ಸ್ವಾಮಿ ವಿವೇಕಾನಂದರ ಹೆಸರೇ ಒಂದು ಅದ್ಭುತವಾದ ದಿವ್ಯ ಚೇತನ. ಭಾರತ ಮಾತೆಯ ಮಡಿಲಲ್ಲಿ ಅರಳಿದ ಪರಮ ಕುಸುಮ. ಜನವರಿ 12 ನೇ ತಾರೀಖು ಬಂತೆಂದರೆ ಭಾರತದಾದ್ಯಂತ ರಾಷ್ಟೀಯ ಯುವಕರ ದಿನವನ್ನು ಆಚರಿಸಲಾಗುತ್ತದೆ.
ವಿಶ್ವವನ್ನೇ ಬೆರಗುಗೊಳಿಸಿದ ಅದ್ವಿತೀಯ ವಾಗ್ಮಿ, ವಿಶ್ವ ಮಾನ್ಯ, ವಿಶ್ವ ವಿಜೇತ, ವೀರ ಸಂನ್ಯಾಸಿ, ವಿವೇಕದಿಂದಲೇ ವಿಶ್ವಕ್ಕೆ ಆನಂದ ನೀಡಿದ ಭಾರತ ಮಾತೆಯ ಹೆಮ್ಮೆಯ ಕಂದ ಅವರೇ ಸ್ವಾಮಿ ವಿವೇಕಾನಂದ. ಇವರ ಜನ್ಮದಿನವನ್ನು ಭಾರತದಲ್ಲಿ ರಾಷ್ಟ್ರೀಯ ಯುವಕರ ದಿನವೆಂದು ಆಚರಿಸಲಾಗುತ್ತದೆ.
ಏಳಿ ! ಎದ್ದೇಳಿ ! ಗುರಿ ಮುಟ್ಟುವವರೆಗೂ ನಿಲ್ಲದಿರಿ. ಇದು ಭಾರತದ ವೀರ ಸಂನ್ಯಾಸಿ , ಭಾರತ ಮಾತೆಯ ಅಮರ ಪುತ್ರ ಸ್ವಾಮಿ ವಿವೇಕಾನಂದರ ದಿವ್ಯ ವಾಣಿ. ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯ ಹರಿಕಾರರಾಗಿದ್ದು, ನಮ್ಮ ದೇಶದ ಅದಮ್ಯ ಚೇತನ, ನಿರಂತರ ಸ್ಫೂರ್ತಿಯ ಚಿಲುಮೆ, ಸಾಮಾಜಿಕ ಚಿಂತಕ, ಧಾರ್ಮಿಕ ಸುಧಾರಕ, ಅಧ್ಯಾತ್ಮ ಸಾಧಕ, ಧ್ಯಾನಸಿದ್ಧ, ವೇದೋಪನಿಷತ್ತುಗಳ ಪ್ರಬುದ್ಧ, ಸನಾತನ ಧರ್ಮ ಪ್ರಚಾರಕರೆಂದರೆ ಬೇರಾರೂ ಅಲ್ಲ. ಅವರೇ ಸ್ವಾಮಿ ವಿವೇಕಾನಂದ.
ಬ್ರಿಟಿಷ್ ಭಾರತದ ರಾಜಧಾನಿಯೆನಿಸಿದ ಪಶ್ಚಿಮ ಬಂಗಾಳದ ಕಲ್ಕತ್ತೆಯಲ್ಲಿ ವಿಶ್ವನಾಥ ದತ್ತ ಮತ್ತು ಭುವನೇಶ್ವರಿದೇವಿಯರ ಸುಪುತ್ರರಾಗಿ ಕ್ರಿ.ಶ. 1863ರ ಜನವರಿ 12 ರಂದು ಸ್ವಾಮಿ ವಿವೇಕಾನಂದರು ಜನಿಸಿದರು.
ಇವರ ಬಾಲ್ಯದ ಹೆಸರು ನರೇಂದ್ರನಾಥ ದತ್ತ. ತಂದೆ ವಕೀಲರಾಗಿದ್ದು, ತಾಯಿ ಸುಸಂಸ್ಕೃತ ಧಾರ್ಮಿಕ ಶ್ರದ್ಧೆಯುಳ್ಳ ಮಹಿಳೆಯಾಗಿದ್ದರು. ನರೇಂದ್ರನು ಬಾಲಕನಾಗಿದ್ದಾಗ ಆಟಪಾಠಗಳಲ್ಲಿ, ಗರಡಿ ಸಾಧನಗಳಲ್ಲಿ ನಿಸ್ಸೀಮನಾಗಿದ್ದನು. ನಿರ್ಭಯ ಪ್ರವೃತ್ತಿಯ, ಎಲ್ಲವನ್ನೂ ಯಾರು? ಏನು? ಎಲ್ಲಿ? ಏಕೆ? ಹೇಗೆ? ಎಂದು ಪ್ರಶ್ನಿಸುವ ಮನೋಧರ್ಮದವನಾಗಿದ್ದನು.
