ಸಂಕ್ರಾಂತಿ ಬಂತು ರತ್ತೋ ರತ್ತೋ
ಮನಸಲ್ಲಿ ಮನಸು ಬಿತ್ತೋ ಬಿತ್ತೋ
ಎಳ್ಳು ಬೆಲ್ಲ ಬೀರಾಯಿತು
ಕೊಟ್ಟು ತಗೋ ಮಾತಾಯಿತು
ಮುತ್ತಾಯಿತು ಮತ್ತಾಯಿತು
ಮೈಯಲ್ಲಿ ಏರುತಿದೆ ಮನ್ಮಥನ ಅಂಗುಗಳು II
ಇದು ಜನಜನಿತವಾದ ಸಿನೆಮಾವೊಂದರ ಹಾಡು. ಒಂದು ಹಾಡು ಅಂದಾಗ ಅದರಲ್ಲಿ ಸಂಗೀತ ಸ್ವರಗಳೆಂಬ ಅಕ್ಷರಗಳಿಂದ ಪದಗಳು, ಪದಗಳಿಂದ ಸಾಲುಗಳು, ಸಾಲುಗಳಿಗೆ ರಾಗ , ತಾಳ, ನೃತ್ಯ ಹೀಗೆ ಒಂದಕ್ಕೊಂದು ಪೂರಕವಾಗಿ ಸಂಬಂಧವನ್ನು ಬೆಸೆದು ಅರ್ಥಗರ್ಭಿತವಾದ ಸಂಗೀತ ರೂಪುಗೊಳ್ಳುತ್ತದೆ. ಹೀಗೆ ರೂಪುಗೊಳ್ಳುವಲ್ಲಿ ಎಲ್ಲದರ ನಡುವಿನ ಸಂಬಂಧಗಳಲ್ಲಿ ಪ್ರೀತಿಯೇ ಆಧಾರವಾಗಿರುತ್ತದೆ. ಅಂತಹ ಪ್ರೀತಿ ಅನ್ನೋದು ಸಂಬಂಧಗಳ ಬೆಸುಗೆಯನ್ನು ಬಂಧವಾಗಿಸುವ ಸರಪಳಿಯಾಗಿರುತ್ತದೆ. ಹಾಗೆಯೇ ಸಂಕ್ರಾಂತಿ ಹಬ್ಬ. ಅಪ್ಪ-ಅಮ್ಮ, ಅಜ್ಜ- ಅಜ್ಜಿ , ಅಣ್ಣ-ತಂಗಿ, ಅಕ್ಕ - ತಮ್ಮ , ಅತ್ತೆ-ಮಾವ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಗಂಡ- ಹೆಂಡತಿ, ಮಕ್ಕಳು-ಮೊಮ್ಮಕ್ಕಳು, ನೆರೆ-ಹೊರೆ, ನಾವು - ನಮ್ಮವರು ಹೀಗೆ ಸಂಬಂಧಗಳನ್ನು ಬೆಸೆಯುವ ಪ್ರೀತಿಯನ್ನು ಹಂಚುವ ಹಬ್ಬವೇ ಸಂಕ್ರಾಂತಿ. ಸಂಬಂಧ, ಪ್ರೀತಿ ಅನ್ನೋದು ಪ್ರತಿಯೊಬ್ಬರ ಮನಸ್ಸಿನ ಭಾವನೆಗಳಿಗೆ ಸಂಬಂಧಿಸಿದ ಅಮೂರ್ತ ವಿಚಾರಗಳಾಗಿವೆ. ಅಂತೆಯೇ ಹಬ್ಬಗಳು ಅಮೂರ್ತವೆನಿಸಿದ ಪ್ರೀತಿಯ ಸಂಬಂಧಗಳನ್ನು ಮೂರ್ತಗೊಳಿಸಲು ಸಾಕಾರಗೊಂಡಿರುವ ವಿಶೇಷ ಸಂದರ್ಭಗಳಾಗಿವೆ ಮತ್ತು ಪರಿಕಲ್ಪನೆಗಳಾಗಿವೆ.
