ನನ್ನ ನೆನಪಿನ ಬುಟ್ಟಿಯಲ್ಲಿ...

Upayuktha
0


ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಪಾತ್ರಗಳು ಬಂದು ಹೋಗಿರುತ್ತವೆ ಮತ್ತು ಅವುಗಳಲ್ಲಿ ಕೆಲವು ಪಾತ್ರಗಳು ಮಾತ್ರ ನಮ್ಮ ಜೀವನದಲ್ಲಿ ಹಾಗೆಯೇ ಉಳಿದಿರುತ್ತವೆ. ಅಂತಹ ಪಾತ್ರಗಳಲ್ಲಿ ನನ್ನ ಜೀವನದಲ್ಲಿ ಅಳಿದರೂ ಇನ್ನೂ ನೆನಪು ಬುಟ್ಟಿಯಲ್ಲಿ ಉಳಿದಿರುವ ಪಾತ್ರ ನನ್ನ ರೂಬಿ.


ರೂಬಿ ಇದು ಒಂದು ನಾಯಿ. ಹೌದು, ಅವಳು ನಾಯಿಯೇ ಆದರೂ ನನ್ನ ಜೀವನದಲ್ಲಿ ಒಂದು ಮುಖ್ಯ ಪಾತ್ರ ಎಂದು ಹೇಳಿದರು ತಪ್ಪಾಗದು. ನನಗೆ ಉತ್ತಮ ಗೆಳತಿಯಾಗಿ, ಒಳ್ಳೆಯ ಸೋದರಿಯಾಗಿ ಮತ್ತು ಮುದ್ದು ಮಗಳಾಗಿ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದಾಳೆ. ಬಹಳ ಚುರುಕಾಗಿದ್ದ ಅವಳು ಬಹುದೊಡ್ಡ ತರಲೆಯೂ ಆಗಿದ್ದಳು. ಅದೊಂದು ದಿನ ರೂಬಿ ಮತ್ತು ಅವಳ ಸೋದರ ಟೈಗರ್ ಇಬ್ಬರು ನಮ್ಮ ಮನೆಗೆ ಬಂದರು. ಆಗಿನ್ನು ಅವರಿಬ್ಬರು ಪುಟ್ಟ ಕಂದಮ್ಮಗಳು. ಇಬ್ಬರು ನೋಡಲು ಬಹಳ ಮುದ್ದಾಗಿದ್ದರು. ನನಗಂತೂ ಅವರಿಬ್ಬರನ್ನು ಕಂಡಾಗ ಅದೇನು ತಿಳಿಯದ ಸಂತೋಷ. ಸ್ವಲ್ಪ ತಿಂಗಳ ಹಿಂದಷ್ಟೇ ಬಾಲ್ಯದಿಂದಲೂ ನನ್ನ ಜೊತೆ ಇದ್ದ ನನ್ನ ಸ್ನೇಹಿತನಂತೆ ಇದ್ದ ಒಬ್ಬ ಉತ್ತಮ ಶ್ವಾನವನ್ನು ಕಳೆದುಕೊಂಡಿದ್ದ ನೋವಿನಲ್ಲಿದ್ದ ನನಗೆ ಇವರಿಬ್ಬರು ಬಂದದ್ದು ಒಂದು ಹೊಸ ಹುರುಪನ್ನು ತಂದುಕೊಟ್ಟಿತ್ತು.


