ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿ ವತಿಯಿಂದ ಜಿಲ್ಲಾ ಗೃಹರಕ್ಷಕ ದಳದ ಗೌರವ ಸಮಾದೇಷ್ಟರಾಗಿ 10 ವರ್ಷಗಳ ಸೇವೆ ಪೂರೈಸಿರುವ ಡಾ|| ಮುರಲೀ ಮೋಹನ ಚೂಂತಾರು ಅವರಿಗೆ ಭಾನುವಾರ ಹೂಹಾರ ಹಾಕಿ, ಹಣ್ಣುಹಂಪಲು ನೀಡಿ, ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ 15 ಘಟಕಗಳ ಘಟಕಾಧಿಕಾರಿಗಳು ಮತ್ತು ಗೃಹರಕ್ಷಕರು ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಗುರುರಾಜ್ ಎಮ್., ಎ.ಜಿ.ಎಂ. ಸರ್ವಿಸ್, ಪಿಎಸ್‍ಎನ್-ಐಶರ್ ಮೋಟಾರ್ಸ್, ಮಂಗಳೂರು ಇವರು ಮಾತನಾಡಿ ಡಾ|| ಚೂಂತಾರು ಅವರು 10 ವರ್ಷಗಳಿಂದ ಗೌರವ ಸಮಾದೇಷ್ಟರಾಗಿ ಅತ್ಯುತ್ತಮವಾಗಿ ನಿಷ್ಕಾಮ ಸೇವೆ ಸಲ್ಲಿಸಿರುತ್ತಾರೆ. ಅವರ ನಿವೃತ್ತಿ ನಂತರವೂ ಸಾಮಾಜಿಕ ಸೇವೆ ಇನ್ನು ಮುಂದೆಯೂ ಹೀಗೆ ಇರಲಿ ಹಾಗೂ ಆಯುಷ್ಯ ಆರೋಗ್ಯ ದೇವರು ಅವರಿಗೆ ನೀಡಲಿ ಎಂದು ಹಾರೈಸಿದರು.
ಇನ್ನೋರ್ವ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಛೇರಿ ಅಧೀಕ್ಷಕ ರತ್ನಾಕರ ಎಂ. ಅವರು ಮಾತನಾಡಿ, ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ರವರ ಅಧಿಕಾರವಧಿ ನಿರ್ಗಮನದಿಂದ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ನಾನು ಈ ಜಿಲ್ಲೆಯಲ್ಲಿ ಕರ್ತವ್ಯದಲ್ಲಿದ್ದ ಸಮಯದಲ್ಲಿ ನಮಗೆ ಕಛೇರಿ ಕರ್ತವ್ಯ ನಿರ್ವಹಿಸಲು ತುಂಬಾ ಸಹಕಾರವನ್ನು ನೀಡಿರುತ್ತಾರೆ. ಅವರಿಗೆ ನಾನು ಅಭಾರಿಯಾಗಿದ್ದೇನೆ. ಅವರ ಮುಂದಿನ ಜೀವನ ಸುಖಮಯವಾಗಲಿ ಎಂದು ಹರಸಿದರು.
