ಇನ್ನೂ ಅಕ್ಷಯವಾಗಿರುವ ತುಳು ಜಾನಪದ ಕ್ಷೇತ್ರ: ಡಾ. ವಸಂತಕುಮಾರ ಪೆರ್ಲ

Upayuktha
0


ಮಂಗಳೂರು: ತುಳು ಜಾನಪದ ಕ್ಷೇತ್ರವು ಅಕ್ಷಯವಾದ ಗಣಿ ಇದ್ದಂತೆ. ಜಾನಪದ ಕ್ಷೇತ್ರದಲ್ಲಿ ಸಂಸ್ಕೃತಿ ಅಧ್ಯಯನ ಮಾಡುವವರಿಗೆ ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಬಹುಮುಖಿಯಾದ ವಸ್ತುವಿಷಯಗಳಿವೆ ಎಂದು ಕವಿ ಸಾಹಿತಿ ವಿದ್ವಾಂಸ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.  


ನಗರದ ಪ್ರೆಸ್ ಕ್ಲಬ್ ನಲ್ಲಿ ಬಂಟ್ವಾಳದ ಯುವ ಸಾಹಿತಿ ದಾ. ನಾ. ಉಮಾಣ್ಣ ಅವರ ಜಾನಪದ ಅಧ್ಯಯನ ಕೃತಿ ‘ಅರದರ್ ಬಿರದೆರ್’ ಎಂಬುದನ್ನು ಬಿಡುಗಡೆಗೊಳಿಸಿ ಅವರು ಮಾತಾಡಿದರು. ತುಳು ಪಾಡ್ದನದಲ್ಲಿ ಬರುವಂತೆ ‘ಅರದರ್ ಬಿರದೆರ್ ವರದರ್’ ಎಂದರೆ ಪಾಂಡವರು ಕೌರವರು ಮತ್ತು ಯಾದವರು. ಯಾದವರ ಪತನದ ಬಳಿಕ ಕೃಷ್ಣನು ಅಳಿದುಳಿದ ಕೊನೆಯ ಒಬ್ಬ ಪುರುಷನಿಗೆ ಮಹಾಭಾರತ ಕಥೆಯನ್ನು ಬರೆದಿಡುವಂತೆ ಹೇಳುತ್ತಾನೆ. ಅದರಂತೆ ಆತ ಬರೆದ ಕಥೆ ಪಾಡ್ದನದಲ್ಲಿ ವರ್ಣಿತವಾಗಿದೆ. ಇದೊಂದು ಅತ್ಯಂತ ವಿಶಿಷ್ಟವಾದ ಪಾಡ್ದನ. ಮಹಾಭಾರತದ ಬಗ್ಗೆ ಜನಪದರ ದೃಷ್ಟಿ ಇದರಲ್ಲಿ ಕಂಡುಬರುತ್ತದೆ. ಅದಕ್ಕೆ ಉಮಾಣ್ಣ ಅವರು ಅರ್ಥವಿವರಣೆಯನ್ನೂ ನೀಡಿದ್ದಾರೆ ಎಂದು ಡಾ. ಪೆರ್ಲ ಅವರು ಹೇಳಿದರು.  


ತುಳುನಾಡಿನ ಅಪರೂಪದ ಇತರ ಹಲವಾರು ಜಾನಪದ ವಿಷಯಗಳನ್ನು ಕೈಗೆತ್ತಿಕೊಂಡು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಕೃತಿಕಾರರು ನಲಿಕೆ ಜನಾಂಗಕ್ಕೆ ಸೇರಿದವರಾಗಿರುವುದರಿಂದ ಬರವಣಿಗೆಗೆ ಅಧಿಕೃತತೆ ಪ್ರಾಪ್ತವಾಗಿದೆ ಎಂದೂ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.  


ಯುವ ಸಾಹಿತಿ ರಘು ಇಡ್ಕಿದು ಕೃತಿ ಪರಿಚಯಿಸಿ ಮಾತಾಡಿದರು. ಇಲ್ಲಿನ ಹಲವು ಪಾಡ್ದನಗಳು ಈ ಹಿಂದೆ ಸಂಗ್ರಹಗೊಂಡವೇ ಆದರೂ ಅರ್ಥ ವಿವರಣೆಯಲ್ಲಿ ವಿನೂತನತೆ ಇದೆ. ಇದುವರೆಗೆ ಯಾರೂ ಹೇಳಿರದ ಹೊಸ ವಿವರಣೆ ಮತ್ತು ಅರ್ಥಗಳು ಈ ಕೃತಿಯಲ್ಲಿ ಕಂಡು ಬರುತ್ತದೆ. ಪಾಡ್ದನಗಳಲ್ಲದೆ ಜನಪದರ ನಿತ್ಯಜೀವನಕ್ಕೆ ಸಂಬಂಧಿಸಿದ ಹಲವಾರು ಸಂಗತಿಗಳು ಇಲ್ಲಿ ಸಂಗ್ರಹಗೊಂಡಿವೆ ಎಂದರು. 


ಕವಿ ಬರಹಗಾರ ಎನ್. ಸುಬ್ರಾಯ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೃತಿಕಾರರ ಪತ್ನಿ ಶ್ರೀಮತಿ ಜ್ಯೋತಿ ವೇದಿಕೆಯಲ್ಲಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top