ಸೊಗಸಾದ ಗಾಯಕನಾಗಿದ್ದು, ವಿಷಯ ವಿಮರ್ಶಾ ಚಿಂತಕನೂ ಆಗಿದ್ದನು. ನರೇಂದ್ರನು ಹೊರನೋಟಕ್ಕೆ ಒರಟಾಗಿ ಕಂಡರೂ, ಅವನ ಅಂತರಂಗದ ಮನಸ್ಸು ಅತಿ ಕೋಮಲ. ದೀನ ದಲಿತರು, ನಿರ್ಗತಿಕರು ಇವರ ಮನೆಗೆ ಬಂದು ಬೇಡಿದಾಗ ಕೈಗೆ ಸಿಕ್ಕಿದ್ದನ್ನು ದಾನ ಮಾಡಿಬಿಡುವ ಉದಾರಿ.
ಬಾಲ್ಯದಲ್ಲಿ ನರೇಂದ್ರನಿಗೆ ಧ್ಯಾನ ಮಾಡುವುದೆಂದರೆ ಬಹಳ ಇಷ್ಟ. ಒಮ್ಮೆ ಧ್ಯಾನ ಮಗ್ನನಾಗಿ ಕುಳಿತಿದ್ದಾಗ ಹೆಡೆ ಬಿಚ್ಚಿದ ಹಾವೊಂದು ಸಮೀಪದಲ್ಲಿಯೇ ಹರಿದು ಹೋದರೂ ಧ್ಯಾನದಿಂದ ವಿಚಲಿತನಾಗಲಿಲ್ಲ. ಏಕೆಂದರೆ ಏಕಾಗ್ರತೆಯ ಧ್ಯಾನ ಚಿಕ್ಕಂದಿನಲ್ಲಿಯೇ ರೂಢಿಯಾಗಿತ್ತು. ಅಷ್ಟರ ಮಟ್ಟಿಗೆ ಮನೋನಿಯಂತ್ರಣ ಸಾಧಿಸಿದ್ದ ಬಾಲಕ ನರೇಂದ್ರ.
ಕಾಲೇಜಿನ ದಿನಗಳಲ್ಲಿ, ಹಿಂದೂ ಧರ್ಮದ ಸುಧಾರಣೆಗಾಗಿ ಸ್ಥಾಪಿತವಾಗಿದ್ದ ಬ್ರಹ್ಮ ಸಮಾಜ ಸೇರಿ ಅಲ್ಲಿ ಗಾನ ಗೋಷ್ಠಿಯ ಮುಂದಾಳುವಾಗಿದ್ದನು. ನರೇಂದ್ರರನಿಗೆ ರಾಮಕೃಷ್ಣರ ಮೊದಲ ಪರಿಚಯವಾದದ್ದು ವಿಲಿಯಮ್ ಹೆಸ್ಟಿಯವರ ತರಗತಿಯಲ್ಲಿ. ಪ್ರೊ || ಹೆಸ್ಟಿಯವರು ವಿಲಿಯಮ್ ವರ್ಡ್ಸ್ ವರ್ತ್ ಅವರ "ದ ಎಕ್ಸ್ ಕರ್ಷನ್" ಎಂಬ ಕವಿತೆಯಲ್ಲಿನ "ಸಮಾಧಿ" ಪದವನ್ನು ವಿವರಿಸುವಾಗ ಸಮಾಧಿಯ ನಿಜವಾದ ಅರ್ಥ ತಿಳಿಯಲು ದಕ್ಷಿಣೇಶ್ವರದ ಕಾಳಿ ಮಾತೆಯ ಆರಾಧಕರಾಗಿದ್ದ ರಾಮಕೃಷ್ಣರನ್ನೊಮ್ಮೆ ಭೇಟಿ ನೀಡಲು ಸಲಹೆ ಇತ್ತರು.
