ಇಂದು ಬೆಳಿಗ್ಗೆ ಒಂದು ನೇೂವಿನ ಸುದ್ದಿ ಕೇಳಿದೆ. ನಮ್ಮೆಲ್ಲರ ಆತ್ಮೀಯ ಸ್ನೇಹಿತ ಶ್ರೇಷ್ಠ ಪ್ರಾಧ್ಯಾಪಕ ರಾಜಕೀಯ ಶಾಸ್ತ್ರದಲ್ಲಿ ಪರಿಣಿತ ಚಿಂತಕ ಮಾತ್ರವಲ್ಲ ಪ್ರಸ್ತುತ ರಾಜಕೀಯ ಆಗು ಹೇೂಗುಗಳ ವಿಶ್ಲೇಷಕರಾಗಿ ವಿಶೇಷವಾಗಿ ನಾಡಿನಲ್ಲಿ ಗುರುತಿಸಿಕೊಂಡ ಮುಝಾಫರ್ ಆಸಾದಿ ಇನ್ನಿಲ್ಲ ಅನ್ನುವ ಸುದ್ದಿ.
ನನಗೂ ನಮ್ಮ ಆಸಾದಿಗೂ ಸುಮಾರು ನಲ್ವತ್ತು ವರುಷಗಳ ಹಿಂದಿನ ಸ್ನೇಹ ಸಂಬಂಧ. ನಾನು ಮಂಗಳೂರು ವಿವಿಯಲ್ಲಿ ರಾಜ್ಯ ಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮಾಡುವ ಸಂದರ್ಭದಲ್ಲಿ ಆಸಾದಿಯವರು ನಮ್ಮ ಜೂನಿಯರ್ ವಿದ್ಯಾರ್ಥಿಯಾಗಿ ಇದೇ ವಿಭಾಗಕ್ಕೆ ಸೇರಿಕೊಂಡವರು. ಅತ್ಯಂತ ಮುಗ್ಧ ಮೆಲು ಧ್ವನಿಯಲ್ಲಿ ಕರೆದು ಆತ್ಮೀಯವಾಗಿ ಮಾತನಾಡಿಸುವ ಸಹಪಾಠಿಯಾಗಿದ್ದ ಆಸಾದಿ.
ಇದೇ ರಾಜ್ಯ ಶಾಸ್ತ್ರದಲ್ಲಿ ಇನ್ನಷ್ಟು ವಿಶೇಷ ಅಧ್ಯಯನವನ್ನು ದೆಹಲಿ ಜೆಎನ್‌ಯು ನಲ್ಲಿ ಮುಂದುವರಿಸಿ ಎಂ.ಫಿಲ್, ಪಿಎಚ್.ಡಿ ಪದವಿ ಪಡೆದು ಮೈಸೂರು ವಿವಿಯಲ್ಲಿ ಅಧ್ಯಾಪನ ವೃತ್ತಿಯನ್ನು ಸ್ವೀಕರಿಸಿದವರು. ಅನಂತರದಲ್ಲಿ ವಿವಿಧ ಹುದ್ದೆಗಳನ್ನು ಸ್ವೀಕರಿಸಿದ ಆಸಾದಿಯವರು ಹಂಗಾಮಿ ಕುಲಪತಿಗಳಾಗಿ ಸ್ವಲ್ಪ ಕಾಲ ಸೇವೆ ಸಲ್ಲಿಸಿದರು.
ತಾನು ಕಲಿತ ಮಂಗಳೂರು ವಿ.ವಿ.ಯಲ್ಲಿ ಕೂಡ ಕುಲಪತಿಗಳಾಗಿ ಸೇವೆ ಸಲ್ಲಿಸ ಬೇಕೆಂಬ ಮನದಾಳದ ಆಸೆಯೊಂದಿತ್ತು. ಅದು ಈಡೇರಲಿಲ್ಲ. ಇದು ಬೇರೆ ವಿಚಾರ. ಅದೇನೆ ಆಗಲಿ ಆಸಾದಿ ಒಬ್ಬ ಸ್ನೇಹಿತನಾಗಿ ಎಲ್ಲರ ಮನಸ್ಸು ಗೆದ್ದ ಶ್ರೇಷ್ಠ ಒಬ್ಬ ಪ್ರಾಧ್ಯಾಪಕ ಅನ್ನುವುದು ನಮಗೆ ಅಷ್ಟೇ ಮುಖ್ಯ.
ಆಸಾದಿಯವರನ್ನು ಒಮ್ಮೆ ನಾನು ಎಂಜಿಎಂ ಕಾಲೇಜಿಗೆ ಸ್ನೇಹಿತನಾಗಿ ಬರ ಮಾಡಿಕೊಂಡು ನಮ್ಮ ವಿದ್ಯಾರ್ಥಿಗಳಿಗೆ ಪಾಠ ಮಾಡಿಸಿದು ನೆನಪಿದೆ. ಆಗ ಆವರು ಹೇಳಿದ ಮಾತೊಂದು ಇನ್ನೂ ನನ್ನನ್ನು ನೆನಪಿಸುತ್ತದೆ. "ನನಗೆ ಎಂಜಿಎಂನಲ್ಲಿ ಪದವಿಗೆ ಸೇರ ಬೇಕೆಂಬ ಆಸೆ ಇತ್ತು. ಆದರೆ ಅಂದು ನನಗೆ ಈ ಕಾಲೇಜಿನಲ್ಲಿ ಸೀಟೇ ಕೊಡಲಿಲ್ಲ. ಮತ್ತೆ ನಾನು ಶಿರ್ವದ ಕಾಲೇಜಿನಲ್ಲಿ ಸೇರಿಕೊಂಡೆ" ಅನ್ನುವ ನೆನಪನ್ನು ವಿದ್ಯಾರ್ಥಿಗಳ ಮುಂದೆ ಹಂಚಿಕೊಂಡರು.
ಇಂತಹ ಒಬ್ಬ ಆತ್ಮೀಯ ಸ್ನೇಹಿತನನ್ನು ಇಂದು ಬೆಳಿಗ್ಗೆ ನಾವು ಕಳೆದುಕೊಂಡಿದ್ದೇವೆ ಅನ್ನುವ ಅತೀವ ಬೇಸರ ನಮಗಿದೆ. ಅಗಲಿದ ಆಸಾದಿಯವರ ಮಹಾನ್ ಚೇತನಕ್ಕೆ ಅಸಂಖ್ಯಾತ ಸ್ನೇಹಿತರ ಪರವಾಗಿ ನುಡಿ ನಮನ ಸಲ್ಲಿಸುತ್ತೇನೆ.
ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿವೃತ್ತ ರಾಜ್ಯ ಶಾಸ್ತ್ರ ಮುಖ್ಯಸ್ಥ
ಎಂಜಿಎಂ ಕಾಲೇಜು ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