ಪ್ರೋಟೀನ್ ಮತ್ತು ಪರಮ ರಹಸ್ಯಗಳು

Upayuktha
0

 


ಮ್ಮ ದೇಹದ ಪರಿಪೂರ್ಣ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರೋಟೀನ್, ವಿಟಮಿನ್, ಲವಣಾಂಶಗಳು, ಕೊಬ್ಬು ಮತ್ತು ಶರ್ಕರ ಪಿಷ್ಠಗಳು ಅತೀ ಅವಶ್ಯಕ. ಪ್ರೋಟೀನ್, ಕೊಬ್ಬು ಮತ್ತು ಶರ್ಕರ ಪಿಷ್ಠಗಳನ್ನು ದೇಹಕ್ಕೆ ಪೂರಕವಾದ ಮಾರ್ಕೋನ್ಯೂಟ್ರಿಯೆಂಟ್ ಎಂದೂ ಗುರುತಿಸಲಾಗಿದೆ. ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿ ನಮ್ಮ ದಿನನಿತ್ಯದ ಆಹಾರದಲ್ಲಿ ಸಿಂಹಪಾಲು ಶರ್ಕರ ಪಿಷ್ಠಗಳಿಗೆ ಮೀಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಸೌಂದರ್ಯ ಮತ್ತು ದೇಹದ ಕಾರ್ಯಕ್ಷಮತೆಯ ಬಗ್ಗೆ ಹೆಚ್ಚಿನ ಒಲವು ಇರುವ ಕಾರಣದಿಂದ ಪ್ರೋಟೀನ್‍ಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ. 


ಒಬ್ಬ ಸಾಮಾನ್ಯ ಮನುಷ್ಯನಿಗೆ ದಿನನಿತ್ಯದಲ್ಲಿ 2000 ರಿಂದ  2500 ಕ್ಯಾಲರಿಗಳಷ್ಟು ಶಕ್ತಿ ಅವಶ್ಯವಿದ್ದು, ಇದರಲ್ಲಿ ಸಿಂಹಪಾಲು ಕಾರ್ಬೋಹೈಡ್ರೇಟ್ಗಳಿಗೆ (ಶರ್ಕರ ಪಿಷ್ಠ) ಸೇರಿರುವುದು ವಿಪರ್ಯಾಸ. ಈ ಹಿನ್ನಲೆಯಲ್ಲಿ ಪ್ರೋಟೀನ್‍ಗಳಿಗೆ ಆಹಾರದಲ್ಲಿ ಹೆಚ್ಚಿನ ಸ್ಥಾನಮಾನ ಬೇಕು ಎಂಬುದು ಯುವಜನರ ಕೋರಿಕೆಯಾಗಿದೆ. 


ವಿಶ್ವ ಸಂಸ್ಥೆ (WHO) ಮತ್ತು ಭಾರತೀಯ ವೈದ್ಯಕೀಯ ಸಂಶೋಧನೆ ಪರಿಷತ್ತು (ICMR) ಇದರ ಮಾನದಂಡದಂತೆ ದಿನವೊಂದಕ್ಕೆ ಪ್ರತಿ ಮನುಷ್ಯನಿಗೆ ದೇಹದ ಪ್ರತಿ ಒಂದು ಕೆಜಿ ತೂಕಕ್ಕೆ 0.8 ಗ್ರಾಂನಷ್ಟು ಪ್ರೋಟೀನ್ ಅಗತ್ಯ ಇರುತ್ತದೆ. ಇದರರ್ಥ 70 ಕಿಲೋ ಗ್ರಾಂ ತೂಕದ ಮನುಷ್ಯನಿಗೆ ದಿನವೊಂದಕ್ಕೆ 0.8 x 70 ಅಂದರೆ ಸುಮಾರು 56 ಗ್ರಾಂನಷ್ಟು ಪ್ರೋಟೀನ್ ಅಗತ್ಯವಿರುತ್ತದೆ.


