ಭಾರತದ ಗಣರಾಜ್ಯೋತ್ಸವ

Upayuktha
0



ವಿಶ್ವ ಮಾತೆಯ ಮಡಿಲಲ್ಲಿ ಅರಳಿದ ಪರಮ ಕುಸುಮ ನಮ್ಮ ಭಾರತ ದೇಶ. ಇಂದು ನಮ್ಮ ದೇಶವು ವಿಶ್ವದ ರಾಷ್ಟ್ರಗಳು ಅಚ್ಚರಿಯಿಂದ ನೋಡುವಂತೆ ಬೆಳೆಯುತ್ತಿದೆ. ಭಾರತ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿನ ಪ್ರಜೆಗಳಾದ ನಾವು ಭಾರತೀಯರು. ನಾವೆಲ್ಲರೂ ಒಂದೆ ಎಂಬ ಐಕ್ಯಮಂತ್ರವನ್ನು ಸಾರುವ ಜನ ಗಣ ಮನ ಮತ್ತು ವಂದೇ ಮಾತರಂ ಐಕ್ಯಗಾನಗಳು ನಮ್ಮದಾಗಿವೆ. 


ಕೇಸರಿ, ಬಿಳಿ, ಹಸಿರು ಬಣ್ಣಗಳ ನಡುವೆ ಚಕ್ರವಿರುವ ತ್ರಿವರ್ಣ ಧ್ವಜದ ಸಂಕೇತವನ್ನು , ನಾಲ್ಕು ಮುಖಗಳ ಸಿಂಹದ ರಾಷ್ಟ್ರಮುದ್ರೆಯನ್ನು, ಅಶೋಕ ಚಕ್ರದ ಲಾಂಛನವನ್ನು ನಾವು ಹೊಂದಿದ್ದೇವೆ. ಇಂದು ನಾವು ಕಾಣುತ್ತಿರುವ ಅಖಂಡ ಭಾರತದ ನಿರ್ಮಾಣ ಇಂದು ನೆನ್ನೆಯದಲ್ಲ. ನಮ್ಮ ದೇಶದ ಚರಿತ್ರೆಯನ್ನು ಪ್ರಾಚೀನ, ಮಧ್ಯ, ಆಧುನಿಕ ಕಾಲಘಟ್ಟವನ್ನಾಗಿ ವಿಂಗಡಿಸಿ ಅಧ್ಯಯನ ಮಾಡಿದಾಗ ಅಖಂಡ ಭಾರತ ಯಾವ ರೀತಿಯಲ್ಲಿ ತುಂಡು ತುಂಡಾಗಿತ್ತು, ಮತ್ತು ಅದನ್ನು ಹೇಗೆ ಅಖಂಡವನ್ನಾಗಿಸಲಾಯಿತು ಎಂಬುದನ್ನು ತಿಳಿಯಬಹುದಾಗಿದೆ. 


ಗಣರಾಜ್ಯೋತ್ಸವವು ಪ್ರಮುಖ ರಾಷ್ಟ್ರೀಯ ಹಬ್ಬವಾಗಿದೆ. ಎಲ್ಲಾ ಭಾರತೀಯರಿಗೂ ಸಂತಸ ತರುವ ಹಬ್ಬ ಗಣರಾಜ್ಯೋತ್ಸವ. ಭಾರತ ಒಂದು ಒಕ್ಕೂಟ ವ್ಯವಸ್ಥೆಯ ಗಣರಾಜ್ಯವಾಗಿದೆ. 1950 ರ ಜನವರಿ 26 ರಂದು ಭಾರತ ಒಂದು ಗಣರಾಜ್ಯವೆಂದು ಘೋಷಿಸಿ, ವಿಶಿಷ್ಟ, ವಿಭಿನ್ನ ಮತ್ತು ವೈವಿಧ್ಯಮಯವಾದ ಬೃಹತ್ ಸಂವಿಧಾನವನ್ನು ಜಾರಿಗೊಳಿಸಿದ ದಿನವಾಗಿದೆ. ಏಕೆಂದರೆ 1929 ರಲ್ಲಿ ಲಾಹೋರ್‌ ಕಾಂಗ್ರೆಸ್ ಅಧಿವೇಶನದಲ್ಲಿ ಭಾರತದ ಪೂರ್ಣ ಸ್ವರಾಜ್ಯ ಘೋಷಣೆಯಾದ ನಂತರ 1930 ರ ಜನವರಿ 26 ರಂದು ಸ್ವಾತಂತ್ರ್ಯ ದಿನವನ್ನಾಗಿ ಸ್ವಾತಂತ್ರ್ಯ ಹೋರಾಟಗಾರರು ಆಚರಿಸಿದ ಚರಿತ್ರಾರ್ಹ ದಿನದ ಸವಿನೆನಪಿಗಾಗಿ ರಾಷ್ಟ್ರದ ತುಂಬೆಲ್ಲ  ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. 