ಈ ಇಬ್ಬರು ಮಕ್ಕಳಲ್ಲಿ ರೂಬಿ ಸ್ವಲ್ಪ ಮೃದು ಸ್ವಭಾವದವಳು ಮತ್ತು ಅನಾವಶ್ಯವಾಗಿ ಜಗಳವಾಡುವ ಗುಣ ಅವಳಲ್ಲಿ ಇರಲಿಲ್ಲ. ಆದರೆ ಅವಳ ಸೋದರ ಹಾಗಲ್ಲ. ಅವನು ಭಾರಿ ತುಂಟ ಮಗು, ಸ್ವಲ್ಪ ಹಠವೂ ಇತ್ತು. ಜೊತೆಗೆ ಅವನನ್ನು ಮಾತ್ರ ಮುದ್ದು ಮಾಡಬೇಕೆನ್ನುವ ಸ್ವಾರ್ಥ. ರೂಬಿ ಮತ್ತು ಅವಳ ಸೋದರ ಟೈಗರ್ ಒಂದೇ ತಾಯಿಯ ಹೊಟ್ಟೆಯಿಂದ ಹುಟ್ಟಿದ್ದರೂ ಅವರ ಬಹಳಷ್ಟು ಗುಣಗಳು ತದ್ವಿರುದ್ಧವಾಗಿದ್ದವು. ಅವರುಗಳ ಜೊತೆಗೆ ನನ್ನ ಬಾಂಧವ್ಯವು ತುಂಬಾ ಚೆನ್ನಾಗಿ ಮುಂದುವರಿದಿತ್ತು.


ಅದೇನು ನಮ್ಮ ಮೂವರ ಸಂತೋಷವನ್ನು ಕಂಡು ಆ ದೇವರಿಗೂ ಮತ್ಸರ ಉಂಟಾಯಿತು ಏನೋ ತಿಳಿಯದು. ಒಂದು ದಿನ ನಾನು ಶಾಲೆ ಮುಗಿಸಿ ಮನೆಗೆ ವಾಪಸ್ ಆಗುವಾಗ ದಾರಿಯಲ್ಲಿ ಸಿಕ್ಕ ಪರಿಚಯದ ಅಂಕಲ್ ಒಬ್ಬರು ನಿನ್ನ ನಾಯಿಯನ್ನು ಲಾರಿ ಅವನ ಹೊತ್ತುಕೊಂಡು ಹೋದ ಎಂದು ಹೇಳಿದರು ನಾನು ಅವರ ತಮಾಷೆ ಮಾಡುತ್ತಿದ್ದಾರೆ ಎಂದು ಭಾವಿಸಿ ಹೌದಾ ಎಂದು ತಮಾಷೆಯಾಗಿಯೇ ಹೇಳಿ ಮುಂದುವರಿದೆ. ಆ ಕ್ಷಣಕ್ಕೆ ಅದನ್ನು ತಮಾಷೆ ಇಂದು ಭಾವಿಸಿದ್ದರೂ ಮನೆಗೆ ತಲುಪುವವರೆಗೂ ನನ್ನ ತಲೆಯಲ್ಲಿ ಅವರು ಹೇಳಿದ ಮಾತಿನ ಅರ್ಥವೇನು ಎಂದೇ ಓಡುತ್ತಿತ್ತು.


ಮನೆಗೆ ತಲುಪಿದ ಕೂಡಲೇ ಅತ್ತ ಇತ್ತ ಕಣ್ಣು ಹಾಯಿಸಿದೆ. ಮೆಟ್ಟಿಲ ಮುಂದೆ ಸಪ್ಪೆ ಮೋರೆಯಲ್ಲಿ ಮಲಗಿದ್ದ ಟೈಗರ್ ಕಾಣಿಸಿದ, ಆದರೆ ರೂಬಿ ಎಲ್ಲೂ ಕಾಣಲಿಲ್ಲ. ನಾನು ಒಳಗೆ ಹೋಗಿ ಅಮ್ಮನ ಬಳಿ ಕೇಳಿದೆ ರೂಬಿ ಎಲ್ಲಿ ಎಂದು. ಆಗ ಅಮ್ಮ ಕೊಟ್ಟ ಉತ್ತರ ಕೇಳಿ ನನಗೆ ಒಂದು ಕ್ಷಣ ಸಿಡಿಲು ಬಡಿದಂತಾಯಿತು. ರೂಬಿ ಸತ್ತು ಹೋದಳು ಎಂದು ಹೇಳಿದಾಗ ನಾನು ಮೆಲ್ಲನೆ ಧ್ವನಿಯಲ್ಲಿ ಏನಾಯ್ತು ಎಂದು ಕೇಳಿದೆ. ಅಪ್ಪನ ಜೊತೆ ಮಾರ್ಗದ ಬದಿಗೆ ಹೋಗಿದ್ದಾಗ ಅದೆಲ್ಲೂ ಬೇರೆ ಕಡೆ ಹೋಗಬೇಕಿತ್ತಾ ಹೊಯ್ಗೆ ಲಾರಿ ದಾರಿ ತಪ್ಪಿ ಈ ಕಡೆಗೆ ಬಂತು. ಆದರ ಅಡಿಗೆ ಬಿದ್ದು ಅವಳು ಸತ್ತು ಹೋದಳು.


