ತೃತೀಯ ವಿಶ್ವ ಹವ್ಯಕ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ, ಸಾಧಕರಿಗೆ ಸನ್ಮಾನ

Upayuktha
0



ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾ ಆಯೋಜಿಸಿರುವ ಮೂರನೇ ವಿಶ್ವ ಹವ್ಯಕ ಸಮ್ಮೇಳನ ಶುಕ್ರವಾರ ಬೆಳಗ್ಗೆ ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ಮೂರು ದಿನಗಳ ಕಾಲ ನಡೆಯುವ ಈ ಐತಿಹಾಸಿಕ ಸಮ್ಮೇಳನವನ್ನು ಶ್ರೀರಾಮಚಂದ್ರಾಪುರಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಉದ್ಘಾಟಿಸಿದರು.


ಬಳಿಕ ಅವರು ಮಾತನಾಡಿ, ನಾನು ನನ್ನ ಎಂಬ ಶಬ್ದಗಳು ಸತ್ತು ನಾವು ಜಾಗೃತವಾಗುವುದೇ ಸಮ್ಮೇಳನವಾಗಿದೆ. 'ನಾನು' ಸತ್ತಾಗ ಮಾತ್ರ ಸಮಾಜದ ಉದ್ದಾರ ಸಾಧ್ಯ. ಹಣದ ಸಂಪತ್ತು ಸಂಪತ್ತಲ್ಲ. ನಮ್ಮ ಸಂಸ್ಕೃತಿಯೇ ನಿಜವಾದ ಸಂಪತ್ತು ಎಂದರು.


ಮಯೂರ ವರ್ಮ ದೂರದ ಉತ್ತರದ ಅಹಿಚ್ಛತ್ರದಿಂದ ನಮ್ಮ ಪೂರ್ವಜರನ್ನು ಕರೆತಂದ ಎಂಬ ಉದಾಹರಣೆಯೇ ಹವ್ಯಕ ಸಮಾಜದ ಶ್ರೇಷ್ಠತೆಯನ್ನು ತಿಳಿಸುತ್ತದೆ. ಹಾಗೆಯೇ ಆನಂತರ ನಾವು ನಾಡಿನಾದ್ಯಂತ ವಿಸ್ತರಿಸಿರುವುದು ಕೂಡ ಹವ್ಯಕ ಸಮಾಜದ ಶ್ರೇಷ್ಠತೆಯನ್ನು ತೋರ್ಪಡಿಸುತ್ತದೆ. ಕ್ಯಾಂಟಿಟಿಗಿಂತ ಕ್ಯಾಲಿಟಿ ಮುಖ್ಯ ಎಂಬುದಕ್ಕೆ ಹವ್ಯಕ ಸಮುದಾಯ ಉದಾಹರಣೆ ಎಂದ ಶ್ರೀಗಳು ತುಂಬಿರುವ ಅರಮನೆ ಮೈದಾನ ಸಮಾಜ ಪುರುಷ ಜಾಗೃತವಾಗಿರುವುದನ್ನು ಸೂಚಿಸುತ್ತದೆ. ಸಮಾಜದ ಸಂಖ್ಯೆ ಎಷ್ಟೇ ಇರಲಿ ನಾವು ಒಗ್ಗಟ್ಟಾಗಿ ಇರುವತ್ತ ಯೋಚಿಸೋಣ ಎಂದರು.



ಕ್ಷೀಣಿಸುತ್ತಿದೆ ಹವ್ಯಕ ಸಮಾಜ!

