ಶ್ರೀ ಮಧ್ವಾಚಾರ್ಯರಿಂದ ಸ್ಥಾಪಿತವಾದ ಶ್ರೀಮದ್ ಉತ್ತರಾದಿಮಠದ ಪರಂಪರೆಯಲ್ಲಿ ಬರುವ ಹದಿನಾಲ್ಕನೆಯ ಪೀಠಾಧಿಪತಿಗಳಾದ ಶ್ರೀ ರಘೂತ್ತಮತೀರ್ಥರು ಕ್ರಿ.ಶ 1557- 1595 ರವರೆಗೆ, 39 ವರ್ಷಗಳ ಕಾಲ ಅತ್ಯಂತ ಸಮರ್ಥ ಪೀಠಾಧಿಕಾರಿಗಳಾಗಿ ಸೇವೆಯನ್ನು ಸಲ್ಲಿಸಿದರು. ದ್ವೈತ ಚಿಂತನೆಯ ಇತಿಹಾಸದಲ್ಲಿ ಪ್ರಮುಖ ದಾರ್ಶನಿಕರಲ್ಲಿ ಒಬ್ಬರೆಂದು ಪರಿಗಣಿಸಲಾದ ಅವರನ್ನು 'ಭಾವಬೋಧಾಚಾರ್ಯ' ಎಂದು ಸಂಭೋದಿಸುವ ಮೂಲಕ ಗೌರವಿಸಲಾಗಿದೆ.
ಶ್ರೀ ರಘೂತ್ತಮತೀರ್ಥರು ತಮ್ಮ ಪೂರ್ವಾಶ್ರಮದಲ್ಲಿ ಕಲಬುರಗಿ ಜಿಲ್ಲೆಯ ಮಳಖೇಡದ ಧರ್ಮನಿಷ್ಠರಾಗಿದ್ದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.ಅವರ ಜನನದ ಹಿಂದೆ ಒಂದು ವಿಶೇಷತೆಯಿದೆ, ಅದೇನೆಂದರೆ ಮಕ್ಕಳಿಲ್ಲದ ಸುಬ್ಬ ಭಟ್ಟರು (ವಿಠ್ಠಲಾಚಾರ್ಯ ಎಂದೂ ಕರೆಯಲ್ಪಡುವ) & ಗಂಗಾಬಾಯಿ ದಂಪತಿಗಳು ಗುರುಗಳಾದ ಶ್ರೀ ರಘುವರ್ಯತೀರ್ಥರ ಬಳಿ ತಮಗೆ ಸಂತಾನದ ಭಾಗ್ಯವನ್ನು ಕರುಣಿಸಬೇಕೆಂದು ಪ್ರಾರ್ಥಿಸುತ್ತಾರೆ. ಆಗ ಸ್ವಾಮಿಗಳು ದಂಪತಿಗಳಿಗೆ ಹುಟ್ಟುವ ಮೊದಲ ಮಗುವನ್ನು ತಮಗೆ ಕೊಡಬೇಕೆಂಬ ಷರತ್ತಿನೊಂದಿಗೆ ಮಕ್ಕಳಾಗುವ ವರವನ್ನು ನೀಡುತ್ತಾರೆ. ಗಂಗಾಬಾಯಿಯವರು ಶ್ರೀಮಠದ ಶ್ರೀ ರಘುವರ್ಯತೀರ್ಥರ ಪೂರ್ವಾಶ್ರಮದ ಸಹೋದರಿಯಾಗಿರುತ್ತಾರೆ.
