ದಾಸವರೇಣ್ಯ ಶ್ರೀ ಪುರಂದರದಾಸರು

Upayuktha
0



ರ್ನಾಟಕ ದಾಸರ ತವರುಮನೆ ಎಂತಲೇ ಹೇಳಬಹುದು. ಅನೇಕ ಪ್ರಸಿದ್ದ ದಾಸರು ಇಲ್ಲಿ ಜೀವಿಸಿ ಜನರಿಗೆ ಸುಸಂಪನ್ನವಾದ ಉತ್ತಮ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.


ತಮ್ಮ ದೇವರ ನಾಮಸ್ಮರಣೆಗಳಲ್ಲಿ ಅಮೃತದಂತ ನುಡಿಗಳನ್ನು ತುಂಬಿ ಜೀವನದುದ್ದಕ್ಕೂ ದೇವತಾರಾಧನೆ ಮಾಡಿ ಪ್ರಸಿದ್ದರಾಗಿ ಮೋಕ್ಷ ಪಡೆದಿದ್ದಾರೆ. ಅಂಥ ಅನೇಕ ದಾಸರಲ್ಲಿ ಪುರಂದರ ದಾಸರು ಅಗ್ರಗಣ್ಯರು. ಇಂದು ಅವನ ಪುಣ್ಯಸ್ಮರಣೆ ದಿನ.


ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಎಂಬಲ್ಲಿ  1484 ರಲ್ಲಿ ಜನಿಸಿದರು. ಹಿಂದೆಲ್ಲ ಅವರ ಹುಟ್ಟೂರು ಪುರಂದರ ಗಡ ಎಂದು ತಿಳಿದಿದ್ದರು. ಮೊನ್ನೆ 2018 ರಲ್ಲಿ ಅರಳು ಮಲ್ಲಿಗೆ ಪಾರ್ಥಸಾರಥಿ, ಮತ್ತು ತಂಡ ಸೇರಿ ಸಂಶೋಧನೆ ನಡೆಸಿ ಪುರಂದರಗಡದಲ್ಲಿ ಪುರಂದರದಾಸರ ಬಗ್ಗೆ ಯಾವುದೇ ಆಧಾರ ಸಿಗಲಿಲ್ಲ. ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಅರಗದಲ್ಲಿ ಸುಳಿವುಗಳು ಸಿಕ್ಕಿದ್ದರಿಂದ ಆರಗ ಎಂದು ತಿಳಿದುಬಂದಿದೆ.