ಪ್ರೋಟೀನ್ ನಮ್ಮ ದೇಹದ ಜೀವಕೋಶಗಳ ಬೆಳವಣಿಗೆಗೆ, ಸ್ನಾಯಗಳ ಬೆಳವಣಿಗೆಗೆ ಮತ್ತು ಜೀವಕೋಶಗಳ ಪುನರುತ್ತಾನಕ್ಕೆ ಅತೀ ಅವಶ್ಯಕ. ದೇಹದ ಅಂಗಾಂಗಳ ಮತ್ತು ಅಂಗಾಂಶಗಳ ಬೆಳವಣಿಗೆಗೆ ಪ್ರೋಟೀನ್ ಅತೀ ಅಗತ್ಯ, ಇತ್ತೀಚಿನ ದಿನಗಳಲ್ಲಿ ವಿದೇಶಗಳಲ್ಲಿ ಪ್ರೋಟೀನ್ ವ್ಯಾಮೋಹ ವಿಪರೀತವಾಗಿದೆ. ಪ್ರೋಟೀನ್ ಮೊಸರು, ಪ್ರೋಟೀನ್ ಮಜ್ಜಿಗೆ, ಪ್ರೋಟೀನ್ ಯುಕ್ತ ಹಾಲು, ಪ್ರೋಟೀನ್‍ಯುಕ್ತ ಪಾಸ್ತಾ, ಪ್ರೋಟೀನ್ ನೀರು ಹೀಗೆ ದಿನಕ್ಕೊಂದರಂತೆ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಗೆ ಬರುತ್ತಲೆ ಇದೆ. 


ಆದರೆ ನಮ್ಮ ಭಾರತದಲ್ಲಿ ಅನಕ್ಷರತೆ, ಬಡತನ ಮತ್ತು ಅಜ್ಞಾನದ ಕಾರಣದಿಂದ ಪ್ರೋಟೀನ್ ಯುಕ್ತ ಆಹಾರ ಎಲ್ಲರಿಗೂ ಸಿಗುತ್ತಿಲ್ಲ. ನಗರ ಪ್ರದೇಶಗಳಲ್ಲಿ ವಿದ್ಯಾವಂತರಿಗೆ ಅತೀ ಹೆಚ್ಚು ಪ್ರೋಟೀನ್ ದೊರಕುತ್ತಿದೆ. ಆದರೆ ಗ್ರಾಮೀಣ ಪ್ರದೇಶದ ಬಡತನದ ರೇಖೆಗಿಂತ ಕೆಳಗಿನವರಿಗೆ ಪ್ರೋಟೀನ್ ಕೊರತೆ ಕಾಡುತ್ತಿದೆ. ಅದೇ ರೀತಿ ಸಸ್ಯಾಹಾರಿಗಳಿಗೆ ಮತ್ತು ಸೆಲೆಕ್ಟಿವ್ ಮಾಂಸಾಹಾರಿಗಳಿಗೆ ಅಂದರೆ ಕೆಲವೇ ಕೆಲವು ನಿರ್ದಿಷ್ಟ ಮಾಂಸ ಸೇವನೆ ಕಾರಣದಿಂದ ಪ್ರೋಟೀನ್ ಕೊರತೆ ಉಂಟಾಗುತ್ತಿದೆ. 


