"ಜೀವನ" ಅನ್ನೋ ಮೂರು ಅಕ್ಷರ ಹೀಗೂ ಇರುತ್ತಾ ಅಂತ ಕೆಲವೊಂದು ಸಮಯದಲ್ಲಿ ಅನಿಸಿದ್ದು ಇದೆ. ಯಾಕೋ ಗೊತ್ತಿಲ್ಲ ಇಂದು ನಾನು ಇಷ್ಟೊಂದು ನೋವು, ಸಂಕಟ ಅನುಭವಿಸಲು ಮುಖ್ಯ ಕಾರಣನೇ ನೀನು ಅಪ್ಪಾ..! ನಿನಿಗೆ ನನ್ನ ನೋವು, ಸಂಕಟ ಅರ್ಥ ಆಗುತ್ತೋ ಇಲ್ವೋ ಅಂತ ನನಿಗೆ ಗೊತ್ತಿಲ್ಲ. ಆದ್ರೆ ನನಿಗೆ ನಿನ್ನನ್ನು ಅರ್ಥ ಮಾಡಿಕೊಳ್ಳೋಕೆ ಆಗಲ್ಲ. ನನ್ನ ಜೀವನದಲ್ಲಿ ಅರ್ಥವಾಗದೆ ಇರೋ ಪ್ರಶ್ನೆ ಅಂದ್ರೆ ಅದು ನೀನು ಮಾತ್ರ ಅಪ್ಪಾ.. ನಿನ್ನ ಸೃಷ್ಟಿ ಮಾಡಿದ ಆ ಸೃಷ್ಟಿಕರ್ತನ ತಪ್ಪೋ? ಅಥವಾ ನಿನ್ನಂಥ ಅಪ್ಪನನ್ನು ಪಡೆದ ನಿನ್ನ ನಾಲ್ಕು ಮಕ್ಕಳ ಅದೃಷ್ಟವೋ ಅಥವಾ ದುರಾದೃಷ್ಟವೋ ಎಂದು ತಿಳಿಯುತ್ತಿಲ್ಲ.
ಎಲ್ಲರನ್ನು ಕಾಪಾಡೋ ಆ ಭಗವಂತ ನಿನಿಗೆ ಯಾಕೆ ಎರಡು ಮುಖದ ಜೀವನ ಕೊಟ್ಟಿದ್ದಾನೋ ಎಂದು ತಿಳಿಯುತ್ತಿಲ್ಲ. ಪ್ರತಿಕ್ಷಣ, ಪ್ರತಿದಿನ ನಿನ್ನ ಬಗ್ಗೆ ಯೋಚಿಸುವ ನನಗೆ, ನೀನು ಅಂದ್ರೆ ಏನು ಅಂತ ತಿಳಿದಿದ್ದು ಇಷ್ಟೇ- "ನೀನು ನಿಜವಾಗ್ಲೂ ನನ್ನ ಅಪ್ಪನೋ ಅಥವಾ ಯಾವುದೋ ಕುಡುಕರ ಸಂಘದ ಅಧ್ಯಕ್ಷನೋ ಅಂತ. ಯಾಕೆ ನನಿಗೆ ಈ ತರ ಗೊಂದಲ ಉಂಟಾಗುತ್ತೆ ಅಂತ ತಿಳಿಯುತ್ತಿಲ್ಲ. ನನ್ನನ್ನು ಈ ಗೊಂದಲಗಳಿಂದ ಪಾರು ಮಾಡೋಕೆ ನಿನ್ನಿಂದ ಮಾತ್ರ ಸಾಧ್ಯ.
