ನಿಯಮಾನುಸಾರ ಹೋಗುವ ದಾರಿಯೇ ವ್ರತ. ಏಕಾದಶಿಯೂ ಒಂದು ವಿಶೇಷ ವ್ರತ. ಏಕಾದಶ ಇಂದ್ರಿಯಗಳಿಗೂ ಉತ್ತೇಜನ ನೀಡಲು ಏಕಾದಶಿ ಉಪವಾಸ ಮಾಡಬೇಕು. ಅವುಗಳನ್ನು ಉಪವಾಸ ವ್ರತದಿಂದ ಶುದ್ದಿಕರಿಸಿ ಹೆಚ್ಚು ಬಲ ಹೊಂದುವಂತೆ ಮಾಡಬೇಕು.
ಏಕಾದಶಿ ಒಂದು ಪವಿತ್ರ ದಿನ, ಏಕಾದಶಿಯಂದು ಮಾಡುವ ಉಪವಾಸದಿಂದ ಪಾಪಗಳೆಲ್ಲ ಸುಟ್ಟುಹೋಗುತ್ತವೆ. ನಮ್ಮ ಮುಂದಿನ ಜನ್ಮ ಸಾರ್ಥಕವಾಗಿರಬೇಕು ಎಂದರೆ ಈ ಜನ್ಮದ, ಹಿಂದಿನ ಜನ್ಮದ ಪಾಪಗಳನ್ನೂ ಕಳೆದುಕೊಳ್ಳಬೇಕು.
ದೈವಾಂಶವಿರುವ ವಿಶೇಷ ದಿವಸವೇ ವೈಕುಂಠ ಏಕಾದಶಿ. ಮುಕ್ಕೋಟಿ ದೇವಾನುದೇವತೆಗಳಿಗೆ ಶ್ರೀಹರೀ ಸಾಕ್ಷಾತ್ಕಾರವಾದ ದಿನ, ಈ ವೈಕುಂಠ ಏಕಾದಶಿ.
ಶ್ರೀಮನ್ನಾರಾಯಣನು ದಕ್ಷಿಣಾಯನ ಪರ್ವಕಾಲದಲ್ಲಿ ಯೋಗನಿದ್ರೆಯಲ್ಲಿರುತ್ತಾನೆ. ಉತ್ತರಾಯಣ ಪರ್ವಕಾಲದಲ್ಲಿ ಏಳುತ್ತಾನೆ. ಏಳು ಬಾಗಿಲುಗಳನ್ನು ದಾಟಿ ಸ್ವಾಮಿಯ ದರ್ಶನ ಮಾಡಿ ತೊಟ್ಟಿಲು ಸ್ಪರ್ಶಿಸಿ, ಉತ್ತರದ್ವಾರದಿಂದ ಹೊರಬಂದರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆ ಇದೆ.
"ಉಪವಾಸ" ಎಂದರೇ ಹತ್ತಿರ ಇರು ಎಂದರ್ಥ. ಇಂದು "ದೇವರ ಹತ್ತಿರ ಇರ್ಲಿಕ್ಕೆ ಪ್ರಯತ್ನಿಸುವುದು" ಅಂದರೆ ಸದಾ ದೇವರ ನಾಮ ಸ್ಮರಣೆ ಮಾಡಿ ದೇವರ ಸಾನಿಧ್ಯ ಪಡೆಯುವ ಪ್ರಯತ್ನ ಮಾಡುವುದು.
"ಓಂ ನಮೋ ನಾರಾಯಣಾಯ" ಎಂಬ ಮಂತ್ರೋಚ್ಚಾರಣೆಯಿಂದ ನಮ್ಮ ದೇಹದ ನರ ನಾಡಿಗಳು ಶುದ್ಧವಾಗುತ್ತವೆ ಎಂದು ಆಯುರ್ವೇದ ಹೇಳುತ್ತದೆ. ನಮ್ಮ ದೇಹದ ಜೀರ್ಣಾಂಗಗಳಿಗೆ ಒಂದು ದಿನ ವಿಶ್ರಾಮ ಕೊಡುವುದರಿoದ ಅವು ಮತ್ತೆ ಸಚೇತನಗೋಂಡು ನಮ್ಮ ದೇಹ ಸಧೃಡವಾಗುತ್ತದೆ. ಆ ನಾರಾಯಣ ನಾಮಸ್ಮರಣೆಗಾಗಿ ಮುಡಿಪಾಗಿಡುವುದೇ ಈ ದಿನದ ವಿಶೇಷ.
ದ್ವಾದಶಿಯಂದು magnetic ಶಕ್ತಿ ಹೋಂದಿದ ಸಾಲಿಗ್ರಾಮ ಮತ್ತು ತುಳಸಿಯ ತೀರ್ಥ ಸೇವನೆಯಿಂದ ದೇಹಕ್ಕೆ ಚೈತನ್ಯ ಸಿಗುತ್ತದೆ.
ವಿಶೇಷತೆ:
ವೈಕುಂಠ ಏಕಾದಶಿ ದಿನದಂದು ವೈಕುಂಠದ ಬಾಗಿಲು ತೆಗೆದಿರುತ್ತದೆ ಎಂಬ ನಂಬಿಕೆ ಇದೆ. ಮುರಾಸುರನನ್ನು ವಿಷ್ಣು ಏಕಾದಶಿ ಎಂಬ ಆಯುಧದಿಂದ ಕೊಂದ. ವೈಖಾಸನನ ಆತ್ಮಕ್ಕೆ ಮುಕ್ತಿ ದೊರೆತ ದಿನ.