ಭಾರತ ದೇಶವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ. ಇಲ್ಲಿಯ ನೆಲೆಗಟ್ಟು ವಿಭಿನ್ನವಾಗಿದೆ. ಸಾಂಸ್ಕೃತಿಕ ಪರಂಪರೆಯಂತೂ ಬಹಳ ವಿಶೇಷವಾಗಿದೆ. ವೈವಿಧ್ಯಮಯವಾದ ಸಂಸ್ಕೃತಿ , ಆಚಾರ, ವಿಚಾರ, ಸಂಪ್ರದಾಯ , ಲೋಕಾರೂಢಿ, ನೈತಿಕ ಮೌಲ್ಯಗಳು ನಮ್ಮ ದೇಶವು ಹೊಂದಿದ್ದು , ದೇಶದ ಐಕ್ಯತೆಗೆ ಭಂಗವುಂಟಾದಾಗ "ನಾವೆಲ್ಲರೂ ಒಂದೇ" ಎಂಬ ವಿಶಿಷ್ಠವಾದ ಸಂದೇಶವನ್ನು ಸಾರುತ್ತ ಬಂದಿದ್ದು, ಬಾಳು ಮತ್ತು ಬಾಳುಗೋಡು ಎಂಬ ತತ್ವದ ಆಧಾರದ ಮೇಲೆ ಭಾರತ ನಿಂತಿದೆ. ಲೋಕೋಭಿನ್ನರುಚಿ ಎಂಬಂತೆ ಭಾರತೀಯರು ಧರಿಸುವ ಉಡಗೆ ತೊಡುಗೆಗಳು ಮತ್ತು ಊಟೋಪಚಾರಗಳು ಎಲ್ಲವೂ ವಿಶೇಷವೇ ಆಗಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ಹಬ್ಬಗಳು ಬಹಳಷ್ಟು ವಿಶಿಷ್ಠವಾಗಿವೆ.
ಮಕರ ಸಂಕ್ರಾಂತಿಯು ಹಿಂದೂ ಧಾರ್ಮಿಕ ಹಬ್ಬವಾಗಿದ್ದು , ಸೂರ್ಯನ ಮಕರ ಸಂಕ್ರಾಂತಿ ವೃತ್ತದ ಕಡೆಗೆ ಚಲಿಸುವ ಪರಿವರ್ತನೆಯನ್ನು ತೋರಿಸುತ್ತದೆ. ಸೂರ್ಯ ಸಂಚಲನಾ ಚಕ್ರಗಳ ಪ್ರಕಾರ ಆಚರಿಸಲಾಗುವ ಕೆಲವು ಸಾಂಪ್ರದಾಯಿಕ ಹಿಂದೂ ಹಬ್ಬಗಳಲ್ಲಿ ಸಂಕ್ರಾಂತಿ ಹಬ್ಬವು ಬಹು ಮುಖ್ಯವಾದುದಾಗಿದೆ. ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಸೂರ್ಯನ ಚಲನೆಯನ್ನು ಸಂಕ್ರಾಂತಿಯಾಗಿ ಆಚರಣೆ ಮಾಡಲಾಗುತ್ತದೆ. ಈ ಋತುವಿನಲ್ಲಿ ಚಳಿಗಾಲದ ಅಂತ್ಯ ಮತ್ತು ದೀರ್ಘ ಹಗಲು ದಿನಗಳ ಆರಂಭವನ್ನು ಸೂಚಿಸುತ್ತದೆ. ಮಾಘ ಮಾಸದ ಆರಂಭವೂ ಆಗಿರುತ್ತದೆ. ಮಕರ ಸಂಕ್ರಾಂತಿಯು ಸೂರ್ಯ ದೇವರಿಗೆ ಮೀಸಲಾಗಿದೆ ಎಂದು ಪುರಾಣ ಶಾಸ್ತ್ರಗಳು ಹೇಳುತ್ತವೆ. ಈ ಹಬ್ಬವು ಹಿಂದೂಗಳಿಗೆ ಉತ್ತರಾಯಣ ಕಾಲ ಎಂದು ಕರೆಯಲ್ಪಡುವ ಆರು ತಿಂಗಳ ಮಂಗಳಕರ ಅವಧಿಯ ಆರಂಭವನ್ನು ಸಂಕೇತಿಸುತ್ತದೆ. ಇದು ಅಧ್ಯಾತ್ಮಿಕ ಆಚರಣೆಗಳಿಗೆ ಮಹತ್ವದ ಅವಧಿ ಎಂದು ಪರಿಗಣಿಸಲಾಗಿದೆ. ಮಕರ ಸಂಕ್ರಾಂತಿಯು ಸುಗ್ಗಿಯ ಹಬ್ಬವಾಗಿದ್ದು, ಭಾರತ ದೇಶಾದ್ಯಂತ ವಿವಿಧ ಹೆಸರುಗಳೊಂದಿಗೆ ಆಚರಿಸಲಾಗುತ್ತದೆ. ಪ್ರತಿಯೊಂದು ರಾಜ್ಯವು ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಂತೆ ಹಬ್ಬವನ್ನು ಆಚರಿಸುತ್ತಾರೆ.
