ಹತ್ತನೆಯ ತರಗತಿ ವಿದ್ಯಾರ್ಥಿಗಳಿಗಾಗಿ ‘ವಿಜಯೀಭವ’ ಕಾರ್ಯಾಗಾರ

Upayuktha
0

ಅಧ್ಯಯನವನ್ನು ಆಸ್ವಾದಿಸುವ ಮನೋಭಾವ ಬೆಳೆಯಬೇಕು : ಮನಿಷಾ ಐಪಿಎಸ್




ಪುತ್ತೂರು: ಯುಪಿಎಸ್ಸಿ ಪರೀಕ್ಷೆಗಳು ದೇಶದ ಅತ್ಯಂತ ಕಠಿಣ ಪರೀಕ್ಷೆಗಳೆಂದು ಗುರುತಿಸಲ್ಪಟ್ಟಿವೆ. ಹಾಗೆಂದು ಈ ಪರೀಕ್ಷೆಗಳನ್ನು ತೇರ್ಗಡೆಯಾಗುವುದು ಅಸಾಧ್ಯ ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಕಠಿಣ ಪರಿಶ್ರಮ, ನಿಗದಿತ ಸಿದ್ಧತೆ ಹಾಗೂ ರಚನಾತ್ಮಕ ಓದು ನಮ್ಮನ್ನು ಯಶಸ್ಸಿನೆಡೆಗೆ ಒಯ್ಯಬಲ್ಲವು ಎಂದು ದಕ್ಷಿಣ ಕನ್ನಡದ ಐಪಿಎಸ್ ಪ್ರೊಬೆಷನರಿ ಮನಿಷಾ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ತಾಲೂಕು ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ವಿಜಯ ಕರ್ನಾಟಕ ದಿನಪತ್ರಿಕೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ವಿಜಯೀಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.



ಸೋಲು ಗೆಲುವುಗಳು ನಮ್ಮ ಬದುಕಿನ ಭಾಗವೇ ಆಗಿವೆ. ಆದ್ದರಿಂದ ನಿಗದಿತ ಗುರಿಯನ್ನು ತಲುಪುವಲ್ಲಿ ಸೋಲಾದರೆ ಮರಳಿ ಪ್ರಯತ್ನಿಸಬೇಕು. ಸೋಲಾಯಿತೆಂದು ಕೈಚೆಲ್ಲಿ ಕೂರುವುದರಿಂದ ಯಶಸ್ಸು ಸಾಧ್ಯವಿಲ್ಲ. ಸೋಲು ಯಾಕಾಯಿತು ಎಂಬುದನ್ನು ಪರಾಮರ್ಶೆ ನಡೆಸಿ ಗೆಲುವಿಗಾಗಿ ಮತ್ತೊಂದು ಹಾದಿಯಲ್ಲಿ ಮುನ್ನಡೆಯಬೇಕು. 


ನಿರಂತರ ಪ್ರಯತ್ನ ನಮ್ಮನ್ನು ಗೆಲ್ಲುವಂತೆ ಮಾಡುತ್ತದೆ. ಅಧ್ಯಯನವನ್ನು ಆಸ್ವಾದಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆನೀಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್.ಮಾತನಾಡಿ ತಮ್ಮ ಮಕ್ಕಳ ಬಗೆಗೆೆ ಹೆತ್ತವರಿಗೆ ಅಪಾರ ಕನಸುಗಳಿವೆ. ಆ ಕನಸುಗಳಿಗೆ ತಣ್ಣೀರೆರಚುವ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಬಾರದು.


ಮುಂದಿನ ಮೂರು ತಿಂಗಳ ಅವಧಿಯನ್ನು ಪರೀಕ್ಷಾ ಅವಧಿಯಾಗಿ ಪರಿಗಣಿಸುವುದಲ್ಲದೆ ತಪಸ್ಸಿನ ರೀತಿಯಲ್ಲಿ ಅಧ್ಯಯನವನ್ನು ಕೈಗೊಳ್ಳಬೇಕು. ಮೊಬೈಲ್‌ನಿಂದ ದೂರ ಇದ್ದು ಗುರಿಯೆಡೆಗೆ ಗಮನ ಹರಿಸಬೇಕು. ಅಧ್ಯಯನದ ಕಾರಣಕ್ಕೆ ಮೊಬೈಲ್ ಅವಶ್ಯಕತೆ ಇದ್ದರೆ ಸಾಮಾಜಿಕ ಮಾಧ್ಯಮಗಳ ಆಪ್‌ಗಳನ್ನು ಮೊಬೈಲ್‌ನಿಂದ ತೆಗೆದುಹಾಕಬೇಕು ಎಂದು ನುಡಿದರು.