ಎಲ್ಲಾ ರೀತಿಯ ಮಾಂಸಾಹಾರ ಸೇವಿಸಿದಲ್ಲಿ ಪ್ರೋಟೀನ್ ಕೊರತೆ ಉಂಟಾಗಲು ಸಾಧ್ಯವಿಲ್ಲ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ. ಅದೇ ರೀತಿ ಅತೀ ಹೆಚ್ಚು ಪ್ರೋಟೀನ್ ಇರುವ ಕೆಂಪು  ಮಾಂಸಗಳ ಅತಿಯಾದ ಸೇವನೆಯಿಂದಾಗಿ ಹೃದಯದ ತೊಂದರೆ, ಕಿಡ್ನಿ ವೈಫಲ್ಯ ಮತ್ತು ದೊಡ್ಡ ಕರುಳು ಕ್ಯಾನ್ಸರ್ ಸಾಧ್ಯತೆ ಹೆಚ್ಚಾಗಿದೆ ಎಂದೂ ಅಧ್ಯಯನಗಳಿಂದ ತಿಳಿದು ಬಂದಿದೆ. ಹಿತ ಮಿತವಾಗಿ ಪ್ರೋಟೀನ್ ಸೇವನೆ ದೇಹದ ಆರೋಗ್ಯಕ್ಕೆ ಪೂರಕ ಎಂದು ಅಧ್ಯಯನಗಳಿಂದ ಸಾಬೀತಾಗಿದೆ. 


ಒಟ್ಟಿನಲ್ಲಿ ಆಹಾರದಲ್ಲಿ ಪ್ರೋಟೀನ್ ಅವಶ್ಯಕತೆ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಹಾಗೂ ಅರಿವು ಮೂಡಿಸುವ ಅಗತ್ಯವಿದೆ. ಖ್ಯಾತ ಆಹಾರ ತಜ್ಞೆ ಸಂಗೀತಾ ನಾಯರ್ ಅವರ ಪ್ರಕಾರ ಸಸ್ಯಹಾರಿಗಳಲ್ಲಿ ಪ್ರೋಟೀನ್ ಕೊರತೆ ಕಾಡುತ್ತದೆ. ಸಾಮಾನ್ಯವಾಗಿ ಒಂದು ಕಪ್ ದಾಲ್ ತಿಂದಲ್ಲಿ ಹೆಚ್ಚಿನ ಪ್ರೋಟೀನ್ ಸಿಗುತ್ತದೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ. ಇದು ಸಾಕಾಗುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಯಾಕೆಂದರೆ 100 ಗ್ರಾಂ ದಾಲ್‍ನ್ನು ಬೇಯಿಸಿ, ಕುದಿಸಿ ನೀರು ತೇಲಿಸಿದಾಗ ಅದರಲ್ಲಿನ ಪ್ರೋಟೀನ್ ಅವರ ಕೇವಲ 2 ರಿಂದ 3 ಗ್ರಾಂ ಇರುತ್ತದೆ. 


70 ಕೆಜಿ ತೂಗುವ ವ್ಯಕ್ತಿಗೆ ದಿನವೊಂದಕ್ಕೆ ಕನಿಷ್ಟ 56ಗ್ರಾಂ ಪ್ರೋಟೀನ್ ಅಗತ್ಯವಿರುತ್ತದೆ. ಈ ಹಿನ್ನಲೆಯಲ್ಲಿ ಸಸ್ಯಹಾರಿಗಳಲ್ಲಿ ಹೆಚ್ಚಿನ ಪ್ರೋಟೀನ್ ಅಗತ್ಯವಿರುತ್ತದೆ. ಈ ಹಿನ್ನಲೆಯಲ್ಲಿ ಸಸ್ಯಹಾರಿಗಳಲ್ಲಿ ಪ್ರೋಟೀನ್ ಕೊರತೆ ಹೆಚ್ಚು ಕಾಡುತ್ತದೆ ಎಂಬುದು ಆಹಾರ ತಜ್ಞರ ಅಂಬೋಣ. ಈ ಪ್ರೋಟೀನ್ ನ್ಯೂನತೆ ಸರಿಪಡಿಸಲು. ದಾಲ್ ಜೊತೆಗೆ ಒಂದಷ್ಟು ಪನೀರ್ (ಗಿಣ್ಣು) ಮತ್ತು ಟೋಫು ಸೇರಿಸಬೇಕು ಎಂದು ಆಹಾರ ತಜ್ಞರ ಅನಿಸಿಕೆ. 


