ಗೀತಾ ಹೆಗಡೆ; ಯಕ್ಷ ಕಲಾನ್ವಿತೆ

Upayuktha
0


ತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಾಲ್ಕಣಿಯ  ಕೇಶವ ಹೆಗಡೆ ಹಾಗೂ ವಿಲಾಸಿನಿ ಮಗಳಾಗಿ 15.02.1973 ರಂದು ಗೀತಾ ಹೆಗಡೆಯವರ ಜನನ. MA (sanskrit) ಇವರ ವಿದ್ಯಾಭ್ಯಾಸ.

ಯಕ್ಷಗಾನ ಗುರುಗಳು:-

ಹೊಸ್ತೋಟ ಮಂಜುನಾಥ ಭಾಗವತ,

ಪರಮೇಶ್ವರ ಹೆಗಡೆ ಐನಬೈಲು.


ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ:-

 ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಾಲ್ಕಣಿ ಎನ್ನುವ ಊರು. ಸಾಂಸ್ಕೃತಿಕವಾಗಿ ಬಹಳ ಶ್ರೀಮಂತ ಪ್ರದೇಶ ಅದು. ಊರಿನ ಸುತ್ತಮುತ್ತ ನಡೆಯುವ ಯಕ್ಷಗಾನವನ್ನು ಬೆರಗುಗಣ್ಣಿನಿಂದಲೇ ನೋಡುತ್ತಾ ಬೆಳಗು ಮಾಡಿದವಳು ನಾನು. ಬಾಲ್ಯದಿಂದಲೇ ಆಟ ನೋಡುತ್ತಾ ಬೆಳೆದ ನನಗೆ ಆಟವನ್ನು ಬಿಟ್ಟಿರಲು ಸಾಧ್ಯವಾಗಲಿಲ್ಲ ಜೊತೆಗೆ ಮನೆಯಲ್ಲಿ ಅಜ್ಜ, ಅಪ್ಪ, ದೊಡ್ಡಪ್ಪ, ಚಿಕ್ಕಪ್ಪಂದಿರಿಗೆ ಯಕ್ಷಗಾನ ಎಂದರೆ ವಿಪರೀತ ಪ್ರೀತಿ. 


ದೊಡ್ಡಪ್ಪ ಮದ್ದಲೆಯನ್ನು ಬಾರಿಸುತ್ತಾ ಇದ್ದರು. ಎಲ್ಲೇ ಆಟ ಇದ್ದರೂ ನನ್ನನ್ನು ಕರೆದುಕೊಂಡು ಹೋಗುತ್ತ ಇದ್ದರು. ಆಟ ನೋಡಿ ಬಂದ ಮೇಲೆ ನಾವು ಒಂದಿಷ್ಟು ಮಕ್ಕಳು ಸೇರಿಕೊಂಡು ನಮ್ಮ ಮನಸ್ಸಿಗೆ ಬಂದಂತೆ ಕುಣಿಯುತ್ತಾ ಇದ್ದೆವು. ನಮ್ಮ ಸುಯೋಗ - ನಾನು ಏಳನೇ ಇಯತ್ತೆಯಲ್ಲಿರುವಾಗ ನಮ್ಮ ಊರಿನ ಹಿರಿಯರೆಲ್ಲ ಸೇರಿ ಹೊಸ್ತೋಟ ಮಂಜುನಾಥ ಭಾಗವತರಲ್ಲಿ ಕೇಳಿಕೊಂಡಾಗ ಅವರು ನಮ್ಮೂರಲ್ಲಿ ತರಬೇತಿಯನ್ನು ಆರಂಭಿಸುವುದಕ್ಕೆ ಒಪ್ಪಿಕೊಂಡರು. ಆಗ ಮಹಿಳೆಯರು ಯಕ್ಷಗಾನ ಮಾಡುತ್ತಾ ಇದ್ದದ್ದು ಬಹಳ ಅಪರೂಪವಾಗಿತ್ತು. ಶಿರಸಿಯಲ್ಲಿ ಒಂದು ಮಕ್ಕಳ ಮೇಳದಲ್ಲಿ ಕೆಲವು ಹೆಣ್ಣು ಮಕ್ಕಳು ಕಲಿಯುತ್ತಾ ಇದ್ದದ್ದು ನನಗೆ ಪ್ರೇರಣೆಯನ್ನು ನೀಡಿತು.