ಹವ್ಯಕ ಸಮಾಜ ತುಂಬಾ ವೇಗವಾಗಿ ಕ್ಷೀಣಿಸುತ್ತಿದ್ದು, ಹವ್ಯಕ ಸಂಸ್ಕೃತಿಗೆ ಅಪಾಯ ಎದುರಾಗಿದೆ. ನಾವು ಗೋವಂಶವನ್ನು ಉಳಿಸುವ ಅಭಿಯಾನ ಮಾಡುತ್ತಿದ್ದೇವೆ. ಇದೀಗ ಹವ್ಯಕ ಸಮುದಾಯವನ್ನು ಸಂರಕ್ಷಿಸುವ ಆಪತ್ತು ಎದುರಾಗಿದೆ. ದಕ್ಷಿನ ಕೋರಿಯಾದ ಉದಾಹರಣೆಯನ್ನು ನೀಡಿದ ಶ್ರೀಗಳು, ಜನಸಂಖ್ಯಾ ನಿಯಂತ್ರಣದ ಕಾರಣದಿಂದಾಗಿ ದಕ್ಷಿಣ ಕೊರಿಯಾ ವಿನಾಶದ ಅಂಚಿನಲ್ಲಿದೆ. ಇದೇ ರೀತಿ ಹವ್ಯಕ ಸಮಾಜಕ್ಕೂ ಅಪಾಯ ಎದುರಾಗುವ ಸಂಭವವಿದೆ. ಮಕ್ಕಳೆಂದರೆ ಸಂಪತ್ತಾಗಿದ್ದು, ಸತ್ಪ್ರಜೆಗಳನ್ನು ಪಡೆಯುವ ಮೂಲಕ ಸಮಾಜವನ್ನು ಹಾಗೂ ಸಂಸ್ಕೃತಿಯನ್ನು ಉಳಿಸಬೇಕು. ಮಕ್ಕಳನ್ನು ಸಾಕಲು ನಿಮಗೆ ಕಷ್ಠವಾದರೆ ಮಠ ಮಕ್ಕಳನ್ನು ಸಲಹಲು ಸಿದ್ಧವಾಗಿದ್ದ ಎಂದು ಹವ್ಯಕ ಸಮಾಜಕ್ಕೆ ಕರೆನೀಡಿದರು.


ಮಂತ್ರಾಲಯದ ಶ್ರೀಶ್ರೀ ಸುಭುದೇಂದ್ರತೀರ್ಥ ಮಹಾಸ್ವಾಮಿಗಳು ಮಾತನಾಡಿ, ಆಡುಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿಗೆ ಉದಾಹರಣೆಯಾಗಿ ಇರುವವರು ಹವ್ಯಕರು. ಎಲ್ಲಾ ಆಯಾಮಗಳಲ್ಲಿ ದೇಶದ ಹಿತಕ್ಕೆ ತೊಡಗಿಸಿಕೊಂಡವರು ಹವ್ಯಕರು. ಇದು ಬೇಡದ ಸಮುದಾಯ ಮಾತ್ರವಲ್ಲ ಎಲ್ಲರಿಗೂ ಬೇಕಾದ ಸಮಾಜ ಇದು. ಭವ್ಯ ಭಾರತದ ನಿರ್ಮಾಣಕ್ಕೆ ಎಲ್ಲಾ ಸಮುದಾಯಗಳ ಸೌಹಾರ್ಧತೆ ಬೇಕು. ಅದಕ್ಕೆ ಹವ್ಯಕ ಮಹಾಸಭೆ ಮುನ್ನುಡಿ ಹಾಕಿದೆ. ಪತ್ರಿಕಾ ರಂಗದಿಂದ ಹಿಡಿದು ಎಲ್ಲಾ ರಂಗದಲ್ಲಿ ಛಾಪು ಮೂಡಿಸಿದ ಕೀರ್ತಿ ಹವ್ಯಕರದ್ದು.


ಕರೋನಾ ಸಂದರ್ಭದಲ್ಲಿ ನಾಡಿಗೆ ಬಹುದೊಡ್ದ ಕೊಡುಗೆ ನೀಡಿದವರು ಡಾ.ಗಿರಿಧರ ಕಜೆಯವರು. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಔಷಧದ ಮೂಲಕ ಸಮಾಜದ ನೆರವಿಗೆ ಧಾವಿಸಿದವರು ಅವರು. ಇದೂ ಕೂಡ ಹವ್ಯಕ ಸಮುದಾಯದ ಲೋಕಕಲ್ಯಾಣ ಕಾರ್ಯಕ್ಕೆ ಉದಾಹರಣೆ ಎಂದರು.

