ಕೋಲಾರ: ಯುವ ಸಬಲೀಕರಣ ಮತ್ತು ಡಿಜಿಟಲ್ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಸೊಲ್ಯೂಷನ್ಸ್ (ಟಿಇಎಸ್‍ಎಸ್) ತನ್ನ ಸಿಎಸ್‍ಆರ್ ಉಪಕ್ರಮದಡಿ ಆರಂಭಿಸಿರುವ ಸಂಚಾರಿ ವಿಜ್ಞಾನ ಪ್ರಯೋಗಾಲಯ ಕೋಲಾರ ಹಾಗೂ ಮಾಲೂರು ತಾಲೂಕುಗಳ 26 ಶಾಲೆಗಳ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವಾಗಲಿದೆ.
ಸಂಚಾರಿ ವಿಜ್ಞಾನ ಪ್ರಯೋಗಾಲಯವು, ಅವಕಾಶ ವಂಚಿತ ಮಕ್ಕಳಲ್ಲಿ ಸೃಜನಶೀಲತೆ ಮತ್ತು ವಿಜ್ಞಾನದ ಬಗ್ಗೆ ಕುತೂಹಲ ಪ್ರೇರೇಪಿಸುವ ಗುರಿ ಹೊಂದಿದೆ. ಸುಸ್ಥಿರ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ ಶಿಕ್ಷಣದ (ಎಸ್‍ಟಿಇಎಂ) ಕಾರ್ಯಕ್ರಮದ ಭಾಗವಾಗಿರುವ ಈ ಸಂಚಾರಿ ವಾಹನವು ಭೌತವಿಜ್ಞಾನ, ರಸಾಯನ ವಿಜ್ಞಾನ ಮತ್ತು ಜೀವವಿಜ್ಞಾನ ವಿಷಯಗಳಲ್ಲಿ 100 ಪ್ರಾಯೋಗಿಕ ಮಾದರಿಗಳನ್ನು ಒಳಗೊಂಡಿದೆ. 5 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪರಸ್ಪರ ಸಂವಾದಾತ್ಮಕ ಕಲಿಕೆಯ ಅನುಭವಗಳನ್ನು ಒದಗಿಸುತ್ತಿದೆ.
ಅಗಸ್ತ್ಯ ಫೌಂಡೇಷನ್ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿರುವ ಈ ಕಾರ್ಯಕ್ರಮವು ದೀರ್ಘಾವಧಿಯ ಶೈಕ್ಷಣಿಕ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ಶಿಕ್ಷಕರ ತರಬೇತಿಯನ್ನು ಸಹ ಒಳಗೊಂಡಿದೆ. ವೇಮಗಲ್‍ನ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಕೋಲಾರದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಉಮಾದೇವಿ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಲ್ಲಿಕಾರ್ಜುನಯ್ಯ, ಕೋಲಾರ ಮತ್ತು ವೇಮಗಲ್‍ನ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಸರಿತಾ, ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಸೊಲುಷನ್ಸ್ (ಟಿಇಎಸ್‍ಎಸ್) ಪ್ರತಿನಿಧಿಗಳು ಭಾಗವಹಿಸಿದ್ದರು. ವಿನೂತನ ಯೋಜನೆಗಳನ್ನು ಪ್ರದರ್ಶಿಸುವ ವಿದ್ಯಾರ್ಥಿ ವಿಜ್ಞಾನ ಮೇಳವನ್ನು ಆಯೋಜಿಸಲಾಗಿತ್ತು.
ಡಿಜಿಟಲ್ ಸಾಕ್ಷರತೆಯ ಮೇಲೆ ಗಮನ ಕೇಂದ್ರೀಕರಿಸಿದ ಇನ್ನೊಂದು ಉಪಕ್ರಮವನ್ನು ಶಿವರಾಪಟ್ಟಣದ ಗ್ರಾಮೀಣ ಗ್ರಂಥಾಲಯದಲ್ಲಿ ರೀಚಿಂಗ್ ಹ್ಯಾಂಡ್ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದಡಿ ಮಾಲೂರು ತಾಲ್ಲೂಕಿನ 29 ಗ್ರಾಮೀಣ ಗ್ರಂಥಪಾಲಕರಿಗೆ ಡಿಜಿಟಲ್ ಕೌಶಲದಲ್ಲಿ ತರಬೇತಿ ನೀಡಲಾಗುವುದು. ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಲು ಮತ್ತು 5,000 ಕ್ಕೂ ಹೆಚ್ಚು ಮಕ್ಕಳಿಗೆ ಸೇವೆ ಸಲ್ಲಿಸಲು ನೆರವಾಗಲಿದೆ. ಗ್ರಂಥಪಾಲಕರ ತಾಂತ್ರಿಕ ಕೌಶಲಗಳನ್ನು ಹೆಚ್ಚಿಸುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಪರಿವರ್ತನೆ ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮೇಶ್ ಸೋಮಪ್ಪ ನಾಯಕ, ಶಿವರಾಪಟ್ಟಣ ಪಂಚಾಯತ್ ಅಧ್ಯಕ್ಷ ಮುನೇಗೌಡ ಎಂ. ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕೃಷ್ಣಪ್ಪ ಅವರು ಸೇರಿದಂತೆ ಸ್ಥಳೀಯ ಮುಖಂಡರ ಭಾಗಿಯಾಗಿದ್ದರು. ತರಬೇತಿ ಕಾರ್ಯಕ್ರಮದ ಉದ್ದೇಶಕ್ಕೆ ರೀಚಿಂಗ್ ಹ್ಯಾಂಡ್ ಮೂಲಕ ಡಿಜಿಟಲ್ ಸಾಕ್ಷರತೆಯ ಮೌಲ್ಯಮಾಪನ ಮಾಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