ನೆಚ್ಚಿನ ಪ್ರಸಂಗಗಳು:-

ಎಲ್ಲಾ ಪೌರಾಣಿಕ ಪ್ರಸಂಗಗಳೂ ಇಷ್ಟವೇ.  ಅದರಲ್ಲಿ ಕೃಷ್ಣ ಸಂಧಾನ, ಏಕಲವ್ಯ ನಿಷ್ಠೆ, ವೀರವರ್ಮ ವಿಜಯ, ಕಂಸವಧೆ, ಕರ್ಣ ಪರ್ವ, ದಕ್ಷಯಜ್ಞ, ಕೃಷ್ಣಾರ್ಜುನ, ಮಾಗಧ ವಧೆ, ಭೀಷ್ಮ ವಿಜಯ, ಲವಕುಶ, ಸುಧನ್ವಾರ್ಜುನ, ಜಾಂಬವತಿ ಕಲ್ಯಾಣ, ಮಾರುತಿ ಪ್ರತಾಪ, ಗದಾಯುದ್ಧ, ಶರಸೇತು ಬಂಧನ, ಭೀಷ್ಮೋತ್ಪತ್ತಿ .


ನೆಚ್ಚಿನ ವೇಷಗಳು:-

ಕೇದಿಗೆ ಮುಂದಲೆ ವೇಷ ಬಹಳ ಇಷ್ಟ. ಅದರಲ್ಲೂ "ಕೃಷ್ಣ" ತುಂಬಾ ಇಷ್ಟ. ಆಮೇಲೆ ಸುಧನ್ವ, ಅರ್ಜುನ, ದಕ್ಷ, ಭೀಮ, ಸಾಲ್ವ, ರಾಮ, ಹನುಮಂತ, ಕರ್ಣ, ದೇವವೃತ, ಏಕಲವ್ಯ, ಸತ್ಯವಾನ.. ಹೀಗೆ ಎಲ್ಲಾ ಪುರುಷ ವೇಷಗಳೂ ಇಷ್ಟ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿ ತಯಾರಿ ಮಾಡಿಕೊಳ್ಳುತ್ತೀರಿ:-

ಯಾವ ಸಿದ್ಧತೆಯೂ ಇಲ್ಲದೇ ಏಕಾಏಕಿ ರಂಗಕ್ಕೆ ಹೋಗಿ ಮನಸಿಗೆ ಬಂದದ್ದನ್ನು ಮಾಡುವ, ಬಾಯಿಗೆ ಬಂದದ್ದನ್ನು ಹೇಳುವ ಜಾಯಮಾನ ನನ್ನದಲ್ಲ. ಒಂದಿಷ್ಟು ಪೂರ್ವ ತಯಾರಿ ಬೇಕು. ಮೊದಲು ಪ್ರಸಂಗದ ಪ್ರತಿಯನ್ನು ಓದುತ್ತೇನೆ, ನನ್ನ ಪಾತ್ರದ ಪೋಷಣೆಯ ಕುರಿತು ಚಿಂತನೆಯನ್ನು ಮಾಡುತ್ತೇನೆ. ಹಿರಿಯರು ಮಾಡಿದ್ದನ್ನು ನೋಡಿ, ಹಿರಿಯರನ್ನು ಕೇಳಿ, ಭಾಗವತರಲ್ಲಿ ಒಂದಿಷ್ಟು ಚರ್ಚಿಸಿ ಆ ಪಾತ್ರಕ್ಕೆ ನನ್ನಿಂದ ಸಾಧ್ಯವಾದಷ್ಟು ನ್ಯಾಯವನ್ನು ಒದಗಿಸುವುದಕ್ಕೆ ಪ್ರಯತ್ನಿಸುತ್ತೇನೆ.


