ಬಿಟ್ಟಿ ಸಿಕ್ಕ ಕ್ಯಾಲೆಂಡರ್ ನೇತು ಹಾಕೋಕೆ ಮೊಳೆ ಹೊಡೆಯೋವಾಗ ಕೈ ಜಜ್ಜಿಕೊಂಡ ಗಾಯ ಇನ್ನೂ ವಾಸಿಯಾಗಲಿಲ್ಲ. ಈಗ ನೋಡಿದ್ರೆ ತಿರುಗಿಸಲು ತಿಂಗಳೇ ಖಾಲಿಯಾಗಿವೆ. ಯಾವಾಗ್ಲೂ ಡಿಸೆಂಬರ್ ಎರಡನೇ ವಾರಕ್ಕೆ ಹೊಸ ಕ್ಯಾಲೆಂಡರ್ ಕೊಡ್ತಿದ್ದ ಅಂಗಡಿಯವರ ಸದ್ದೇ ಇಲ್ಲ. ಮೂರ್ಕಾಸು ಕ್ಯಾಲೆಂಡರ್ ಆಸೆಗೆ ಆರ್ಕಾಸು ಖರ್ಚು ಮಾಡಿದ್ರು ಕೊಡ್ತಿಲ್ವಲ್ಲಾ. ಈ ವರ್ಷ ಸರ್ಕಾರದೋರು ಬ್ಯಾನ್ ಮಾಡ್ಬಿಟ್ರ?. ಅಯ್ಯೋ!! ಹಾಗಾಗ್ಬಿಟ್ರೆ ನಮ್ಮಂತೋರ್ ಗತಿಯೇನು. ರಾಹುಕಾಲದ ಜೊತೆಗೆ ರಾಜಿಯಾಗೋದ? ಸಂಕಷ್ಟಿ ಮುಗಿಸೋಕೆ ಚಂದ್ರ ಮೂಡೋ ಘಳಿಗೆ ನೋಡೋದ್ಹೇಗೆ? ಗೋಡೆ ಮೇಲೆ ಆಗಿರೋ ತೂತ ಮುಚ್ಹೋಕೆ ಏನ್ಮಾಡೋದು?. ವರಮಹಾಲಕ್ಷ್ಮಿ ಪೂಜೆ ಮಾಡೋದ್ ಹೇಗೆ? ಬರ್ತ್ಡೇ ವೀಕೆಂಡ್ ಬರುತ್ತಾ? ಯಾವುದಕ್ಕೊ ಗೂಗಲ್ ಮಾಡ್ಬಿಟ್ಟೆ. ಇಲ್ಲ ಸರ್ಕಾರದ ಯಾವುದೇ ಕ್ಯಾಲೆಂಡರ್ ರದ್ದಿನ ನಿರ್ಧಾರವಿಲ್ಲ.
ಡಿಸೆಂಬರ್ 24 ಕ್ರಿಸ್ಮಸ್ ಈವನಿಂಗ್ ಬಂದೇ ಬಿಡ್ತು. ಸಂತಾಕ್ಲಾಸ್ ಬಂದ್ರೂ ಕೈಯಲ್ಲಿದೆ ಗಿಫ್ಟ್ ಬಾಕ್ಸ್ ಚೌಕಾಕಾರದ್ದೇ. ಕ್ಯಾಲೆಂಡರ್ ಮಡಚಿದರೆ ಸುರುಳಿ ಆಕಾರ ಅಲ್ವೇ?. ಛೇ ಏನ್ಮಾಡ್ಲಿ? ಹಾಲಿನವರು ಕೊಡದ ದಿನವನ್ನು ಗುರುತು ಮಾಡೋದರ ಬಗ್ಗೆ ಚಿಂತೆ ಶುರುವಾಯ್ತು. ಮದುವೆ, ಗೃಹಪ್ರವೇಶಕ್ಕೆ ಪತ್ರಿಕೆ ಕೊಡೋರು ಬರ್ತಾರೆ. ಅವರಿಗೆ ನಮ್ಮ ಮನೆಯ ಕ್ಯಾಲೆಂಡರ್ ಕಾಣದಿದ್ರೆ ಮರ್ಯಾದೆ ಹೋಗುತ್ತೆ. ಪಕ್ಕದ ಮನೆಯ ಹುಡುಗ ಅಂಕಲ್ ನನ್ನ ಹ್ಯಾಪಿ ಬರ್ತ್ಡೇ ಏಪ್ರಿಲ್ 5 ಕ್ಕೆ ಎಂದು ಕ್ಯಾಲೆಂಡರ್ ತೋರ್ಸೋಕೆ ಬಂದ್ರೆ ಅಷ್ಟೇ! ಗೋಡೆಯಲ್ಲಿ ಕಾಣದಿದ್ರೆ ಇಡೀ ಏರಿಯಾಗೇ ಬ್ರೇಕಿಂಗ್ ನ್ಯೂಸ್ ಮಾಡ್ತಾನೆ. ಕೊನೆ ಪಕ್ಷ ಏಪ್ರಿಲ್ ತಿಂಗಳನ್ನಾದ್ರೂ ಪ್ರಿಂಟಿಸಿ ಕೊಡಬಾರ್ದಾ ಅನ್ನಿಸ್ತಿದೆ. ಕೆಂಪು ಬಣ್ಣದ ದಿನಾಂಕ ಎಷ್ಟು ಖುಷಿ ಕೊಡ್ತಿತ್ತು. ಕಪ್ಪು ತಾರೀಖಿನ ಅಚ್ಚು ಸಿಗಲಿಲ್ವೇನೋ! ಅದಕ್ಕೆ ಇನ್ನೂ ಕ್ಯಾಲೆಂಡರ್ ಮಾರ್ಕೆಟ್‌ಗೆ ಬಂದಿಲ್ಲ ಅನ್ಸುತ್ತೆ.