ತರುವಾಯ ಗಂಗಾಬಾಯಿಯವರು ಗರ್ಭ ಧರಿಸಿದ ವಿಷಯ ತಿಳಿದು ರಘುವರ್ಯ ತೀರ್ಥರು ಮಗುವಿನ ಜನನದ ನಿರೀಕ್ಷೆಯಲ್ಲಿ ಗಂಗೂಬಾಯಿಯವರು ಇರುವಲ್ಲಿಗೆ ಹೋಗುತ್ತಾರೆ. ಜನಿಸುವ ಮಗುವನ್ನು ಭೂಸ್ಪರ್ಶಿಸಲು ಬಿಡದೇ ಚಿನ್ನದ ತಟ್ಟೆಯಲ್ಲಿ ಸ್ವೀಕರಿಸಲಾಗುತ್ತದೆ. ಅತ್ಯಂತ ಸುಂದರವಾದ ಮಗುವಿಗೆ ರಘುವರ್ಯತೀರ್ಥರು ರಾಮಚಂದ್ರ (ಕ್ರಿ.ಶ 1548)ಎಂದು ಹೆಸರಿಟ್ಟರು. ಸ್ವಾಮಿಗಳು ಮಗುವಿಗೆ ಪ್ರತಿದಿನ ಮಠದ ವ್ಯಾಸಕೂರ್ಮ ಸಾಲಿಗ್ರಾಮದ ಅಭಿಷೇಕದ ಹಾಲನ್ನು ಕುಡಿಸಲು ವ್ಯವಸ್ಥೆಯನ್ನು ಮಾಡುತ್ತಾರೆ. ಮುಂದೆ ರಾಮಚಂದ್ರನಿಗೆ ಎಂಟು ವರ್ಷ ತುಂಬಿದಾಗ ಉಪನಯನವನ್ನು ಮಾಡಿ ನಂತರ ತಕ್ಷಣವೇ ಸನ್ಯಾಸ ದೀಕ್ಷೆಯನ್ನು ನೀಡುತ್ತಾರೆ.ಈ ರೀತಿಯಿಂದ ಶ್ರೀಮಠದ ಹದಿಮೂರನೆಯ ಮಠಾಧೀಶರಾಗಿದ್ದ ರಘುವರ್ಯ ತೀರ್ಥರಿಂದ 1557 ರಲ್ಲಿ ಸನ್ಯಾಸ ಸ್ವೀಕರಿಸಿದ ರಘೂತ್ತಮತೀರ್ಥರು ಸಂಬಂಧದಲ್ಲಿ ಸೋದರಳಿಯರಾಗಿದ್ದರು. ಸನ್ಯಾಸಿಯಾದ ನಂತರ ಆದ್ಯ ವರದಾಚಾರ್ಯರಿಂದ ಗುರುಗಳ ಅಣತಿಯಂತೆ ವಿದ್ಯಾಭ್ಯಾಸವನ್ನು ಮಾಡಿದರು. ವಿಜಯೀಂದ್ರ ತೀರ್ಥರು ವಾದಿರಾಜ ತೀರ್ಥರ& ಸಮಕಾಲೀನರಾಗಿದ್ದರು. ಶ್ರೀ ಮಧ್ವಾಚಾರ್ಯರ ನಂತರ ಪೀಠವನೇರಿದ ಪ್ರಥಮ ಬಾಲಯತಿಗಳು ಶ್ರೀ ರಘೂತ್ತಮ ತೀರ್ಥರು.