ಸಂಕ್ರಾತಿ ಹಬ್ಬದ ದಿನ, ಜನರು ಬೇಗನೆ ಎದ್ದು, ಸ್ನಾನ ಮಾಡಿ ಮತ್ತು ಸೂರ್ಯ ದೇವರಿಗೆ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಮನೆಗಳನ್ನು ಅಲಂಕಾರ ಮಾಡಲಾಗುತ್ತದೆ. ಅಲ್ಲದೇ ನಮ್ಮ ದಕ್ಷಿಣ ಭಾರತದಲ್ಲಿ ಈ ದಿನ ಎಳ್ಳು-ಬೆಲ್ಲ ಹಂಚಲಾಗುತ್ತದೆ. ಎಳ್ಳು ಹಾಗೂ ಬೆಲ್ಲವನ್ನು ಮಿಶ್ರಣ ಮಾಡಿ ಅಕ್ಕ-ಪಕ್ಕದವರಿಗೆ ಹಂಚಿ ಸಂಭ್ರಮಾಚರಣೆ ಮಾಡಲಾಗುತ್ತದೆ. ಸಂಕ್ರಾಂತಿ ಹಬ್ಬದಲ್ಲಿರುವ ವಿಶೇಷವಾದ ಮಾತೆಂದರೆ "ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ " ಅನ್ನುವಾಗ ಮಾತುಗಳ ಮೂಲಕ ಪ್ರೀತಿಯ ಸಂಬಂಧಗಳು ಬೆಸೆಯುತ್ತಾ ವೃದ್ಧಿಸುತ್ತವೆ ಮತ್ತು ಗಟ್ಟಿಗೊಳ್ಳುತ್ತವೆ. ಪ್ರೀತಿಯ ಸಂಬಂಧಗಳನ್ನು ಬೆಸೆಯುವ ಸಂಕ್ರಾಂತಿ ಹಬ್ಬ ಗೀತೆಯೊಂದರ ಪಲ್ಲವಿಯಂತೆ ಭದ್ರವಾದ ಬುನಾದಿಯನ್ನು ಹಾಕುತ್ತದೆ. ಈ ಎಳ್ಳು ಹಾಗೂ ಬೆಲ್ಲದ ಮಿಶ್ರಣವು ಜೀವನದಲ್ಲಿ ಸಂತೋಷ ಹಾಗೂ ನೋವಿನ ಸಂಕೇತವಾಗಿದೆ.
