ಕಲಬುರಗಿ: ಕಲ್ಯಾಣ ಕರ್ನಾಟಕದಲ್ಲಿ ಈಡಿಗರ ಸಭೆ

Upayuktha
0

ಬಜೆಟ್ ನಲ್ಲಿ ಬೇಡಿಕೆ ಈಡೇರಿಸಿ  ಇಲ್ಲವೇ ಹೋರಾಟದ ಬಿಸಿ ಎದುರಿಸಿ: ಡಾ. ಸದಾನಂದ ಪೆರ್ಲ


ಕಲಬುರಗಿ: ರಾಜ್ಯದ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ ಬೇಡಿಕೆಗಳನ್ನು ಈ ಬಾರಿ ಬಜೆಟ್ ನಲ್ಲಿ ಘೋಷಿಸದಿದ್ದರೆ ಸರಕಾರವು ಸಮುದಾಯದ ಜನತೆಯ ಉಗ್ರ ಹೋರಾಟದ ಬಿಸಿಯನ್ನು ಎದುರಿಸಬೇಕಾಗುತ್ತದೆ ಎಂದು ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಈಡಿಗ ನಾಯಕರ ಸಭೆಯಲ್ಲಿ ಒಮ್ಮತದಿಂದ ನಿರ್ಣಯ ಅಂಗೀಕರಿಸಲಾಗಿದೆ. 


ಕಲಬುರಗಿ ಜಗತ್ ವೃತದಲ್ಲಿರುವ ಆಮಂತ್ರಣ ಹೋಟೆಲ್ ಸಭಾಂಗಣದಲ್ಲಿ ಜನವರಿ 19ರಂದು ನಡೆದ ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಜಿಲ್ಲಾ, ತಾಲೂಕು ಪದಾಧಿಕಾರಿಗಳ ಹಾಗೂ ಸಮಾಜದ ಮುಖಂಡರ ಸಭೆಯಲ್ಲಿ 13 ಬೇಡಿಕೆಗಳ ಒಮ್ಮತದ ನಿರ್ಣಯವನ್ನು ಅಂಗೀಕರಿಸಲಾಗಿದೆ.

 

ಚಿತ್ತಾಪುರ ತಾಲೂಕು ಬ್ರಹ್ಮ ಶ್ರೀ ನಾರಾಯಣ ಗುರು ಶಕ್ತಿಪೀಠದ ಪೂಜ್ಯರು ಹಾಗೂ ಈಡಿಗ ಸಮಾಜದ ಗುರುಗಳಾದ ಡಾ. ಪ್ರಣವಾನಂದ ಸ್ವಾಮೀಜಿಯವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಒಟ್ಟು 12 ನಿರ್ಣಯಗಳನ್ನು ಅಂಗೀಕರಿಸಲಾಗಿದೆ. 


ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ಬಜೆಟ್ ಮಂಡನೆಯಾದರೂ ಈಡಿಗ ಸಮುದಾಯಕ್ಕೆ ನಯಾ ಪೈಸೆಯ ಅನುದಾನ ಸಿಕ್ಕಿಲ್ಲ ಬ್ರಹ್ಮಶ್ರೀ ನಾರಾಯಣ ಗುರು ಈಡಿಗ ನಿಗಮಕ್ಕೆ 500 ಕೋಟಿ ರೂಪಾಯಿ ನಿಗದಿಪಡಿಸಬೇಕು ಹಾಗೂ ನಿಗಮಕ್ಕೆ ಅಧ್ಯಕ್ಷರು ಮತ್ತು ನಿರ್ದೇಶಕರನ್ನು ಕೂಡಲೇ ಘೋಷಣೆ ಮಾಡಬೇಕು. ಸೇಂದಿ ಇಳಿಸುವ ಕುಲಕಸುಬು ಕಳೆದುಕೊಂಡ ಸಮುದಾಯದ ಜನರಿಗೆ ಪುನರ್ವಸತಿ ಕೂಡಲೇ ಘೋಷಣೆ ಮಾಡಬೇಕು ಹಾಗೂ  ಸರಕಾರದಿಂದ ತಲಾ ಎರಡು ಎಕರೆ ಜಮೀನು ನೀಡಿ ಸೇಂದಿ ಗಿಡ ಬೆಳೆಸಲು ಅನುಮತಿ ನೀಡಬೇಕು. 