ಇವರ ಸಲಹೆಯ ಮೇರೆಗೆ ಹಲವಾರು ವಿದ್ಯಾರ್ಥಿಗಳು ರಾಮಕೃಷ್ಣರನ್ನು ನೋಡಲು ಉತ್ಸುಕರಾದರು. ಕಲ್ಕತ್ತಾದ ಸುರೇಂದ್ರನಾಥರ ಮನೆಯಲ್ಲಿ ಆಯೋಜನೆಗೊಂಡಿದ್ದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದಾಗ ಅಲ್ಲಿಗೆ ಅತಿಥಿಯಾಗಿ ಆಗಮಿಸಿದ್ದ ರಾಮಕೃಷ್ಣ ಪರಮಹಂಸರ ಭೇಟಿ ನರೇಂದ್ರನಿಗಾಯಿತು.
ನರೇಂದ್ರನ ಹಾಡನ್ನು ಕೇಳಿ ಆನಂದಿಸಿದ ರಾಮಕೃಷ್ಣರು ನರೇಂದ್ರನ ಪೂರ್ವಾಪರಗಳನ್ನು ತಿಳಿದುಕೊಂಡ ನಂತರ ದಕ್ಷಿಣೇಶ್ವರಕ್ಕೆ ಬರಲು ನರೇಂದ್ರನಿಗೆ ಆಹ್ವಾನವಿತ್ತರು. ಕೂಡಲೇ ನಡೆದುಕೊಂಡು ದಕ್ಷಿಣೇಶ್ವರವನ್ನು ತಲುಪಿ ರಾಮಕೃಷ್ಣ ಪರಮಹಂಸರನ್ನು ಭೇಟಿಯಾದರು.
ಸರ್ವವನ್ನೂ ಪ್ರಶ್ನಿಸುವ ಮನೋಧರ್ಮದ ನರೇಂದ್ರ , ದೇವರು ಎಂದರೆ ಯಾರು? ದೇವರು ಎಲ್ಲಿದ್ದಾನೆ? ಮತ್ತು ಯಾವ ಆಕಾರದಲ್ಲಿದ್ದಾನೆ ? ದೇವರು ಸರ್ವಾಂತರ್ಯಾಮಿಯಾದರೂ ನಮ್ಮ ಕಣ್ಣಿಗೆ ಏಕೆ ಕಾಣುವುದಿಲ್ಲ? ಹೀಗೆ ದೇವರ ಇರುವಿಕೆಯ ಬಗ್ಗೆ ಪ್ರಶ್ನಿಸಿದರು. ಆಗ ರಾಮಕೃಷ್ಣರ ಸರಳತೆ, ತನ್ಮಯತೆ ನರೇಂದ್ರನನ್ನು ಮಂತ್ರ ಮುಗ್ದನನ್ನಾಗಿಸಿತು ಮತ್ತು ನಿಧಾನವಾಗಿ ತನ್ನ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತಾ ಹೋಯಿತು.
ಮತ್ತೊಮ್ಮೆ ಕಾಲ್ನಡಿಗೆಯಲ್ಲಿ ರಾಮಕೃಷ್ಣ ಪರಮಹಂಸರ ಸಂದರ್ಶನಕ್ಕೆ ಹೋದಾಗ ಅವರ ಸ್ಪರ್ಶ ಮಾತ್ರದಿಂದಲೇ ನರೇಂದ್ರನಿಗೆ ಅಲೌಖಿಕತೆಯ ಅನುಭವವಾಯಿತು. ನಂತರ ನರೇಂದ್ರ ರಾಮಕೃಷ್ಣ ಪರಮಹಂಸರ ಆಪ್ತವರ್ಗಕ್ಕೆ ಸೇರಿಹೋದರು. ಆರು ವರ್ಷಗಳ ಕಾಲ ರಾಮಕೃಷ್ಣರೊಂದಿಗೆ ಸತತ ವಿಚಾರಮಂಥನದೊಂದಿಗೆ ಆಧ್ಯಾತ್ಮಿಕ ಮಾರ್ಗದ ಪ್ರತಿಯೊಂದು ಹೆಜ್ಜೆಯೂ ನರೇಂದ್ರನಿಗೆ ಸ್ಪಷ್ಟವಾಯಿತು.