ನಾನು ಕೂಡ ನೋಡಿಲ್ಲ ಪಕ್ಕದ ಮನೆ ಅಣ್ಣ ಮಣ್ಣಿನಲ್ಲಿ ಹಾಕಿದ ಎಂದು ಹೇಳಿ ಅವರ ಮಾತು ಮುಗಿಯುವಷ್ಟರಲ್ಲಿ ನನ್ನ ಕಣ್ಣಿನಲ್ಲಿ ನೀರು ತುಂಬಿ ಹೋಗಿತ್ತು. ಬುದ್ಧಿ ಬಂದಾಗಿನಿಂದ ನಾನು ಅಪ್ಪ ಅಮ್ಮನ ಮುಂದೆ ಅಷ್ಟು ಅತ್ತಿರಲ್ಲಿಲ್ಲ. ಆದರೆ ಅವತ್ತು ಮಾತ್ರ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಿದ್ದೆ. ಅವಳ ಜೊತೆ ಕಳೆದ ಅದೆಷ್ಟು ನೆನಪುಗಳು ಬಂದು ಬಂದು ನನ್ನನ್ನು ಇನ್ನಷ್ಟು ಅಳುವಂತೆ ಮಾಡುತ್ತಿದ್ದವು. ನನ್ನ ಜಗತ್ತು ಕತ್ತಲೆಯಂತೆ ಭಾಸವಾಗಿತ್ತು. ಅದೊಂದು ಭರವಸೆಯ ಬೆಳಕು ಪಟ್ಟಣ ಮಿಂಚಿ ಆಗಲೇ ಮರೆಯಾಗಿತ್ತು. ಅವಳು ನನ್ನ ಜೀವನದಲ್ಲಿ ಬಂದ ನಂತರ ಜೀವನದಲ್ಲಿ ಏನೋ ಇದೆ ಎಂದು ಅಂದುಕೊಂಡಿದ್ದ ನನಗೆ ಒಂದು ರೀತಿಯ ನಿರಾಸೆಯಾಗಿತ್ತು. ರೂಬಿ ನನ್ನ ನೆನಪಿನ ಬುಟ್ಟಿಯನ್ನು ಶಾಶ್ವತವಾಗಿ ಸೇರಿಬಿಟ್ಟಳು. ಈ ಬರವಣಿಗೆ ನಾನು ಅತಿಯಾಗಿ ಪ್ರೀತಿಸಿದ್ದ ನನ್ನ ಮುದ್ದು ಮಗಳು ರೂಬಿಯ ನೆನಪಿಗಾಗಿ. ಆ ಪುಟ್ಟ ಕಂದಮ್ಮ ನನ್ನನ್ನು ಅಗಲಿ ವರುಷಗಳು ಕಳೆದರೂ ಅವಳ ನೆನಪು ಮಾತ್ರ ಎಂದೆಂದಿಗೂ ಹಸಿರಾಗಿರುತ್ತದೆ. ಅವಳ ಸೋದರ ಟೈಗರ್ ನಲ್ಲಿ ನಾನು ಇಂದಿಗೂ ಅವಳನ್ನು ಕಾಣುತ್ತಿದ್ದೇನೆ.




- ಶ್ರೀರಕ್ಷಾ ಹಿರೇಬಂಡಾಡಿ

ಪ್ರಥಮ ಪತ್ರಿಕೋದ್ಯಮ 

ವಿವೇಕಾನಂದ ಕಾಲೇಜು, ಪುತ್ತೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top