ಸನ್ಮಾನ ಸ್ವೀಕರಿಸಿದ ಡಾ|| ಮುರಲೀ ಮೋಹನ ಚೂಂತಾರು ಅವರು ಮಾತನಾಡಿ, ನಾನು ದಿನಾಂಕ: 06-01-2015 ರಂದು ದ.ಕ. ಜಿಲ್ಲಾ ಸಮಾದೇಷ್ಟನಾಗಿ ಅಧಿಕಾರ ಸ್ವೀಕರಿಸಿದ ಎರಡು ಅವಧಿಗಳ ಕಾಲ ಅಂದರೆ (ಹತ್ತು ವರ್ಷಗಳ ಕಾಲ) ಅಧಿಕಾರ ವಹಿಸಿಕೊಂಡು ಮತ್ತು ಜವಾಬ್ದಾರಿ ಅತ್ಯುತ್ತಮವಾಗಿ ನಿರ್ವಹಿಸಿರುತ್ತೇನೆ. ಗೃಹರಕ್ಷಕ ದಳದ 15 ಘಟಕಗಳ ಘಟಕಾಧಿಕಾರಿಗಳು ಮತ್ತು ಗೃಹರಕ್ಷಕರು ಕಳೆದ ಹತ್ತು ವರ್ಷಗಳಿಂದ ನನಗೆ ನೀಡಿದ ಗೌರವ, ಪ್ರೀತಿ, ಸಹಕಾರ, ಮಾರ್ಗದರ್ಶನ ಮತ್ತು ಆದರಗಳಿಗೆ ನಾನು ಸದಾಕಾಲ ಸ್ಮರಿಸುತ್ತೇನೆ. ನಿಮ್ಮ ಪ್ರಾಮಾಣಿಕ ಮತ್ತು ನಿಷ್ಕಾಮ ಸೇವೆಯಿಂದಾಗಿಯೇ ನನಗೆ ಹಲವು ಪ್ರಶಸ್ತಿಗಳು ಮತ್ತು ಪದಕಗಳು ಬಂದಿರುತ್ತದೆ. ಇವೆಲ್ಲವನ್ನು ವಿನಮ್ರವಾಗಿ ಸ್ವೀಕರಿಸಿ ಮತ್ತಷ್ಟು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ ಸಂತೃಪ್ತಿಯಿಂದ ನಾನು ಇಲಾಖೆಯಿಂದ ಸಾರ್ಥಕ್ಯದ ಭಾವದೊಂದಿಗೆ ಗೃಹರಕ್ಷಕ ದಳದ ಸಮಾದೇಷ್ಟರ ಹುದ್ದೆಯಿಂದ ಗೌರವಯುತವಾಗಿ ನಿರ್ಗಮಿಸುತ್ತಿದ್ದೇನೆ ಎಂದರು.
ಈ ಹತ್ತು ವರ್ಷಗಳಲ್ಲಿ ಸಾರ್ವಜನಿಕ ಬದುಕಿನ ಸಂದರ್ಭದಲ್ಲಿ ಸಹಕರಿಸಿದ ನನ್ನ ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಹಿತೈಷಿಗಳನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಾ ಅತ್ಯಂತ ಗೌರವದಿಂದ, ಹೆಮ್ಮೆಯಿಂದ ಮತ್ತು ಖುಷಿಯಿಂದ ಗೃಹರಕ್ಷದಳದ ಸೇವೆಯಿಂದ ವಿರಮಿಸುತ್ತಿದ್ದೇನೆ ಹಾಗೂ ಈ ಹತ್ತು ವರ್ಷಗಳ ಕಾಲ ನಾನು ಯಾರಿಗಾದರೂ ಮನ ನೋಯಿಸಿದ್ದಲ್ಲಿ ದಯವಿಟ್ಟು ಕ್ಷಮಿಸಿರಿ ಮತ್ತು ಮುಂದೆ ಯಾವಾಗಲೂ ಸಿಕ್ಕಾಗ ನನಗೆ ಈ ಹಿಂದೆ ನೀಡಿದ ಪ್ರೀತಿ ಮತ್ತು ಆದರಗಳನ್ನು ತೋರಿಸಿ ಎಂದು ಕೇಳಿಕೊಂಡರು.
ಈ ಕಾರ್ಯಕ್ರಮದಲ್ಲಿ ಕು. ಮನಸ್ವಿ ಮತ್ತು ಕು. ನಮಸ್ವಿ ಇವರು ಪ್ರಾರ್ಥನೆ ಮಾಡಿದರು. ಪುತ್ತೂರು ಘಟಕಾಧಿಕಾರಿ ಅಭಿಮನ್ಯು ರೈ ಸ್ವಾಗತಿಸಿದರು. ಬೆಳ್ತಂಗಡಿ ಘಟಕಾಧಿಕಾರಿ ಜಯಾನಂದ ಇವರು ಧನ್ಯವಾದ ಸಮರ್ಪಿಸಿದರು. ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಪ್ರಥಮ ದರ್ಜೆ ಸಹಾಯಕಿ ಅನಿತಾ ಟಿ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ. ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಲ್ಲಾ ಘಟಕಗಳ ಘಟಕಾಧಿಕಾರಿಗಳು ಹಾಗೂ ಗೃಹರಕ್ಷಕರು/ಗೃಹರಕ್ಷಕಿಯರು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