ರಾಷ್ಟ್ರದ ಆಡಳಿತವನ್ನು ಯಾವ ಯಾವ ನಿಯಮಾವಳಿಗಳ ಪ್ರಕಾರ, ಹೇಗೆ ನಡೆಸಬೇಕು ಎಂಬ ವಿಧಾನವನ್ನು ಒಳಗೊಂಡ ಗ್ರಂಥವೇ ಸಂವಿಧಾನ. ಒಬ್ಬ ಮನುಷ್ಯನಿಗೆ ಶಿರಸ್ಸು ಎಷ್ಟು ಮುಖ್ಯವೊ, ಅಷ್ಟೇ ಮುಖ್ಯ ಒಂದು ರಾಷ್ಟ್ರಕ್ಕೆ ಸಂವಿಧಾನ ಎಂದು ಹೇಳಲಾಗುತ್ತದೆ. ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ಡಾ|| ಬಾಬು ರಾಜೇಂದ್ರ ಪ್ರಸಾದ್ ಹಾಗೂ  ಬಾಬಾಸಾಹೇಬ್ ಡಾ|| ಬಿ.ಆರ್. ಅಂಬೇಡ್ಕರ್ ರವರು ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. 


ಸಂವಿಧಾನವು ನಮ್ಮ ಭಾರತವನ್ನು ಸರ್ವತಂತ್ರ ಸ್ವತಂತ್ರ, ಪ್ರಜಾಸತ್ತಾತ್ಮಕ, ಜಾತ್ಯಾತೀತ, ಸಾರ್ವಭೌಮ ರಾಷ್ಟ್ರವಾಗಿ ಪರಿಗಣಿಸಿದೆ. ನಮ್ಮ ಸಂವಿಧಾನವು ದೇಶದ ಪ್ರಜೆಗಳಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಮೂಲಭೂತ ಹಕ್ಕುಗಳನ್ನು ನೀಡಿದೆ. ಸರ್ಕಾರದ ಕಾರ್ಯ ವಿಧಾನಗಳ ಬಗ್ಗೆ ನೀತಿಯನ್ನು ರೂಪಿಸಿದೆ. ನಿರ್ದೇಶಾತ್ಮಕ ತತ್ವಗಳನ್ನು ನೀಡಿದೆ. ತನ್ನ ರಾಷ್ಟ್ರೀಯ ಹಾಗೂ ವಿದೇಶಾಂಗ ನೀತಿಗಳನ್ನು ರೂಪಿಸಿ ಕಾರ್ಯಗತಗೊಳಿಸುವ ಅಧಿಕಾರ ಭಾರತ ಸರ್ಕಾರಕ್ಕೆ ನೀಡಿದೆ. 


