ನಿಟ್ಟೆ: ಎನ್ ಕೆ ತಿಂಗಳಾಯ ಬ್ಲಾಕ್ ಉದ್ಘಾಟನೆ, ವಿಶೇಷ ಸಂಸ್ಮರಣಾ ಉಪನ್ಯಾಸ

Upayuktha
0

 


ಕಾರ್ಕಳ: ಬ್ಯಾಂಕಿಂಗ್ ಸಂಸ್ಥೆಗಳು ತಮ್ಮ ಕಾರ್ಯಾಚರಣೆಗಳಿಗೆ ಸಂಬಂಧಿಸಿ ಆಮೂಲಾಗ್ರ ಬದಲಾವಣೆಯನ್ನು ವಿನೂತನ ತಂತ್ರಜ್ಞಾನದ ಸಹಾಯದಿಂದ ಸಾಧ್ಯವಾಗಿಸಿದೆ. 'ಮಾಸ್ ಬ್ಯಾಂಕಿಂಗ್' ಸೇವೆಯ ಜೊತೆ 'ಕ್ಲಾಸ್ ಬ್ಯಾಂಕಿಂಗ್ ಸೇವೆ'ಯನ್ನು ತ್ವರಿತಗತಿಯಲ್ಲಿ ನೀಡಿ ಗ್ರಾಹಕರಿಗೆ ಸಂತುಷ್ಟತೆಯನ್ನು ನೀಡುವ ಜೊತೆ ದೇಶದ ಆರ್ಥಿಕಾಭಿವೃದ್ದಿಯಲ್ಲಿ ಮುಂಚೂಣಿ ಪಾತ್ರವಹಿಸುತ್ತವೆ. ಬ್ಯಾಂಕಿಂಗ್ ಕ್ಷೇತ್ರ ಇಂದು ಕೇವಲ ಒಂದು ಉದ್ದಿಮೆಯ ಕ್ಷೇತ್ರವಲ್ಲ. ಹತ್ತು ಹಲವು ವೈವಿಧ್ಯಮಯ ಉದ್ದಿಮೆಗಳನ್ನೊಳಗೊಂಡ ಏಕೈಕ ಕ್ಷೇತ್ರವಾಗಿ ರೂಪುಗೊಂಡಿದೆ. ಭಾವೀ ಪೀಳಿಗೆ ಈ ಕ್ಷೇತ್ರವನ್ನು ತಮ್ಮ ಉದ್ಯೋಗಕ್ಕೆ ಆಯ್ಕೆಮಾಡಿಕೊಳ್ಳಲು ಸಾಕಷ್ಟು ಶಿಸ್ತು, ತಂತ್ರಜ್ಞಾನ ನೈಪುಣ್ಯತೆ, ಸೇವಾ ಮನೋಭಾವ ಮತ್ತು ಕಠಿನ ಪರಿಶ್ರಮವನ್ನು ಹೊಂದಬೇಕು ಎಂದು ಕರ್ನಾಟಕ ಬ್ಯಾಂಕಿನ ಎಕ್ಸಿಕ್ಯುಟೀವ್ ಡೈರೆಕ್ಟರ್ ಶೇಖರ ರಾವ್ ಅಭಿಪ್ರಾಯಪಟ್ಟರು.


ಅವರು ನಿಟ್ಟೆಯ ಜಸ್ಟೀಸ್ ಕೆ.ಎಸ್ ಹೆಗ್ಡೆ ಉದ್ಯಮಾಡಳಿತ ಸಂಸ್ಥೆ ಆಯೋಜಿಸಿದ 'ಎನ್ ಕೆ ತಿಂಗಳಾಯ ಬ್ಲಾಕ್' ಉದ್ಘಾಟನಾ ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಹಾಗೂ 'ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವ ಉದ್ಯೋಗ ಅವಕಾಶಗಳು' ಎಂಬ ವಿಷಯದ ಬಗ್ಗೆ ಸಂಸ್ಥೆಯ ಶೈಕ್ಷಣಿಕ ಮಂಡಳಿಯ ಅಧ್ಯಕ್ಷರಾಗಿದ್ದ ದಿ. ಎನ್ ಕೆ ತಿಂಗಳಾಯ ಸ್ಮರಣಾರ್ಥ ವಿಶೇಷ ಉಪನ್ಯಾಸ ನೀಡಿಲು ಆಗಮಿಸಿದ್ದರು. ನೂತನ 'ಎನ್ ಕೆ ತಿಂಗಳಾಯ ಬ್ಲಾಕನ್ನು' ನಿಟ್ಟೆ ವಿವಿಯ ಕುಲಾಧಿಪತಿ ಎನ್ ವಿನಯ ಹೆಗ್ಡೆ ಅವರು ಉದ್ಘಾಟಿಸಿ ದಿ. ಡಾ. ಎನ್ ಕೆ ತಿಂಗಳಾಯರು ಸಂಸ್ಥೆಯ ಸರ್ವತೋಮುಖ ಪ್ರಗತಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. 