ಆದ್ರೆ ಅದು ನಿನ್ನಿಂದ ಅಷ್ಟೊಂದು ಸುಲಭವಾಗಿ ಬಗೆಹರಿಯುವ ಸಮಸ್ಯೆಯಲ್ಲ ಎಂದು ನನಿಗೂ ತಿಳಿದಿದೆ. ನಿನ್ನ ಯೌವ್ವನದಲ್ಲಿ ಆ ಒಂದು ತಪ್ಪು ಮಾಡದೆ ಇರ್ತಾ ಇದ್ದಿದ್ರೆ ಇಂದು ನೀನು, ನಿನ್ನ ಜೊತೆ ನಿನ್ನ ಹೆಂಡತಿ, ಮಕ್ಕಳು ಕೂಡ ಇಷ್ಟೊಂದು ನೋವು, ಅವಮಾನ, ಸಂಕಟಗಳನ್ನು ಎದುರಿಸುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ನನಗನಿಸುತ್ತದೆ.
ಯಾಕಪ್ಪಾ..! ಎಲ್ಲರ ಮುಂದೆ ನೀನು ಇಷ್ಟೊಂದು ಕೇವಲವಾಗಿಬಿಟ್ಟೆ. ಯೌವ್ವನದಲ್ಲಿ ನೀನು ಮಾಡಿದ್ದು ತಪ್ಪು ಅಂತ ನಾನು ಹೇಳ್ತಾ ಇಲ್ಲ. ಜೀವನ ಅಂದ್ರೆ ಪ್ರೀತಿ, ಪ್ರೇಮ, ಮದುವೆ, ಸಂಸಾರ, ಮುಪ್ಪು ಇವುಗಳು ಇದ್ರೇನೆ ನಮ್ಮ ಜೀವನಕ್ಕೆ ಒಂದು ಅರ್ಥವಿರೋದು. ಆದ್ರೆ ನೀನು ಮಾಡಿದ್ದಾದ್ರೂ ಏನು? ಪ್ರೀತಿ ಎಂಬ ಬಲೆಯಲ್ಲಿ ಬಿದ್ದು ಪ್ರೀತಿಗೋಸ್ಕರ ಆಸ್ತಿ- ಪಾಸ್ತಿ, ಬಂಧು- ಬಳಗ, ತನ್ನವರನೆಲ್ಲ ತ್ಯಜಿಸಿ ಮನೆ ಬಿಟ್ಟು ಬಂದೆ ಅಲ್ವಾ ಯಾಕೆ? ನೀನು ಎಲ್ಲವನ್ನು ತ್ಯಜಿಸಿ ಮನೆ ಬಿಟ್ಟು ಬಂದ್ರೂ ಪರ್ವಾಗಿಲ್ಲ.
ಆದ್ರೆ ನಿನ್ನ ನಂಬಿಕೊಂಡು, ನೀನೆ ಸರ್ವಸ್ವ ಎಂದು ತಿಳಿದು ತನ್ನ ಮನೆಯವರನ್ನೂ ಕೂಡ ನಿನ್ನ ಪ್ರೀತಿಗಾಗಿ ತ್ಯಜಿಸಿ ನಿನ್ನ ಬಾಳಸಂಗಾತಿಯಾಗಿ ಬಂದ ಶ್ರವಣದೋಷವುಳ್ಳ ಆ ಮುಗ್ಧ ಹೆಣ್ಣು ಜೀವಕ್ಕೆ ಅದೆಷ್ಟು ಕಷ್ಟ, ನೋವು, ಹಿಂಸೆ ಕೊಟ್ಟೆ ಅಲ್ವಾ..! ಆ ಹೆಣ್ಣು ಜೀವ ಅದೆಷ್ಟು ಕನಸು ಕಂಡಿತ್ತೋ ಏನೋ? ಆದ್ರೆ ನೀನು ಯಾವತ್ತಾದ್ರೂ ಆ ಜೀವದ ಮನಸಲ್ಲಿ ಏನಿದೆ ಅನ್ನೋದನ್ನು ತಿಳಿಯಲು ಪ್ರಯತ್ನಿಸಿದೆಯಾ? ನಿನ್ನ ನಂಬಿಕೊಂಡು ಬಂದ ಆ ಜೀವಕ್ಕೆ ಇವತ್ತಿನವರೆಗೂ ಕೂಡ ನೋವನ್ನೇ ಉಡುಗೊರೆಯಾಗಿ ಕೊಟ್ಟೆ ಅಲ್ವಾ.
