- ಸಂತಾನಹೀನತೆ ಮತ್ತು ಸಂಸ್ಕಾರಹೀನತೆ ಸಮಾಜಕ್ಕೆ ಅಪಾಯಕಾರಿ
- ಬ್ರಾಹ್ಮಣರು ಎರಡಕ್ಕಿಂತ ಹೆಚ್ಚು ಮಕ್ಕಳ ಹೆತ್ತರೆ ಶ್ರೀಮಠದಿಂದಲೇ ವಿದ್ಯಾಭ್ಯಾಸದ ವೆಚ್ಚ
ಬೆಂಗಳೂರು: ಸಂತಾನಹೀನತೆ ಮತ್ತು ಸಂಸ್ಕಾರಹೀನತೆ ಸಮಾಜಕ್ಕೆ ಅಪಾಯಕಾರಿ ಎಂದು ಹೇಳಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳು, ಬ್ರಾಹ್ಮಣರು ಸಂತಾನ ಮತ್ತು ಸಂಸ್ಕಾರಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬ್ರಾಹ್ಮಣ ಮಹಾಸಮ್ಮೇಳನದ ಸುವರ್ಣ ಸಂಭ್ರಮದ ಧರ್ಮ ಸಭೆಯಲ್ಲಿ ಭಾನುವಾರ ಮಾತನಾಡಿದರು.
ಇತ್ತೀಚೆಗೆ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಿದ್ದ ಸಂತಾನ ಹೆಚ್ಚಳ ಹೇಳಿಕೆಯನ್ನು ಪುನರುಚ್ಚರಿಸಿದ ಶ್ರೀಗಳು, ಬ್ರಾಹ್ಮಣರ ಜನಸಂಖ್ಯೆ ಕಡಿಮೆಯಾಗುತ್ತಿದ್ದು ಧ್ವನಿ ಇಲ್ಲದಂತಾಗುತ್ತಿದೆ. ಬ್ರಾಹ್ಮಣ ಸಮುದಾಯದ ಯಾವುದೇ ಉಪ ಪಂಗಡದ ದಂಪತಿ 2ಕ್ಕಿಂತ ಅಧಿಕ ಮಕ್ಕಳನ್ನು ಹೊಂದಿದರೆ ಆ ಮಕ್ಕಳ ವಿದ್ಯಾಭ್ಯಾಸ ಸೇರಿ ಸಂಪೂರ್ಣ ವೆಚ್ಚವನ್ನು ಶ್ರೀ ಮಠವೇ ಭರಿಸುತ್ತದೆ ಎಂದು ಭರವಸೆ ನೀಡಿದರು.
ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದೆ. ಅದರಲ್ಲೂ ಬ್ರಾಹ್ಮಣರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಈ ಬಗ್ಗೆ ಇಡೀ ಸಮುದಾಯ ಜಾಗೃತವಾಗಬೇಕು. ಪಾಕಿಸ್ತಾನ, ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಬಂದೊದಗಿದ ಸ್ಥಿತಿ ನಮಗೆ ಬರಬಾರದು. ನೀವು ಎಚ್ಚರದಿಂದ ಇರಬೇಕು ಎಂದರು.
ಪ್ರತಿಭಾ ಫಲಾಯನ ದೇಶಕ್ಕೆ ಮಾರಕ:
ಭಾರತದಿಂದ ಪ್ರತಿಭಾ ಫಲಾಯನವಾಗುತ್ತಿದೆ. ಉದ್ಯೋಗ ಅರಸಿ ವಿದೇಶಕ್ಕೆ ಹೋಗುವವರು ವಾಪಸ್ ಬರುತ್ತಿಲ್ಲ. ಮುಂದೊಂದು ದಿನ ಪಾಕಿಸ್ತಾನ, ಬಾಂಗ್ಲಾ ದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ರೀತಿಯ ಸಂಗತಿ ನಮಗೂ ಬರಲಿದೆ ಎಂದು ಗೋಕರ್ಣ ರಾಮಚಂದ್ರಪುರ ಮಠದ ಪೀಠಾಧೀಶ್ವರ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.
