ಸುಗ್ಗಿ ಸಂಕ್ರಾಂತಿ ಬಂತೋ ಭೂಮ್ಯಾಗೆ
ಹಿರಿ ಹಿಗ್ಗನು ತಂದು ಮನದಾಗೆl
ಕಣಜವ ತಂಬೈತೆ ಹೊಸ ಭತ್ತ ರಾಶಿ
ಕಣ್ಣ ತಂಬೈತೆ ಅಂಗಳದ ಬಣ್ಣ ರಂಗೋಲಿll
ಸಿಂಗಾರಗೊಂಡ ದನಕರು
ಭರದಿಂದ ಕೇರಿಲಿ ಓಡಾಡ್ಯಾವೆl
ಫಳಫಳ ಜರಿ ಲಂಗವ ತೊಟ್ಟು ಹೆಣ್ಮಕ್ಕಳು
ವೈಯ್ಯಾರದಿಂದ ನಲಿತಾವೆll
ಅವ್ವನ ಕೈಯ ಹುಗ್ಗಿ ಘಮಕೆ
ಹೈಕಳ ಬಾಯಾಗೆ ನೀರು ಬರುತೈತೆl
ಸಂತೆ ಬೀದಿಲಿ ಬಳೆ ಬಟ್ಟೆ
ಹಣ್ಣು ಕಾಯ್ಗಳ ಮೇಳ ಜೋರೈತೆll
ಕಿಚ್ಚನು ಹಾದ ದನದ ಕಾಲ್ಗಳ
ಕಿರುಗೆಜ್ಜೆ ಕಿಣಿಕಿಣಿ ನುಡಿತಾವೆl
ದ್ಯಾವರ ಮನೆಯೊಳಗೆ ಬೆಳ್ಳಿಯ ದೀಪ
ಚೊಕ್ಕಾಗಿ ಮಿನುಗ್ಯಾವೆll
ಎಳೆ ಕಂದ ಎಳ್ಳು ಎಲಚಿ
ಎರಕದೊಳಗೆ ಮಿಂದೈತೆl
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೆಂದು
ಸಂಕ್ರಾಂತಿ ಸಂದೇಶ ಸಾರೈತೆll
✍️
ಎಸ್.ಎಲ್.ವರಲಕ್ಷ್ಮೀಮಂಜುನಾಥ್.
ನಂಜನಗೂಡು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