ಒಟ್ಟಿನಲ್ಲಿ ನಾವು ತಿನ್ನುವ ಆಹಾರದಲ್ಲಿ ಶರ್ಕರ ಪಿಷ್ಟದ ಸಾಂದ್ರತೆ ಕಡಮೆ ಮಾಡಿ, ಪ್ರೋಟೀನ್ ಅಂಶವನ್ನು ಹೆಚ್ಚಿಸುವುದು ಅತೀ ಅಗತ್ಯ ಎಂಬುದು ಆಹಾರ ತಜ್ಞರ ಒಕ್ಕೊರಲಿನ ಅನಿಸಿಕೆ. ಆದರೆ ಪ್ರೋಟೀನ್ ತಿನ್ನುವ ಭರದಲ್ಲಿ ಹಸಿ ತರಕಾರಿ, ಹಣ್ಣು ಹಂಪಲು, ಸೊಪ್ಪು ಧವಸ ಧಾನ್ಯಗಳನ್ನು ನಿರ್ಲಕ್ಷಿಸುವುದು ಮೂರ್ಖತನವಾದೀತು ಎಂಬ ಕಿವಿ ಮಾತನ್ನು ವೈದ್ಯರು ಹೇಳುತ್ತಾರೆ. 


ನಮ್ಮ ಆಹಾರದಲ್ಲಿ ಪ್ರೋಟೀನ್, ಶರ್ಕರ ಪಿಷ್ಠ, ಲವಣ, ವಿಟಮಿನ್, ಕೊಬ್ಬು ಖನಿಜಾಂಶ ಹೇಗೆ ಎಲ್ಲವೂ ಇದ್ದಲ್ಲಿ ವ್ಯಕ್ತಿಯ ದೈಹಿಕ ಮಾನಸಿಕ ಬೆಳವಣ ಗೆ ಸಂಪೂರ್ಣವಾದೀತು ಎಂಬುದನ್ನು ಅರಿತು ಪಾಲಿಸಿದಲ್ಲಿ ಯಾವುದೇ ಸಮಸ್ಯೆ ಉಂಟಾಗದು ಎಂಬುದೇ ವೈದ್ಯರ ಒಮ್ಮತದ ಅಭಿಮತ.


ಮೂವತ್ತರ ನಿಯಮ 

ಹೊಸತನಕ್ಕೆ ಸದಾ ತೆರೆದುಕೊಳ್ಳುವ ಫಿಟ್‍ನೆಸ್ ಲೋಕದಲ್ಲಿ ಯುವಜನರು ಈಗ ಖ್ಯಾತ ಲೇಖನ ಟಿಮ್ ಫೆರಸ್ ತಿಳಿಸಿದ 30-30-30 ನಿಯಮಕ್ಕೆ ಫಿದಾ ಆಗಿದ್ದಾರೆ. ಈ ಮೂವತ್ತರ ನಿಯಮದಂತೆ ಪ್ರತಿ ದಿನ ಒಳಗೆ ಎದ್ದು 30 ನಿಮಿಷದೊಳಗೆ 30 ಗ್ರಾಂ ಪ್ರೋಟೀನ್‍ಯುಕ್ತ ಆಹಾರ ಸೇವಿಸಿ ನಂತರ 30 ನಿಮಿಷ ಲಘು ವ್ಯಾಯಾಮ ಮಾಡಬೇಕು. ಹೀಗೆ ಮಾಡುವುದರಿಂದ ದೇಹದ ತೂಕ ನಿಯಂತ್ರಿಸಲ್ಪಡುತ್ತದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಮತ್ತು ದೇಹದ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ಅಂದಾಜಿಸಲಾಗಿದೆ. 