ನಮ್ಮ ಅಧ್ಯಯನ ಸಾಂಗವಾಗಿ ಸಾಗಬೇಕಾದರೆ ಆರೋಗ್ಯ ಮುಖ್ಯ. ಆದ್ದರಿಂದ ಅಧ್ಯಯನದ ಜತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ವಿದ್ಯಾರ್ಥಿಗಳ ಆದ್ಯತೆಯಾಗಬೇಕು. ಆ ನಿಟ್ಟಿನಲ್ಲಿ ಮುಂದಿನ ಹತ್ತನೆಯ ಪರೀಕ್ಷೆ ಮುಗಿಯುವವರೆಗೆ ಮಾಂಸಾಹಾರದಿಂದ ಆದಷ್ಟು ದೂರವಿದ್ದು ಸಸ್ಯಾಹಾರದೆಡೆಗೆ ಮನ ಮಾಡಬೇಕು. 


ಏರುಬಿಸಿಲಿನ ಕಾಲದಲ್ಲಿ ಮಾಂಸಾಹಾರ ಆರೋಗ್ಯ, ಆಸಕ್ತಿಯ ಮೇಲೇ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಎಂದು ತಿಳಿಹೇಳಿದರು.


ಪ್ರಸ್ತಾವನೆಗೈದ ವಿಜಯ ಕರ್ನಾಟಕ ದಿನಪತ್ರಿಕೆಯ ಮಂಗಳೂರಿನ ಸ್ಥಾನಿಕ ಸಂಪಾದಕ ರವೀಂದ್ರ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಒದಗುವಂತೆ ಮಾಡಿ ಮುಂದಿನ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡುವಂತೆ ಪ್ರೇರೇಪಿಸುವ ನೆಲೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ ಎಂದು ನುಡಿದರು.


ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಶಿಕ್ಷಣ ಸಂಸ್ಥೆಗಳು ದೇಶಭಕ್ತರನ್ನು ರೂಪಿಸುವ ಹೊಣೆಗಾರಿಕೆಯನ್ನು ಹೊರಬೇಕು. ನಾಳಿನ ಸಮಾಜ ಭ್ರಷ್ಟಾಚಾರರಹಿತವಾಗಿ ರೂಪುಗೊಳ್ಳಬೇಕಾದರೆ ಇಂದಿನ ಮಕ್ಕಳನ್ನು ಪ್ರಾಮಾಣಿಕರನ್ನಾಗಿ ತಯಾರು ಮಾಡಬೇಕು. 


ಪಾರದರ್ಶಕವಾದ ಐಎಎಸ್, ಐಪಿಎಸ್‌ನಂತಹ ಅಧಿಕಾರಿಗಳನ್ನು ನಾವು ರೂಪಿಸಿ ಸಮಾಜಕ್ಕೆ ಕೊಟ್ಟಾಗ ದೇಶ ಔನ್ನತ್ಯವನ್ನು ಕಾಣುವುದಕ್ಕೆ ಸಾಧ್ಯ. ಹಣ ಗಳಿಸುವುದೊಂದೇ ನಮ್ಮ ಆದ್ಯತೆ ಆಗಬಾರದು ಎಂದು ನುಡಿದರು.


ವೇದಿಕೆಯಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಪ್ರಾಚಾರ್ಯೆ ಮಾಲತಿ ಡಿ, ಸಂಪನ್ಮೂಲ ವ್ಯಕ್ತಿಯಾದ ರಾಮಕುಂಜದ ರಾಮಕುಂಜೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸತೀಶ್ ಭಟ್ ಉಪಸ್ಥಿತರಿದ್ದರು.

 

ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸಂಸ್ಥೆಯ ಶಿಕ್ಷಕ ಹೇಮಂತ್ ಸ್ವಾಗತಿಸಿ, ಪತ್ರಕರ್ತ ಧನುಷ್ ಕಲ್ಲಡ್ಕ ವಂದಿಸಿದರು. ಹಿರಿಯ ಪತ್ರಕರ್ತ ಸುಧಾಕರ ಸುವರ್ಣ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ನಡೆಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top