ಸಂಘಟಕರು ಅಷ್ಟೊಂದು ಶ್ರಮವಹಿಸಿ ಬಂದು ಕಾರ್ಯಕ್ರಮವನ್ನು ಆಯೋಜಿಸಿರುವಾಗ ಕಲಾವಿದರು ಅದರ ಅರ್ಧದಷ್ಟಾದರೂ ಶ್ರಮ ಹಾಕಿ ಅಭ್ಯಾಸ ಮಾಡಿಕೊಂಡು ಹೋದರೆ ಪ್ರದರ್ಶನದ ಗುಣಮಟ್ಟ ಚೆನ್ನಾಗಿರುತ್ತದೆ. ಇಲ್ಲದೇ ಇದ್ದರೆ ಆ ಕಲೆಗೆ, ರಂಗಕ್ಕೆ ನಾವು (ಅಪಚಾರ) ಮೋಸ ಮಾಡಿದ ಹಾಗೆ ಆಗುತ್ತದೆ ಎನ್ನುವುದು ಅಭಿಪ್ರಾಯ.


ಯಕ್ಷಗಾನದ ಇಂದಿನ ಸ್ಥಿತಿಗತಿ:-

ಸ್ಥಿತಿ ತುಂಬಾ ಚೆನ್ನಾಗಿದೆ. ಗತಿ ಸ್ವಲ್ಪ ವಕ್ರವಾಗಿದೆ. ಹಿಂದಿಗಿಂತಲೂ ಇಂದು ಪ್ರದರ್ಶನದ ಸಂಖ್ಯೆ ಹೆಚ್ಚಾಗಿದೆ. ಸ್ಟೇಜ್, ಲೈಟ್, ಮೈಕ್, ವೇಷಭೂಷಣ ಇವೆಲ್ಲದರಲ್ಲೂ ಅತ್ಯಂತ ಪರಿಣಾಮಕಾರಿ ಬದಲಾವಣೆಗಳಾಗಿವೆ. ಕೇವಲ ಮನೋರಂಜನೆಯ ದೃಷ್ಟಿಯಲ್ಲಿ ನೋಡಿದಾಗ ಪ್ರದರ್ಶನದ ಅಂದ ಹೆಚ್ಚಾಗಿದೆ. ಆದರೆ ಯಕ್ಷಗಾನದ ಮೂಲ ಸ್ವರೂಪ, ಅದರ ಉದ್ದೇಶ, ಇವು ಗೌಣವಾಗಿ ಗುಣಮಟ್ಟ ಕುಸಿಯುತ್ತಾ ಇದೆ. ಇದಕ್ಕೆ ಕಾರಣಗಳು

♦️ ಕಲಾವಿದರಲ್ಲಿ ಅಧ್ಯಯನದ ಕೊರತೆ.

♦️ ಹಿರಿಯ ಕಲಾವಿದರನ್ನು ಕೇಳಿ ತಿಳಿದುಕೊಳ್ಳುವ ಉತ್ಸಾಹ ಇಲ್ಲದೇ ಇರುವುದು.

♦️ "ಯೂಟ್ಯೂಬ್" ಎನ್ನುವುದೇ "ಗುರು"ವಾಗಿರುವುದು.

♦️ ಯಕ್ಷಗಾನ ಎನ್ನುವುದು ಔದ್ಯಮಿಕ ಸ್ವರೂಪ ಪಡೆದು ವ್ಯವಹಾರದ ಸರಕಾಗಿರುವುದು.

♦️ ಕಲಾವಿದರು ತಮ್ಮ ವೈಯಕ್ತಿಕ ಲಾಭವನ್ನಷ್ಟೇ ನೋಡುತ್ತಾ ಕೀರ್ತಿ ಹಾಗೂ ಪ್ರಚಾರದ ಬೆನ್ನಿಗೆ ಬಿದ್ದಿರುವುದು.

♦️ ಪ್ರೇಕ್ಷಕರ ಶಿಳ್ಳೆ ಚಪ್ಪಾಳೆಗಳೇ ಕಲಾವಿದರನ್ನು ಅಳೆಯುವ ಮಾನದಂಡವಾಗಿರುವುದು.

