ದಯೆ ಇದ್ದಲ್ಲಿ ಧರ್ಮ ಇರುತ್ತದೆ: ನಿರ್ವಾಣ ಸಾಗರ ಮುನಿಮಹಾರಾಜರು

Upayuktha
0

ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಪಾದಾಭಿಷೇಕ ನಡೆಯಿತು.


ಧರ್ಮಸ್ಥಳ: ದಯೆಯೇ ಧರ್ಮದ ಮೂಲವಾಗಿದ್ದು ದಯೆ ಇದ್ದಲ್ಲಿ ಧರ್ಮ ಇರುತ್ತದೆ ಎಂದು ಕ್ಷುಲ್ಲಕ ನಿರ್ವಾಣ ಸಾಗರ ಮುನಿಮಹಾರಾಜರು ಹೇಳಿದರು. ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ನಡೆದ ಪಾದಾಭಿಷೇಕ ಸಂದರ್ಭದಲ್ಲಿ ಅವರು ಮಂಗಲ ಪ್ರವಚನ ನೀಡಿದರು.


ಉತ್ತಮ ಸಂಸ್ಕಾರ ಮತ್ತು ಧರ್ಮದ ಮರ್ಮವನ್ನರಿತು ಅನುಷ್ಠಾನದಿಂದ ಆತ್ಮಕಲ್ಯಾಣವಾಗುತ್ತದೆ. ನಾವು ಧರ್ಮವನ್ನು ಕಾಪಾಡಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದರು. ಕ್ಷುಲ್ಲಕ ದರ್ಶನಕೀರ್ತಿ ಮುನಿಮಹಾರಾಜರು ಮಾತನಾಡಿ ಚತುರ್ವಿಧ ದಾನಗಳಲ್ಲಿ ಆಹಾರದಾನ ಅತ್ಯಂತ ಶ್ರೇಷ್ಠವಾಗಿದೆ. ಸತ್ಕಾರ್ಯಗಳಿಂದ ಪುಣ್ಯ ಸಂಚಯವಾಗುತ್ತದೆ ಎಂದರು.


ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡಿ ಧರ್ಮದ ಪರಂಪರೆ ಉಳಿದರೆ ಧರ್ಮದ ರಕ್ಷಣೆಯಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಮನ, ವಚನ, ಕಾಯಗಳಿಂದ ಧರ್ಮದ ಪರಿಪಾಲನೆ ಮಾಡಬೇಕು. ಭಗವಾನ್ ಬಾಹುಬಲಿಯು ಸಾಧಿಸಿ ತೋರಿಸಿದ ತ್ಯಾಗ ಮತ್ತು ಅಹಿಂಸೆ ವಿಶ್ವಕ್ಕೆ ಮಾದರಿಯಾಗಿದ್ದು ಸಾರ್ವಕಾಲಿಕ ಮೌಲ್ಯ ಹೊಂದಿದೆ ಎಂದರು.


ಕೋಲಾರದ ಎನ್. ಆರ್. ಜ್ಞಾನಮೂರ್ತಿ ಹರಿಕಥಾ ಕಾಲಕ್ಷೇಪದ ಮೂಲಕ ಭಗವಾನ್ ಬಾಹುಬಲಿಯ ಜೀವನ-ಸಾಧನೆಯನ್ನು ವಿವರಿಸಿದರು. ಬೀಡಿನಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಯ ಪಾದಗಳಿಗೆ 216 ಕಲಶಗಳಿಂದ ಜಲಾಭಿಷೇಕ, ಎಳನೀರು, ಇಕ್ಷುರಸ, ಕಲ್ಕಚೂರ್ಣ, ಶ್ರೀಗಂಧ, ಚಂದನ ಮೊದಲಾದ ಮಂಗಲದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು.


ಮಹಾಮಂಗಳಾರತಿ, ಮಾಲಾರ್ಪಣೆ ಮತ್ತು ಶಾಂತಿಮಂತ್ರ ಪಠಣದೊಂದಿಗೆ ಪಾದಾಭಿಷೇಕ ಸಮಾಪನಗೊಂಡಿತು. ಧರ್ಮಾಧಿಕಾರಿಗಳಾದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರಾವಕರು ಮತ್ತು  ಶ್ರಾವಕಿಯರು ಪಾದಾಭಿಷೇಕದಲ್ಲಿ ಭಾಗವಹಿಸಿ ಪುಣ್ಯಭಾಗಿಗಳಾದರು. ಡಾ. ಶಶಿಕಾಂತ ಜೈನ್ ಮತ್ತು ಉಪನ್ಯಾಸಕ ಮಹಾವೀರ ಜೈನ್ ಕಾರ್ಯಕ್ರಮ ನಿರ್ವಹಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top