ನಾಗಾ ಸಾಧುಗಳು ಅಘೋರಿಗಳು ಯಾರೊಬ್ಬರ ವ್ಯಂಗ್ಯದ ಸರಕುಗಳು ಮಾತ್ರ ಅಲ್ಲವೇ ಅಲ್ಲ. ಅವರಿಂದ, ಅವರ ಜೀವನ ಶೈಲಿಯಿಂದ, ಅವರ ರೀತಿ ರಿವಾಜುಗಳಿಂದ ನಮಗೇನೂ ನಷ್ಟವೂ ಇಲ್ಲ. ಅವರಿಂದ ಸಮಾಜಕ್ಕೆ, ಧರ್ಮಕ್ಕೆ ಲಾಭ ಇದೆಯೋ ಇಲ್ಲವೋ ಅದೂ ಕೂಡಾ ನಮಗೆ ಬೇಡದೇ ಇರುವ ವಿಷಯ. ಅವರ ಸಿದ್ಧಿ, ಸಾಧನೆ, ಜೀವನಶೈಲಿ ನಮ್ಮಂತವರ ಬೊಗಸೆಗೆ ದಕ್ಕುವ ಗಂಗಾಜಲವೂ ಅಲ್ಲ.
ನಮಗೆ ಹೇಗೆ ನಾವು ಅಂದುಕೊಂಡ ಹಾಗೇ ಬದುಕುವ ಹಕ್ಕು ಸ್ವಾತಂತ್ರ್ಯ ಇದೆಯೋ ಅವರಿಗೂ ಅವರ ಇಷ್ಟದ ಹಾಗೇ ಬದುಕುವ ಹಕ್ಕು ಖಂಡಿತಾ ಇದೆ. ಅವರು ಕೂಡಾ ನಮ್ಮ ಹಾಗೆಯೇ ಜೀವ ಜೀವನ ಎರಡೂ ಇರುವ ಮನುಷ್ಯರೇ! ನಗ್ನತೆ ಇರುವುದು ನಾವು ನೋಡುವ ಕಣ್ಣುಗಳಲ್ಲಿ, ನೋಟಗಳಲ್ಲಿ ; ಅವರ ಜೀವನ ಶೈಲಿಯಲ್ಲಿ ಅಲ್ಲ. ಮನಸ್ಸು, ಅಂತರಂಗ ಶುದ್ಧ ಇರುವ ಮನುಜನಿಗೆ ಯಾವುದರಲ್ಲೂ ಅಸಹ್ಯ ಕಾಣುವುದಿಲ್ಲ.
ಟೂ ಪೀಸ್ ನಲ್ಲಿ ಇರುವ ರೀಲ್ಸ್ಗಳನ್ನು, ಐಟಂ ಹಾಡುಗಳನ್ನು ಎಂಜಾಯ್ ಮಾಡುವ ಜನರ ವ್ಯಂಗ್ಯ, ಕುಹಕಗಳಿಗೆ ಅವರು ತಲೆಕೆಡಿಸಿಕೊಂಡು ಅವರ ಸಿದ್ಧಿ, ಸಾಧನೆಗಳನ್ನು ಅವರೆಂದೂ ಕೈ ಬಿಡುವುದೂ ಇಲ್ಲ. ಇಲ್ಲಿ ಹುಟ್ಟುವಾಗಲೇ ವಸ್ತ್ರ ತೊಟ್ಟುಕೊಂಡು, ಒಡವೆ ಧರಿಸಿಕೊಂಡು ಅವತಾರ ಎತ್ತಿರುವ ಅವತಾರ ಪುರುಷ/ ಪುರುಷಿಯರು ಯಾರೂ ಇಲ್ಲ. ಎಲ್ಲರೂ ಮನುಷ್ಯರೇ ಎಂಬ ಗೌರವ ಇದ್ದರೆ ಅಷ್ಟೇ ಸಾಕು.
ಬಟ್ಟೆ ತೊಟ್ಟುಕೊಂಡ ಕೆಲವು ಸುದ್ಧಿ ಮಾಧ್ಯಮದವರು, ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ಸ್ ಹಾಕುವವರು ಮರ್ಯಾದೆ ಮರೆತು ವರ್ತಿಸುತ್ತಿರುವುದು ಬೆತ್ತಲು ಮಾಡುತ್ತಾ ಇರುವುದು ನಿಮ್ಮದೇ ಮನಸ್ಸಿನ ನಗ್ನತೆಯನ್ನು. ಬಟ್ಟೆ ತೊಟ್ಟ ನಿಮ್ಮ ನಗ್ನತೆ ಅಸಹ್ಯ ಹುಟ್ಟಿಸುತ್ತಿದೆ, ಅವರ ಸಿದ್ಧಿ, ಸಾಧನೆ ಅವರ ದೇಹದ ನಗ್ನತೆ ಮೀರಿ ನಮಗೆ ಕೈಗೆ ಎಟುಕದ, ತೂಕಕ್ಕೆ ನಿಲುಕದ ಇನ್ನೊಂದು ವಿದ್ಯೆ ಇದೆ ಎಂದು ಜಗತ್ತಿಗೆ ಸಾರಿ ಸಾರಿ ಹೇಳುತ್ತಿದೆ. ಅಷ್ಟು ಮಾತ್ರ ಸತ್ಯ!!
ಹೌದು! ಅವರಿಂದ ಸಮಾಜಕ್ಕೆ, ವಿಜ್ಞಾನಕ್ಕೆ, ಗಣಿತಕ್ಕೆ, ಕನ್ನಡಕ್ಕೆ, ಹಿಂದಿಗೆ, ಇಂಗ್ಲೀಷ್ ಗೆ, ಸ್ಪಾನಿಶ್ ಗೆ ಲಾಭ, ಉಪಕಾರ ಎಷ್ಟಿದೆ ಎಂದು ಲೆಕ್ಕ ಹಾಕುವ ಜನರೇ, ನಿಮ್ಮಿಂದ ಜಸ್ಟ್ ನಿಮ್ಮ ಪಕ್ಕದ ಮನೆಗೆ ಲಾಭ, ಉಪಕಾರ ಎಷ್ಟಿದೆ ಎಂದು ಮೊದಲು ಲೆಕ್ಕ ಹಾಕಿ ಸಾಕು, ಎಲ್ಲಾ ಲೆಕ್ಕಗಳಿಗೂ ಉತ್ತರ ಸಿಗುತ್ತದೆ.
-ಗೀತಾ ರಾಘವೇಂದ್ರ,
ಅದಿತ್ರಿ ಪಬ್ಲಿಕೇಷನ್ಸ್,
ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