ಇಷ್ಟೆಲ್ಲಾ ನೋವನ್ನು ಅನುಭವಿಸಿಕೊಂಡು ಆ ಹೆಣ್ಣು ಜೀವ ತನಗೆ 'ಕುಡುಕ ಗಂಡ' ಸಿಕ್ಕಿದ ಎಂದು, ನಿನ್ನ ಬಿಟ್ಟು ಯಾವತ್ತೋ ಶಿವನ ಪಾದ ಸೇರ್ತಿನಿ ಅಂತ ಎಷ್ಟೋ ಸಲ ನಿರ್ಧಾರ ಮಾಡಿತ್ತು. ಆದ್ರೆ ಅದಾಗಲೇ ನಿನ್ನ ಪ್ರೀತಿಸಿದಕ್ಕೆ ಅದರ ಸಂಕೇತವಾಗಿ ಆಕೆಯ ಬಸಿರಲ್ಲಿ ಪ್ರೀತಿಯ ಬೀಜ ಬಿತ್ತಿದೆ ಅಲ್ವಾ..? ಈ ಸಮಯದಲ್ಲಿ ನೀನು ಆಕೆಗೆ ಧೈರ್ಯ ತುಂಬೋ ಬದಲು ಕಂಠಪೂರ್ತಿ ಕುಡಿದು ಆಕೆಯ ಬಾಳನ್ನು ಕತ್ತಲು ಮಾಡಿದೆ ಅಲ್ವಾ..? ನಿನ್ನ ನಂಬಿಕೊಂಡು ಬಂದ ಆಕೆಯನ್ನು ಅದೆಷ್ಟು ಊರು- ಕೇರಿಯಲ್ಲಿ ಸುತ್ತಾಡಿಸಿದೆಯೋ? ಆಕೆ ಅದೆಷ್ಟು ನೋವನ್ನು ನುಂಗಿ ನಾಲ್ಕು ಮಕ್ಕಳನ್ನು ಹೆತ್ತು, ಮಡಿಲಲ್ಲಿ ಸಾಕಿ, ಬೆಳೆಸಿ, ಬದುಕಿನ ದಾರಿಯನ್ನು ತೋರಿಸಿಕೊಟ್ಟಳೋ ಆ ಭಗವಂತನಿಗೆ ಗೊತ್ತು.
ನೀನು ಅದೆಷ್ಟೇ ಕಷ್ಟ ಕೊಟ್ರು ಇಂದು ಆಕೆ ನಿನ್ನ ಜೊತೆ ಜೀವನ ನಡೆಸ್ತಾ ಇದ್ದಾಳೆ ಅಂದ್ರೆ ಅದು ನಿನ್ನ ರಕ್ತ ಹಂಚಿಕೊಂಡು ಬೆಳೆದ ನಾಲ್ಕು ಮಕ್ಕಳಿಗಾಗಿ ಮಾತ್ರ. ನೀನು ಮತ್ತು ಅಮ್ಮ ಮನೆಬಿಟ್ಟು ಬಂದು ಇಂದಿಗೆ ಸುಮಾರು 27- 28 ವರ್ಷ ತುಂಬಿ ಹೋಗಿದೆ. ಈ 28 ವರ್ಷದಲ್ಲಿ ನೀನು ಅದೆಷ್ಟು ಎಣ್ಣೆ ಬಾಟಲಿ ಖಾಲಿ ಮಾಡಿದಿಯೋ? ಅದನ್ನು ಊಹಿಸೋಕೆ ನನ್ನಿಂದ ಸಾಧ್ಯ ಇಲ್ಲ ಅಪ್ಪಾ..! ಶ್ರವಣದೋಷವುಳ್ಳ ನನ್ನ ಅಮ್ಮ ತನ್ನ ನೋವನ್ನು ಯಾರೊಂದಿಗೂ ಹೇಳಲಾಗದೆ ಮನಸಲ್ಲಿ ಹುದುಗಿಟ್ಟು ಎಷ್ಟೊಂದು ನರಕ ಅನುಭವಿಸಿದಳೋ ಅದು ಆಕೆಗೆ ಮಾತ್ರ ಗೊತ್ತು.
