ಶೃಂಗೇರಿ ತುಂಗಾ ನದಿ ಬ್ಯಾಂಕ್‌ನಲ್ಲಿ ಊಟ ಉಪಾಹಾರ ಪರಿಕರಗಳ ಬ್ಯಾಂಕ್

Upayuktha
0


ಶೃಂಗೇರಿಯ ತುಂಗಾ ನದಿಯ ತೀರದ ಶ್ರೀಮಠದಲ್ಲಿ ಜನವರಿ 11 ನೇ ತಾರೀಖು, ಇಡೀ ವಿಶ್ವದ ಸಕಲ ಜೀವರಾಶಿಗಳಿಗೂ ಸುಖ ಸಮೃದ್ಧಿ ದೊರೆಯಲಿ ಎಂಬ ಸಂಕಲ್ಪದೊಂದಿಗೆ ಅಧ್ಯಾತ್ಮ ಕಲ್ಯಾಣ ವೃಷ್ಟಿ ಮಹಾಸಮರ್ಪಣೆ ನೆಡೆಯುತ್ತಿದ್ದರೆ... ಅದೇ ಶೃಂಗೇರಿಯ ಬ್ಯಾಂಕ್ ಆಫ್ ರಿವರ್ ತುಂಗಾದಲ್ಲಿ, ಅದೇ ಕಲ್ಯಾಣ ವೃಷ್ಟಿಯಲ್ಲಿ ತೊಡಗಿಸಿಕೊಂಡ ಕೆಲವು ಸ್ವಯಂ ಸೇವಕರು ಸಾಮಾಜಿಕವಾಗಿ ಸಕಲ ಜೀವರಾಶಿಗಳಿಗೂ, ಪರಿಸರಕ್ಕೂ ಆರೋಗ್ಯವನ್ನು ಬಯಸುತ್ತ, ಕಲ್ಯಾಣ ವೃಷ್ಟಿಯ ಸಂಕಲ್ಪವನ್ನೇ ಹೊತ್ತು ಮರುದಿನ (ಜನವರಿ 12, 2024) ಒಂದು ಬ್ಯಾಂಕ್ ತೆರೆದಿದ್ದಾರೆ.  


ಆ ಬ್ಯಾಂಕ್‌ನ ಹೆಸರು ಊಟ ಉಪಾಹಾರ ವಿತರಣಾ ಪರಿಕರಗಳ ಬ್ಯಾಂಕ್


ಶೃಂಗೇರಿಯ ಸುತ್ತಮುತ್ತ ನೆಡೆಯುವ ಎಲ್ಲಾ ರೀತಿಯ ಸಭೆ, ಸಮಾರಂಭಗಳಲ್ಲಿ ಈಗ ಬಳಸಲಾಗುತ್ತಿರುವ ಪೇಪರ್ ಕಪ್/ಲೋಟ, ಪೇಪರ್ ಪ್ಲೇಟ್, ಪ್ಲಾಸ್ಟಿಕ್ ಕಪ್/ಲೋಟ, ಪ್ಲಾಸ್ಟಿಕ್ ಪ್ಲೇಟ್, ಪ್ಲಾಸ್ಟಿಕ್ ಚಮಚ... ಮುಂತಾದವುಗಳನ್ನು ಕಡಿಮೆ ಮಾಡಿ, ಈಗಿನ ಮತ್ತು ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣದ ಸಂಪತ್ತನ್ನು ಉಳಿಸುವ, ವೃದ್ದಿಸುವ ಬ್ಯಾಂಕಿಂಗ್ ವ್ಯವಹಾರವನ್ನು ಈ ಬ್ಯಾಂಕ್ ಸಾರ್ವಜನಿಕರ ಇಂಟರೆಸ್ಟ್‌ (ಆಸಕ್ತಿ) ನೊಂದಿಗೆ ನಿರ್ವಹಿಸುತ್ತದೆ.   


ಶೃಂಗೇರಿ ವಿಪ್ರ ನೌಕರರ ಕ್ಷೇಮಾಭಿವೃದ್ದಿ ಸಂಘ ಸ್ಥಾಪಿಸಿರುವ ಈ ಊಟ ಉಪಹಾರಗಳ ವಿತರಣಾ ಪರಿಕರಗಳ ಬ್ಯಾಂಕ್‌ನಲ್ಲಿ, ಪ್ರಾರಂಭಿಕ ಬಂಡವಾಳವಾಗಿ ತಲಾ 500 ಸ್ಟೀಲ್ ತಟ್ಟೆ, ಕಾಫಿ ಲೋಟ, ನೀರಿನ ಲೋಟ, ಚಮಚಗಳನ್ನು ಸಾರ್ವಜನಿಕರಿಗೆ ಸಾಲವಾಗಿ ಕೊಡಲು ತೊಡಗಿಸಿದೆ.   