ರಾಜ್ಯ ಸರ್ಕಾರವು ಈ ಹಿಂದೆ ಘೋಷಣೆ ಮಾಡಿದ ಕುಲಶಾಸ್ತ್ರೀಯ ಅಧ್ಯಯನದ 25 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿ ಕೂಡಲೇ ಅಧ್ಯಯನ ಪ್ರಾರಂಭಿಸಬೇಕು. ಗುಲ್ಬರ್ಗ ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದಲ್ಲ ವಿಶ್ವವಿದ್ಯಾಲಯಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಆರಂಭಿಸಬೇಕು. 


ವಿಧಾನಸೌಧದ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆ ಸ್ಥಾಪಿಸಬೇಕು, ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳಿಗೆ ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ಎಕರೆ ಸರಕಾರಿ ಭೂಮಿ ನೀಡಿ ಸಮಾಜದ ಕೆಲಸ ಕಾರ್ಯಕ್ಕೆ ಬಳಸುವಂತೆ ಹಣಕಾಸು ನೆರವು  ಮಂಜೂರು ಮಾಡಬೇಕು.


ಮಹಾರಾಷ್ಟ್ರ, ತೆಲಂಗಾಣ, ಕೇರಳ ಹಾಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗ ಇರುವಂತೆ ಸೇಂದಿ ನೀರಾ ಇಳಿಸಲು ಇಡೀ ರಾಜ್ಯದಲ್ಲಿ  ಅನುಮತಿ ನೀಡಬೇಕು. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ವಸತಿಯುತ ಹಾಸ್ಟೆಲ್ ಪ್ರಾರಂಭಿಸಬೇಕು ಹಾಗೂ ಇದಕ್ಕೆ ಕೆಕೆಆರ್‌ಡಿಬಿಯಿಂದ ಅನುದಾನ ಒದಗಿಸಬೇಕು. 


ಕಲ್ಯಾಣ ಕರ್ನಾಟಕ ಭಾಗದ ಸಮುದಾಯದ ಪದವೀಧರ ವಿದ್ಯಾರ್ಥಿಗಳಿಗೆ ಸಿಮೆಂಟ್ ಕಂಪೆನಿ ಸೇರಿದಂತೆ ಇಲ್ಲಿನ ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶಗಳನ್ನು ನೀಡಬೇಕು. ಬಜೆಟ್ ವೇಳೆ ಸಮುದಾಯದ  ಬೇಡಿಕೆಗಳ ಮನವಿಯನ್ನು ಸಲ್ಲಿಸಲು ಮುಖ್ಯಮಂತ್ರಿಗಳ ಬಳಿಗೆ ನಿಯೋಗ ಕೊಂಡೊಯ್ಯುವುದು. ಈ ಸಾಲಿನ ಬಜೆಟ್ ನಲ್ಲಿ ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ಸಜ್ಜಾಗುವುದು. 


ಕಲಬುರ್ಗಿಯಲ್ಲಿ ಶೀಘ್ರದಲ್ಲೆ ಈಡಿಗ ಮತ್ತು ಅತಿ ಹಿಂದುಳಿದ ವರ್ಗಗಳ ಸಮಾವೇಶವನ್ನು ನಡೆಸುವುದು ಮತ್ತು ಕಲ್ಯಾಣ ಕರ್ನಾಟಕದಲ್ಲಿ ಅವಧಿ ಪೂರ್ಣಗೊಳಿಸಿದ ಆರ್ಯ ಈಡಿಗ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪುನರ್ ರಚನೆ ಮಾಡಲಾಗುವುದು ಎಂದು ನಿರ್ಣಯ ಕೈಗೊಳ್ಳಲಾಯಿತು. ಡಾ. ಸದಾನಂದ ಪೆರ್ಲ ಮಂಡಿಸಿದ ನಿರ್ಣಯವನ್ನು ಯುವ ಮುಖಂಡರಾದ ಬಾಲರಾಜ್ ಗುತ್ತೇದಾರ್ ಅನುಮೋದನೆ ಮಾಡಿ ಒಪ್ಪಿಗೆ ಪಡೆಯಲಾಯಿತು. 


