ದೇಲಂಪಾಡಿ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕಾಗಿ ಸಾವಯವ ಕೃಷಿ ಯೋಜನೆಗೆ ಚಾಲನೆ

Upayuktha
0



ಅಂಗಡಿಮೊಗರು :  ದೇಲಂಪಾಡಿ ಮಹಾಲಿಂಗೇಶ್ವರ ಕ್ಷೇತ್ರ ಬ್ರಹ್ಮಕಲಶೋತ್ಸವ ಮೇ.6ರಿಂದ 12ರ ತನಕ ಜರಗಲಿದ್ದು ಇದಕ್ಕೆ ಪೂರಕವಾಗಿ ಅಂಗಡಿಮೊಗರು ಗ್ರಾಮ ವ್ಯಾಪ್ತಿಯ ಭಕ್ತ ಜನರ ಸಹಭಾಗಿತ್ವದಲ್ಲಿ ಪುತ್ತಿಗೆ ಗ್ರಾ.ಪಂ. ಕೃಷಿ ಭವನದ ಸಹಕಾರದೊಂದಿಗೆ ಸಾವಯವ ಕೃಷಿ ಯೋಜನೆಗೆ ಸೋಮವಾರ ಚಾಲನೆ ನೀಡಲಾಯಿತು. 


ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ  'ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದ್ದ  ಸಾವಯವ ಕೃಷಿ ಕಾರ್ಯಗಳು ಇತ್ತೀಚಿಗಿನ ದಿನಗಳಿಂದ ಮೂಲೆ ಗುಂಪಾಗುತ್ತಿದ್ದು ಇದನ್ನು ಪುನರ್ಜೀವನಗೊಳಿಸಿ ಯುವ ಜನತೆಗೆ ಪ್ರೋತ್ಸಾಹದಾಯಕರಾಗುವ ಜತೆಗೆ  ಗ್ರಾಮ ದೇವರ ಉತ್ಸವಕ್ಕೆ ಸಮರ್ಪಿಸುವ ಮಹತ್ತರ ಯೋಜನೆ ನಾಡಿಗೆ ಮಾದರಿಯಾಗಿ ಮೂಡಿ ಬರಲೆಂದು" ಹಾರೈಸಿದರು.  


ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ  ಡಿ. ದಾಮೋದರ ಸಭೆಯ‌ ಅಧ್ಯಕ್ಷತೆವಹಿಸಿದ್ದರು. ಪುತ್ತಿಗೆ ಕೃಷಿ ಭವನದ ಕೃಷಿ ಅಧಿಕಾರಿ ದಿನೇಶ್‌ ಪೆರುಂಬಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಅಗತ್ಯವಾಗಿರುವ ತರಕಾರಿ ಸ್ವತಃ ಬೆಳೆಸುವ ಮೂಲಕ ಮಹತ್ತರ ಹೆಜ್ಜೆ ಇರಿಸಿದ ಈ ಯೋಜನೆ ನಾಡಿಗೆ ಮಾದರಿಯಾಗಿದೆ ಇದಕ್ಕಾಗಿ ಕೃಷಿ ಭವನ ಹಾಗೂ ಸರಕಾರದ ಸಹಕಾರ ನೀಡಲು ಪ್ರಯತ್ನಿಸಲಾಗುವುದು ಎಂದರು.


ಗ್ರಾ.ಪಂ.ಕೃಷಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ  ಪಾಲಕ್ಷ ರೈ, ವಾರ್ಡ್ ಸದಸ್ಯೆ ಪ್ರೇಮ ಎಸ್ ರೈ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಶಂಕರ ರೈ ಮಾಸ್ತರ್ , ಸೇವಾ ಸಮಿತಿ ಕಾರ್ಯದರ್ಶಿ ಕೇಶವ ಮಾಸ್ತರ್ ಮೊದಲಾದವರು ಮಾತನಾಡಿದರು. ರಾಧಾಕೃಷ್ಣ ಡಿ.ಎನ್.ಸ್ವಾಗತಿಸಿ ಪ್ರಭಾಕರ ಡಿ ವಂದಿಸಿದರು. 


ಅಂಗಡಿಮೊಗರು,  ದೇಲಂಪಾಡಿ ನೈಮೊಗರು, ಮಂಟಪಾಡಿ, ಅಮಿನೆ, ಕೋರಿಕ್ಕಾರ್ ಮೊದಲಾದೆಡೆ ಬ್ರಹ್ಮಕಲಶೋತ್ಸವಕ್ಕಾಗಿ ವಿವಿಧ ತರದ ಸಾವಯವ ತರಕಾರಿ ಬೆಳೆಸಲು  ನಿರ್ಧರಿಸಲಾಗಿದ್ದು ಇದಕ್ಕಾಗಿ ವಿವಿಧ ಸಮಿತಿ ರಚಿಸಿ ಸಂಚಾಲಕರನ್ನು ನೇಮಿಸಲಾಗಿದೆ. ಸಭೆಯಲ್ಲಿ ಅಂಗಡಿಮೊಗರು ಸೇವಾ ಸಹಕಾರಿ ಬ್ಯಾಂಕ್ ನ  ಕಾರ್ಯದರ್ಶಿ ವಿಠಲ ರೈ ,ಆನಂದ ಎಂ.ಕೆ, ಶಿವಪ್ಪ ರೈ,ಊರ ಹಿರಿಯರಾದ ಬಾಲಕೃಷ್ಣ ರೈ ನೈಮುಗೇರು, ಕೊಟ್ಯಣ್ಣ ರೈ, ಮೈಂದಪ್ಪ ರೈ  ಹಾಗೂ ಮಹಿಳಾ ಸಮಿತಿ, ಕುಟುಂಬಶ್ರೀ ಘಟಕ ಸದಸ್ಯೆಯರು ಭಾಗವಹಿಸಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top