♦️ ಶಬ್ಧಾಭಿನಯಗಳೇ ಪ್ರಧಾನವಾಗಿ ಭಾವಾಭಿನಯಕ್ಕೆ ಪ್ರಾಧಾನ್ಯತೆ ಇಲ್ಲದೇ ಇರುವುದು.


ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-

ಎಲ್ಲ ಕಾಲದಲ್ಲಿಯೂ ಎರಡು ರೀತಿಯ ಪ್ರೇಕ್ಷಕರನ್ನು ನಾವು ಕಾಣಬಹುದು.

♦️ ಕ್ಲಾಸ್ ಆಡಿಯನ್ಸ್

♦️ ಮಾಸ್ ಆಡಿಯನ್ಸ್.

ಕೇವಲ ಕುಣಿತವನ್ನಷ್ಟೇ ಇಷ್ಟಪಡುವ ಒಂದಿಷ್ಟು ಪ್ರೇಕ್ಷಕರು ಇದ್ದಾರೆ. ಭಾವ, ಅಭಿನಯ, ತಾರ್ಕಿಕ ಸಂಭಾಷಣೆಗಳನ್ನೂ ಬಯಸುವ ಪ್ರೇಕ್ಷಕರು ಇದ್ದಾರೆ. ಒಟ್ಟಿನಲ್ಲಿ ಪ್ರೇಕ್ಷಕರು ಪ್ರದರ್ಶನದ ಮುಖ್ಯ ಭಾಗವಂತೂ ಹೌದು.


ಇಂದಿನ ಪ್ರೇಕ್ಷಕರು ಬಹಳ ಬುದ್ಧಿವಂತರು. ತಮಗನಿಸಿದ್ದನ್ನು ನೇರವಾಗಿ ಹೇಳುವ, ಸಾಮಾಜಿಕ ಜಾಲತಾಗಳಲ್ಲಿ ಬರೆದೋ ವಿಡಿಯೋಗಳನ್ನು ಹಾಕಿಯೋ ವ್ಯಕ್ತಪಡಿಸುತ್ತಾರೆ. ಇದು ಕಲಾವಿದನಿಗೆ ಒಂದು ವರ. ಆತ ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ಇದ್ದರೆ ಪ್ರೇಕ್ಷಕನೇ ಪ್ರಶ್ನಿಸುತ್ತಾನೆ ಎನ್ನುವ ಭಯದಿಂದ ಆತ ತನ್ನ ಪಾತ್ರವನ್ನು ಸರಿಯಾಗಿ ಮಾಡುವುದಕ್ಕೆ ಮುಂದಾಗುತ್ತಾನೆ. ಇದು ಅವಶ್ಯವೂ ಹೌದು. 


ಆದರೆ ಒಂದಷ್ಟು ಪ್ರೇಕ್ಷಕರನ್ನು ಮೆಚ್ಚಿಸುವುದಕ್ಕಾಗಿ  ಯಕ್ಷಗಾನದ ಚೌಕಟ್ಟನ್ನು ಮೀರಿ ಕುಣಿಯುವುದಕ್ಕೆ ಹೋಗಬಾರದು. ನಾವು ಪ್ರೇಕ್ಷಕರ ದಾರಿಗೆ ಹೋಗುವುದರ ಬದಲು ಪ್ರೇಕ್ಷಕರನ್ನೇ ನಮ್ಮ ದಾರಿಗೆ ಕರೆದುಕೊಂಡು ಬರಬೇಕು. ಹಾಗಾದಾಗ ಪ್ರಜ್ಞಾವಂತ ಪ್ರೇಕ್ಷಕರು ಮತ್ತೆ ಪ್ರದರ್ಶನದತ್ತ ಮುಖ ಮಾಡ್ತಾರೆ. ಪ್ರೇಕ್ಷಕರೂ ಕೂಡ ಕಲೆಯ ಅಭಿಮಾನಿಗಳಾಗಬೇಕೇ ಹೊರತು ಕಲಾವಿದನ ಅಭಿಮಾನಿಗಳಾಗಬಾರದು.