ಯಾವಾಗ್ಲೂ ಈ ವರ್ಷದ ಸರಕಾರಿ ರಜೆಗಳ ಪಟ್ಟಿ ಇಲ್ಲಿದೆ ನೋಡಿ ಅನ್ನೋ ಯೂಟ್ಯೂಬರ್ಸ್ ಇನ್ನೂ ವೀಡಿಯೋಸ್ ಮಾಡ್ಲೇ ಇಲ್ಲಾ. ನಾಳೆ ಪಾಸ್ ಬುಕ್ ಪ್ರಿಂಟ್ ಹಾಕ್ಸೋ ನೆಪದಲ್ಲಾದ್ರೂ ಹೋಗಿ ಸಹಕಾರಿ ಬ್ಯಾಂಕಲ್ಲಿ ಕೇಳೋದೇ ಎಂದು ನಿರ್ಧರಿಸಿಬಿಟ್ಟೆ. ಅದ್ಹೇಗೆ ಆಗುತ್ತೆ? ನಾಳೆ 25 ಕ್ರಿಸ್ಮಸ್ ರಜೆ. ಟ್ರಂಪ್‌ಗೆ ಇಮೇಲ್ ಮಾಡಬೇಕು. ಇನ್ಮುಂದೆ ಕ್ರಿಸ್ಮಸ್ ಡಿಸೆಂಬರ್ ಮೊದಲ ವಾರದಲ್ಲೇ ಮಾಡಬೇಕು, ಹಾಗೇ ಭಾರತದಲ್ಲಿ ಕ್ಯಾಲೆಂಡರ್ ಅದಕ್ಕೂ ಮೊದಲೆ ಪ್ರಿಂಟ್ ಮಾಡಿಸೋಕೆ ಹೇಳ್ಬೇಕು, ಕನಿಷ್ಠ ಕರ್ನಾಟಕದ ಮುಖ್ಯಮಂತ್ರಿಗೆ ಟ್ವೀಟ್ ಮಾಡೋ ಹಾಗೆ ರಿಕ್ವೆಸ್ಟ್ ಮಾಡಬೇಕು ಅನಿಸ್ತಿದೆ. ಶತಮಾನದಿಂದಲೂ ಸಾಧಿಸಲು ಒಳ್ಳೆ ಘಳಿಗೆಗೆ ಕಾಯುವ ನಮ್ಮಂತೋರಿಗೆ ಕ್ಯಾಲೆಂಡರ್ ಸಿಗದಿದ್ರೆ ನಾವು ಹೇಗೆ ಕೆಲಸ ಶುರುಮಾಡೋದು?