ವಿದ್ಯಾಭ್ಯಾಸ ಪೂರ್ಣವಾದ ನಂತರ ಇವರಿಗೆ ಅಧ್ಯಾತ್ಮ ಸಾಧನೆಯಲ್ಲಿ ಮನಸ್ಸಿದ್ದರೂ, ತಂದೆಯ ನಿಧನದಿಂದ ಕುಟುಂಬಕ್ಕೆ ಬಂದೊದಗಿದ ಕಷ್ಟಗಳ ನಿವಾರಣೆಗೆ, ಕೆಲಸಕ್ಕೆ ಸೇರಲೇ ಬೇಕಾಯಿತು. ತನ್ನ ಸತ್ವ ಪರೀಕ್ಷೆಯ ಕಠಿಣ ಪರಿಸ್ಥಿತಿಯಲ್ಲಿ, ವಿಗ್ರಹಾರಧನೆ ತನಗೆ ಇಷ್ಟವಿಲ್ಲದಿದ್ದರೂ ಗುರು ರಾಮಕೃಷ್ಣರ ಸಲಹೆಯಂತೆ ಗುರುಗಳ ಆರಾಧ್ಯ ದೈವವಾದ ಕಾಳಿಮಾತೆಯ ಪ್ರಾರ್ಥನೆ ಮಾಡಬೇಕಾಯಿತು.
ಅಂತಹ ಸಂದಿಗ್ಧ ಸಮಯದಲ್ಲಿಯೂ ತನ್ನ ಕುಟುಂಬದ ಕಷ್ಟ ನೀಗಬೇಕೆಂದು ಬೇಡದೆ, ಜ್ಞಾನ - ಭಕ್ತಿ - ವೈರಾಗ್ಯಗಳನ್ನು ಬೇಡಿಕೊಳ್ಳತ್ತಾರೆ. ಇಂತಹ ಅನೇಕ ಸಂದರ್ಭಗಳು ವಿವೇಕಾನಂದರ ವ್ಯಕ್ತಿತದ ಮೇಲೆ ಬೆಳಕು ಚೆಲ್ಲುತ್ತದೆ.
ರಾಮಕೃಷ್ಣ ಪರಮಹಂಸರು 1886 ರಲ್ಲಿ ನಿಧನರಾದರು. ಅನಂತರ ನರೇಂದ್ರ ಮತ್ತು ಸಂಗಡಿಗರು ಸನ್ಯಾಸ ದೀಕ್ಷೆ ಸ್ವೀಕರಿಸಿದರು. ಗುರುಗಳ ಆಣತಿ ಮತ್ತು ಉಪದೇಶಾನುಸಾರ ಆತ್ಮೋದ್ಧಾರ ಮತ್ತು ಲೋಕ ಕಲ್ಯಾಣವನ್ನು ಸಾಧಿಸುವ ಸಂಕಲ್ಪ ಮಾಡಿದರು.
ಧ್ಯಾನ, ಭಜನೆ, ಅಧ್ಯಯನ, ಭಿಕ್ಷೆ ಮುಂತಾದ ಕಠಿಣ ವ್ರತಗಳನ್ನು ಆಚರಿಸಿ ತಪಸ್ಸುಗಳಲ್ಲಿ ಮಗ್ನರಾದರು. ನರೇಂದ್ರರಿಗೆ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರಕಾಂಡ ಪಾಂಡಿತ್ಯವಿರುವುದರಿಂದ.
ತಮ್ಮ ಅಸಾಧಾರಣ ಪ್ರತಿಭೆ ಮತ್ತು ವ್ಯಕ್ತಿತ್ವದಿಂದ ಪಂಡಿತರು, ಸಾಮಾನ್ಯರು, ಪ್ರತಿಭಾನ್ವಿತರೊಂದಿಗೆ ವಿಚಾರ ವಿನಿಮಯ ಮಾಡುತ್ತಾ ತಮ್ಮ ಪ್ರಭಾವವನ್ನು ಅವರ ಮೇಲೆ ಬೀರಿದರು. ಐದು ವರ್ಷಗಳ ಕಾಲ ಭಾರತ ದೇಶದ ಸಂಚಾರವನ್ನು ಕೈಗೊಂಡರು. 1888 ರಲ್ಲಿ ನರೇಂದ್ರರು ಭಾರತ ಪರ್ಯಟನೆಗೆ ಹೋಗುವಾಗ ಅವರ ಜೊತೆಗೆ ಕಮಂಡಲ, ದಂಡ ಮತ್ತು ಅವರಿಗೆ ಪ್ರಿಯವಾದ ಭಗವದ್ಗೀತೆ ಹಾಗೂ "ದಿ ಇಮಿಟೇಷನ್ ಆಫ಼್ ಕ್ರೈಸ್ತ್" ಎಂಬೆರಡು ಪುಸ್ತಕಗಳನ್ನು ತಮ್ಮ ಜೊತೆಗೆ ಒಯ್ಯುತ್ತಿದ್ದರು.
