಳನ್ನು ಮಾಡುವುದು ಅಥವಾ ಮನೆಗಳಲ್ಲೇ ಮಾಡುವ ಪೂಜೆ- ಅನುಷ್ಠಾನಗಳು ನಮ್ಮ ದೈನಂದಿನ ಕರ್ತವ್ಯಗಳು, ಕಾರ್ಯ ಚಟುವಟಿಕೆಗಳನ್ನು ಸಮರ್ಥವಾಗಿ ನಿಭಾಯಿಸಲು ಬೇಕಾದ ಚೈತನ್ಯವನ್ನು ಒದಗಿಸುತ್ತವೆ ಎಂದು ಶ್ರೀಗಳು ನುಡಿದರು.


ಮನೆ ಇಲ್ಲದ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು. ಪ್ರತಿ ಜಿಲ್ಲೆಗೊಂದು ಗೋಶಾಲೆ ನಿರ್ಮಾಣವಾಗಬೇಕು. ಗೋವುಗಳ ರಕ್ಷಣೆಯಾಗಿ, ಗೋಸಂಪತ್ತು ಸಮೃದ್ಧಿಯಾದರೆ ಆ ದೇಶ ಸಮೃದ್ಧಿಯಾಗುತ್ತದೆ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.


ಪೇಜಾವರ ಮಠವು ನಡೆಸುತ್ತಿರುವ ಎಲ್ಲ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಆಧ್ಯಾತ್ಮಿಕ ಸೇವಾ ಚಟುವಟಿಕೆಗಳಿಗೆ ಸಾರ್ವಜನಿಕ ಭಕ್ತರು ನೀಡುತ್ತಿರುವ ಶಕ್ತಿಯೇ ಕಾರಣ. ಹಿರಿಯ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಕಿಕೊಟ್ಟ ಮಾರ್ಗದಲ್ಲಿಯೇ, ಅವರ ಆಶಯಗಳಿಗೆ ಚ್ಯುತಿ ಬಾರದಂತೆ ನಡೆಯುವುದಾಗಿ ಶ್ರೀಪಾದರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.


ಶ್ರೀಪಾದರ ಅಭಿನಂದನಾ ಸಮಿತಿಯ ಅಧ್ಯಕ್ಷರಾದ ಡಾ. ಎಂ.ಬಿ. ಪುರಾಣಿಕ್ ಅವರು ಆರಂಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಸಾಧನೆಗಳನ್ನು ಸ್ಮರಿಸಿದರು. ಪೇಜಾವರ ಮಠವು ಈಗ ಬರಿಯ ಮಾಧ್ವಮಠವಾಗಿ ಉಳಿದಿಲ್ಲ. ಅದು ಸಮಾಜದ ಎಲ್ಲ ವರ್ಗದ ಭಕ್ತರಿಗೂ ಸೇರಿದ್ದಾಗಿದೆ ಎಂದು ಅವರು ಹೇಳಿದರು.


ಸಮಿತಿಯ ಸಂಚಾಲಕರಾದ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ಡಿ ವೇದವ್ಯಾಸ ಕಾಮತ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಶ್ರೀಪಾದರು ಆಶೀರ್ವಚನದ ಬಳಿಕ ಎಲ್ಲ ಭಕ್ತರಿಗೂ ಫಲಮಂತ್ರಾಕ್ಷತೆ ನೀಡಿ ಹರಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top