ಯಾಕಪ್ಪಾ ನೀನು ಆಕೆ ಮತ್ತು ನಿನ್ನ ನಾಲ್ಕು ಮಕ್ಕಳ ಬದುಕಿನಲ್ಲಿ ಚೆಲ್ಲಾಟ ಆಡ್ತೀಯಾ? ಈಗ ನನ್ನ ಮನಸಲ್ಲಿ ಕೊರೆಯುತ್ತಿರುವ ನೋವು ಒಂದೇ- ನನ್ನ ಮತ್ತು ನನ್ನ ಅಣ್ಣ- ತಂಗಿಯರ ಬಾಲ್ಯ ಜೀವನದಲ್ಲಿ ನೀನು ನಮಿಗೆ ಸಾಕಷ್ಟು ನೋವಿನ ಜೊತೆಗೆ ಕಷ್ಟನೂ ಕೊಟ್ಟಿದ್ದೀಯ. ಆದ್ರೆ ನಾವು ಅದನ್ನು ಖುಷಿಯಿಂದ ಸ್ವೀಕರಿಸಿದ್ದೇವೆ. ಯಾಕಂದ್ರೆ ಜೀವಿಸೋದಕ್ಕೆ ಸ್ವಂತ ಸೂರು ಇಲ್ಲದಿದ್ರೂ "ಹಸಿವು" ಅಂತ ಬಂದಾಗ ನೀನು ಉಪವಾಸ ಇದ್ದು, ಹೆಂಡತಿ -ಮಕ್ಕಳ ಹಸಿವನ್ನು ನೀಗಿಸಿದ್ದೀಯಾ.. ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಿಲ್ಲ ನೀನು. ಆದ್ರೆ ಯಾಕಪ್ಪ ನೀನು ಊರವರ ಬಾಯಿಂದ "ಕೆಟ್ಟವ", "ಕುಡುಕ" ಅನ್ನೋ ಬಿರುದನ್ನು ಗಳಿಸಿಕೊಂಡು ಬರುತ್ತೀಯಾ?
ಬಾಲ್ಯದಲ್ಲಿದ್ದಾಗ ನಿನ್ನ ಬಗ್ಗೆ ಯಾರು, ಏನೇ ಹೇಳಿದ್ರೂ ನಗು ಮುಖದಿಂದಲೇ ಜನರಿಗೆ ಉತ್ತರ ನೀಡ್ತಾ ಇದ್ದೆವು. ಏನೂ ತಿಳಿಯದ ವಯಸಿನಲ್ಲಿ ನೀನೊಬ್ಬ "ವಿದೂಷಕ"ನಂತೆ ಕಂಡೆ. ಆದ್ರೆ ಈಗ ನಮ್ಮ ಬದುಕಿನಲ್ಲಿ "ಖಳನಾಯಕ"ನಂತೆ ಯಾಕೆ ಜೀವಿಸುವೆ ಅಪ್ಪಾ..! ಬಾಲ್ಯದಲ್ಲಿದ್ದಾಗ ನಿನ್ನ ಬುದ್ಧಿಗೆ ಏನಾಗಿತ್ತೋ ಅಂತ ಗೊತ್ತಿಲ್ಲ. ಆದ್ರೆ ನಿನ್ನ ಮಕ್ಕಳು ಪ್ರೌಢವಸ್ಥೆ, ಯೌವ್ವನಕ್ಕೆ ಕಾಲಿಟ್ಟರೂ ಕೂಡ ನಾಯಿ ಬಾಲ ಡೊಂಕು ಅನ್ನೋ ತರ ಇದ್ದೀಯಾ ಅಲ್ವಾ.. ಯಾಕಪ್ಪಾ? ನೆಮ್ಮದಿಯಿಂದ ಜೀವಿಸೋಕೆ ಅಂತ ಸ್ವಂತ ಸೂರು ಇಲ್ಲ.