ವಿಶ್ವದ ಎಲ್ಲಾ ರಾಷ್ಟ್ರಗಳೊಡನೆ ಸ್ನೇಹ ಸಂಬಂಧ, ಸಾಂಸ್ಕೃತಿಕ, ಆರ್ಥಿಕ ವಾಣಿಜ್ಯ ವ್ಯವಹಾರ ಸಂಬಂಧಗಳನ್ನು ಬೆಳೆಸಲು ನಮ್ಮ ಸಂವಿಧಾನವು ಭಾರತಕ್ಕೆ ಅವಕಾಶ ಕಲ್ಪಿಸಿದ ವಿಧಾನವಂತೂ ವಿಶ್ವ ಮಾನ್ಯವಾಗಿದೆ. ಸಂವಿಧಾನವು ಪ್ರಜೆಗಳಿಗೆ ಪರಮಾಧಿಕಾರವನ್ನು ನೀಡಿದೆ. ಭಾರತದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಸಾರ್ವತ್ರಿಕ ಮಹಾ ಚುನಾವಣೆಗಳನ್ನು ನಡೆಸುವ ಮೂಲಕ ಹದಿನೆಂಟು ವರ್ಷ ತುಂಬಿದ ಎಲ್ಲಾ ಜನರೂ ಮತ ನೀಡುವ ಮೂಲಕ ತಮ್ಮ ಅಧಿಕಾರವನ್ನು ಚಲಾಯಿಸಬಹುದಾಗಿದೆ.


ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ಮತ್ತು ಸಂವಿಧಾನದ ಬದ್ಧ ಪರಿಹಾರ ಕ್ರಮಗಳ ಹಕ್ಕು ಹೀಗೆ ಆರು ಮೂಲಭೂತ ಹಕ್ಕುಗಳನ್ನು ಸಂವಿಧಾನವು ಮಾನ್ಯ ಮಾಡಿದೆ. ಭಾರತವು ಅಸ್ಸಾಮಿ, ಕನ್ನಡ, ತೆಲುಗು, ತಮಿಳು, ಬಂಗಾಳಿ, ಹಿಂದಿ ಮೊದಲಾದ ಇಪ್ಪತ್ತೆರಡು ಭಾಷೆಗಳನ್ನು ದೇಶದ ಸಂವಿಧಾನ ಬದ್ಧ ಪ್ರಮುಖ ಭಾಷೆಗಳೆಂದು ಪರಿಗಣಿಸಿದೆ. 


ಗಣರಾಜ್ಯ ದಿನವನ್ನು ದೆಹಲಿಯಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಉತ್ಸವವನ್ನು ವೀಕ್ಷಿಸಲು ಇಡೀ ದೇಶವೇ ಹಾತೊರೆಯುತ್ತದೆ. ರಾಷ್ಟ್ರಪತಿಯವರು ಧ್ವಜಾರೋಹಣ ಮಾಡುತ್ತಾರೆ. ಯೋಧರಿಗೆ ಪ್ರಥಮ ಗೌರವ ಸಲ್ಲುತ್ತದೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಸೈನ್ಯವನ್ನನುಸರಿಸಿ ಬರುವ ಯುದ್ಧದ ಟ್ಯಾಂಕರ್ ಗಳು, ಶಸ್ತ್ರಾಸ್ತ್ರಗಳನ್ನು ಹಿಡಿದು ಬರುವ ವಾಹನಗಳು, ವಿವಿಧ ರಾಜ್ಯಗಳ ಸಂಸ್ಕೃತಿ ಮತ್ತು ಕಲೆಗಳನ್ನು ಪರಿಚಯಿಸುವ ಸ್ತಬ್ಧ ಚಿತ್ರಗಳು ( ಟ್ಯಾಬ್ಲೊ) ಮೊದಲಾದವು ದೇಶದ ಕೀರ್ತಿಯನ್ನು ಸಾರುತ್ತವೆ. 