ಶ್ರೀ ಜಯತೀರ್ಥರ ನಂತರ ಶ್ರೀ ರಘೂತ್ತಮತೀರ್ಥರು ಶ್ರೇಷ್ಠ ಟೀಕಾಕಾರರಾದರು, ಶ್ರೀ ಟೀಕಾರಾಯರ ಸ್ವಷ್ಟವಾದ ಅಭಿಪ್ರಾಯಗಳನ್ನು ಬೋಧಿಸಲೆಂದು ಅವತಾರವೆತ್ತಿದವರು. ಮಹಾ ತಪಸ್ವಿವರೇಣ್ಯರಾದ ರಘೂತ್ತಮತೀರ್ಥಅವರು ರಚಿಸಿದ ಹತ್ತು ಗ್ರಂಥಗಳಲ್ಲಿ 8 ಟೀಕೆಗಳಿವೆ,ಐದು 'ಭಾವಬೋಧ'ಎಂಬ ಹೆಸರಿನ ಗ್ರಂಥಗಳನ್ನು ರಚಿಸಿದ ಅವರನ್ನು "ಭಾವಬೋಧಾಚಾರ್ಯ" ರೆಂದು ಕರೆಯಲಾಗುತ್ತದೆ. ಶ್ರೀ ರಘೂತ್ತಮತೀರ್ಥರು ತಮ್ಮ ಭಾಷ್ಯ ಮತ್ತು ಉಪದೇಶಗಳ ಮೂಲಕ ಶ್ರೀ ಮಧ್ವಾಚಾರ್ಯರ ತತ್ವಜ್ಞಾನದ ಜ್ಯೋತಿಯನ್ನು ಮತ್ತಷ್ಟು ಪ್ರಖರವಾಗಿಸಿದರು. ಅವರ ಮಾರ್ಗದರ್ಶನದಲ್ಲಿ ವ್ಯಾಖ್ಯಾನಕಾರರ ಬಹುದೊಡ್ಡದಾದ ಗುಂಪೊಂದು ಅಭಿವೃದ್ಧಿಯನ್ನು ಪಡೆಯಿತು. ಮಾತ್ರವಲ್ಲದೇ ಅವರು ತಮ್ಮ ಪ್ರತಿಯೊಬ್ಬ ಶಿಷ್ಯರನ್ನು ಪಾಂಡಿತ್ಯ ಮತ್ತು ಶೈಕ್ಷಣಿಕ ಸರ್ವೋತ್ಕ್ರಷ್ಟತೆಯ ಭಂಡಾರವಾಗಿ ಸಿದ್ಧಪಡಿಸಿದರು. ಇತರ ವಿದ್ವಾಂಸರೊಂದಿಗೆ ಪಾಂಡಿತ್ಯಪೂರ್ಣ ಚರ್ಚೆಗಳಲ್ಲಿ ಶ್ರೀಮದಾಚಾರ್ಯರ ತತ್ವ ಶಾಸ್ತ್ರವನ್ನು ಸಮರ್ಥಿಸುವಲ್ಲಿ ಅಷ್ಟೇ ಅಲ್ಲದೆ ಇತರರನ್ನು ವಿದ್ವಾಂಸರು ಮತ್ತು ವ್ಯಾಖ್ಯಾನಕಾರರಾಗಲು ಸಿದ್ಧಪಡಿಸುವಲ್ಲಿ ಯಶಸ್ವಿಯಾದರು. ರಘುಪತಿತೀರ್ಥರು, ವೇದವ್ಯಾಸತೀರ್ಥರು, ವೇದೇಶ ತೀರ್ಥರು, ವ್ಯಾಸ ರಾಮಾಚಾರ್ಯ & ವಿದ್ಯಾಧೀಶತೀರ್ಥರ ತಂದೆಯವರಾದ ಆನಂದ ಭಟ್ಟಾರಕರು, ರೊಟ್ಟಿ ವೆಂಕಟಭಟ್ಟರೆಲ್ಲರೂ ವ್ಯಾಖ್ಯಾನಕಾರರಾಗಿ ಹೆಸರಾದರು, ವಿಶೇಷವಾಗಿ ರಘೂತ್ತಮತೀರ್ಥರಿಂದಲೇ ನೇರವಾಗಿ ತರಬೇತಿಯನ್ನು ಪಡೆದವರಾಗಿದ್ದರು. ಹೀಗೆ ಹಲವಾರು ವಿದ್ವನ್ಮಣಿಗಳನ್ನು ಮಧ್ವಶಾಸ್ತ್ರಕ್ಕೆ ಕೊಡುಗೆಗಳಾಗಿ ನೀಡಿದ ಮಹಾನುಭಾವರೇ 'ಭಾವಬೋಧಾಚಾರ್ಯ' ರೆಂದು ಪ್ರಖ್ಯಾತರಾದ ಶ್ರೀ ರಘೂತ್ತಮತೀರ್ಥರು.