ಐದಾರು ವರ್ಷ ಅಲೆಮಾರಿ ಜೀವನ, ಹತ್ತು - ಹದಿನೈದು ವರ್ಷ ಬೇರೆಯವರ ಹೊಕ್ಕಲು ಮನೆ ಕೆಲಸದವರಾಗಿ ಜೀವನ, ಪ್ರಸ್ತುತ ಬಾಡಿಗೆ ಮನೆ ಜೀವನ, ಮಕ್ಕಳು ಮದುವೆ ವಯಸ್ಸಿಗೆ ಕಾಲಿಟ್ಟಿದ್ದಾರೆ, ಇನ್ನಾದರೂ ಮಕ್ಕಳ ಜೀವನದಲ್ಲಿ ನಾನು ಆಟ ಆಡ್ಬಾರ್ದು, ಅವರ ಭವಿಷ್ಯದ ಬಗ್ಗೆ ಯೋಚನೆ ಮಾಡ್ಬೇಕು ಅನ್ನೋದನ್ನು ಯಾವತ್ತಾದ್ರೂ ಯೋಚಿಸಿದ್ದೀಯಾ ಅಪ್ಪಾ?? ಎಲ್ಲರ ಜೀವನ ಒಂದು ರೀತಿ ಆದ್ರೆ ನಮ್ಮ ಜೀವನ ಯಾಕೆ ಈ ರೀತಿ ಎಂದೆನಿಸುತ್ತದೆ.
ಯಾಕಪ್ಪಾ ನೀನು ಇಷ್ಟೊಂದು ಮದ್ಯ ಸೇವನೆ ಮಾಡುತ್ತೀಯಾ..? ನಿನ್ನ ಜೊತೆ ಕುಡಿಬೇಡ ಅಂತ ಹೇಳ್ತಾ ಇಲ್ಲ, ನಿನ್ನ ಮನಸ್ಸಿಗೆ ಖುಷಿ, ನೆಮ್ಮದಿ ಸಿಗೋ ತನಕ ಕುಡಿ. ಆದ್ರೆ ನಿನ್ನ ಕುಡಿತದಿಂದ ಇನ್ನೊಬ್ಬರಿಗೆ ತೊಂದರೆ ಕೊಡ್ಬೇಡ. ನಿನ್ನ ಹೆಂಡತಿ - ಮಕ್ಕಳಿಗೆ ನೀನು ಒಬ್ಬ ಕುಡುಕ, ಒಳ್ಳೆಯ ಗಂಡ ಅಲ್ಲ, ಒಳ್ಳೆಯ ಅಪ್ಪ ಅಲ್ಲ ಅಂತ ಹೆಂಡತಿ- ಮಕ್ಕಳಿಗೆ ಅನಿಸಿದ್ರೂ ಪರ್ವಾಗಿಲ್ಲ. ಆದ್ರೆ ಮೂರನೇ ವ್ಯಕ್ತಿಗಳಿಂದ ನೀನು ಈ ರೀತಿಯ ಬಿರುದನ್ನು ಗಳಿಸಿಕೊಂಡು ಬರ್ಬೇಡ ಅಪ್ಪಾ.. ಈ ಪ್ರಪಂಚದಲ್ಲಿ 100 ರಲ್ಲಿ 99% ರಷ್ಟು ಜನರು ಒಬ್ಬ ವ್ಯಕ್ತಿಯ ಒಳ್ಳೆತನವನ್ನು ಪ್ರಶಂಸೆ ಮಾಡಲ್ಲ. ಒಬ್ಬ ವ್ಯಕ್ತಿ ಯಶಸ್ಸಿನ ದಾರಿಯಲ್ಲಿ ನಡೀತಾ ಇದ್ದಾನೆ ಅಂತ ಗೊತ್ತಾದ್ರೆ ಆ ಯಶಸ್ಸಿಗೆ ಕಲ್ಲನ್ನು ಹಾಕುವ ಜನರ ಮಧ್ಯೆ ನೀನು ಯಾಕೆ ಸಿಲುಕಿಕೊಂಡಿದ್ದೀಯಾ..?
