ಕೌರವರಿಗೂ ಪಾಂಡವರಿಗೂ ಯುದ್ಧ ಖಚಿತವೆಂದು ಗೊತ್ತಾಗುತ್ತದೆ. ಯಾರು ಯಾರಿಗೆ ಸಹಾಯ ಮಾಡಲು ಯಾರ ಪಕ್ಷದಲ್ಲಿ ನಿಂತು ಯುದ್ಧ ಮಾಡುತ್ತಾರೆ ಎಂಬುದು ನಿಶ್ಚಿತವಾಗಿ ಭೀಷ್ಮರು ಕೌರವರ ಪರವಾಗಿ ಯುದ್ಧ ಮಾಡುವುದು ಎಂದು ನಿರ್ಧಾರವಾಗುತ್ತದೆ. ಭೀಷ್ಮರು ದುರ್ಯೋಧನನಿಗೆ ಯುದ್ಧ ಮಾಡುತ್ತೇನೆ, ಆದರೆ ಯಾವ ಪಾಂಡುಪುತ್ರನನ್ನು ಕೊಲ್ಲುವುದಿಲ್ಲ ಎಂದು ಹೇಳಿಬಿಡುತ್ತಾರೆ. ಅವರಿಗೆ ತಂದೆ ಶಂತನುವಿನಿಂದ ಇಚ್ಚಾ ಮರಣಿಯಾಗುವ ವರ ಸಿಗುತ್ತದೆ. ಸುಮಾರು 800 ವರ್ಷಗಳ ಕಾಲ ಬದುಕಿ ಹಸ್ತಿನಾಪುರದ ಹಿತಾಸಕ್ತಿಯನ್ನು ಕಾಪಾಡಲು ಹೆಣಗುತ್ತಾರೆ.
ಶ್ರೀಕೃಷ್ಣ ಅರ್ಜುನನ ಸಾರಥಿಯಾಗುವದಕ್ಕೆ ಮಾತ್ರ ಒಪ್ಪಿದ. ಕೈಲಿ ಯಾವುದೇ ಆಯುಧ ಕೂಡ ಹಿಡಿಯಲಾರೆನೆಂದ.
ಇದನ್ನು ಕೇಳಿದ ಭೀಷ್ಮರು ಕೃಷ್ಣನ ಕೈಲಿ ಆಯುಧ ಹಿಡಿಸಿಯೇ ಹಿಡಿಸುತ್ತೇನೆ ಎಂದರು. ಹೀಗೆ ಅನೇಕ ಪ್ರತಿಜ್ಞೆಗಳು ಮಹಾಭಾರತ ಯುದ್ಧದ ಸಮಯದಲ್ಲಿ ನೋಡುತ್ತೇವೆ.
ಕುರುಕ್ಷೇತ್ರ ಯುದ್ಧ ಶುರುವಾಗುತ್ತದೆ. ಕೌರವರು ಪಾಂಡವರು ಸರಿಸಮನಾಗಿ ಕಾದುತ್ತಾರೆ. ಯುದ್ಧ ಶುರುವಾಗಿ 14 ದಿನಗಳಾಗಿರುತ್ತವೆ. ಭೀಷ್ಮರನ್ನು ಸೋಲಿಸಲು ಅರ್ಜುನನಿಗೆ ಸಾಧ್ಯವೇ ಆಗುವುದಿಲ್ಲ. ಭೀಷ್ಮರಿಗೆ ದುರ್ಯೋಧನನ ಕುಟುಕಿನ ಮಾತು ಕೇಳಿ ಬೇಸರವಾಗಿತ್ತು. ಭೀಷ್ಮರು ರಣಭಯಂಕರರಾಗಿ ಕಾದಾಡಿ ಪಾಂಡವರ ಸೈನ್ಯದ ಬಹುಭಾಗವನ್ನು ನಿರ್ನಾಮ ಮಾಡುತ್ತಾರೆ. ಇದನ್ನು ನೋಡಿದ ಕೃಷ್ಣನಿಗೆ ರೇಗಿಬಿಡುತ್ತದೆ. ಕೃಷ್ಣನಿಗೆ ಅರ್ಜುನನನ್ನು ಹುರಿದುಂಬಿಸಿ ಸಾಕಾಯಿತು.
ಶ್ರೀ ಕೃಷ್ಣನ ಸಹನೆಯ ಕಟ್ಟೆಯೊಡೆಯಿತು. ಇನ್ನು ನನ್ನಿಂದ ನೋಡಲಾಗದು ಅರ್ಜುನ, ಯುದ್ಧವನ್ನು ನಾನೇ ಮುಗಿಸುತ್ತೇನೆ ಎನ್ನುತ್ತಾ ಕುದುರೆಗಳ ಹಗ್ಗವನ್ನು ಕೆಳಗಿಟ್ಟು, ದಡ ದಡನೇ ರಥದಿಂದ ಕೆಳಗೆ ಇಳಿದ. ಅಲ್ಲೇ ಇದ್ದ ರಥವೊಂದರ ಗಾಲಿಯನ್ನು ಎರಡೂ ಕೈಗಳಿಂದ ಚಕ್ಕನೆ ಎತ್ತಿ ಭೀಷ್ಮರ ಮೇಲೆ ಎತ್ತಿ ಹಾಕಲು ಹೊರಟ.