ಬುದ್ದಿಜೀವಿಗಳು, ಪ್ರತಿಭಾವಂತರು ವಿದೇಶದಲ್ಲಿ ನೆಲೆಸುತ್ತಿದ್ದಾರೆ. ಮಠಕ್ಕೆ ಬರುವ ಬಹುತೇಕರು ವಿದೇಶಕ್ಕೆ ಹೋಗಲು ಆಶೀರ್ವದಿಸಿ ಎಂದು ಹೇಳಿಕೊಂಡು ಬರುತ್ತಾರೆ. ಆದರೆ, ನಾನು ಅವರಿಗೆ ಮತ್ತೆ ವಾಪಸ್ ಭಾರತಕ್ಕೆ ಬರಬೇಕು ಎಂದು ಷರತ್ತು ಹಾಕಿ ಕಳುಹಿಸುತ್ತಿದ್ದೇನೆ. ವಿದೇಶದಲ್ಲಿ ನೆಲೆಸುವುದು ಎಂದರೆ ಅವರನ್ನು ಮರೆತುಬಿಡುವುದು ಎಂದರ್ಥವಾಗುತ್ತಿದೆ. ಸಮಾಜ ದೇಶಕ್ಕೆ ಕಷ್ಟ ಎಂದು ಬಂದಾಗ ಎಲ್ಲರೂ ಒಂದಾಗಬೇಕು. ಈ ವಿಷಯ ಯಾವುದೇ ಸಮ್ಮೇಳನ ಸಭೆಯಲ್ಲಿ ಚರ್ಚೆಯಾಗುತ್ತಿಲ್ಲ ಎಂದರು.
ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ಸೋಸಲೆ ವ್ಯಾಸರಾಜ ಮಠದ ವಿದ್ಯಾಶ್ರೀಶತೀರ್ಥ ಸ್ವಾಮೀಜಿ, ಮುಳಬಾಗಿಲಿನ ಶ್ರೀಪಾದರಾಜ ಮಠದ ಸುಜಯನಿಧಿ ತೀರ್ಥ ಸ್ವಾಮೀಜಿ, ಕೂಡ್ಲಿ ಶೃಂಗೇರಿ ಶಾರದಾ ಮಠದ ಅಭಿನವ ಶಂಕರಭಾರತೀ ಸ್ವಾಮೀಜಿ, ತುಮಕೂರಿನ ರಾಮಕೃಷ್ಣ ಮಠದ ವೀರೇಶಾನಂದ ಭಾರತೀ ಸ್ವಾಮೀಜಿ, ಗದಗದ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತೀ ಸ್ವಾಮೀ ಜಿ, ನ್ಯಾ.ಕೃಷ್ಣ ಎಸ್.ದೀಕ್ಷಿತ್, ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಜೋಷಿ, ಉದ್ಯಮಿ ಮೋಹನ ದಾಸ್ ಪೈ, ಮಹಾಸಭೆ ಅಧ್ಯಕ್ಷ ಅಶೋಕ ಹಾರನಹಳ್ಳಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಉಪಸ್ಥಿತರಿದ್ದರು.
ಬ್ರಾಹ್ಮಣರ ನಡುವೆ ಭಿನ್ನಾಭಿಪ್ರಾಯ ಬೇಡ: ನ್ಯಾ.ವಿ. ಶ್ರೀಶಾನಂದ
ಆಚಾರ್ಯರು ನೀಡಿದ ಸದ್ವಿಚಾರಗಳು ಗ್ರಾಹ್ಯವಾಗುವ ಕೆಲ ಸಂದರ್ಭಗಳಲ್ಲಿ ಶಿಷ್ಯರಲ್ಲಿ ಗೊಂದಲ ಮೂಡುವುದು ಸಹಜ. ಆದರೂ, ಸಮುದಾಯದ ಜನರ ನಡುವೆ ಭಿನ್ನಾಭಿಪ್ರಾಯ ಇರಬಾರದು ಎಂದು ನ್ಯಾಯಮೂರ್ತಿ ವಿ. ಶ್ರೀಶಾನಂದ ಹೇಳಿದರು.