ಇನ್ನೋರ್ವ ಅತಿಥಿ ದಿ. ಡಾ| ಎನ್ ಕೆ ತಿಂಗಳಾಯರ ಮುಂಬೈ ವಿಶ್ವವಿದ್ಯಾನಿಲಯದ ಸಹಪಾಠಿ ಹಾಗೂ ಸಂಸ್ಥೆಯ ಎಮಿರಿಟಸ್ ಪ್ರೊ. ಡಾ| ಎನ್ ಎಸ್ ಶೆಟ್ಟಿ ಮಾತನಾಡುತ್ತ, ಡಾ| ತಿಂಗಳಾಯರು ಗ್ರಾಮೀಣ ಬ್ಯಾಂಕ್ ಗಳಲ್ಲಿ ಪಾಂಡಿತ್ಯ ಹೊಂದಿರುವುದಲ್ಲದೆ ಆದರ್ಶ ಗಾಂಧಿವಾದಿ ಮತ್ತು ಸರಳ ವ್ಯಕ್ತಿತ್ವದ ಧೀಮಂತ ವ್ಯಕ್ತಿ ಎಂದು ಕೊಂಡಾಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಸ್ಥಾಪಕ ನಿರ್ದೇಶಕರೂ ಪ್ರಸ್ತುತ ನಿಟ್ಟೆ ಪರಿಗಣಿತ ವಿವಿಯ ಕುಲಪತಿಗಳೂ ಆದ ಪ್ರೊ. ಡಾ| ಎಂ ಎಸ್ ಮೂಡಿತ್ತಾಯ ಅವರು ಮಾತನಾಡುತ್ತಾ, ದಿ. ತಿಂಗಳಾಯ ಹಾಗೂ ಅಧ್ಯಕ್ಷರಾದ ಎನ್ ವಿನಯ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ 1998ರಲ್ಲಿ ನಿಟ್ಟೆಯ ಉದ್ಯಮಾಡಳಿತ ಸಂಸ್ಥೆಯನ್ನು ಸ್ಥಾಪಿಸಿದ ಕುರಿತು ಸ್ಮರಿಸಿದರು. ತಿಂಗಳಾಯ ಅವರ ಶೈಕ್ಷಣಿಕ, ಸಂಶೋಧನಾ ಪ್ರೀತಿ, ಅವರ ಜೊತೆ ಕೈಗೊಂಡ ಜಾಗತಿಕ ಮಟ್ಟದ ಸಂಶೋಧನಾ ಗ್ರಂಥಗಳ ಕುರಿತು ಮಾಹಿತಿ ನೀಡಿದರಲ್ಲದೆ, ಸಂಸ್ಥೆಯ ಪ್ರಗತಿಯ ಮುಂಚೂಣಿಯಲ್ಲಿ ತಿಂಗಳಾಯರ ಪಾತ್ರವನ್ನು ವಿವರಿಸಿದರು.


ತಿಂಗಳಾಯರ ಭಾವ ಚಿತ್ರಕ್ಕೆ ನೆರೆದ ಗಣ್ಯರು ಪುಷ್ಫಾಂಜಲಿ ಸಮರ್ಪಿಸಿದರು. ಸಂಸ್ಥೆಯ ನಿರ್ದೇಶಕರಾದ ಡಾ| ಸುಧೀರ್ ಎಂ ಸ್ವಾಗತಿಸಿ, ಕಾರ್ಯಕ್ರಮದ ಆಶಯ ನೀಡಿದರು. ವಂದನಾ, ಶ್ರಾವ್ಯ ಮತ್ತು ಮಹಿಮಾ ಪ್ರಾರ್ಥಿಸಿದರು. ಡಾ| ಸುಧೀರ್ ರಾಜ್ ಕೆ ಮತ್ತು ಮಹಿಮಾ ಹೆಬ್ಬಾರ್ ಕಾರ್ಯಕ್ರಮ ನಿರ್ವಹಿಸಿದರು. ಡಾ. ರಾಧಾಕೃಷ್ಣ ಶರ್ಮ ವಂದಿಸಿದರು. ದಿ. ಡಾ| ಎನ್ ಕೆ ತಿಂಗಳಾಯ ಅವರ ಸಂಶೋಧನಾ ಕೃತಿಗಳನ್ನು ಅನಾವರಣಗೊಳಿಸಲಾಯಿತು. ಹಲವಾರು ಬ್ಯಾಂಕರುಗಳು, ತಿಂಗಳಾಯ ಅವರ ಕುಟುಂಬದ ಸದಸ್ಯರು, ಪ್ರಾಧ್ಯಾಪಕರು, ಎಂ.ಬಿ.ಎ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top