ಪ್ರಾಮಾಣಿಕ ಸ್ಪಂದನೆ ನೀಡಿ ಸಮುದಾಯದ ಕಲ್ಯಾಣ ಮಾಡಿ: ಡಾ.ಪ್ರಣವಾನಂದ ಶ್ರೀ

ರಾಜ್ಯದ ಹಿಂದುಳಿದ ಸಮಾಜವಾದ ಈಡಿಗ ಸೇರಿದಂತೆ 26 ಪಂಗಡಗಳ ನ್ಯಾಯೋಚಿತ ಬೇಡಿಕೆಗಳನ್ನು ಪರಿಗಣಿಸಿ ಶೀಘ್ರ ಅನುಷ್ಠಾನ ಉಳಿಸಿ ಸಮುದಾಯದ ಕಲ್ಯಾಣ ಮಾಡಬೇಕು. ಸಮುದಾಯದ ಜನರ ನೋವಿಗೆ ರಾಜ್ಯ ಸರ್ಕಾರವು ಸ್ಪಂದನೆ ನೀಡುವ ವಿಶ್ವಾಸವಿದೆ ಎಂದು ಡಾ. ಪ್ರಣವಾನಂದ ಶ್ರೀಗಳು ತಿಳಿಸಿದರು. 


ಕಲ್ಯಾಣ ಕರ್ನಾಟಕ ಈಡಿಗ ಸಮುದಾಯದ ಪ್ರಮುಖರ ಸಭೆಯನ್ನು ಎಲ್ಲಮ್ಮ ದೇವಿ, ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶರಣ ಹೆಂಡದ ಮಾರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ನಂತರ ಮಾತನಾಡುತ್ತ ಈ ಹಿಂದಿನ ಎರಡು ಬಜೆಟ್ ಗಳಲ್ಲಿ ರಾಜ್ಯ ಸರ್ಕಾರವು ಸಮುದಾಯಕ್ಕೆ ಪಂಗನಾಮ ಹಾಕಿದ್ದು ಮುಂದಿನ ಬಜೆಟ್ ನಲ್ಲಿ ಬೇಡಿಕೆಗಳನ್ನು ಈಡೇರಿಸಿ ಹಿಂದುಳಿದ ವರ್ಗವನ್ನು ಮೇಲೆತ್ತಬೇಕು ಎಂದು ಆಗ್ರಹಿಸಿದರು. 


ಇಲ್ಲವಾದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖರ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೆ ರೂಪುರೇಷೆ ಸಿದ್ದಪಡಿಸಲಾಗುವುದು. ಈಡಿಗ ಸಮಾಜವು ಯಾವುದೇ ಸರಕಾರ ಅಥವಾ ಪಕ್ಷಗಳ ವಿರೋಧಿಯಲ್ಲ ಬದಲಾಗಿ ಸಮುದಾಯದ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ತಮ್ಮ ನೇತೃತ್ವದಲ್ಲಿ ಹಿರಿಯರ ತಂಡವು ಕಲ್ಯಾಣ ಕರ್ನಾಟಕ ಭಾಗದ 58 ತಾಲೂಕುಗಳಲ್ಲಿ ಪ್ರವಾಸ ಮಾಡಿ ಸಂಘಟನೆ ಮಾಡಲಾಗುವುದು ಎಂದರು.