ಪ್ರತಿಯೊಬ್ಬರೂ ಪುರುಷ ಸಿಂಹರಾಗಿ ಬಾಳಬೇಕು. ಯಾವುದೇ ವಿಧದ ಕಷ್ಟಗಳಿಗೆ ಅಂಜದೆ, ಏನೇ ಸಮಸ್ಯೆ ಇರಲಿ, ಧೈರ್ಯದಿಂದ ಎದುರಿಸಿ ಪರಿಹಾರವನ್ನು ಕಂಡು ಕೊಳ್ಳಬೇಕು ಎಂದು ಹೇಳುತ್ತ, ಯುವಕರಲ್ಲಿ ಧೈರ್ಯ ಸಾಹಸ ಪ್ರವೃತ್ತಿ ಬೆಳೆಯುವಂತೆ ಪ್ರೇರಣೆ ನೀಡಿದರು.
ಹೀಗೆ ಭಾರತದ ಪ್ರವಾಸದಲ್ಲಿರುವಾಗಲೇ ಲೋಕಮಾನ್ಯ ಬಾಲಗಂಗಾಧರ ತಿಲಕರ ಭೇಟಿಯಾಯಿತು. ಖೇತ್ರಿ ಮಹಾರಾಜರು ನರೇಂದ್ರರ ಶಿಷ್ಯರಾದ ಮೇಲೆ ಇವರ ಅರ್ಥಪೂರ್ಣ ವಿವೇಕವನ್ನು ಕೊಂಡಾಡುತ್ತಾ ನರೇಂದ್ರರಿಗೆ ವಿವೇಕಾನಂದ ಎಂಬ ಹೆಸರನ್ನು ನೀಡಿದರು ಮತ್ತು ಅಮೇರಿಕಾದ ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸುವಂತೆ ಸಲಹೆ ನೀಡಿದರು.
ವಿವೇಕಾನಂದರ ಪ್ರತಿಭೆ ಮೈಸೂರು ಮಹಾರಾಜರಾಗಿದ್ದ 10ನೇ ಚಾಮರಾಜ ಒಡೆಯರನ್ನು ಮನಸ್ಸನ್ನು ಸೂರೆಗೊಂಡಿತ್ತು ಮತ್ತು ಇವರ ವಿದೇಶ ಪ್ರವಾಸಕ್ಕೆ ಅಗತ್ಯವಾದ ಆರ್ಥಿಕ ನೆರವನ್ನು ನೀಡಿದರು.
1893 ರ ಸೆಪ್ಟಂಬರ್ 11 ನೇ ತಾರೀಖಿನಂದು ಅಮೆರಿಕಾದ ಚಿಕಾಗೋ ನಗರದಲ್ಲಿ ಆಯೋಜನೆಗೊಂಡ ವಿಶ್ವ ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿದರು. " ಅಮೇರಿಕಾದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ," [ BROTHERS AND SISTERS OF AMERICA ] ಎಂಬ ಮಾತುಗಳ ಮೂಲಕ ಅಲ್ಲಿ ನೆರೆದಿದ್ದ ಸಹಸ್ರಾರು ಜನರ ಮನಸ್ಸಿನಲ್ಲಿ ಹೊಸ ಸಂಚಲನವನ್ನೇ ಮೂಡಿಸಿದರು.
ಭಾರತದ ನಾಗರಿಕತೆ, ಸಂಸ್ಕೃತಿ, ಹಿಂದೂ ಧರ್ಮದ ಪ್ರಾಚೀನತೆಯನ್ನು, ಭಾರತೀಯರ ಮನೋವೈಶಾಲ್ಯತೆಯನ್ನು ವಿವರಿಸಿದರು. ಸಮ್ಮೇಳನದಲ್ಲಿ ಸಭೆಯನ್ನುದ್ದೇಶಿಸಿ ಆಡಿದ ವಿವೇಕಾನಂದರ ಮಾತುಗಳು, ಅವರ ವಿಶಿಷ್ಠವಾದ ಪ್ರತಿಭೆ, ಮೇಧಾಶಕ್ತಿ, ಪ್ರತಿಪಾದನಾ ಕೌಶಲ್ಯಗಳು ಇಡೀ ಜಗತ್ತಿಗೆ ಇವರನ್ನು ಪರಿಚಯಿಸಿದವು ಮತ್ತು ಪ್ರಜ್ಞಾ ಪ್ರವಾಹವನ್ನುಂಟು ಮಾಡಿದವು.