ದೂರ್ವಾಸರು ಅಂಬರೀಷ ಮಹಾ ರಾಜನಿಗೆ ಅತಿಥಿ ಸತ್ಕಾರ ಮಾಡದೇ ಪಾರಣೆ ಮಾಡಿದ್ದರಿಂದ 10 ಜನ್ಮವೆತ್ತುವಂತೆ ಶಾಪ ಕೊಟ್ಟರು. ವಿಷ್ಣುವಿನ ಅನನ್ಯ ಭಕ್ತನಾದ ಅಂಬರೀಷನ ಶಾಪವನ್ನು ತಾನೇ ಅನುಭವಿಸಲು ಸಿದ್ಧನಾದ ಶ್ರೀಹರಿ ಅವನಿಗೆ ಅನುಗ್ರಹಿಸಿದ. ವೈಕುಂಠ ಏಕಾದಶಿಯಂದು ವಿಷ್ಣುವಿನ ಅವತಾರದ ಯಾವುದಾದರೂ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯಬೇಕು.
ವೈಕುಂಠ ಏಕಾದಶಿಯ ಕಥೆ.
ಒಂದೊಮ್ಮೆ ಕೃಷ್ಣನ ತಂದೆ ನಂದಗೋಪನು ಏಕಾದಶಿ ವೃತ ಮಾಡಿ ಪಾರಣೆ ಅಲ್ಪಕಾಲ ಇದ್ದದ್ದರಿಂದ ಬೆಳಗಿನ ಜಾವಕ್ಕೂ ಸ್ವಲ್ಪ ಮುಂಚೆ ಯಮುನಾ ನದಿಯಲ್ಲಿ ಸ್ನಾನಕ್ಕಿಳಿದ. ಅದು ರಾಕ್ಷಸರ ಸಂಚಾರ ಕಾಲವಾದದ್ದರಿಂದ ರಾಕ್ಷಸನೊಬ್ಬ ಅವನನ್ನು ವರುಣನ ಬಳಿಗೆ ಎಳೆದೊಯ್ದನು. ನಂದನು ಎಷ್ಟು ಹೊತ್ತಾದರೂ ಬಾರದ್ದರಿಂದ, ಗೋಪಾಲಕರು ಶ್ರೀ ಕೃಷ್ಣನಿಗೆ ವಿಷಯ ತಿಳಿಸಿದರು.
ಶ್ರೀಕೃಷ್ಣನು ತಂದೆಯನ್ನು ಕರೆತರಲು ವರುಣನ ಲೋಕಕ್ಕೆ ಬಂದನು. ದೇವಾಧಿದೇವನಿಗೆ ನಮಸ್ಕರಿಸಿದ ವರುಣದೇವ ಸೇವಕನ ತಪ್ಪನ್ನು ಮನ್ನಿಸುವಂತೆ ಕೇಳಿದ. ಶ್ರೀ ಕೃಷ್ಣ ವರುಣನನ್ನು ಆಶೀರ್ವಾದಿಸಿ ತಂದೆಯನ್ನು ಮರಳಿ ಗೋಕುಲಕ್ಕೆ ಕರೆತಂದ.
ನಂದಗೋಪನಿಗೆ ಅತ್ಯಾನಂದವಾಗಿ ವರುಣನ ಲೋಕದ ವೈಭವ ಮತ್ತು ಅಲ್ಲಿ ಶ್ರೀ ಕೃಷ್ಣನಿಗೆ ಸಿಕ್ಕ ಭವ್ಯ ಸ್ವಾಗತವನ್ನು ವರ್ಣಿಸಿದ. ಇದನ್ನು ಕೇಳಿದ ಗೋಪಾಲಕರಿಗೆ ಹೆಮ್ಮೆಯಾಯಿತು. ಶ್ರೀ ಕೃಷ್ಣ ಸಾಕ್ಷಾತ್ ಪರಮೇಶ್ವರ ಆದರೆ ಅವನ ನಿಜರೂಪ ಅರಿಯಲಾರೆವು ಎಂದು ಪರಿತಪಿಸಿದರು.
ಅವರ ಮನದಿಂಗಿತ ಅರಿತ ಶ್ರೀ ಕೃಷ್ಣ ಅವರಿಗೆ ಬ್ರಹ್ಮ ಕುಂಡವೆಂಬ ಮಡುವಿನಲ್ಲಿ ಮುಳುಗಿ ಬರುವಂತೆ ತಿಳಿಸಿದ. ಕೃಷ್ಣ ಹೇಳಿದಂತೆ ಮಾಡಿದ ಅವರಿಗೆ ವೈಕುಂಠ ಲೋಕದ ದರ್ಶನವಾಯಿತು. ಅವರ ಮನಸು ಆತ್ಮತೃಪ್ತಿಯನ್ನು ಹೊಂದಿತು. ಶ್ರೀ ಕೃಷ್ಣನೇ ಪರದೈವವೆಂದು ಅವರಿಗೆ ಅರಿವಾಯಿತು. ಅದಕ್ಕಾಗಿ ಈ ದಿನವನ್ನು ವೈಕುಂಠ ಏಕಾದಶಿ ದಿನ ಎಂದು ಕರೆಯುತ್ತಾರೆ.
- ರೇಖಾ ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