ಸಂಕ್ರಾಂತಿ ಅಂದರೆ ಪರಿವರ್ತನೆಗೆ ಸಂಬಂಧಿಸಿದ ಹಬ್ಬ. ನಮಗೆಲ್ಲರಿಗೂ ಗೊತ್ತಿದೆ ಪರಿವರ್ತನೆ ನಿರಂತರವಾಗಿದ್ದು. ನಿತ್ಯ ನೂತನವಾಗಿರುತ್ತದೆ. ಬದಲಾವಣೆ ಜಗದ ನಿಯಮ ಎಂಬುದು ರೂಢಿಯ ಮಾತಾಗಿದೆ. ಬದಲಾವಣೆಗೆ ತಕ್ಕಂತೆ ಬದಲಾಗದಿದ್ದರೆ ಬದಲಾವಣೆಯೇ ನಮ್ಮನ್ನು ಬದಲಾಯಿಸುತ್ತದೆ ಎಂಬುದು ಅನುಭವಿಗಳ ಮಾತೂ ಆಗಿದೆ. ಬದಲಾವಣೆ ಅಂದರೆ ಪರಿವರ್ತನೆಯು ಎಲ್ಲವನ್ನೂ ಮತ್ತು ಎಲ್ಲರನ್ನೂ ಒಳಗೊಂಡಿರುತ್ತದೆ. ಪರಿವರ್ತನೆಯ ಕಾಲಚಕ್ರದಲ್ಲಿ ಉಂಟಾಗುವ ಮಹತ್ತರ ಘಟ್ಟವೇ ಸಂಕ್ರಾಂತಿ, ಅಂದರೆ ಪರಿವರ್ತನೆಯ ಹಬ್ಬ. ಅಂದರೆ ಹೊಸತನವನ್ನು ಮೂಡಿಸುವ ಹಬ್ಬ ಸಂಕ್ರಾಂತಿ.
ಬ್ರಹ್ಮಾಂಡದಲ್ಲಿ ಸೂರ್ಯನಿಗೆ ವಿಶೇಷ ಸ್ಥಾನ ನೀಡಲಾಗಿದೆ. ಏಕೆಂದರೆ ಎಲ್ಲಾ ಗ್ರಹಗಳನ್ನು ತನ್ನ ನಿಯಂತ್ರಣಕ್ಕೊಳಪಡಿಸಿದ್ದಾನೆ. ಪ್ರತೀ ಗ್ರಹಕ್ಕೂ ಪ್ರತ್ಯೇಕ ಪಥವನ್ನು ನೀಡಿದ್ದಾನೆ. ಸೂರ್ಯನ ಚಲನೆಯಲ್ಲುಂಟಾಗುವ ಬದಲಾವಣೆಯಿಂದಾಗಿ ಸೌರವ್ಯೂಹದ ಇನ್ನಿತರ ಆಕಾಶ ಕಾಯಗಳಲ್ಲೂ ಬದಲಾವಣೆ ಕಾಣಬರುತ್ತದೆ. ಅಂತೆಯೇ ಸೂರ್ಯನು ದಕ್ಷಿಣಾಯನದಿಂದ ಉತ್ತರಾಯನಕ್ಕೆ ತನ್ನ ಪಥ ಪರಿವರ್ತನೆ ಮಾಡಿ ಪ್ರವೇಶಿಸುವ ಸಮಯ. ಜ್ಯೋತಿಷ್ಯಾಸ್ತ್ರದ ನಂಬಿಕೆಯಂತೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುವ ಸಮಯವೂ ಇದಾಗಿದೆ. ಈ ಸಮಯಕ್ಕೆ ಹಿಂದೂ ಧರ್ಮದ ವೇದ ಶಾಸ್ತ್ರಗಳು, ಮಹಾಕಾವ್ಯಗಳು, ಪುರಾಣ ಪುಣ್ಯಕಥೆಗಳು ವಿಶೇಷ ಘನತೆಯನ್ನು ತಂದುಕೊಟ್ಟಿವೆ. ಸ್ವರ್ಗದ ಬಾಗಿಲು ತೆರೆಯುತ್ತದೆ, ಶುಭ ಸಂಕೇತಗಳು ಎಲ್ಲೆಡೆಯೂ ಕಂಡು ಬರುತ್ತವೆ, ಗುಡಿ ಗೋಪುರಗಳಲ್ಲಿ ಘಂಟಾನಾದವು ಮೊಳಗುತ್ತದೆ. ಹೊಸ ಮನ್ವಂತರದ ಆರಂಭವೆಂಬ ಸರ್ವಶ್ರೇಷ್ಠ ನಂಬಿಕೆಯು ದೃಢವಾಗುತ್ತದೆ. ವಾಯುಮಂಡಲದ ಮೂಲ ಘಟಕಗಳಾದ ಗಾಳಿ, ಮಳೆ, ಮೋಡ, ಒತ್ತಡ, ಉಷ್ಣತೆ, ಆರ್ದ್ರತೆ ಇವುಗಳಲ್ಲಿ ಅಮೂಲಾಗ್ರ ಬದಲಾವಣೆಗಳು ಕಂಡುಬರುತ್ತವೆ. ನೈಸರ್ಗಿಕವಾಗಿ ಸಾಗರದ ಅಲೆಗಳಲ್ಲಿ, ಗುಡ್ಡ ಬೆಟ್ಟಗಳಲ್ಲಿ ಮತ್ತು ಆಳ ಕಣಿವೆಗಳಲ್ಲಿ ಬೀಸುವ ಮಾರುತಗಳಲ್ಲಿ, ಹಿಮಾಚ್ಛಾದಿತ ಪ್ರದೇಶಗಳಲ್ಲಿ, ಮರುಭೂಮಿಯಲ್ಲಿ, ಜನವಸತಿ ಪ್ರದೇಶಗಳಲ್ಲಿ, ಮುಂತಾದವುಗಳಲ್ಲಿ ಬದಲಾವಣೆ ಕಂಡು ಬರುತ್ತದೆ. ಹಬ್ಬದ ದಿನ ಮನೆ ಮಂದಿಯೆಲ್ಲಾ ಮುಂಜಾನೆಯ ಸೂರ್ಯೋದಯಕ್ಕಿಂತ ಮೊದಲೇ ಎದ್ದು ಸ್ನಾನ ಮಾಡುತ್ತಾರೆ. ಮನೆಯ ಅಂಗಳಕ್ಕೆ ಬಣ್ಣ ಬಣ್ಣದ ರಂಗವಲ್ಲಿಯನ್ನಿಟ್ಟು ಅಲಂಕರಿಸುತ್ತಾರೆ. ಮನೆಯ ಬಾಗಿಲಿಗೆ ತಳಿರು ತೋರಣಗಳಿಂದ, ವಿವಿಧ ಹೂಗಳಿಂದ ಸಿಂಗರಿಸುತ್ತಾರೆ. ಹೊಸ ಬಟ್ಟೆಗಳನ್ನು ತೊಟ್ಟಾಗ ಮನಸ್ಸಿಗೆ ಸಿಗುವ ಆನಂದವೇ ಪರಮಾನಂದ. ದೇವರನ್ನು ಭಕ್ತಿ ಭಾವದಿಂದ ಆರಾಧಿಸುತ್ತಾರೆ. ಬಗೆ ಬಗೆಯ ಸಿಹಿ ತಿನಿಸುಗಳನ್ನು ತಯಾರಿಸಿ ಸವಿಯುತ್ತಾರೆ. ಈ ಹಬ್ಬದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.
ಮಕರ ಸಂಕ್ರಾಂತಿಯ ಹಬ್ಬವನ್ನು ದೆಹಲಿ ಮತ್ತು ಹರಿಯಾಣದಲ್ಲಿ ಸುಕಾರತ್ ಎಂದು ಕರೆಯಲಾಗುತ್ತದೆ. ಪಂಜಾಬ್‌ನಲ್ಲಿ ಮಕರ ಸಂಕ್ರಾಂತಿಯ ಹಿಂದಿನ ಸಂಜೆಯನ್ನು ಲೋಹ್ರಿ ಎಂದು ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಾಘಿ ಹಬ್ಬ ಎಂದು ಕೂಡಾ ಹೇಳಲಾಗುತ್ತದೆ. ಆಂಧ್ರಪ್ರದೇಶದಲ್ಲಿ ಮಕರ ಸಂಕ್ರಾಂತಿಯನ್ನು ನಾಲ್ಕು ದಿನಗಳ ಕಾಲ ಆಚರಿಸಲಾಗುತ್ತದೆ. ಅಸ್ಸಾಂನಲ್ಲಿ ಈ ಹಬ್ಬವನ್ನು ಭೋಗಾಲಿ ಬಿಹು ಎಂದು ಆಚರಣೆ ಮಾಡಲಾಗುತ್ತದೆ. ಮಹಾರಾಷ್ಟ್ರದಲ್ಲಿ ಸಂಕ್ರಾಂತಿ ಹಬ್ಬವನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ತಮಿಳುನಾಡಿನಲ್ಲಿ ಈ ಹಬ್ಬವನ್ನು ಪೊಂಗಲ್ ಎಂದು ಹೇಳಲಾಗುತ್ತದೆ.