ಇದು ಭಾರತಕ್ಕೆ ಮತ್ತು ಭಾರತೀಯರಾದ ನಮಗೆ ಹೆಮ್ಮೆಯ ವಿಷಯವಾಗಿದೆ. ಇಲ್ಲಿಂದ ಮುಂದೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ವಿವೇಕಾನಂದರ ಪ್ರವಚನಗಳು ಏರ್ಪಟ್ಟವು. ರಾಷ್ಟ್ರೋದ್ಧಾರ ಮತ್ತು ವೇದಾಂತಗಳ ಜ್ಞಾನ ಪ್ರಸಾರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವುದಾಗಿ ಸಂಕಲ್ಪ ಮಾಡಿದರು.
ಅಂದಿನಿಂದ ಭಾರತದ ನವನಿರ್ಮಾಣದಲ್ಲಿ ಇವರೊಬ್ಬ ಯುಗಪುರುಷರಾಗಿ ಪರಿಗಣಿತರಾದರು. ವಿಚಾರಗೋಷ್ಠಿಗಳು, ಅಧ್ಯಯನ ಕೇಂದ್ರಗಳು ವಿಶ್ವದಾದ್ಯಂತ ರೂಪುಗೊಂಡವು. ಕರ್ಮಯೋಗ, ಭಕ್ತಿಯೋಗ, ರಾಜಯೋಗಗಳನ್ನು ಕುರಿತಂತೆ ಇವರ ಸ್ಫೂರ್ತಿದಾಯಕ ಮಾತುಗಳು ಮತ್ತು ಅವುಗಳನ್ನೊಳಗೊಂಡ ಪ್ರವಚನಗಳು, ಉಪನ್ಯಾಸಗಳು ಇವರ ಪ್ರಮುಖ ಕೃತಿಗಳಾಗಿ ಹೊರಹೊಮ್ಮಿದವು.
ವೇದಾಂತದ ತತ್ವಗಳನ್ನು ಆಧುನಿಕ ವಿಚಾರ ಧೋರಣೆಗೆ ಒಗ್ಗುವಂತೆ ಸೂಕ್ತ ರೀತಿಯಲ್ಲಿ ಪ್ರತಿಪಾದಿಸಿದ್ದು, ಇವರು ಸನಾತನ ಧರ್ಮಕ್ಕೆ ಮಾಡಿದ ಪ್ರಮುಖ ಸೇವೆಯಾಗಿದೆ. ಅಮೇರಿಕಾದ ಶಿಕ್ಷಿತ ಸಮುದಾಯದಲ್ಲಿ ವಿಚಾರಕ್ರಾಂತಿಯನ್ನುಂಟು ಮಾಡಿದರು.
1895 ರಲ್ಲಿ ಇಂಗ್ಲೆಂಡ್ ನ ಲಂಡನ್ ನಗರದಲ್ಲಿ ವೇದಾಂತ ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮಾರ್ಗರೇಟ್ ನೋಬೆಲ್ ಎಂಬ ಆಂಗ್ಲ ಮಹಿಳೆ ವಿವೇಕಾನಂದರನ್ನು ಗುರುವಾಗಿ ಸ್ವೀಕರಿಸಿ, ಭಾರತಕ್ಕೆ ಬಂದು ಸಿಸ್ಟರ್ ನಿವೇದಿತಾ ಎಂಬ ಹೆಸರಿನಿಂದ ಖ್ಯಾತಿ ಪಡೆದರು.
ಬಹಳಷ್ಟು ಯುವಜನರ ಆದರ್ಶ ಚೇತನ ಸ್ವಾಮಿ ವಿವೇಕಾನಂದ. ಸಂಕಷ್ಟಗಳನ್ನು ಎದುರಿಸುತ್ತ ಬಾಡಿದ ಮನಸ್ಸನ್ನು ಬಡಿದೆಬ್ಬಿಸಿ ಬದುಕಿಗೆ ಶಕ್ತಿ ತುಂಬ ಬಲ್ಲ ಶಕ್ತಿ ಸ್ವಾಮಿ ವಿವೇಕಾನಂದರ ಮಾತುಗಳಲ್ಲಿದೆ. ಅಂತಹ ಮಾತುಗಳ ಪೈಕಿ ನಮ್ಮ ಮನಸ್ಸು ಮತ್ತು ದೇಹದಲ್ಲಿ ಉಂಟಾಗುವ ವಿದ್ಯುತ್ ಸಂಚಾರಕ್ಕೆ ಕೆಲವೊಂದಷ್ಟು ಆಯ್ದ ವಿವೇಕ ನುಡಿ ಮಣಿಗಳು ಇಲ್ಲಿವೆ.
"ಎಲ್ಲ ಶಕ್ತಿಯೂ ನಿಮ್ಮೊಳಗೇ ಇದೆ. ನೀವು ಏನು ಬೇಕಾದರೂ ಮಾಡಬಹುದು."