ತಡ ಮಾಡದೆ ಪೇಟೆಗೆ ಹೋದೆ. ಎರಡು ವರ್ಷದ ಹಿಂದೆ ಹೊಸ ಬಟ್ಟೆ ಖರೀದಿ ಮಾಡಿದಾಗ, ಬ್ಯಾಗಿನ ಜೊತೆಗೆ ವಿವಿಧ ದೇವರುಗಳು ಚಿತ್ರವಿರುವ ಕ್ಯಾಲೆಂಡರ್ ಕೊಟ್ಟಿದ್ದ ಅಂಗಡಿಗೆ ಹೋದೆ. ಬಟ್ಟೆ ಖರೀದಿಸುವ ತಾಳ್ಮೆ ಈಗ ಇಲ್ಲ. ಕ್ಯಾಶ್ ಕೌಂಟರ್ಗೆ ಹೋಗಿ, ‘ಏನ್ರಿ ಈ ವರ್ಷ ಕ್ಯಾಲೆಂಡರ್ ಕೊಡ್ತಿರೋ ಇಲ್ವಾ?’. ಕೇಳಿಯೇ ಬಿಟ್ಟೆ. ಬಲಗೈ ಹೆಬ್ಬೆರಳನ್ನು ನಾಲಗೆಗೆ ಸವರಿಸಿ ಕೈಯಲ್ಲಿದ್ದ ನೋಟನ್ನು ಎಣಿಸುತ್ತಿದ್ದವ ನನ್ನೆಡೆಗೆ ನೋಡಿದ.
ಎಡಗೈಯಲ್ಲಿ ಕಡಿಮೆ ನೋಟು, ಬಲಗೈಯಲ್ಲಿ ಎಣಿಸಿದ ನೋಟು, ಮೂಗಿನ ತುದಿಗೆ ಜಾರಿದ ಕನ್ನಡಕ, ಅದರ ಮೇಲಿಂದ ಹಾರಿ ಬರುತ್ತಿರೋ ಕೋಪ-ಅನುಕಂಪ ಮಿಶ್ರಿತ ನೋಟ. ‘ಹಾಗಲ್ಲ ಸರ್, ಕಳೆದ ಬಾರಿ ಡಿಸೆಂಬರ್ 15ಕ್ಕೆ ಕ್ಯಾಲೆಂಡರ್ ಕೊಟ್ಟಿದ್ರಿ ಅದಿಕ್ಕೆ ಕೇಳಿದ್ದು’. ಧ್ವನಿ ಸ್ವಲ್ಪ ತಗ್ಗಿತ್ತು. ‘ಇಲ್ಲ ಸರ್, ಈ ವರ್ಷ ನಾವು ಕ್ಯಾಲೆಂಡರ್ ಪ್ರಿಂಟ್ ಮಾಡಿಸ್ಲಿಲ್ಲ’. ಮುಲಾಜಿಲ್ಲದೆ ಹೇಳಿಯೇಬಿಟ್ಟ. ‘ಕ್ಯಾಲೆಂಡರ್ ಕೊಡೊದಿರೋ ಇದೂ ಒಂದು ಅಂಗಡಿನಾ’? ಅವನ ಮುಖದ ಮುಂದೆ ಎಡಗೈ ತೋರಿಸಿದೆ. ಟೇಬಲ್ ಮೇಲಿದ್ದ ಬಿಲ್ ಬುಕ್ ತೆಗೆದು ರಪ್ಪನೆ ಮುಖಕ್ಕೆ ಎಸೆದ!.
ಕಣ್ಣು ಬಿಟ್ಟು ನೋಡ್ತಿನಿ, ಅದೇ ಅವ್ರು ಕೊಟ್ಟ 2022ರ ಕ್ಯಾಲೆಂಡರ್. ಮೇಲೆದ್ದು ತಾರೀಖಿನ ಮೇಲಿದ್ದ ಗಣಪತಿಗೆ ಕೈ ಮುಗಿದೆ. ಕಣ್ಣುಜ್ಜಿ ಬೆಡ್ರೂಮಿನಿಂದ ಹೊರಗೆ ಬಂದೆ. 2024ರ ಡಿಸೆಂಬರ್ ಕ್ಯಾಲೆಂಡರ್ ಮೌನದಿ ಕೊನೆಯ ದಿನಗಳನ್ನು ಎಣಿಸುತ್ತಿತ್ತು. ನಿನ್ನೆ ನನ್ನವಳು ಚಿನ್ನದ ಅಂಗಡಿಯವರು ಕೊಟ್ಟ 2025ರ ಕ್ಯಾಲೆಂಡರ್ ಟೇಬಲ್ ಮೇಲೆ ನಗುತಿತ್ತು. ವಾಟ್ಸಾಪ್ ತೆಗೆದು ಮಾರ್ನಿಂಗ್ ಮೆಸೇಜ್ ಫಾರ್ವರ್ಡ್ ಮಾಡುತ್ತಾ ಹೊಸ ಕ್ಯಾಲೆಂಡರ್ಗೆ ಕಣ್ಣಾಡಿಸುತ್ತಾ ಸೋಫಾಗೆ ಒರಗಿದೆ.
- ಡಾ. ಭುವನಹಳ್ಳಿ ಭಾನುಪ್ರಕಾಶ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