ಈ ನಿಯಮದಂತೆ ದೇಹದ ಇತರ ಊಟ ಚಟುವಟಿಕೆ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಸದ್ಯಕ್ಕೆ ಈ ಫಿಟ್‍ನೆಸ್ ಮಂತ್ರ ಯುವ ಜನರಲ್ಲಿ ಟ್ರೆಂಡ ಆಗುತ್ತಿದ್ದು ಎಷ್ಟು ದಿನ ಈ ಕ್ರೇಜ್ ಉಳಿಯುತ್ತದೆ ಎನ್ನುವುದು ಚಿದಂಬರ ರಹಸ್ಯವಾಗಿಯೇ ಉಳಿದಿದೆ. ಅದೇನೇ ಇರಲಿ ಆರೋಗ್ಯ ಸಮಸ್ಯೆ ಇರುವವರು ಈ ರೀತಿಯ ಪ್ರಯೋಗಗಳಿಗೆ ತೆಗೆದುಕೊಳ್ಳುವ ಮೊದಲು ಕುಟುಂಬ ವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಮುಂದುವರಿಯುವುದು ಸೂಕ್ತ ಎಂಬುದು ವೈದ್ಯರ ಆಶಯವಾಗಿರುತ್ತದೆ. 


ಬೆಳಗ್ಗೆ ಪ್ರೊಟೀನ್ ಸೇವಿಸುವುದರಿಂದ ಹೊಟ್ಟೆ ತುಂಬಿದಂತಾಗಿ ಹೆಚ್ಚು ತಿನ್ನುವ ಕಡು ಬಯಕೆಯನ್ನು ನಿಯಂತ್ರಿಸಿ, ರಕ್ತದಲ್ಲಿನ ಸಕ್ಕರೆ ಅಂಶವನ್ನು ಸ್ಥಿರವಾಗಿಸಿ, ದೈಹಿಕ ಮತ್ತು ಮಾನಸಿಕ ನೆಮ್ಮದಿ ನೀಡುತ್ತದೆ ಎಂದು ಫಿಟ್‍ನೆಸ್ ತಜ್ಞರು ವರದಿ ಮಾಡಿರುತ್ತಾರೆ. ಅಧಿಕವಾದರೆ ಅಮೃತವೂ ವಿಷವಾಗುತ್ತದೆ ಎಂಬ ವಿಚಾರವನ್ನು ಯುವಜನರು ಪಾಲಿಸಿದಲ್ಲಿ ಮುಂದೊದಗುವ ಸಮಸ್ಯೆಗಳನ್ನು ತಡೆಯಬಹುದು ಎಂಬ ಕಹಿ ಸತ್ಯವನ್ನು ಜನರು ಅರಿತು ಪಾಲಿಸಿದಲ್ಲಿ ವ್ಯಕ್ತಿಯ ಮತ್ತು ಸಮಾಜದ ಆರೋಗ್ಯ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ. 


ಈಗಿನ ದಾವಂತದ ವೇಗದ ಮತ್ತು ಲೆಕ್ಕಾಚಾರದ ಭಾಗದಲ್ಲಿ ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಜನರು ಮರೆಯದೇ ದೈಹಿಕ ಮತ್ತು ಮಾನಸಿಕ ಆರೋಗ್ಯ ಎರಡಕ್ಕೂ ಪ್ರಾಧಾನ್ಯತೆ ನೀಡುತ್ತಾ ತಮ್ಮ ವೈಯುಕ್ತಿಕ ಆದ್ಯತೆ, ಜೀವನಶೈಲಿ ಮತ್ತು ಕೆಲಸದ ಆಯ್ಕೆ ಇವುಗಳನ್ನು ಗಮನದಲ್ಲಿರಿಸಿ ತಮಗೆ ಬೇಕಾದ ಫಿಟ್‍ನೆಸ್ ಪ್ರಕ್ರಿಯೆಯನ್ನು ಅಳವಡಿಕೊಂಡು ಅಳವಡಿಸಿಕೊಂಡು ನಿಯತ್ತಾಗಿ ಪಾಲಿಸಿದಲ್ಲಿ ನೂರು ಕಾಲ ಸುಖವಾಗಿ ಬದುಕುವುದು ಸಾಧ್ಯವಿದೆ.


-ಡಾ ಮುರಲೀ ಮೋಹನ್ ಚೂಂತಾರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top