ಸಮುದಾಯದ ಬಗ್ಗೆ ಯಾವುದೇ ಒಡಕಿನ ಮಾತುಗಳನ್ನಾಡದೆ ಎಲ್ಲರೂ ಒಗ್ಗಟ್ಟಿನಿಂದ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಯಾವುದೇ ಟೀಕೆ ಟಿಪ್ಪಣಿಗಳಿಗೆ ಸ್ಪಂದಿಸದೆ ಈಡಿಗ ಸಮುದಾಯದ ಮಕ್ಕಳ ಭವಿಷ್ಯಕ್ಕೆ ನಾವೆಲ್ಲರೂ ಕಂಕಣಬದ್ಧರಾಗಬೇಕು. ಸಮುದಾಯದ ಬಗ್ಗೆಯಾಗಲಿ ಅಥವಾ ಸ್ವಾಮೀಜಿಯವರ ಬಗ್ಗೆಯಾಗಲಿ ನಿಕೃಷ್ಟವಾಗಿ ಮಾತನಾಡಿ ಮಾನಹಾನಿ ಮಾಡುವುದರ ವಿರುದ್ಧ ಇಡೀ ಸಮಾಜ ಎದ್ದು ನಿಲ್ಲುತ್ತದೆ. ಅಂತಹ ಶಕ್ತಿಗಳು ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. 


ಈ ವಿಶೇಷ ಚರ್ಚಾ ಸಭೆಯಲ್ಲಿ ಮಾಜಿ ಶಾಸಕರಾದ ಸುಭಾಷ್ ಆರ್ ಗುತ್ತೇದಾರ್, ಸತೀಶ್ ವಿ ಗುತ್ತೇದಾರ್, ಬಾಲರಾಜ್ ಗುತ್ತೇದಾರ್, ಡಾ. ರಾಜಶೇಖರ ಸೇಡಂಕರ್ ಬೀದರ ,ಇ ಎನ್ ಕೃಷ್ಣಮೂರ್ತಿ, ಡಾ. ಸದಾನಂದ ಪೆರ್ಲ ಬಳ್ಳಾರಿ, ಅಶೋಕ್ ಯಾದಗಿರಿ ನಾಗಯ್ಯ ಗುತ್ತೇದಾರ್ ಚಿತ್ತಾಪುರ, ಸುನಿಲ್ ರಾಯಚೂರು ಶೇಖರ್ ಗಾರಂಪಳ್ಳಿ ಚಿಂಚೋಳಿ, ರಾಜಕುಮಾರ್ ಗುತ್ತೇದಾರ್, ದೇವೇಂದ್ರಪ್ಪ ಗುತ್ತೇದಾರ್, ಮಲ್ಲಿಕಾರ್ಜುನ ಹುಣಸಗಿ,  ಸಂಗಯ್ಯ ಸುಲ್ತಾನ್ ಪುರ್ ಶಂಕರ್ ಲೀಡರ್ ಮಾತನಾಡಿ ದರು. ವೆಂಕಟೇಶ ಗೂಂಡಾ, ರಾಜೇಶ್ ಗುತ್ತೇದಾರ್, ವೆಂಕಟೇಶ ಕಡೇ ಚೂರ್, ಮಹೇಶ ಗುತ್ತೇದಾರ್ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮುದಾಯದ ಪ್ರಮುಖರು ಪಾಲ್ಗೊಂಡಿದ್ದರು.


ಡಾ. ಪ್ರಣವಾನಂದ ಶ್ರೀಗಳು ಈಡಿಗ ಸಮಾಜದ ಶಕ್ತಿಯಾಗಿದ್ದು ಅವರ ನೇತೃತ್ವದ ಎಲ್ಲಾ ಕಾರ್ಯಗಳಿಗೆ ಕಲ್ಯಾಣ ಕರ್ನಾಟಕ ಭಾಗದಿಂದ ಶಕ್ತಿ ತುಂಬುವ ಕೆಲಸ ಆಗಬೇಕಾಗಿದೆ. ಸಮುದಾಯದ ಜನರು ಬೇಡಿಕೆ ಈಡೇರಿಕೆಗಾಗಿ ಸಂಧಾನಕ್ಕೂ ಸೈ ಹೋರಾಟಕ್ಕೂ ಸೈ. 