ತಮ್ಮ ಜೀವಿತಾವಧಿಯಲ್ಲಿ ಹಲವಾರು ಮಹೋನ್ನತ ಕಾರ್ಯಗಳನ್ನು,ಅಸಾಧಾರಣ ಪವಾಡಗಳನ್ನ ತೋರಿದ ಶ್ರೀ ರಘೂತ್ತಮತೀರ್ಥರು ಪ್ರಸ್ತುತ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿರುವ ದಕ್ಷಿಣ ಪಿನಾಕಿನಿ ನದಿಯ ತಟದಲ್ಲಿರುವ ಮನಂಪುಂಡಿ (ತಿರ್ಕೋಯಿಲೂರ್)ನಲ್ಲಿರುವ ವೃಂದಾವನವನ್ನು ಪ್ರವೇಶಿಸಲು ಬಯಸಿದ್ದರು. ಈ ಸ್ಥಳವು ಶ್ರೀ ಗಾಲವ ಋಷಿಗಳು ತಂಗಿದ್ದ ಪವಿತ್ರ ಸ್ಥಳ ಎಂದು ಹೇಳಲಾಗುತ್ತದೆ& ಈ ಸ್ಥಳವನ್ನು ಪಂಚ" ಕೃಷ್ಣರಣ್ಯ ಕ್ಷೇತ್ರ" ಎಂದೂ ಕರೆಯುತ್ತಾರೆ. ಶ್ರೀ ರಘೂತ್ತಮ ತೀರ್ಥರು ತಮ್ಮ ಉತ್ತರಾಧಿಕಾರಿಯಾಗಿ ಶ್ರೀ ವೇದವ್ಯಾಸ ತೀರ್ಥರನ್ನು ನಿಯಮಿಸಿ ಕ್ರಿ.ಶ 1596 ರಲ್ಲಿ ಪುಷ್ಯ ಶುದ್ಧ, ವೈಕುಂಠ ಏಕಾದಶಿಯ ದಿನದಂದು ಜೀವಂತವಾಗಿ (ಸಶರೀರ) ವೃಂದಾವನವನ್ನು ಪ್ರವೇಶಿಸಿದರು.
"ಭಾವಬೋಧಕೃತಂ ಸೇವೇ ರಘೂತ್ತಮಮಹಾಗುರುಂ|
ಯಚ್ಚಿಷ್ಯಶಿಷ್ಯಶಿಷ್ಯಾದ್ಯಾಷ್ಟಪ್ಪಣ್ಣಾಚಾರ್ಯ ಸಂಜ್ಞಿತಾಃ||"
ಯಾರ ಶಿಷ್ಯ, ಪ್ರಶಿಷ್ಯರೇ ಮೊದಲಾದವರೂ ಕೂಡ ಟಿಪ್ಪಣ್ಣಾಚಾರ್ಯರೆಂದು ಪ್ರಸಿದ್ಧರಾಗಿದ್ದಾರೋ, ಅಂತಹ ಮಹಾಮಹಿಮರಾದ "ಭಾವಬೋಧ" ಟಿಪ್ಪಣಿಗಳನ್ನು ರಚಿಸಿರುವ ಶ್ರೀ ರಘೂತ್ತಮತೀರ್ಥ ರನ್ನು ಆಶ್ರಯಿಸುವೆ.
"ಪ್ರಣಮತ್ಕಾಮಧೇನೂಂ ಚ ಭಜತ್ಸುರತರೂಪಮಂ|
ಶ್ರೀ ಭಾವಬೋಧಕೃತ್ಪಾದ ಚಿಂತಾಮಣಿಮುಪಾಸ್ಮಹೇ||"
ನಮಿಸುವವರಿಗೆ ಕಾಮಧೇನುಗಳಾದ,ಭಜಿಸುವವರಿಗೆ ಕಲ್ಪವೃಕ್ಷರಂತಿರುವ,ಶ್ರೀಮದಾಚಾರ್ಯರ ಭಾವನೆಗಳನ್ನು ತಿಳಿದು ವಿವರವಾದ ಟಿಪ್ಪಣಿಗಳನ್ನು ರಚಿಸಿದ, ಚಿಂತಾಮಣಿಯಂತಿರುವ ಶ್ರೀ,ರಘೂತ್ತಮತೀರ್ಥರನ್ನು ಉಪಾಸಿಸುವೆ.
- ಶ್ರೀಮತಿ ವೀಣಾ ಬರಗಿ. ಹುಬ್ಬಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