ನಮ್ಮೂರ ಪರಮಗುರು ಶ್ರೀಕೃಷ್ಣ ಪಂಡಿತರು
ಸುಮ್ಮನಿರದವರು ಎಂಭತ್ಮೂರರಲ್ಲು |
ಹಮ್ಮುಬಿಮ್ಮುಗಳಿರದ ಹೃದಯವಂತಿಕೆಯುಳ್ಳ
ಅಮ್ಮನಂಥವರಿವರು- ಪುಟ್ಟಕಂದ || ೧ ||
ಕನ್ನಡದ ನಾಡೋಜ ಹಿಂದಿ ಸಂಸ್ಕೃತದಲ್ಲು
ಮನ್ನಣೆಯ ಮೇರುವೆನೆ ಕೀರ್ತಿಭಾಜನರು |
ರನ್ನಪಂಪರನೋದಿ ವ್ಯಾಕರಣ ಛಂದಗಳ
ಚೆನ್ನಾಗಿ ಕಲಿಸಿದರು- ಪುಟ್ಟಕಂದ || ೨ ||
ನುಡಿದಂತೆ ನಡೆದವರು ಬಡಿವಾರ ಮರೆತವರು
ಕಡುಕಷ್ಟದಿಂದೊಗೆದ ಗುರುತರದ ಗುರುವು |
ಕೆಡುಕು ಬಯಸುವ ಜನರ ತಿದ್ದಿ ಸರಿಪಡಿಸುವರು
ಎಡೆಬಿಡದೆ ದುಡಿವವರು- ಪುಟ್ಟಕಂದ || ೩ ||
ಪ್ರೀತಿಯಲಿ ಶಿಷ್ಯರಿಗೆ ಮಾತೆಮಮತೆಯ ತೋರಿ
ರೀತಿನೀತಿಗಳನ್ನು ಬಿಡದೆ ಕಲಿಸಿದರು |
ಛಾತಿಯಿಂ ಪಳಗನ್ನಡದ ಕಬ್ಬಸಿರಿಯನ್ನು
ಜ್ಯೋತಿಯೊಲು ನೀಡಿದರು- ಪುಟ್ಟಕಂದ || ೪ ||
ಪೊಡಮಡುವೆ ನಾನಿವರ ಸಿರಿಚರಣ ಕಮಲಕ್ಕೆ
ಬಿಡದೆ ಬೇಡುವೆನಿವರ ಆರೋಗ್ಯ ಭಾಗ್ಯ |
ಅಡಿಗಡಿಗೆ ನಿರ್ಮಿಸುವೆ ಕನ್ನಡದ ಮುಕ್ತಕವ
ಗುಡಿಯ ಗೋಪುರದಂತೆ- ಪುಟ್ಟಕಂದ || ೫ ||
(ಗುರುಸಮಾನರೂ ಹಿರಿಯ ಬಂಧುಗಳೂ ಆತ್ಮೀಯ ಸ್ನೇಹಿತರೂ ಆಗಿರುವ ಪ್ರೊ. ಡಾ. ಶ್ರೀಕೃಷ್ಣ ಭಟ್ ಅವರ ಸಹಸ್ರಚಂದ್ರ ದರ್ಶನದ ಶುಭಮುಹೂರ್ತದಲ್ಲಿ ಅವರ ಆಶೀರ್ವಾದಗಳನ್ನು ಬೇಡುತ್ತಾ ಅನುಕ್ರಮವಾಗಿ ಹಯಪ್ರಾಸ, ಹಯಪ್ರಾಸ, ಸಿಂಹಪ್ರಾಸ, ಗಜಪ್ರಾಸ, ಸಿಂಹಪ್ರಾಸವಿರುವ ಛಂದೋಬದ್ಧ ಆಶುಮುಕ್ತಕ ಕುಸುಮ ಪಂಚಕವನ್ನು ಶ್ರೀಯುತರ ಚರಣಗಳಿಗೆ ಅರ್ಪಿಸುವೆನು. ಶುಭವಾಗಲಿ.)
- ವಿ.ಬಿ. ಕುಳಮರ್ವ, ಕುಂಬ್ಳೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