ಬೆಂಗಳೂರಿನಲ್ಲಿ ನಡೆದ ಭರವಸೆಗಳ ಸಮಿತಿ ಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಸೂಚನೆ
ಬಂಟ್ವಾಳ: ಪೊಳಲಿ ಸಮೀಪದ ಅಡ್ಡೂರು ಸೇತುವೆ ಶಿಥಿಲಗೊಂಡಿದ್ದು, ಈ ಸೇತುವೆ ದುರಸ್ತಿಗೆ ಈಗಾಗಲೇ ಸರ್ಕಾರದಿಂದ ರೂ. 6.00 ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದರೂ ಈವರೆಗೆ ಕಾಮಗಾರಿ ಕೈಗೆತ್ತಿಕೊಳ್ಳದಿರುವ ಬಗ್ಗೆ ಭರವಸೆಗಳ ಸಮಿತಿ ಸಭೆಯಲ್ಲಿ ತಿಳಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬೆಂಗಳೂರಿನ ಶಾಸಕ ಭವನ-5 ರಲ್ಲಿ ಇಂದು (ಜ.22) ಕರ್ನಾಟಕ ವಿಧಾನ ಸಭೆಯ ಭರವಸೆಗಳ ಸಮಿತಿ ಸಭೆಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ಭರವಸೆಗಳ ಬಗ್ಗೆ ನಡೆದ ಸಭೆಯಲ್ಲಿ ಅಡ್ಡೂರು ಸೇತುವೆ ದುರಸ್ಥಿ ಕುರಿತು ಅವರು ಅಧಿಕಾರಿಗಳ ಜೊತೆ ಚರ್ಚಿಸಿದರು.
ಅಡ್ಡೂರು ಸೇತವೆ ಶಿಥಿಲಗೊಂಡಿರುವುದರಿಂದ ಕಳೆದ ಆಗಸ್ಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಯವರು ಈ ಸೇತುವೆಯಲ್ಲಿ ಬಸ್ಸು ಸೇರಿದಂತೆ ಘನ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿರುತ್ತಾರೆ. ಬಸ್ಸು ಸಂಚಾರ ಇಲ್ಲದೆ ಪ್ರತಿನಿತ್ಯ ಶಾಲಾ ಕಾಲೇಜುಗಳಿಗೆ, ಕೆಲಸಕ್ಕೆ ತೆರಳುವವರಿಗೆ ಹಾಗೂ ಪ್ರಸಿದ್ದ ಪೊಳಲಿ ರಾಜಾರಾಜೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಮತ್ತು ಸ್ಥಳೀಯ ಪರಿಸರದವರಿಗೆ ತೊಂದರೆಯಾಗಿದೆ. ಈ ಸೇತುವೆಯ ಪುನರ್ ನಿರ್ಮಾಣಕ್ಕೆ ರೂ. 50.00 ಕೋಟಿ ಬೇಕಾಗಿದ್ದು, ತಕ್ಷಣದ ಪರಿಹಾರಕ್ಕಾಗಿ ಸೇತುವೆ ದುರಸ್ತಿಗೊಳಿಸಲು ಸರ್ಕಾರದಿಂದ ರೂ. 6.00 ಕೋಟಿ ಅನುದಾನ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಮುಗಿದರು ಕಾಮಗಾರಿ ಆರಂಭಕ್ಕೆ ವಿಳಂಬಗೊಳಿಸುತ್ತಿರುವ ಬಗ್ಗೆ ಸಮಿತಿ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ರಾಜೇಶ್ ನಾಯ್ಕ್ ಅವರು ಸಭೆಯಲ್ಲಿ ತಿಳಿಸಿದ ವಿಷಯಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸಿ. ಸತ್ಯನಾರಾಯಣ ಅವರು ಅಡ್ಡೂರು ಸೇತುವೆಯ ದುರಸ್ತಿ ಕಾಮಗಾರಿಯನ್ನು ಮುಂದಿನ ಮೂರು ದಿನಗಳೊಳಗೆ ಆರಂಭಿಸಲಾಗುವುದು. ಹಾಗೂ ಈ ಸೇತುವೆಯ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೂ. 50.00 ಕೋಟಿ ಅನುದಾನ ಮಂಜೂರಾತಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಭರವಸೆಗಳ ಸಮಿತಿ ಅಧ್ಯಕ್ಷರಾದ ಕೆ.ವೈ. ನಂಜೇಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಕರ್ನಾಟಕ ವಿಧಾನ ಸಭೆ ಸಚಿವಾಲಯ ಭರವಸೆಗಳ ಸಮಿತಿ ಅಧೀನ ಕಾರ್ಯದರ್ಶಿ ಎಸ್. ರಾಜಣ್ಣ, ಲೋಕೋಪಯೋಗಿ ಇಲಾಖೆ ಐಎಫ್‌ಎ ಡಾ. ಸೋಮನಾಥ್, ಕೆ.ಆರ್.ಡಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಲಿಂಗಮೂರ್ತಿ ಜಿ., ರಾಜ್ಯ ಹೆದ್ಧಾರಿ ಯೋಜನಾ ನಿರ್ದೇಶಕ ಜಗನ್ನಾಥ ಹಾಗೂ ಶಿವಮೊಗ್ಗ ಸರ್ಕಲ್ ಮತು ಮಂಗಳೂರು ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