ಬ್ಯಾಂಕಿನ ಈ ಎಲ್ಲಾ ಸ್ಟೀಲ್ ಪರಿಕರಗಳು ಶೃಂಗೇರಿ ಮತ್ತು ಶೃಂಗೇರಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ಸಭೆ ಸಮಾರಂಭಗಳಿಗೆ ಬಳಸಲು, ಶುದ್ಧ ಸಸ್ಯಹಾರಕ್ಕೆ ಮಾತ್ರ ಎಂಬ ನಿಬಂಧನೆಯೊಂದಿಗೆ, ಸಾಲವಾಗಿ ಪಡೆದು, ಉಚಿತವಾಗಿ ಬಳಸಲು ದೊರೆಯುತ್ತಿದೆ. 


ಬ್ಯಾಂಕಿನ ಪರಿಕರಗಳನ್ನು ಪಡೆಯಲು, ಬ್ಯಾಂಕಿನ ನಿರ್ವಾಹಕ ನಿರ್ದೇಶಕರುಗಳಾದ  

ಶಶಿಧರ್ ಕೆ (9480739062),

ಗಣಿತವನ ಶಿವಶಂಕರ್ (94811 56727)

ಬಾಲಕೃಷ್ಣ ಮೆಣಸೆ‌ (94816 49339)

ಇವರುಗಳನ್ನು ಸಂಪರ್ಕಿಸಬಹುದು


**

ಪ್ಲಾಸ್ಟಿಕ್‌ನ ಅತಿಯಾದ ಬಳಕೆಯಿಂದ ಮನುಷ್ಯ ಮತ್ತು ಇತರ ಪ್ರಾಣಿಗಳ ರೋಗ ಹೆಚ್ಚುತ್ತಿರುವುದಲ್ಲದೆ, ಪ್ಲಾಸ್ಟಿಕ್ ತ್ಯಾಜ್ಯಗಳು ಮಣ್ಣು-ನೀರಿನಲ್ಲಿ ಬೆರೆಯುವುದರಿಂದ ಮಣ್ಣೂ ಆರೋಗ್ಯ ಕಳೆದುಕೊಳ್ತಾ ಇದೆ. ವಿಷ ಸೇರಿದ ಆಹಾರ ಪದಾರ್ಥಗಳನ್ನು ವಿಷಯುಕ್ತ ಪ್ಲಾಸ್ಟಿಕ್ ಬಳಸಿ ಸಂಗ್ರಹಣೆ, ಪ್ಯಾಕಿಂಗ್ ಮಾಡಲಾಗುತ್ತಿದೆ!! ಇಷ್ಟು ಸಾಲದು ಅಂತ, ಏಕ ಬಳಕೆ ಪ್ಲಾಸ್ಟಿಕ್ ಪರಿಕರಗಳನ್ನು ಬಳಸಿ ಆಹಾರ, ಪಾನಿಯಗಳನ್ನು ಸೇವಿಸಿ, ನಂತರ ಅಜ್ಞಾನದಿಂದ, ಬಳಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪುನಃ ಮಣ್ಣು-ಗಾಳಿ-ನೀರಿಗೆ ಸೇರಿಸುವ ಮೂರ್ಖತನ ಮಾಡುತ್ತಿದ್ದೇವೆ.  


ಬಿಸಿ, ಉಪ್ಪು, ಹುಳಿ ಅಂಶಗಳು, ಬಳಸುವ ಪ್ಲಾಸ್ಟಿಕ್/ಪೇಪರ್ ಪರಿಕರಗಳಲ್ಲಿ ಪ್ರಭಾವ ಬೀರಿ, ಪ್ಲಾಸ್ಟಿಕ್ ಮೈಕ್ರೂ ಕಣಗಳನ್ನು ಬಿಡುಗಡೆ ಮಾಡಿ ನೀರು, ಆಹಾರಗಳಿಗೆ ಬೆರಸುತ್ತವೆ.  ಕುಡಿದಿದ್ದು ಬಿಸಿ ಟೀ ಮಾತ್ರ ಅಲ್ಲ, ತುಟಿಯ ಮೇಲೆ ಇಟ್ಟುಕೊಂಡು ಹೀರಿದ್ದು ಶುದ್ದ ಅಪ್ಪೆಕಾಯಿ ಸಾರನ್ನು ಮಾತ್ರ ಅಲ್ಲ!!!, ಟೀ, ಸಾರಿನ ಜೊತೆ ಕಣ್ಣಿಗೆ ಕಾಣದ ಪ್ಲಾಸ್ಟಿಕ್ ರಸವನ್ನೂ ಕುಡಿದಿದ್ದೇವೆ.  