ಮಕರ ಸಂಕ್ರಾಂತಿಯು ಸುಗ್ಗಿಯ ಹಬ್ಬವಾಗಿದ್ದು, ಸರ್ವಶ್ರೇಷ್ಠವಾಗಿದೆ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಈ ಸಂಕ್ರಾಂತಿ ಹಬ್ಬವನ್ನು ವಿವಿಧ ಹೆಸರುಗಳಿಂದ ಜಾತಿ ಮತ ಬೇಧವಿಲ್ಲದೆ ಆಚರಿಸುತ್ತಾರೆ. ದೇಶದ ಬೆನ್ನೆಲುಬಾದ ರೈತರು ತಾವು ಬೆಳೆದಂತಹ ಬೆಳೆಗಳನ್ನು ರಾಶಿಗಳನ್ನಾಗಿ ಮಾಡಿ, ಮಾವಿನ ತೋರಣಗಳನ್ನು ಕಟ್ಟಿ, ಕಬ್ಬಿನ ಜಲ್ಲೆಗಳನ್ನು ಇಟ್ಟು, ಹೂಗಳಿಂದ ಅಲಂಕರಿಸಿ, ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಅಕ್ಕಿ, ಬೆಲ್ಲ, ತುಪ್ಪದಿಂದ ಮಾಡಿದ ಸಿಹಿ ಖಾದ್ಯಗಳನ್ನು ಇಟ್ಟು, ನೀರು ತುಂಬಿದ ಚಿತ್ರ ರಂಜಿತ ಕೊಡಗಳನ್ನಿಟ್ಟು, ಧಾನ್ಯವನ್ನು ಪೂಜಿಸುವ ಹಬ್ಬವಾಗಿದೆ ಈ ಸಂಕ್ರಾಂತಿ. ಸಂತೋಷ ಜನರ ಮನೆ ಮನಗಳಲ್ಲಿ ತುಂಬಿರುತ್ತದೆ. ಸುಗ್ಗಿ ಕುಣಿತ, ನಗೆ ಹಬ್ಬ , ಅಲಂಕೃತವಾದ ಎತ್ತಿನ ಗಾಡಿಗಳ ಓಟ ನಡೆಯುತ್ತದೆ. ಸಂಕ್ರಾಂತಿ ಹಬ್ಬದ ದಿನದಂದು ರೈತರು ಸೂರ್ಯದೇವನನ್ನು ಮತ್ತು ಭೂಮಿತಾಯಿಯನ್ನು, ಜಲದೇವತೆಯನ್ನು ಪೂಜಿಸುತ್ತಾರೆ. ನೇಗಿಲಯೋಗಿಯ ಗೆಳೆಯರಾದ ಎತ್ತುಗಳನ್ನು ಸಿಂಗರಿಸಿ ಪೂಜಿಸುತ್ತಾರೆ. ದೇವರಲ್ಲಿ ತಮ್ಮ ಪ್ರಾರ್ಥನೆಯನ್ನು ಮಾಡುತ್ತಾ ಜಗತ್ತಿಗೆ ಈ ರೀತಿಯಾಗಿ ಹಾರೈಸುತ್ತಾ " ಜಗಜ್ಯೋತಿ ಸೂರ್ಯನು ಎಲ್ಲರ ಬಾಳಿಗೆ ಬೆಳಕು ನೀಡಲಿ, ಭೂ ತಾಯಿ ಎಲ್ಲರಿಗೂ ನೆಲೆ ನೀಡಲಿ, ಜೀವಜಗತ್ತಿಗೆ ಅನ್ನ ನೀಡಲಿ, ಜಲದೇವಿಯು ಸರ್ವರಿಗೂ ಜೀವ ಚೈತನ್ಯ ತುಂಬಲಿ, ವಾಯುದೇವನು