ಕೊನೆಯದಾಗಿ ನಿನ್ನಲ್ಲಿ ನಾನು ಬೇಡೋದು ಒಂದೇ, ನಾನು ಈ ಪ್ರಪಂಚಕ್ಕೆ ಕಾಲಿಟ್ಟು 24-25 ವರ್ಷಗಳಾಯಿತು. ಇಷ್ಟು ವರ್ಷಗಳವರೆಗೆ ನಾನು ಕಂಡ ಪ್ರಪಂಚ ಹೇಗಿದೆ ಅಂದ್ರೆ ಎಲ್ಲಾ ಜನರು ನಿನ್ನ ಬಗ್ಗೆ ಋಣಾತ್ಮಕವಾಗಿ ಮಾತಾಡಿ ಮನಸ್ಸನ್ನು ಚುಚ್ಚುತ್ತಾ ಇದ್ದಾರೆ. ಈ ವಿಷಯನಾ ನಾನು ನಿನ್ನ ಜೊತೆ ಹೇಳಿದಾಗ ನೀನು ನನ್ನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಬಿಡ್ತೀಯಾ ಅಲ್ವಾ.. ಯಾಕೆ ಅಪ್ಪಾ..? ನೀನು ಹೇಗೋ ಎಲ್ಲರ ಮುಂದೆ ಬಹಳ ಹೆಮ್ಮೆಯಿಂದ ನನ್ನ ಮಗ ಬಿ.ಎ. ಓದಿದ್ದಾನೆ, ದೊಡ್ಡ ಮಗಳು M.Com ಮಾಡಿದ್ದಾಳೆ, ಸಣ್ಣ ಮಗಳು ಡಿಗ್ರಿ ಮಾಡ್ತಾ ಇದ್ದಾಳೆ.
ಇನ್ನೊಬ್ಬಳು Government Job ಅಲ್ಲಿ ಇದ್ದಾಳೆ ಅಂತ ಎಷ್ಟು ಚೆನ್ನಾಗಿ ನಿನ್ನ ಮಕ್ಕಳ ಬಗ್ಗೆ ಇಡೀ ಜಗತ್ತಿಗೆ ಪರಿಚಯಿಸ್ತೀಯಾ ಅಲ್ವಾ..? ಆದ್ರೆ ನಿನ್ನ ಮಕ್ಕಳಾದ ನಮಗೆ ನಿನ್ನನ್ನು ಪರಿಚಯಿಸಲು ಯಾವ ದಾಖಲೆಯನ್ನು ನೀಡುವೆ ಅಪ್ಪಾ? ಇಡೀ ಊರೇ ನಿನ್ನನ್ನು "ಕುಡುಕ" ಅಂತ ಗುರುತಿಸಿದರೆ ನಾವು ಹೇಗಪ್ಪಾ ನಿನ್ನನ್ನು "ನಮ್ಮ ಅಪ್ಪ" ಅಂತ ಪರಿಚಯಿಸೋದು?