ಪರೇಡ್ ನಲ್ಲಿ ರಾಷ್ಟ್ರಾಧ್ಯಕ್ಷರಿಗೆ ಸೆಲ್ಯೂಟ್ ಸಲ್ಲಿಸಲಾಗುತ್ತದೆ. ಈ ದಿನದಂದು ಯೋಧರ ಸೇವೆಯನ್ನು ಸ್ಮರಿಸಿ, ಕಲೆ ಸಂಸ್ಕೃತಿಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಲಾಗುತ್ತದೆ. ಅದೇ ರೀತಿ ರಾಷ್ಟ್ರದ ಎಲ್ಲಾ ಶಾಲಾ ಕಾಲೇಜುಗಳಲ್ಲಿ, ಕಛೇರಿಗಳಲ್ಲಿ ಧ್ವಜಾರೋಹಣದ ಮೂಲಕ ಗಣರಾಜ್ಯೋತ್ಸವ ಆಚರಿಸಲಾಗುತ್ತದೆ. ದೇಶದ ಬಗ್ಗೆ ಭಾಷಣಗಳನ್ನು ಮಾಡಲಾಗುತ್ತದೆ. ರಾಷ್ಟ್ರದ ಏಕತೆ ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸುವ ಕಲಾ ನೃತ್ಯಗಳು ಪ್ರದರ್ಶಿತವಾಗುತ್ತವೆ.


ದೇಶದ ಎಪ್ಪತ್ತಾರನೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಾರತದ ಪ್ರಗತಿಯನ್ನು ಅವಲೋಕಿಸಬೇಕಿದೆ. ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕೀಯ, ಖಗೋಳ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಯನ್ನು ಮಾಡಿದೆ. ವೈಮಾನಿಕ ಕ್ಷೇತ್ರದಲ್ಲಿಯೂ ಅದ್ವಿತೀಯ ಸಾಧನೆಯನ್ನು ಮಾಡಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಸಾಂಸ್ಕೃತಿಕ ರಂಗಗಳಲ್ಲಿಯೂ ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದು ಯಶಸ್ಸನ್ನು ಸಾಧಿಸಿದೆ. ಅಭಿವೃದ್ಧಿಪರ ವಿದೇಶಾಂಗ ನೀತಿಗಳನ್ನು ಅನುಸರಿಸಿ ಸೌಹಾರ್ದಯುತ ಬಾಂಧವ್ಯವನ್ನು ಹೊಂದಿದೆ. 


ಆದರೆ ಆಧುನಿಕ ಇಪ್ಪತ್ತೊಂದನೆ ಶತಮಾನವು ಸ್ಪರ್ಧಾತ್ಮಕವಾಗಿದ್ದು ಪರಿಹರಿಸಬೇಕಾದ ಸಮಸ್ಯೆ ಮತ್ತು ಸವಾಲುಗಳು ಸಾಕಷ್ಟಿವೆ. ಸಂವಿಧಾನವು ನಮಗೆ ಹಕ್ಕುಗಳನ್ನು ನೀಡಿರುವಂತೆ, ಕರ್ತವ್ಯಗಳನ್ನು ತಿಳಿಸಿದೆ. ಭಾರತದ ಜವಾಬ್ದಾರಿಯುತ ಪ್ರಜೆಗಳಾಗಿ ಕರ್ತವ್ಯಗಳನ್ನು ನಿರ್ವಹಿಸುವುದು ನಮ್ಮ ಜವಾಬ್ದಾರಿಯೇ ಆಗಿದೆ. ಅವುಗಳನ್ನು ಪಾಲಿಸೋಣ. ನಾವು ಭಾರತೀಯರು. ನಾವೆಲ್ಲರೂ ಒಂದೇ ಎಂಬ ಐಕ್ಯತಾ ಭಾವದೊಂದಿಗೆ ರಾಷ್ಟ್ರದ ಏಳಿಗೆಗೆ ಮತ್ತು ಅಭಿವೃದ್ಧಿಗೆ ಶ್ರಮಿಸೋಣ. ಜಾಗತಿಕ ಭದ್ರತೆ ಮತ್ತು ವಿಶ್ವ ಶಾಂತಿಯ ಸಂದೇಶವನ್ನು ಸಾರೋಣ. ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.


 -ಕೆ.ಎನ್. ಚಿದಾನಂದ.

          ಹಾಸನ.

                                       



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top