ಯಕ್ಷರಂಗದಲ್ಲಿ ಮುಂದಿನ ಯೋಜನೆ:-

ತುಂಬಾ ದೊಡ್ಡ ಯೋಜನೆ ಏನೂ ಇಲ್ಲ. ಇನ್ನಷ್ಟು ಕಲಿಯಬೇಕು, ಅಭ್ಯಾಸ ಮಾಡಬೇಕು, ಹೊಸ ಹೊಸ ಪಾತ್ರಗಳನ್ನು  ಮಾಡಬೇಕು. ಆದಷ್ಟು ದಿನ ವೇಷ ಮಾಡುತ್ತಾ ಇರಬೇಕು. ತಾಳಮದ್ದಲೆಯಲ್ಲಿಯೂ ನನ್ನನ್ನು ತೊಡಗಿಸಿಕೊಳ್ಳಬೇಕು.


ಸಮಯ ಸಮೂಹ ಶಿರಸಿ, ಸಿರಿಕಲಾ ಮೇಳ ಬೆಂಗಳೂರು, ಯಕ್ಷ ಸಿರಿ ಬೆಂಗಳೂರು, ಯಕ್ಷ ಕಲಾಸಾಗರ ಬೆಂಗಳೂರು, ಯಕ್ಷ ಗೆಜ್ಜೆ ಶಿರಸಿ, ಚಿತ್ಪಾವನ ಮಹಿಳಾ ಯಕ್ಷಗಾನ, ಯಕ್ಷ ಮಂಡಲ ಬೆಂಗಳೂರು ತಂಡದಲ್ಲಿ ತಿರುಗಾಟ ಮಾಡಿದ ಅನುಭವ.


ಸನ್ಮಾನ ಹಾಗೂ ಪ್ರಶಸ್ತಿ:-

♦️ ಕರ್ನಾಟಕ ಕರಾವಳಿ ಮೈತ್ರಿ ಸಂಘ (ರಿ) ಹೈದರಾಬಾದ್ ಯಕ್ಷ ನಾಟ್ಯ ಸರಸ್ವತಿ ಬಿರುದು ಹಾಗೂ ಸನ್ಮಾನ.

♦️ ಉಡುಪಿಯ ಶ್ರೀ ಕೃಷ್ಣ ಮಠದ - ಶ್ರೀ ಕೃಷ್ಣ ನೃಸಿಂಹಾನುಗ್ರಹ ಪ್ರಶಸ್ತಿ.

♦️ ಗಾನ ಸೌರಭ ಯಕ್ಷಗಾನ ಶಾಲೆ ಬೆಂಗಳೂರು - ಇವರಿಂದ ಯಕ್ಷಾಭಿವಂದನಮ್ ಪುರಸ್ಕಾರ.

♦️ ಅಕ್ಕನಮನೆ ಪ್ರತಿಷ್ಠಾನದ - ದೇಸಿ ದಿಬ್ಬಣ ಕಲಾಸಿರಿ ಪ್ರಶಸ್ತಿ.

♦️ ಯಕ್ಷ ಗೆಜ್ಜೆ ಶಿರಸಿ ಇವರಿಂದ ಸನ್ಮಾನ.


ಓದುವುದು, ಹಳೆಯ ಯಕ್ಷಗಾನ ನೋಡುವುದು, ತಾಳಮದ್ದಲೆ ಕೇಳುವುದು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಕೇಳುವುದು, ಹೊಸ ಹೊಸ ಅಡುಗೆ ಮಾಡುವುದು ಇವರ ಹವ್ಯಾಸಗಳು.


ಗೀತಾ ಹೆಗಡೆ ಅವರು 09.05.1996ರಂದು ಜಯರಾಮ ಹೆಗಡೆ ಅವರನ್ನು ಮದುವೆಯಾಗಿ ಮಗ ಮನು ಹೆಗಡೆ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ. ತಂದೆ, ತಾಯಿ, ಪತಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಗೀತಾ ಹೆಗಡೆ.


ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.



📝 ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top