ಇದನ್ನು ನೋಡುತ್ತಿದ್ದ ಸೈನಿಕರು ಯುದ್ಧ ಮಾಡುವುದನ್ನೂ ಮರೆತು ನಿಂತುಬಿಟ್ಟರು. ಕೃಷ್ಣನ ಹೆಜ್ಜೆ ರಭಸಕ್ಕೆ ಭೂದೇವಿ ನಡುಗಿದಳು...
ಆಚಾನಕ್ಕಾಗಿ ಆದ ಬೆಳವಣಿಯಿಂದ ಅರ್ಜುನ ದಂಗಾದ. ಅವಸರದಿಂದ ರಥದಿಂದ ಇಳಿದು ಓಡಿಹೋಗಿ ತಟ್ಠನೇ ಕೃಷ್ಣನ ಕಾಲನ್ನು ಗಟ್ಟಿಯಾಗಿ ಹಿಡಿದು, ಪರಿ ಪರಿಯಾಗಿ ಬೇಡಿಕೊಂಡ, "ಕೃಷ್ಣ, ವಾಸುದೇವ, ಮನ್ನಿಸು, ನೆನಪಿಲ್ಲವೇ ನಿನಗೆ ಆಯುಧ ಹಿಡಿಯಲಾರೆ ಎಂದು ಶಪಥ ಮಾಡಿದ್ದು. ಒಂದು ಸಲ ಮನ್ನಿಸು ಪ್ರಭುವೇ, ಸರಿಯಾಗಿ ಯುದ್ಧ ಮಾಡುವೆ. ಚಕ್ರ ಕೆಳಗಿಳಿಸು ಮಿತ್ರ, ತಪ್ಪಾಯಿತು... ಕೃಷ್ಣಾ ಕೃಷ್ಣಾ ನಿಲ್ಲಿಸು ಪ್ರಭುವೇ, ದಯವಿಟ್ಟು ನಿಲ್ಲಿಸು." ಅರ್ಜುನ ಹೇಳುತ್ತಲೇ ಹೋದ, ಕೆಲವು ನಿಮಿಷಗಳಾದ ಮೇಲೆ ಕೃಷ್ಣ ಸ್ವಲ್ಪ ಶಾಂತನಾದ. ಎತ್ತಿದ ಚಕ್ರ ಕೆಳಗಿಳಿಸಿದ.
ಕೃಷ್ಣ ತನ್ನೆಡೆಗೆ ಬರುವುದನ್ನು ನೋಡಿದ ಭೀಷ್ಮರು ರಥದಿಂದ ಕೆಳಗಿಳಿದು ಕೈ ಮುಗಿದು ಸಂತೋಷದಿಂದ, "ಬಾ ಬಾ ಭಕ್ತವತ್ಸಲ ನನ್ನನ್ನು ಈ ದ್ವಂದ್ವದಿಂದ ಪಾರು ಮಾಡು. ಯಾರಿಗಿರುತ್ತದೆ ಇಂಥಾ ಸೌಭಾಗ್ಯ. ನಿನ್ನ ಕೈಯಿಂದ ನನ್ನ ಕೊನೆಯಾಗಲಿ. ಬಾ ಮುಕುಂದ, ಮುಂದಡಿಯಿಡು" ಎಂದರು ಕಣ್ಣೀರು ಹನಿಸುತ್ತ.
ಕೃಷ್ಣ ಭಕ್ತನಿಗಾಗಿ ತನ್ನ ಶಪಥ ಮರೆತಂತೇ ತೋರಿದ. ಭೀಷ್ಮರ ಶಪಥವೇ ನಿಜವಾಯಿತು. ಕೃಷ್ಣ ರೇಗಿ ಚಕ್ರ ಹಿಡಿಯುವಂತೆ ಮಾಡಿದ್ದರು ಭೀಷ್ಮರು. ಮರುದಿನ ಶಿಖಂಡಿಯನ್ನು ಅರ್ಜುನ ತನ್ನೊಡನೆ ಕರೆತಂದು ರಥದಲ್ಲಿ ಎದುರಲ್ಲಿ ನಿಲ್ಲಿಸಿ ಭೀಷ್ಮರು ಆಯುಧವನ್ನು ಕೆಳಗಿಡುವಂತೆ ಮಾಡಿ ಸೋಲಿಸುತ್ತಾನೆ.
ಈ ಘಟನೆ ಮಹಾಭಾರತ್ದಲ್ಲಿ ಮಹತ್ವ ಪಡೆಯಿತು. ಶ್ರೀಕೃಷ್ಣ ಭಕ್ತವತ್ಸಲ ಎಂಬುದು ಸಾಬೀತುಪಡಿಸಿತು.
ಇಂದು ಭೀಷ್ಮಾಷ್ಟಮಿ ಕೌರವ ವಂಶದ ತಾತರನ್ನು ನೆನೆಯುವ ದಿನ.
- ರೇಖಾ ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