ಅತ್ಯಾಧುನಿಕ 'ಶ್ರೀ ಸಾನಿಧ್ಯ' ಕ್ಯೂ ಕಾಂಪ್ಲೆಕ್ಸ್ ಲೋಕಾರ್ಪಣೆಗೆ ಕ್ಷಣಗಣನೆ
ಬೆಳ್ತಂಗಡಿ: ನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ದೇಶದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ನಾಳೆ (ಜ.7ರಂದು) ಭೇಟಿ ನೀಡಲಿದ್ದಾರೆ. ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ʼಶ್ರೀ ಸಾನಿಧ್ಯʼ ಅತ್ಯಾಧುನಿಕ ಸರತಿ ಸಾಲು ವ್ಯವಸ್ಥೆಯ ಕಟ್ಟಡವನ್ನು ಭಕ್ತರ ಅನುಕೂಲಕ್ಕಾಗಿ ಲೋಕಾರ್ಪಣೆ ಮಾಡಲಿದ್ದಾರೆ.
ದೇವರ ದರ್ಶನಕ್ಕಾಗಿ ಕಾಯುವ ಸಮಯ ಮತ್ತು ವಿಧಾನವನ್ನು ಸರಳೀಕರಿಸಬೇಕು ಅನ್ನುವ ಯೋಚನೆಯಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೊಸ ಮಾದರಿಯ, ಅತ್ಯಾಧುನಿಕ ಸೌಲಭ್ಯಗಳುಳ್ಳ ನೂತನ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ರೂಪಿಸಿದರು. ಇದು ನಾಳೆ ಸಾಕಾರಗೊಂಡಿದ್ದು ಲೋಕಾರ್ಪಣೆಗೊಳ್ಳಲಿದೆ.
ಅಮೃತವರ್ಷಿಣಿ ಸಭಾವನದಲ್ಲಿ ಅಪರಾಹ್ನ 2 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಉಪರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ. ಧರ್ಮಾಧಿಕಾರಿ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಶ್ರೀಮತಿ ಸುದೇಶ್ ಧನ್‌ಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಜ್ಞಾನವಿಕಾಸ ಮಹಿಳಾ ಸಬಲೀಕರಣ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಹೇಮಾವತಿ ವೀ ಹೆಗ್ಗಡೆ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಗೌರವ ಉಪಸ್ಥಿತರಿರಲಿದ್ದಾರೆ.
ಏನಿದು 'ಶ್ರೀ ಸಾನಿಧ್ಯ' ಕ್ಯೂ ಕಾಂಪ್ಲೆಕ್ಸ್?
ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಯಾವುದೇ ಅಡಚಣೆಯಿಲ್ಲದೆ ದೇವರ ದರ್ಶನ ಸಾಧ್ಯವಾಗಬೇಕು ಅನ್ನುವ ಹಿನ್ನೆಲೆಯಲ್ಲಿ ಕ್ಯೂ ಕಾಂಪ್ಲೆಕ್ಸ್ ವ್ಯವಸ್ಥೆಯನ್ನು ದಶಕಗಳ ಹಿಂದೆಯೇ ಆರಂಭಿಸಲಾಗಿತ್ತು. ಆದರೆ ವಿಶೇಷ ದಿನಗಳಲ್ಲಿ ಈ ಕ್ಯೂ ಕಾಂಪ್ಲೆಕ್ಸ್-ನಲ್ಲಿ ಹೆಚ್ಚು ಹೊತ್ತು ಕಾಯಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಹೀಗೆ ಕಾಯುವ ಭಕ್ತಾದಿಗಳಿಗೆ ನೀರು, ಪಾನೀಯ, ಆಹಾರದ ವ್ಯವಸ್ಥೆಯನ್ನು ಕ್ಷೇತ್ರದ ವತಿಯಿಂದ ಮಾಡಲಾಗುತ್ತಿದ್ದರೂ, ಕಾಯುವ ಸಮಯ ಮತ್ತು ವಿಧಾನವನ್ನು ಸರಳೀಕರಿಸಬೇಕು ಅನ್ನುವ ಯೋಚನೆಯಿಂದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೊಸ ಮಾದರಿಯ, ಅತ್ಯಾಧುನಿಕ ಸೌಲಭ್ಯಗಳುಳ್ಳ ನೂತನ ಕ್ಯೂ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ರೂಪಿಸಿದರು.
ಹೊಸ ವ್ಯವಸ್ಥೆಯಲ್ಲಿ ಏನಿದೆ?
275,177 ಚದರ ಅಡಿಯ ಕಟ್ಟಡ
ಮೂರು ಮಹಡಿಗಳ ಬೃಹತ್ ಕಟ್ಟಡ
16 ಹಾಲ್‌ಗಳು
ಪ್ರತಿ ಕೋಣೆಯಲ್ಲಿ 600-800 ಭಕ್ತಾದಿಗಳಿಗೆ ವ್ಯವಸ್ಥೆ
ಸಂಕೀರ್ಣದಲ್ಲಿ ಒಟ್ಟು 10,000 ದಿಂದ 12,000 ಭಕ್ತಾದಿಗಳನ್ನು ಏಕಕಾಲದಲ್ಲಿ ನಿರ್ವಹಿಸುವ ಅನುಕೂಲ
ಬಾಕ್ಸ್ : ಹಾಲ್-ನೊಳಗೆ ಏನೇನಿದೆ?