ಬ್ರಾಹ್ಮಣ ಮಹಾ ಸಮ್ಮೇಳನದ 2ನೇ ದಿನ 'ಸನಾತನ ಧರ್ಮಕ್ಕೆ ಆಚಾರ್ಯತ್ರಯರ ಕೊಡುಗೆ ವಿಚಾರಗೋಷ್ಠಿಯಲ್ಲಿ ಮಾತನಾಡಿ, ಗಣಿತ ಸೂತ್ರಗಳನ್ನು ಆಧರಿಸಿ ಒಬ್ಬೊಬ್ಬರು ಒಂದು ರೀತಿಯಲ್ಲಿ ಲೆಕ್ಕ ಬಿಡಿಸುತ್ತಾರೆ. ಅಂತಿಮವಾಗಿ ಉತ್ತರ ಒಂದೇ ಆಗಿರುತ್ತದೆ. ಅದೇ ರೀತಿ ಶ್ರೀರಂಗದಲ್ಲಿ ತ್ರಿಮಸ್ಥರೆಲ್ಲರೂ ಒಬ್ಬರನ್ನು ಒಬ್ಬರು ಅಪ್ಪಿಕೊಂಡು ಶ್ರೀರಂಗನಿಗೆ ಸಮರ್ಪಿತರಾಗಿ ಒಂದಾಗಿ ಹೋಗುತ್ತಾರೆ. ಈ ಸಮ್ಮೇಳನ ಕೂಡ ಎಲ್ಲರ ಮನಸ್ಸುಗಳನ್ನು ಒಂದೆಡೆ ಸೇರಿಸಿ ಒಂದುಗೂಡಿಸುತ್ತಿದೆ ಎಂದರು.
ಆಧ್ಯಾತ್ಮಿಕ 2303ថ ಡಾ.ಪಾವಗಡ ಪ್ರಕಾಶ್ ರಾವ್ ಮಾತನಾಡಿ, ಜ್ಞಾನ ಗಳಿಸಲು ಓದಬೇಕು, ಬುದ್ದಿವಂತರಾಗಬೇಕು. ಅಮೆರಿಕದಲ್ಲಿ ಹೆಚ್ಚು ಮಂದಿ ಭಾರತ ಮೂಲಕ ಸಾಫ್ಟ್‌ವೇರ್ ಎಂಜಿನಿಯರ್‌ಗಳಿದ್ದು, ಅದರಲ್ಲಿ ಬ್ರಾಹ್ಮಣರೇ ಹೆಚ್ಚು ಎಂದರು.
ಐದು ಲಕ್ಷ ವೆಚ್ಚದಲ್ಲಿ ಬಡ ಬ್ರಾಹ್ಮಣರಿಗೆ ಸೂರು: ಅಧ್ಯಕ್ಷ ಅಶೋಕ ಹಾರನಹಳ್ಳಿ
ಬಡ ಬ್ರಾಹ್ಮಣರಿಗೆ ಸ್ವಂತ ಸೂರು ಒದಗಿಸುವ ಉದ್ದೇಶದಿಂದ ಐದು ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಸಿಕೊಳ್ಳಲಾಗುವುದು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಪ್ರಕಟಿಸಿದರು.
ಈ ಸಂದರ್ಭ ಮಾತನಾಡಿದ ರಘುನಾಥ ಸೋಮಯಾಜಿ, ಅವರು ತಲಾ 50 ಲಕ್ಷ ರೂ.ನೊಂದಿಗೆ ಒಂದು ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿರುವ ಬಡ ಬ್ರಾಹ್ಮಣರಿಗೆ ಐದು ಲಕ್ಷ ರೂ.ವೆಚ್ಚದಲ್ಲಿ ಮನೆಗಳನ್ನು ಕಟ್ಟಿಸಿಕೊಡಲಾಗುವುದು. ಬೆಂಗಳೂರಿನ ದೇವೇಗೌಡ ಪೆಟ್ರೋಲ್ ಪಂಪ್‌ಬಳಿ 'ಸುವರ್ಣ ಭವನ' ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿದೆ. ಆ ಭವನದಿಂದ ಬರುವ ಆದಾಯದಿಂದ ಬಡವರಿಗೆ ಸಹಾಯ ಮಾಡಲಾಗುವುದು ಎಂದು ಹೇಳಿದರು.
ಸರಕಾರದ ಜಾತಿಗಣತಿಗೆ ಬ್ರಾಹ್ಮಣ ಸಮುದಾಯದಿಂದ ಯಾವುದೇ ಆಕ್ಷೇಪಣೆಗಳಿಲ್ಲ, ಆದರೆ, ಅದರಲ್ಲಿ ಬ್ರಾಹ್ಮಣರ ಸಂಖ್ಯೆ 17 ಲಕ್ಷ ಎಂದು ಹೇಳಲಾಗುತ್ತಿದೆ. ಆದರೆ, ರಾಜ್ಯದಲ್ಲಿ ನಮ್ಮ ಸಂಖ್ಯೆ ಸುಮಾರು 40 ಲಕ್ಷ ಇದೆ. ಇದನ್ನು ಸರಕಾರ ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದರು.
