ಸೋಲು, ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದಾಗ ಯಶಸ್ಸು: ಕೃಷ್ಣ ಜೆ. ಪಾಲೆಮಾರ್

Upayuktha
0


ಮಂಗಳೂರು: ನನ್ನ ಉದ್ದಿಮೆಯಲ್ಲಿ ಮೂರು ಬಾರಿ ಸಂಪೂರ್ಣವಾಗಿ ಸೋತಿದ್ದೇನೆ. ಆದರೆ ಊರು ಬಿಟ್ಟಿಲ್ಲ, ಆದರೆ ಮುಂದೆ ಇದರಿಂದ ಹೊರಬರಲಿದ್ದೇನೆ ಎಂಬ ಆತ್ಮವಿಶ್ವಾಸದೊಂದಿಗೆ ಸವಾಲನ್ನು ಸ್ವೀಕರಿಸಿ ಮುಂದೆ ಬಂದಿದ್ದೇನೆ. ಹಾಗಾಗಿ ಜೀವನದಲ್ಲಿ ಎದುರಾಗುವ ಸೋಲು ಹಾಗೂ ಕಷ್ಟಗಳನ್ನು ಸ್ವೀಕರಿಸುವ ಎದೆಗಾರಿಕೆ ನಮ್ಮಲ್ಲಿ ಇದ್ದಾಗ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ ಎಂದು  ಮಾಜಿ ಸಚಿವ, ಲ್ಯಾಂಡ್‌ಲಿಂಕ್ಸ್ ಸಂಸ್ಥೆಯ ಸಿಇಒ  ಕೃಷ್ಣ ಜೆ. ಪಾಲೆಮಾರ್‌ ಹೇಳಿದರು.


ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ನಗರದ ಪತ್ರಿಕಾ ಭವನದಲ್ಲಿ ಗೌರವ ಅತಿಥಿ ಸನ್ಮಾನ ಸ್ವೀಕರಿಸಿದ ಅವರು ತಮ್ಮ ಬದುಕಿನ ಸೋಲು ಗೆಲುವಿನ ಹಾದಿಯನ್ನು ತೆರೆದಿಟ್ಟರು.


ತಾವು ಬಯಸಿದ ಅಂಕಗಳು ದೊರಕಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುವುದನ್ನು ನಾವು ಕಾಣುತ್ತಿದ್ದೇವೆ. ಆದರೆ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಆತ್ಮಸ್ಥೈರ್ಯದಿಂದ ಎದುರಿಸುವ ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ನಮ್ಮ ದುಡಿಮೆಯ ಲಾಭಾಂಶದಲ್ಲಿ ಸಮಾಜಕ್ಕೂ ದೊರಕಬೇಕೆಂಬ ನಿಟ್ಟಿನಲ್ಲಿ ಈವರೆಗೂ ವ್ಯವಹಾರ ನಡೆಸಿಕೊಂಡು ಬಂದಿದ್ದೇನೆ. ಶಾಲೆಗೆ ಹೋಗುತ್ತಿದ್ದ ಸಂದರ್ಭ ಮೋರ್ಗನ್ಸ್‌ಗೇಟ್‌ನ ಗೇರುಬೀಜ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ತಾನು ಮುಂದೊಂದು ದಿನ ಆ ಇಡೀ ಆಸ್ತಿಯನ್ನೇ ಖರೀದಿಸುವಷ್ಟು ಶಕ್ತನಾಗುತ್ತೇನೆಂಬ ಕನಸು ಕಂಡಿರಲಿಲ್ಲ. ಆದರೆ ದುಡಿಮೆ ಹಾಗೂ ವ್ಯವಹಾರದಲ್ಲಿ ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಮೈಗೂಡಿಸಿಕೊಂಡ ಕಾರಣ ಅದು ಇಂದು ಸಾಧ್ಯವಾಗಿದೆ ಎಂದವರು ಹೇಳಿದರು.


ಸಣ್ಣ ಪುಟ್ಟ ವ್ಯವಹಾರ ನಡೆಸುತ್ತಿದ್ದ ಸಂದರ್ಭ ರಿಯಲ್ ಎಸ್ಟೇಟ್ ಆರಂಭಿಸಿದಾಗ ಸಿ.ಎಲ್. ಡಿಸೋಜಾ ಎಂಬವರು ಗಾಡ್‌ಫಾದರ್ ಆಗಿ ಬೆಂಬಲ ನೀಡಿದ ಕಾರಣ ವ್ಯವಹಾರದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ನೆನಪಿಸಿಕೊಂಡ ಕೃಷ್ಣ ಪಾಲೆಮಾರ್, ಜಿಲ್ಲಾ ಉಸ್ತುವಾರಿ, ಬಂದರು ಇಲಾಖೆ, ಪರಿಸರ ಇಲಾಖೆಯ ಸಚಿವನಾಗಿಯೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಸಚಿವನಾಗಿದ್ದ ಅವಧಿಯಲ್ಲಿ ಮೆರಿಟೈಮ್ ಬೋರ್ಡ್ ಸ್ಥಾಪನೆ ಮಾಡಿದ ತೃಪ್ತಿ, 40 ಮೈಕ್ರೋನ್‌ಗಿಂತ ಕಡಿಮೆ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಿದ ಬಗ್ಗೆ ಹೆಮ್ಮೆ ಇದೆ ಎಂದರು.


ನಮ್ಮ ಕುಡ್ಲ ವಾಹಿನಿ ಸಿಇಒ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕೆ.ಆನಂದ ಶೆಟ್ಟಿ, ಅನ್ನು ಮಂಗಳೂರು, ಮಹಮ್ಮದ್ ಆರಿಫ್ ಪಡುಬಿದ್ರಿ, ವಿಲ್ಫ್ರೆಡ್ ಡಿಸೋಜಾ ಉಪಸ್ಥಿತರಿದ್ದರು. ಅತ್ಮಭೂಷಣ್ ಭಟ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top