" ಯಾರಲ್ಲಿ ಆತ್ಮ ವಿಶ್ವಾಸ ಇರುವುದಿಲ್ಲವೋ ಅವನಲ್ಲಿ ಉಳಿದ ವಸ್ತುಗಳ ಬಗೆಗೆ ವಿಶ್ವಾಸವಾದರೂ ಹೇಗೆ ಹುಟ್ಟುತ್ತದೆ."
"ಜೀವ ನಮ್ಮ ಮಾತನ್ನು ಕೇಳುವುದಿಲ್ಲ. ಯಾವಾಗ ಬೇಕಾದರೂ ಹೋಗಬಹುದು. ಆದರೆ ಜೀವನ ನಮ್ಮ ಮಾತನ್ನು ಕೇಳುವ ಕಾರಣ, ಹೇಗೆ ಬೇಕಾದರೂ ಅದನ್ನು ರೂಪಿಸಿಕೊಳ್ಳಬಹುದು."
" ಆಸೆಯಿಲ್ಲದವನು ಇದೇ ವಿಶ್ವದಲ್ಲಿಯೇ ದೊಡ್ಡ ಶ್ರೀಮತ."
" ಶಿಕ್ಷಣ ಎಂಬುದು ಮನುಷ್ಯನೊಳಗೆ ಹುದುಗಿದ್ದ ಪರಿಪೂರ್ಣತೆಯನ್ನು ಅಭಿವ್ಯಕ್ತಿಗೊಳಿಸುವ ಪ್ರಯತ್ನ.
"ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ. ಅಜ್ಞಾನದ ಕತ್ತಲೆಯನ್ನು ಕಳೆದು ಸುಜ್ಞಾನದ ಕಡೆಗೆ ಕರೆದೊಯ್ಯುವುದೇ ಗುರು."
"ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿಕೆ ಮತ್ತು ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ." "ಮನಸ್ಸನ್ನು ಶಕ್ತಿಯತವೂ, ಶಿಸ್ತುಬದ್ಧವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವಂಥದ್ದು." "ಸಾಧ್ಯವೇ ಇಲ್ಲ ಎಂದರೆ ಏನನ್ನೂ ಸಾಧಿಸಲಾಗದು. ಪ್ರಯತ್ನದಿಂದ ನಷ್ಟವೇನಿದೆ? ಗೆದ್ದರೆ ಸಂತೋಷ ಸಿಗುವುದು, ಸೋತರೆ ಅನುಭವ ಖಚಿತ.
" ಜಗತ್ತು ಒಂದು ದೊಡ್ಡ ವ್ಯಾಯಾಮ ಶಾಲೆ. ಇಲ್ಲಿ ನಾವು ಬರುವುದೇ ನಮ್ಮನ್ನು ಬಲಪಡಿಸುವುದಕ್ಕಾಗಿ. " ಇಂತಹ ಮಾಣಿಕ್ಯದ ಮಾತುಗಳ ಮೂಲಕವೇ ಜನರನ್ನು ತಲುಪಿದವರು ಸ್ವಾಮಿ ವಿವೇಕಾನಂದ.
ವಿದೇಶದಿಂದ ಭಾರತಕ್ಕೆ ಮರಳಿದ ನಂತರ ಸ್ವಾಮಿ ವಿವೇಕಾನಂದರು "ರಾಮಕೃಷ್ಣ ಮಿಷನ್" ಅನ್ನು 1897 ರಲ್ಲಿ ಸ್ಥಾಪಿಸಿದರು. ಹಾಗೆಯೇ "ಆತ್ಮನೋ ಮೋಕ್ಷಾರ್ಥಂ ಜಗದ್ ಹಿತಾಯಚ" (ಸ್ವತಃ ಮೋಕ್ಷಕ್ಕಾಗಿ ಮತ್ತು ಜಗತ್ತಿನ ಹಿತಕ್ಕಾಗಿ) ಎಂಬ ತತ್ತ್ವವನ್ನೂ ರೂಪಿಸಿದರು.
ರಾಮಕೃಷ್ಣ ಮಿಷನ್ ಈಗ ಭಾರತದ ಧಾರ್ಮಿಕ ಸಂಸ್ಥೆಗಳಲ್ಲಿ ಬಹಳ ಹೆಸರು ಮಾಡಿರುವ ಮತ್ತು ಗೌರವಾನ್ವಿತ ಸಂಸ್ಥೆಯಾಗಿದೆ. ಈ ಸಂಸ್ಥೆಯ ಮೂಲಕ ಹಲವು ವರ್ಷಗಳು ಅವಿಶ್ರಾಂತವಾಗಿ ಜನಹಿತದ ದೃಷ್ಟಿಯಿಂದ ಮತ್ತು ರಾಷ್ಟ್ರೋದ್ಧಾರಕ್ಕಾಗಿ ದುಡಿದರು.