ಒಳಗಡೆ ಉಷ್ಣಾಂಶ ನಿಯಂತ್ರಿಸಲು ಫ್ರೆಶ್ ಏರ್ ತಂತ್ರಜ್ಞಾನದ ಜೊತೆಗೆ ಬೃಹತ್ ಹವಾನಿಯಂತ್ರಕ ಫ್ಯಾನ್
ಶೌಚಾಲಯ, ಮಗು ಆರೈಕೆ ಕೊಠಡಿ, ಕುಡಿಯುವ ನೀರು, ಕೆಫೆಟೇರಿಯಾ
ಡಿಜಿಟಲ್ ಟಿ.ವಿ ಹಾಗೂ ಆಡಿಯೋ ವ್ಯವಸ್ಥೆ.
ಬಾಷ್ ಕಂಪನಿಯ ಕ್ಯೂ ಮ್ಯಾಣೇಜ್ಮೆಂಟ್ ಸಿಸ್ಟಂ.
ಎ.ಐ ತಂತ್ರಜ್ಞಾನ ಕ್ಯಾಮೆರಾ, ಭಕ್ತರ ನಿಖರ ಲೆಕ್ಕಹಾಕಿ ಕ್ಯೂ ನಿಯಂತ್ರಣ ವ್ಯವಸ್ಥೆ.
ಕ್ಯೂ ಮ್ಯಾನೇಜ್ಮೆಂಟ್ ಸಿಸ್ಟಂ
ಸರತಿ ಸಾಲನ್ನು ನಿರ್ವಹಿಸಲು ಪ್ರಪ್ರಥಮ ಬಾರಿಗೆ ಕ್ಯೂ ಮ್ಯಾನೇಜ್-ಮೆಂಟ್ ಸಾಪ್ಟ್-ವೇರ್ ಬಳಸಿಕೊಳ್ಳಲಾಗುತ್ತಿದೆ. ಈ ಕ್ಯೂ.ಎಂ.ಎಸ್ ಸ್ವಯಂಚಾಲಿತವಾಗಿ ಕ್ಯೂ ಕಾಂಪ್ಲೆಕ್ಸ್-ನೊಳಗೆ ಪ್ರವೇಶಿಸುವ ಮತ್ತು ಹೊರಹೋಗುವ ಭಕ್ತಾದಿಗಳ ಸಂಖ್ಯೆಯನ್ನು ಲೆಕ್ಕ ಹಾಕಿ, ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಹಾಲ್-ಗಳನ್ನು ಹಂಚಿಕೆ ಮಾಡುತ್ತದೆ. ಅದರಂತೆ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಹಾಲ್-ನ ಗೇಟುಗಳನ್ನು ತೆರೆದು ಭಕ್ತಾದಿಗಳು ದರ್ಶನಕ್ಕೆ ತೆರಳುವಂತೆ ಸೂಚನೆ ನೀಡುತ್ತದೆ. ಹೀಗೆ ಅತ್ಯಂತ ನಿಖರವಾಗಿ, ಅಡಚಣೆಯಿಲ್ಲದಂತೆ ಭಕ್ತಾದಿಗಳು ದರ್ಶನ ಪಡೆಯುವಂತೆ ಈ ಕ್ಯೂ.ಎಂ.ಎಸ್ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತದೆ.
ಇದರ ಜೊತೆಗೆ ಭದ್ರತೆ ಹಾಗೂ ಕಣ್ಗಾವಲಿಗಾಗಿ 160 ಎ.ಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಗತ್ಯವಿದ್ದಾಗ ಕಮಾಂಡ್ ರೂಂ-ಗೆ ಎಚ್ಚರಿಕೆ ಸಂದೇಶ ರವಾನಿಸುವ ವ್ಯವಸ್ಥೆಯೂ ಇಲ್ಲಿದೆ.
ಧ್ವನಿ ಮಾಹಿತಿ
ನೂತನ ಕ್ಯೂ ಕಾಂಪ್ಲೆಕ್ಸ್ ನಲ್ಲಿ 263 ಸ್ಪೀಕರ್ ಗಳು, 54 ಅಂಪ್ಲಿಪೈಯರ್ ಗಳಿವೆ. ಇವುಗಳ ಮೂಲಕ ಭಕ್ತಾದಿಗಳಿಗೆ ನೇರ ಮಾಹಿತಿ, ಮುದ್ರಿತ ಧ್ವನಿ ಸಂದೇಶ, ತುರ್ತು ಮಾಹಿತಿ ಇತ್ಯಾದಿಗಳನ್ನು ಕಾಲಕಾಲಕ್ಕೆ ಭಿತ್ತರಿಸುವ ವ್ಯವಸ್ಥೆ ಇದೆ. ಬೆಂಕಿ ಅವಘಡ ಸಂದರ್ಭ ಎದುರಾದರೆ ಅದನ್ನು ನಿಯಂತ್ರಿಸುವ ಮತ್ತು ಭಕ್ತಾದಿಗಳನ್ನು ಸುರಕ್ಷಿತವಾಗಿ ಹೊರಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಈ ಸಂಕೀರ್ಣ ಒಳಗೊಂಡಿದೆ.
ಪರಿಸರ ಸ್ನೇಹಿ ವ್ಯವಸ್ಥೆ
ಹೊಸ ಕ್ಯೂ ಕಾಂಪ್ಲೆಕ್ಸ್ ನಲ್ಲಿ 650 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದಿಸುವ ಸೋಲಾರ್ ಪ್ಯಾನೆಲ್-ಗಳನ್ನು ಅಳವಡಿಲಾಗಿದೆ. ಜೊತೆಗೆ ವಿದ್ಯುತ್ ಮತ್ತು ನೀರು ಪೋಲಾಗುವುದನ್ನು ತಪ್ಪಿಸಲು ಮಾನಿಟರಿಂಗ್ ತಂತ್ರಜ್ಞಾನ ಒಳಗೊಂಡ ಬಿಲ್ಡಿಂಗ್ ಮ್ಯಾನೇಜ್-ಮೆಂಟ್ ಸಿಸ್ಟಂ ಬಳಸಲಾಗುತ್ತಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