ತಂದೆ ವರದಪ್ಪ ನಾಯಕ, ತಾಯಿ ರುಕ್ಮಿಣಿದೇವಿ. ಇವರ ಮೊದಲ ಹೆಸರು ಶ್ರೀನಿವಾಸ ನಾಯಕ. ತಂದೆ ಚಿನ್ನದ ಲೆವಾದೇವಿ ವ್ಯಾಪಾರ ಮಾಡುತ್ತಿದ್ದರು. ಅದನ್ನೇ ಮುಂದುವರಿಸಿದರು ಶ್ರೀನಿವಾಸ ನಾಯಕರು. ಒಮ್ಮೆ ಸಾಕ್ಷಾತ್ ದೇವರೇ ಬಡ ಬ್ರಾಹ್ಮಣನ ವೇಷದಲ್ಲಿ ಬಂದು ಮಗನ ಮುಂಜಿವೆಗೆ ಹಣ ಕೊಡುವಂತೆ ಕೇಳಿದರು. 6 ತಿಂಗಳವರೆಗೂ ಅವರನ್ನು ಅಲೆದಾಡಿಸಿ ಒಂದು ಕಿಲುಬು ಕಾಸು ದಾನ ಮಾಡಿದರು. ಅಷ್ಟು ಹಣ ಸಾಕಾಗದು ಎಂದು ನಾಯಕರ ಪತ್ನಿ ಸರಸ್ವತಿ ಬಾಯಿಗೆ ದಾನ ಮಾಡುವಂತೆ ಬಡ ಬ್ರಾಹ್ಮಣ ಕೇಳಿದಾಗ ತನ್ನ ಮೂಗಿನಲ್ಲಿದ್ದ ಮೂಗುತಿಯನ್ನೇ ದಾನ ಮಾಡಿದಳು. ಅದನ್ನು ಒಯ್ದು ಬಡಬ್ರಾಹ್ಮಣ ಶ್ರೀನಿವಾಸ ನಾಯಕನ ಅಂಗಡಿಯಲ್ಲಿ ಮಾರಲು ಬಂದಾಗ, ಅದು ತನ್ನ ಪತ್ನಿಯ ಮೂಗುತಿ ಎಂದು ಗೊತ್ತಾಯಿತು. ಮನೆಗೆ ಬಂದು ಹೆಂಡತಿಯನ್ನು ಕೇಳಲು, ಹೆದರಿ ಹೆಂಡತಿ ವಿಷ ಕುಡಿಯಲು ಹೋಗುತ್ತಾಳೆ. ಆದರೆ ದೇವರ ಕೃಪೆಯಿಂದ ಮೂಗುತಿ ವಿಷದ ಬಟ್ಟಲಲ್ಲಿ ಬೀಳುತ್ತದೆ. ಅದನ್ನು ನೋಡಿದ ಶ್ರೀನಿವಾಸ ನಾಯಕರಿಗೆ ಅತ್ಯಾಶ್ಚರ್ಯವುಂಟಾಗಿ ಅಂಗಡಿಗೆ ಹೋಗಿ ನೋಡಲು ಮೂಗುತಿ ಮಾಯವಾಗಿರುತ್ತದೆ. ಬಡ ಬ್ರಾಹ್ಮಣನೂ ಇರುವುದಿಲ್ಲ. ಇದನ್ನು ನೋಡಿದ ಶ್ರೀನಿವಾಸ ನಾಯಕರಿಗೆ ದೇವರೇ ಬ್ರಾಹ್ಮಣ ವೇಷದಿಂದ ತನ್ನ ಕಣ್ಣು ತೆರೆಸಲು ಬಂದಿದ್ದಾನೆ ಎಂದು ಅರಿವಾಯಿತು.


ತಮ್ಮೆಲ್ಲ ಐಶ್ವರ್ಯವನ್ನೂ ದಾನ ಮಾಡಿ ತಾಳ ತಂಬೂರಿ ಹಿಡಿದು ದಾಸತ್ವ ಸ್ವೀಕರಿಸಿ, ದೇವರ ಗುಣಗಾನ ಮಾಡುತ್ತ ಗುರುಗಳಿಗಾಗಿ ಹುಡುಕುತ್ತ ಬಂದಾಗ ಶ್ರೀ ವ್ಯಾಸರಾಜರ ಭೇಟಿಯಾಗಿ, ಆಶೀರ್ವಾದ ಪಡೆದು ಅವರಿಂದ ಪುರಂದರ ವಿಠಲ ಎಂಬ ಅನುಗ್ರಹ ಪಡೆದು, ಅನೇಕ ದೇವರ ಹಾಡುಗಳನ್ನು ಬರೆಯುತ್ತಾರೆ. ಇವರು ದಾಸತ್ವ ಸ್ವೀಕರಿಸಿ ಊರೂರು ಅಲೆಯುತ್ತ ಜನರಿಗೆ ದೇವರ ಮಹಿಮೆ ಲೀಲೆಗಳ ಬಗ್ಗೆ ಹಾಡುಗಳ ಮುಖೇನ ತಿಳಿಸುತ್ತ ಅಧ್ಯಾತ್ಮ ಜೀವನದ ಸವಿಯನ್ನು ಉಂಡರು.


