ಜೈಪುರ: ರಾಜಸ್ಥಾನದ ತಿಜಾರ (ಪುರಾಣಗಳಲ್ಲಿ ಉಲ್ಲೇಖಗಳಲ್ಲಿ ಉಲ್ಲೇಖಿತವಾದ ತ್ರಿಗರ್ತ ದೇಶ) ರಲ್ಲಿನ ಮಧ್ವ ಮಠ, ಪ್ರೇಮ ಪೀಠದ ಮುಖ್ಯಸ್ಥರಾದ ಆಚಾರ್ಯ ಲಲಿತ ಮೋಹನ ಓಝ (57 ವರ್ಷ) ಅವರು ಅಲ್ಪಕಾಲದ ಅಸ್ವಾಸ್ಥ್ಯದಿಂದ ಇಂದು ಶನಿವಾರ (ಫೆ.15) ಬೆಳಿಗ್ಗೆ ಕೊನೆಯುಸಿರೆಳೆದರು.
ಭಕ್ತಾಗ್ರಣಿ ಮೀರಾಬಾಯಿಯ ಅನುಯಾಯಿಗಳಾದ ಓಝಾ ಅವರು ಆಚಾರ್ಯ ಮಧ್ವರ ಭಕ್ತಿ ಸಿದ್ಧಾಂತ ಮತ್ತು ಮೀರಾಬಾಯಿಯವರ ಭಕ್ತಿ ತತ್ವಗಳಿಗೂ ಸಾಮ್ಯತೆ ಇರುವುದನ್ನು ಮನಗಂಡು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಲ್ಲಿ ವೈಷ್ಣವದೀಕ್ಷೆಯನ್ನು ಸ್ವೀಕರಿಸಿ ತಿಜಾರಾದಲ್ಲಿ ಮಧ್ವಮಠ ಪ್ರೇಮಪೀಠವನ್ನು ಸ್ಥಾಪಿಸಿ ಆ ಭಾಗದಲ್ಲಿ ಮಧ್ವಸಿದ್ಧಾಂತದ ಪ್ರಚಾರ ಕಾರ್ಯಗಳನ್ನು ಅತ್ಯಂತ ಶ್ರದ್ಧೆಯಿಂದ ಮೂರು ದಶಕಗಳಿಂದ ನಡೆಸುತ್ತಿದ್ದರು.
ಪೇಜಾವರ ಮಠ ಹಾಗೂ ಶ್ರೀಗಳೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಆಗಾಗ್ಗೆ ಭೇಟಿ ನೀಡಿ ಮಾರ್ಗದರ್ಶನ ಪಡೆಯುತ್ತಿದ್ದರು. ಪ್ರತೀ ವರ್ಷ ಆಷಾಢ (ಗುರು) ಹುಣ್ಣಿಮೆಯ ಸಂದರ್ಭವೂ ಗುರುಗಳಿದ್ದಲ್ಲಿಗೆ, ಗುರುಗಳ ಕಾಲಾನಂತರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಗುರುಪೂಜೆ ಸಲ್ಲಿಸುತ್ತಿದ್ದರು. ಕಳೆದ ವರ್ಷ ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಉದ್ಘಾಟನೆ, ಮಂಡಲೋತ್ಸವಗಳಲ್ಲೂ ವಿಶೇಷ ಸೇವೆ ಸಲ್ಲಿಸಿದ್ದರು.
ಪೇಜಾವರ ಶ್ರೀ ತೀವ್ರ ಸಂತಾಪ: ಲಲಿತ ಮೋಹನ ಓಝಾ ಅವರ ನಿಧನ ವಾರ್ತೆ ತಿಳಿದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದಿಗ್ಭ್ರಮೆಗೊಂಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಓಝಾ ಅವರು ಶ್ರೀ ಮಧ್ವ ಗುರುಗಳ ಭಕ್ತಿ ಸಿದ್ಧಾಂತದ ಪ್ರಸಾರ ಕಾರ್ಯಗಳನ್ನು ಉತ್ತರದ ರಾಜ್ಯಗಳಲ್ಲಿ ಮತ್ತಷ್ಟು ವ್ಯಾಪಕ ಗೊಳಿಸುವ ಅತೀವ ಆಸಕ್ತಿ ಹೊಂದಿದ್ದರು. ನಮ್ಮ ಗುರುಗಳು ಮತ್ತು ಶ್ರೀ ಮಠದ ಮೇಲಿನ ಅವರ ಭಕ್ತಿ ಅಭಿಮಾನ ಅಪೂರ್ವವಾಗಿತ್ತು. ಅವರಿಗೆ ಶ್ರೀ ಕೃಷ್ಣ ಪರಮಾತ್ಮನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಶ್ರೀಗಳು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