ಪ್ರಪಂಚಕ್ಕೆ ಕಾಲಿಟ್ಟ ಕೂಡಲೇ ಬರೀ ಕಷ್ಟ, ನೋವನ್ನೇ ಅನುಭವಿಸಿ ಬಂದ ನಿನ್ನ ನಾಲ್ಕು ಮಕ್ಕಳ ಮನಸಲ್ಲಿ ಏನೇದೆ ಅಂತ ತಿಳಿಯೋ ಪ್ರಯತ್ನ ಆದ್ರೂ ಮಾಡ್ತೀಯಾ, ಅದೂ ಇಲ್ಲ. ಬರೀ ಕುಡಿಯೋದೇ ನಿನಗೆ ಜೀವನ ಆಗೋಯ್ತ ಅಲ್ವಾ? ಮನಸಲ್ಲಿ ಅದೆಷ್ಟೋ ಆಸೆ, ಕನಸು. ನನ್ನ ಅಪ್ಪ ಹಾಗಿರ್ಬೇಕು, ಹೀಗಿರ್ಬೇಕು, ಸ್ವಂತ ಮನೆ ಮಾಡ್ಬೇಕು, ಇನ್ನೊಬ್ಬರ ಹಂಗಲ್ಲಿ ಯಾವತ್ತೂ ಬದುಕ್ಬಾರ್ದು, ತಪ್ಪು ಮಾಡದೇ ಇದ್ರೂ ನಮ್ಮದೇ ತಪ್ಪು ಅಂತ ಹೇಳಿ ಬಾಡಿಗೆ ಮನೆ ಖಾಲಿ ಮಾಡಿ ಅಂದವರಿಗೆ ಒಂದು ದಿನ ಸ್ವಂತ ಮನೆ ಮಾಡಿ ನಮ್ಮ ಸಾಮರ್ಥ್ಯ ಏನು ಅಂತ ತೋರಿಸ್ಬೇಕು ಅಂತ ಹಠ, ಸಾಧನೆ ಮಾಡ್ತಾ ಇದ್ರೆ ಅದಕ್ಕೆ ನೀನು ಅಡ್ಡಗಾಲು ಹಾಕ್ತಾ ಇದ್ದೀಯಾ ಅಲ್ವಾ.. ಯಾಕೆ ಇಷ್ಟೊಂದು ಕ್ರೂರಿಯಾಗಿ ಬಿಟ್ಟೆ..?
ಆ ದೇವರಿಗೂ ನಮ್ಮ ಕಷ್ಟ ಏನು ಅಂತ ಅರ್ಥ ಆಗಲ್ಲ. ನೀನಾದ್ರೂ ಅರ್ಥ ಮಾಡ್ಕೋ ಅಪ್ಪಾ..! ಒಂದೇ ಒಂದು ಸಲ ಮಕ್ಕಳ ಮನಸ್ಸಿನ ಮಾತನ್ನು ಕೇಳಿಸಿಕೊ. ನಿನಗೆ ಮನಸಿದೆಯೋ ಇಲ್ಲವೋ ಗೊತ್ತಿಲ್ಲ, ಆದ್ರೆ ನಿನ್ನ ಮಕ್ಕಳ ಪಾಲಿಗೆ ಒಳ್ಳೆಯ ಅಪ್ಪನಾಗಿರಲು ಪ್ರಯತ್ನ ಪಡು.
ಇಲ್ಲದೇ ಇದ್ದರೆ ಊರವರ ಬಾಯಲ್ಲಿ "ಕುಡುಕ", "ಕೆಟ್ಟವ" ಅಂತ ಕರೆಸಿಕೊಳ್ಳೋ ಹಾಗೆ ಮಕ್ಕಳ ಪಾಲಿಗೂ ಕೆಟ್ಟವನಾಗಿ ಇದ್ದು ಬಿಡು. ನಶೆ ಏರಿದಾಗ ಒಂದು ಮುಖ, ನಶೆ ಇಳಿದಾಗ ಇನ್ನೊಂದು ಮುಖ ಈ ರೀತಿಯ ಮುಖವಾಡ ಹಾಕಿ ಹೆಂಡತಿ - ಮಕ್ಕಳ ಜೀವ ಹಿಂಡಬೇಡ. ಜೀವ ಇದ್ದಷ್ಟು ದಿನ ಸುಖ, ಶಾಂತಿ, ನೆಮ್ಮದಿಯಿಂದ ಬದುಕೋಣ. ಇದಕ್ಕೆ ಅವಕಾಶ ಮಾಡಿಕೊಡು ಅಪ್ಪಾ.. ಪ್ಲೀಸ್..!!!
ಇಂತೀ ನಿನ್ನ ಬಗ್ಗೆ ಯೋಚಿಸುತ್ತಿರುವ ಜೀವ..
-ಶ್ರದ್ಧಾ ಮರಿಕೇಯಿ, ಕೊಡಿಯಾಲ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