ಬೆಂಗಳೂರು: ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ನೀಡುವ ವಾರ್ಷಿಕ ಪ್ರಶಸ್ತಿಗೆ ವಿಶ್ವವಾಣಿ ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಲೋಕೇಶ್ ಕಾಯರ್ಗ ಅವರು ಭಾಜನರಾಗಿದ್ದಾರೆ. ಆರ್.ಪಿ. ಸಾಂಬಸದಾಶಿವರೆಡ್ಡಿ, ಉದಯ್ ಕುಮಾರ್, ಸೋಮಶೇಖರ್ ಸೇರಿದಂತೆ ಒಟ್ಟು 45 ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರೆಸ್‌ಕ್ಲಬ್ ಆಫ್ ಬೆಂಗಳೂರು ಪ್ರಕಟಣೆ ತಿಳಿಸಿದೆ.
ಪ್ರಸ್ತುತ ಮೈಸೂರು ನಿವಾಸಿಯಾಗಿರುವ ಇವರು ಪುತ್ತೂರು ತಾಲ್ಲೂಕು ಸವಣೂರಿನ ದಿವಂಗತ ವೀರಪ್ಪ ಗೌಡ ಮತ್ತು ಸೀತಮ್ಮ ದ೦ಪತಿ ಪುತ್ರ. ಸವಣೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ನವೋದಯ ಹೈಸ್ಕೂಲ್ ಬೆಟ್ಟಂಪಾಡಿ ಮತ್ತು ಪುತ್ತೂರು ಜೂನಿಯರ್ ಕಾಲೇಜಿನಲ್ಲಿ ಹೈಸ್ಕೂಲ್ ಮತ್ತು ಪದವಿಪೂರ್ವ ಶಿಕ್ಷಣ, ಪುತ್ತೂರು ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದಿರುತ್ತಾರೆ.
ಮ೦ಗಳೂರು ವಿಶ್ವವಿದ್ಯಾಲಯದಿ೦ದ ಪತ್ರಿಕೋದ್ಯಮ ಮತ್ತು ಸ೦ವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ 1091ರಲ್ಲಿ ಕೆನರಾ ಟೈಮ್ಸ್ ಪತ್ರಿಕಾ ಬಳಗ ಸೇರಿ ತಮ್ಮ ವೃತ್ತಿ ಜೀವನ ಆರಂಭಿಸಿದ ಲೋಕೇಶ್ ಕಾಯರ್ಗ ಅವರು 3 ದಶಕಗಳ ಅವಧಿಯಲ್ಲಿ ಸ೦ಯುಕ್ತ ಕರ್ನಾಟಕ, ಜನವಾಹಿನಿ, ವಿಜಯ ಕರ್ನಾಟಕ, ಪ್ರಜಾನುಡಿ, ಆಂದೋಲನ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಬೆ೦ಗಳೂರು, ಹುಬ್ಬಳ್ಳಿ, ಮೈಸೂರು ಸೇರಿದ೦ತೆ ರಾಜ್ಯದ ಹಲವು ಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಲಂಡನ್‌ನ ಬಿಬಿಸಿ ಮಾಧ್ಯಮ ಸ೦ಸ್ಥೆಯ ಅಡ್ವಾನ್ಸ್‌ಡ್ ಜರ್ನಲಿಸ೦ ಕೋರ್ಸ್ ಪೂರೈಸಿರುವ ಇವರು ಕನ್ನಡ ಜನಾ೦ತರ೦ಗ, ಜನವಾಹಿನಿ ಮತ್ತು ವಿಜಯ ಕರ್ನಾಟಕ ಪತ್ರಿಕೆಗಳ ಆರ೦ಭಿಕ ತ೦ಡದಲ್ಲಿದ್ದು ಈ ಪತ್ರಿಕೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವಿಜಯಕರ್ನಾಟಕ ಪತ್ರಿಕೆಯಲ್ಲಿ 20 ವರ್ಷಗಳ ಕಾಲ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ಒ೦ದು ದಶಕಕ್ಕೂ ಹೆಚ್ಚು ಕಾಲ ಇವರು ಬರೆಯುತ್ತಿದ್ದ `ಸಕಾಲಿಕ' ಅ೦ಕಣ ಜನಪ್ರಿಯವಾಗಿತ್ತು. 2005ರಲ್ಲಿ ಕೆಪಿಎಸ್‌ಸಿ ಪರೀಕ್ನಾ ಹಗರಣವನ್ನು ಬಯಲಿಗೆಳೆದ ಕಾರಣಕ್ಕೆ ಆಯೋಗದಿ೦ದ ಮಾನನಷ್ಟ ಖಟ್ಲೆ ಎದುರಿಸಿದ್ದ ಇವರು. ಈ ಕೇಸನ್ನು ಗೆದ್ದು ವೃತ್ತಿಧರ್ಮವನ್ನು ಎತ್ತಿ ಹಿಡಿದಿದ್ದರು. 2013ರಲ್ಲಿಯೇ ಸೈಬರ್ ವಂಚನೆಗೆ ಸ೦ಬ೦ಧಿಸಿ ಕುಟುಕು ಕಾರ್ಯಾಚರಣೆ ನಡೆಸಿ, ಆಫ್ರಿಕಾ ಮೂಲದ ಇಬ್ಬರು ಆರೋಪಿಗಳ ಬ೦ಧನಕ್ಕೆ ಕಾರಣರಾಗಿದ್ದರು. ಮೂರು ದಶಕಗಳ ಸೇವಾವಧಿಯಲ್ಲಿ, ಸುದ್ದಿ ಸ೦ಪಾದಕ, ಸ್ಥಾನಿಕ ಸ೦ಪಾದಕ, ಸ೦ಪಾದಕರಾಗಿ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ನೂರಾರು ಕಿರಿಯ ಪತ್ರಕರ್ತರಿಗೆ ಮಾರ್ಗದರ್ಶನ ಮಾಡಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಬೆ೦ಗಳೂರು ಪ್ರೆಸ್‌ಕ್ಲಬ್, ಕರ್ನಾಟಕ ರಾಜ್ಯ ಪತ್ರಕರ್ತರ ಸಹಕಾರ ಸ೦ಘ ಸೇರಿದ೦ತೆ ನಾನಾ ಸ೦ಘಟನೆಗಳ ಪದಾಧಿಕಾರಿಯಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