ಮರವು ತಳಿತು ಕೆಂಪು ಚಿಗುರು
ಮೆರೆದು ಬರದೆ ಹಕ್ಕಿ ಹಾಡು
ಬರಿದು ಕಾಣೆ ಚೆಲ್ವು ಹೊಸತು ವರ್ಷ ಕಾಣದು /
ಬರಿಯ ದಿನದ ಪಟ್ಟಿ ನಮಗೆ
ಸರಿದು ಬರಲು ನವದ ವರ್ಷ
ಕರೆದು ಕೂಗಿ ನಲಿದರೇನು ವರ್ಷ ಬದಲದು/
ತಳಿತ ಮಾಮರದಲಿ ಕುಕಿಲ
ಕುಳಿತು ಹಾಡೆ ನಮಗೆ ಹರ್ಷ
ಕಳೆಯ ತುಂಬಿ ತೋಟದಲ್ಲಿ ಕಾಣ ಬೇಕಿದೆ/
ಮಳೆಯ ಸುರಿಸೆ ಹೂವ ತರುವು
ಕಳಿತ ಕಾಯಿ ಹಣ್ಣು ಸವಿಯೆ
ತಿಳಿಯಿರೆಲ್ಲ ಸಾಧ್ಯ ನವದ ಕಾಲ ಬರಲಿದೆ /
ಗುಡಿಗೆ ಸಾಗಿ ಭಕ್ತಿ ತುಂಬಿ
ಮಡಿಯ ಸ್ನಾನ ಮಾಡಿಕೊಂಡು
ಸಡಿಲ ಮಾಡಿ ಮನದ ಬಿಗಿತ ಹಗುರವಾಗಲು /
ಬಿಡದೆ ಧ್ಯಾನ ಮಾಡಲಾಗಿ
ಬಡವನಲ್ಲ ನೀವು ಜಗದಿ
ಕುಡಿತದಮಲು ಬೇಡ ಸ್ಫೂರ್ತಿ ಕೆಚ್ಚ ಪಡೆಯಲು/
ಯುಗವು ಕಳೆದು ಹೋದ ಹಾಗೆ
ಜಗಕೆ ಬರಲು ಕಾಯ ಬೇಕು
ಸೊಗದ ಕಾಲ ವಿಷುವ ಹಬ್ಬ ಹೊಸತು ವರ್ಷವು /
ಚಿಗಿತು ವೃಕ್ಷ ಸೊಗಸು ಮಿಗಲು
ಖಗವು ಹಾರಿ ಹಾಡ ಹಾಡಿ
ಬಗೆಯ ತುಂಬೆ ಹರ್ಷ ಹೊಮ್ಮಿ ನವ್ಯ ಪರ್ವವು /
- ಗುಣಾಜೆ ರಾಮಚಂದ್ರ ಭಟ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