ಧರ್ಮಸಭೆಯಲ್ಲಿ ರಾಮಚಂದ್ರಪುರ ಮಠದ ಪೀಠಾಧೀಶ್ವರ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಬ್ರಾಹ್ಮಣ ಎಲ್ಲಿ ಬಾಳುತ್ತಾನೋ ಆ ಪ್ರದೇಶ ತಾನಾಗಿಯೆ ಅಮರಾವತಿಯಾಗಿರುತ್ತದೆ. ಈ ಮಹಾ ಸಮ್ಮೇಳನದ ಮೂಲಕ ಜಗತ್ತಿಗೆ ಒಂದು ವಿಶೇಷ ಸಂದೇಶ ಹೋಗಲಿದೆ. ಆದರೆ, ಮುಂದೊಂದು ದಿನ ಇಡೀ ಹಿಂದೂ ಸಮಾಜಕ್ಕೆ ಆಪತ್ತು ಬರಲಿದೆ. ಈ ಮಾತನ್ನು ಭಗವದ್ಗೀತೆಯಲ್ಲೂ ಹೇಳಲಾಗಿದೆ. ಅದು ಈಗ ಸತ್ಯವಾಗುತ್ತಿರುವ ಬಾಸವಾಗುತ್ತಿದೆ. ಹಿಂದೂ ಸಮಾಜದ ಅಪತ್ತಿಗೆ ಅನೇಕ ಮುಖಗಳಿವೆ ಎಂದರು.
ಆರ್ಥಿಕ ದುರ್ಬಲ ಬ್ರಾಹ್ಮಣರಿಗೆ ಶೇ 10 ಮೀಸಲಾತಿ ಜಾರಿ ಮಾಡಿ:
ಆರ್ಥಿಕ ದುರ್ಬಲರಿಗೆ ಕೇಂದ್ರ ಸರ್ಕಾರ ಘೋಷಿಸಿರುವ ಶೇ.10 ಮೀಸಲಾತಿಯನ್ನು ಜಾರಿ ಮಾಡಲು ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ಎಕೆಬಿಎಂಎಸ್) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಎಕೆಬಿಎಂಎಸ್ ಹಮ್ಮಿಕೊಂಡಿದ್ದ ಬ್ರಾಹ್ಮಣ ಮಹಾ ಸಮ್ಮೇಳನದ ಕೊನೆಯ ದಿನದ ಕಾರ್ಯಕ್ರಮದಲ್ಲಿ ಈ ಒತ್ತಾಯ ಮಾಡಲಾಗಿದೆ. ಬ್ರಾಹ್ಮಣರು ಬುದ್ದಿಜೀವಿಗಳು ಹಾಗೂ ಅಧ್ಯಯನಶೀಲರು. ಆದರೆ ಬ್ರಾಹ್ಮಣರಲ್ಲಿ ಕೂಡ ಕೃಷಿ ಮತ್ತು ಪೌರೋಹಿತ್ಯ ವನ್ನು ಅವಲಂಬಿಸಿರುವ ಕುಟುಂಬಗಳಿದ್ದು, ಬಡವರೂ ಇದ್ದಾರೆ. ಅಂತಹ ಆರ್ಥಿಕ ದುರ್ಬಲರಿಗೆ ಕೇಂದ್ರ ಸರ್ಕಾರ ಜಾರಿ ಮಾಡಿರುವ ಶೇ.10 ಮೀಸಲಾತಿಯನ್ನು ಇದುವರೆಗೆ ರಾಜ್ಯ ಸರ್ಕಾರ ಜಾರಿ ಮಾಡಿಲ್ಲ. ಈ ಕೂಡಲೇ ಸರ್ಕಾರ ಅಧಿಸೂಚನೆ ಹೊರಡಿಸಬೇಕೆಂದು ಒಕ್ಕೊರಲಿನಿಂದ ಸರ್ಕಾರವನ್ನು ಆಗ್ರಹಿಸಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