ಎಲ್ಲಾ ಸಭೆ, ಸಮಾರಂಭಗಳಲ್ಲಿ ತಿಂಡಿ, ಪಾನೀಯ ವ್ಯವಸ್ಥೆಗೆ ಪೇಪರ್/ಪ್ಲಾಸ್ಟಿಕ್ ಕಪ್, ಲೋಟ, ಪ್ಲೇಟ್, ಚಮಚ ಬಳಕೆ ಸಾಮಾನ್ಯವಾಗಿದೆ.   


ಇವುಗಳ ತಯಾರಿಕೆಯಲ್ಲಿ ಬಳಸುವ ವ್ಯಾಕ್ಸ್ /ಪ್ಲಾಸ್ಟಿಕ್ ಕಣಗಳು ಮಾನವರ ದೇಹದಲ್ಲಿ ಕ್ಯಾನ್ಸರ್, ಹೃದಯಾಘಾತ, ಬಂಜೆತನ, ಗಂಡಸರಲ್ಲಿ ವಂಶಾಭಿವೃದ್ದಿ ಸಾಮರ್ಥ್ಯ ಕ್ಷೀಣತೆ, ಮೂರ್ಛೆ ರೋಗ, ಕಿಡ್ಣಿ, ಲಂಗ್ಸ್ ಮತ್ತಿತರ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಬಳಸಿದ ಪ್ಲಾಸ್ಟಿಕ್ ತ್ಯಾಜ್ಯಗಳು ಹಿತ್ತಲು, ಗದ್ದೆ, ತೋಟ, ಹಾಡ್ಯ, ರಸ್ತೆ, ಕಾಡು, ನದಿ ಸಮುದ್ರ ಸೇರ್ತಾ ಇದೆ. ಮಣ್ಣು ಜೀವಂತಿಕೆ ಕಳೆದುಕೊಳ್ತಾ ಇದೆ, ಗಾಳಿಯಲ್ಲಿ ಪ್ಲಾಸ್ಟಿಕ್ ಮೈಕ್ರೋ ಕಣಗಳ ಸಂಖ್ಯೆ ಏರ್ತಾ ಇದೆ, ನೀರಂತೂ ಕುಡಿಯಲಾರದ ಪ್ಲಾಸ್ಟಿಕ್ ವಿಷದ ಜಲವಾಗುತ್ತಿದೆ. 

ನಿಲ್ಲಿಸೋಣ. ಪ್ಲಾಸ್ಟಿಕ್ ನಿಲ್ಲಿಸುವುದಕ್ಕೆ ಪ್ರಯತ್ನ ಮಾಡೋಣ.

**

ಯಾವುದೇ ಕಾರ್ಯಕ್ರಮ ಇರಲಿ, ಅಲ್ಲಿ ಪ್ಲಾಸ್ಟಿಕ್/ಪೇಪರ್ ಲೋಟ-ಪ್ಲೇಟ್-ಚಮಚ, ಪ್ಲಾಸ್ಟಿಕ್ ಬಾಟಲ್‌ನ ನೀರು, ಅತಿಥಿಗಳಿಗೆ ಪ್ಲಾಸ್ಟಿಕ್ ರ‌್ಯಾಪರ್‌ನಲ್ಲಿ ಸುತ್ತಿದ ಹೂಗುಚ್ಚ, ಪ್ಲಾಸ್ಟಿಕ್ ರ‌್ಯಾಪರ್‌ನಲ್ಲಿ ಸುತ್ತಿದ ಹಣ್ಣಿನ ಬುಟ್ಟಿ, ಏಕ ಬಳಕೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ಮೊಮೆಂಟೋ, ಪ್ಲಾಸ್ಟಿಕ್ ಸ್ಟ್ರಾ... ಇತ್ಯಾದಿಗಳನ್ನು ಬಳಸದಂತೆ ಮಾಡಿ ಕಾರ್ಯಕ್ರಮಗಳನ್ನು ಮಾಡೋಣ.


*

ಪ್ಲಾಸ್ಟಿಕ್/ಪೇಪರ್ ಪರಿಕರಗಳಿಗೆ ವಿದಾಯ ಹೇಳಿ, ಬಾಡಿಗೆ ರಹಿತ ಸ್ಟೀಲ್ ಪರಿಕರಗಳನ್ನು ಬಳಸಿ, ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರ ಆರೋಗ್ಯವನ್ನು ಕಾಪಾಡೋಣ. ಜೊತೆಗೆ ಈ ಮೂಲಕ ಪರಿಸರಕ್ಕೂ, ಸಕಲ ಜೀವಿಗಳಿಗೂ, ಮುಂದಿನ ತಲೆಮಾರಿಗೂ ನಮ್ಮ ನಡೆಗಳಿಂದ ಒಂದು ಶುಭಾಶಯ ಕೋರೋಣ.  


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top