ಪರೋಪಕಾರಕ್ಕಾಗಿ ಹಲವು ಸಂಸ್ಥೆಗಳನ್ನು ಸ್ವಾಮೀಜಿ ತೆರೆದರು. ಶಿಕ್ಷಣ ಸಂಸ್ಥೆಗಳು, ವೃದ್ಧಾಶ್ರಮಗಳು, ತಾಂತ್ರಿಕ ಮತ್ತು ಔದ್ಯೋಗಿಕ ಶಿಕ್ಷಣ ಸಂಸ್ಥೆಗಳು ಮುಂತಾದವನ್ನು ತೆರೆದರು. ಅನ್ನದಾನ, ವಿದ್ಯಾದಾನ, ಜ್ಞಾನದಾನಗಳ ಕಡೆಗೆ ಜನರ ಗಮನ ಸೆಳೆದರು.
"ಜಗತ್ತಿನ ಉದ್ಧಾರಕ್ಕೆ ಯತ್ನಿಸಬೇಡಿ, ಜಗತ್ತು ಉದ್ಧಾರವಾಗುವುದಕ್ಕೆ ನಿಮ್ಮನ್ನು ಕಾಯುತ್ತಿಲ್ಲ. ನಿಮ್ಮ ಉದ್ಧಾರಕ್ಕಾಗಿ ಇನ್ನೊಬ್ಬರಿಗೆ ಸಹಾಯ ಮಾಡಿ " ಎಂದರು. ಹೀಗೆ ಬಿಡುವಿಲ್ಲದ ದುಡಿಮೆಯಿಂದಾಗಿ, 1902, ಜುಲೈ 4 ನೇ ತಾರೀಖಿನಂದು 'ಸ್ವಾಮಿ ವಿವೇಕಾನಂದ'ರು ಪಂಚಭೂತಗಳಲ್ಲಿ ಲೀನವಾದರು.
ಅವರಿಗೆ ಆಗ ಕೇವಲ 39 ವರ್ಷವಾಗಿತ್ತು. ಇವರು ಯುವಕರಿಗೆ ದಾರಿದೀಪವಾಗಿದ್ದರು. ಯುವಕರಿಗೆ ಪ್ರೇರಣೆ ನೀಡಿ ಕೆಲಸ ಮಾಡಲು ಸ್ಫೂರ್ತಿ ನೀಡಿದ ಮಹಾನ್ ಚೇತನ ಸ್ವಾಮಿ ವಿವೇಕಾನಂದ. ಆದ್ದರಿಂದಲೇ ಪ್ರತಿವರ್ಷ ಭಾರತದಾದ್ಯಂತ ವಿವೇಕಾನಂದರ ಜನ್ಮದಿನವಾದ ಜನವರಿ 12 ನ್ನು ರಾಷ್ಟ್ರೀಯ ಯುವಕರ ದಿನವೆಂದು ಆಚರಿಸಲಾಗುತ್ತದೆ.
ಸ್ವಾಮಿ ವಿವೇಕಾನಂದರು ಭಾರತದ ಎಚ್ಚೆತ್ತ ಚೇತನ. ರಾಷ್ಟ್ರಜಾಗೃತಿ ಮೂಡಿಸಿದ ದಿವ್ಯ ಜ್ಞಾನಿ. ನಾಡಿಗಾಗಿ ಕರೆ ನೀಡಿದ ಸರ್ವಶ್ರೇಷ್ಠ ಸಂತನೂ, ಪ್ರಾಜ್ಞ ಮಹನೀಯನೂ ಎನಿಸಿದ ಭಾರತದ ಈ ಚಿರಧ್ರುವತಾರೆಯ ತತ್ವ ಆದರ್ಶಗಳು ನಮ್ಮ ವ್ಯಕ್ತಿತ್ವ ಮತ್ತು ಶೀಲ ನಿರ್ಮಾಣದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತವೆ. ಸ್ವಾಮಿ ವಿವೇಕಾನಂದರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಾ ಅಖಂಡ ಭಾರತದ ಸರ್ವ ವಿಧದ ಏಳಿಗೆಗೆ ನಾವೆಲ್ಲರೂ ಶ್ರಮಿಸೋಣ.
-ಕೆ. ಎನ್. ಚಿದಾನಂದ, ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