ಇವರ ತಮ್ಮ ಕೃತಿಗಳಲ್ಲಿ ದೇವರ ವರ್ಣನೆ, ಜೀವನದ ಅಂಕು ಡೊಂಕುಗಳನ್ನು ಬಿಂಬಿಸಿದ್ದಾರೆ. ಮಧ್ವ ಮತದ ಶ್ರೇಷ್ಠ ಗುರುಗಳಾದ ಶ್ರೀ ಮಧ್ವಾಚಾರ್ಯರನ್ನು  ಹೊಗಳಿ ಇಂಥಾತನು ಗುರುವಾದದ್ದು ನಮಗೆoಥಾ ಪುಣ್ಯವೋ, ಅಂಜಿಕಿನ್ಯಾತಕಯ್ಯಾ  ಭಯವು ಇನ್ಯಾತಕಯ್ಯಾ,ಮಧ್ವ ಮತಾಬ್ದಿಯೊಳಗೆ ಮೀನಾಗಿರಬೇಕು, ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ, ಮಧ್ವ ಮತದ ಸೇವೆ ದೊರಕುವುದು ಜನುಮ ಸಫಲ ಕಾಣಿರೋ, ಎಂದು ಹಾಡಿದ್ದಾರೆ.


ನಿಜ ಜೀವನದ ಅಂಕು ಡೊಂಕುಗಳನ್ನು ತಮ್ಮ ಸಾಹಿತ್ಯದಲ್ಲಿ ತುಂಬಿದ್ದಾರೆ. ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ, ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವೆಯಲ್ಲೋ ಪ್ರಾಣಿ ಎಂತಲೂ, ಕದವನಿಕ್ಕಿದಳೋ ಗಯ್ಯಾಳಿ ಮೂಳಿ, ಇನ್ನೊಂದು ಸ್ತುತಿಯಲ್ಲಿ, ಮುಂದಲೆಯ ಕೊಯ್ದು, ಮುಡಿಗೆ ಹೂವು ಮುಡಿಸಿದಂತೆ, ಮೂಗನು ಕೊಯ್ದು, ಮೂಗುತಿಯನಿತ್ತಂತೆ, ಮುಂದೆ ಭಂಗಿಸಿ, ಹಿಂದೆ ಉಂಬಳಿಯ ನೀಡುವುದು.. ಹೀಗೇ ಮತ್ತೆ ಮಾನವ ಜನ್ಮದ ಸಾರ್ಥಕತೆ ತಿಳಿದಸಿದ್ದಾರೆ, ಮಾನವ ಜನ್ಮ ದೊಡ್ಡದು, ಇದ ನೀವು ಹಾನಿ ಮಾಡಬೇಡಿ ಹುಚ್ಚಪ್ಪ ಗಳಿರಾ ಎಂದು ಬುದ್ಧಿ ಹೇಳಿದ್ದಾರೆ.


ತಮ್ಮ ಗುರುಗಳು ಶ್ರೀ ವ್ಯಾಸರಾಜರಿಂದಲೇ ಹೊಗಳಿಸಿಕೊಂಡ ಮಹಾನುಭಾವರು, ದಾಸರೆಂದರೆ ಪುರಂದರ ದಾಸರಯ್ಯ, ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಂಥ, ಎಂದು. ಇವರು ಬರೆದ ಎಲ್ಲ ರೀತಿಯ ಕೃತಿಗಳನ್ನು ಬರೆದಿದ್ದಾರೆ, ಸುಳಾದಿಗಳು, ಬರೆದ ಹಾಡುಗಳ ಸಂಖ್ಯೆ 4,75,000. ಬಹುಷಃ, ಒಬ್ಬ ಮನುಷ್ಯ ಜೀವಿತಾವಧಿಯಲ್ಲಿ ಇಷ್ಟೊಂದು ಹಾಡುಗಳನ್ನು ರಚಿಸಿದ್ದು ಆಶ್ಚರ್ಯವೇ ಸರಿ. ಇವರು ನಾರದಾoಶ ಸಂಭೂತರು. ದೈವ ಪ್ರೇರಣೆಯಿಂದ ದಾಸರಾಗಿ ದೇವರನ್ನು ಸಾಕ್ಷಾತ್ಕರಿಸಿಕೊಂಡರು ವಿಠಲನ ಪ್ರೀತಿಗೆ ಪಾತ್ರರಾದರು.


-ರೇಖಾ ಮುತಾಲಿಕ್, ಬಾಗಲಕೋಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top