ಸತೀಶ್ ವಿ ಗುತ್ತೇದಾರ್, ಅಧ್ಯಕ್ಷರು ಕಲ್ಯಾಣ ಕರ್ನಾಟಕ ಆರ್ಯ ಈಡಿಗ ಹೋರಾಟ ಸಮಿತಿ

ಈಡಿಗ ಸಮುದಾಯ ಒಗ್ಗಟ್ಟನ್ನು ಕಾಪಾಡಿಕೊಂಡು ಕುಲಕಸುಬು ಮರಳಿ ಪಡೆಯಲು ಒಕ್ಕೊರಳಿನಿಂದ ಧ್ವನಿ ಎಬ್ಬಿಸಿ ಹೋರಾಟ ಮಾಡಬೇಕಲ್ಲದೆ ಈಡಿಗ ವಿರೋಧಿ ನೀತಿಯನ್ನು ಅನುಸರಿಸುವ ಸರಕಾರಕ್ಕೆ ಬಿಸಿ ಮುಟ್ಟಿಸಬೇಕಾಗಿದೆ. 


ಅನಿವಾರ್ಯವಾದರೆ "ಬೆಂಗಳೂರು ಚಲೋ" ಕೂಡ ನಡೆಸಲು ಸಿದ್ದರಾಗ ಬೇಕಾಗುತ್ತದೆ. ಸರಕಾರದ ಮದ್ಯದ ಅಂಗಡಿ ಎಂಎಸ್ಐಎಲ್ ನಲ್ಲಿ ಕುಲಬ ಕಸುಬು ಕಳೆದುಕೊಂಡವರಿಗೆ ನೌಕರಿಗೆ ನೇಮಿಸಬೇಕು. ಇದಕ್ಕಾಗಿ ಸೇಂದಿ ಕುಲಕಸುಬು ಕಳೆದುಕೊಂಡವರು ಶಕ್ತಿಯುತ ಹೋರಾಟ ಮಾಡಿ.ಅದಕ್ಕಾಗಿ ನಾಯಕರ ಮೇಲೆ ಕೂಡಾ ಒತ್ತಡ ಹೇರಬೇಕು. ಬೇಡಿಕೆಗಳ ಕುರಿತಾಗಿ ನಿತ್ಯ ಸರಕಾರಕ್ಕೆ ಅರ್ಜಿಗಳನ್ನು ಬರೆಯಬೇಕು.


ಬಾಲರಾಜ್ ಗುತ್ತೇದಾರ್ ಜಿಲ್ಲಾಧ್ಯಕ್ಷರು ಜೆಡಿಎಸ್

ಹಿಂದುಳಿದ ಈಡಿಗ ಸಮುದಾಯದ ಕಲ್ಯಾಣಕ್ಕಾಗಿ ಇಂತಹ ಮಹತ್ವದ ಸಭೆ ನಡೆಸಿ ನಿರ್ಣಯ ಅಂಗೀಕರಿಸಿದ್ದನ್ನು ಸರಕಾರ ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸಬೇಕು ಈಡಿಗ ಸಮುದಾಯದ ಸಂಘಟನೆ ಬಲಗೊಂಡು ಪ್ರತಿ ಜಿಲ್ಲೆಗಳಲ್ಲಿ ಈಡಿಗ ಸಮಾಜದ ಸಮಿತಿ ಪುನರ್ ರಚನೆಗೊಳ್ಳಬೇಕು ಸಮುದಾಯದ ಎಲ್ಲಾ ಹೋರಾಟಗಳಿಗೆ ಪೂರ್ಣ ಬೆಂಬಲವಿದೆ. ಸುಭಾಷ್ ಆರ್ ಗುತ್ತೇದಾರ್ ಮಾಜಿ ಶಾಸಕರು ಅಳಂದ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top