ಉಸಿರು ನೀಡಲಿ, ಬದುಕಿನಲ್ಲಿ ಬವಣೆಗಳು ದೂರವಾಗಲಿ, ಸಿರಿ ಸಂಪತ್ತು ಎಲ್ಲೆಡೆಯೂ ತುಂಬಿರಲಿ, ದ್ವೇಷ ಅಸೂಯೆಗಳು ಮರೆಯಾಗಲಿ, ಮದ ಮಾತ್ಸರ್ಯಗಳು ನಶಿಸಿ ಹೋಗಲಿ, ಕಾಮ, ಕ್ರೋಧ, ಮೋಹಗಳ ಮಿತಿಯಿರಲಿ, ಜಗದ ಜನರೆಲ್ಲರಿಗೂ ಸುಖ ಶಾಂತಿ ಲಭಿಸಲಿ, ಈ ಸಂಕ್ರಾಂತಿಯ ಸಂದರ್ಭದಲ್ಲಿ ನಿಸರ್ಗದಲ್ಲಿ ಹೇಗೆ ಬದಲಾವಣೆಗಳು ಉಂಟಾಗುತ್ತವೆಯೋ ಹಾಗೆ ನಮ್ಮಲ್ಲರ ಮನಸ್ಸಿನಲ್ಲಿ ಧನಾತ್ಮಕವಾದ ಮನೋಸಂಕ್ರಮಣವೂ ಆಗಲಿ." ಎನ್ನುತ್ತಾರೆ. ಧನಾತ್ಮಕ ಮನೋಸಂಕ್ರಮಣ ಅಂದರೆ ಮನಸ್ಸಿನ ಪರಿವರ್ತನೆ ಉಂಟಾಗಲಿ. ಅಂತಹ ಧನಾತ್ಮಕ ಮನ ಪರಿವರ್ತನೆ ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾದುದು. ಆ ಮೂಲಕ ವ್ಯಕ್ತಿಯು ಶಕ್ತಿಯಾಗಿ, ಶಕ್ತಿಯು ರಾಷ್ಟ್ರಾಭಿವೃದ್ಧಿಗೆ ಪೂರಕವಾಗಲಿ ಶ್ರಮಿಸುವುದು.ಮನೋ ಸಂಕ್ರಮಣದೊಂದಿಗೆ ಸಂಕ್ರಾಂತಿಯಂದು ಎಳ್ಳು- ಬೆಲ್ಲ- ಉತ್ತುತ್ತಿಯನ್ನು ಹಂಚೋಣ, ಒಳ್ಳೆಯ ಸವಿ ಮಾತುಗಳನ್ನು ಆಡೋಣ, ಭಾವ-ಬಂಧಗಳನ್ನು ಬೆಸೆಯೋಣ, ಧನಾತ್ಮಕ ಮನೋ ಸಂಕ್ರಮಣ ಹಾದಿಯಲ್ಲಿ ವೃಷ್ಟಿಯಿಂದ ಸಮಷ್ಠಿಯವರೆಗೂ ಪ್ರಗತಿಯ ವಿಕಾಸ ಕಾಣೋಣ. ನಾವು- ನಮ್ಮವರು ಎಂಬ ಭಾರತೀಯ ಭಾವನೆ ಯೊಂದಿಗೆ ಬಾಳೋಣ. ನಮ್ಮ ಬದುಕೆಂಬ ಹಾಡಿನಲ್ಲಿ ಪ್ರೀತಿಯನ್ನು ಬೆಸೆಯವ ಸಂಕ್ರಾತಿ ಹಬ್ಬವು ಪಲ್ಲವಿಯಾಗಲಿ ಎನ್ನುತ್ತಾ "ಸರ್ವೇ ಜನಃ ಸುಖಿನೋ ಭವಂತು" ಎಂದು ಆಶಿಸೋಣ.
-ಕೆ. ಎನ್. ಚಿದಾನಂದ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