    


ಆದಿಚುಂಚನಗಿರಿಯ ಶ್ರೀಶ್ರೀ ಸೌಮ್ಯನಾಥ ಮಹಾಸ್ವಾಮಿಗಳು ಮಾತನಾಡಿ, ಈ ಸಮ್ಮೇಳನ ಹವ್ಯಕ ಸಮಾಜದ ಜವಾಬ್ದಾರಿಯನ್ನು ಹೆಚ್ಚಿಸಿದೆ. ಎಲ್ಲ ಸಮುದಾಯಗಳೂ ಸೇರಿ ಸಮಸ್ತ ಮಾನವ ಜನಾಂಗಕ್ಕೆ ಒಳಿತು ಮಾಡೋಣ ಎಂದು ಕರೆನೀಡಿದರು.


ಸ್ವಾಗತ ಭಾಷಣ ಮಾಡಿದ ಡಾ.ಗಿರಿಧರ ಕಜೆ, ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಥಾಪಿತವಾದ ಹೆಮ್ಮೆ ಶ್ರೀ ಅಖಿಲ ಹವ್ಯಕ ಮಹಾಸಭೆಯದ್ದು. ಕದಂಬ ವಂಶದ ರಾಜಾ ಮಯೂರವರ್ಮನ ಆಶಯದಂತೆ ಉತ್ತರದ ಅಹಿಚ್ಛತ್ರದಿಂದ ಪುನಃ ಈ ನಾಡಿಗೆ ಮರಳಿದ ಶ್ರೇಷ್ಠ ವಂಶಜರು ಹವ್ಯಕರು. ಲೋಕ ಕಲ್ಯಾಣಕ್ಕಾಗಿ ಹುಟ್ಟಿದ ಸಮುದಾಯ ಈ ಹವ್ಯಕರು. ಅಡಕೆ ಹವ್ಯಕರ ಪಾರಂಪರಿಕ ಕೃಷಿ. ವೇದ ಹಾಗೂ ಕೃಷಿ ಎರಡನ್ನೂ ಸಮರ್ಪಕವಾಗಿ ಉಳಿಸಿ ಬೆಳೆಸಿಕೊಂಡ ಹೆಚ್ಚುಗಾರಿಕೆ ಹವ್ಯಕ ಸಮುದಾಯದ್ದು ಎಂದರು.


ಕೇವಲ ಒಂದೇ ಸಮುದಾಯಕ್ಕೆ ಸೀಮಿತವಾದ ಭಾಷೆ ಇರುವುದು ಹವ್ಯಕ ಸಮುದಾಯದ ಹೆಮ್ಮೆಯಾಗಿದ್ದು, ಹವಿಗನ್ನಡ ಹವ್ಯಕ ಸಮುದಾಯದ ಹೆಮ್ಮೆಯಾಗಿದ್ದು, ಸಮೃದ್ಧ ಸಾಹಿತ್ಯವನ್ನು ಹೊಂದಿದ ಹಿರೆಮೆ ಹವಿಗನ್ನಡದ್ದು. ಕನ್ನಡದ ಪ್ರಥಮ ನಾಟಕವಾದ ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನವು ಹವ್ಯಕ ಕನ್ನಡದಲ್ಲಿ ಇರುವುದು ಇದಕ್ಕೆ ಉದಾಹರಣೆಯಾಗಿದೆ. ಯಕ್ಷಗಾನ ಪ್ರಮುಖವಾಗಿ ಹವ್ಯಕರ ಕಲೆಯಾಗಿದ್ದು, ಶುದ್ಧ ಕನ್ನಡವನ್ನು ಇಂದಿಗೂ ಉಳಿಸಿಕೊಂಡಿರುವ ಖ್ಯಾತಿ ಯಕ್ಷಗಾನಕ್ಕಿದ್ದು, ಭಾಷಾ ಸಂರಕ್ಷಣೆಗೆ ಹವ್ಯಕರ ಕೊಡುಗೆ ಅಪರಿಮಿತವಾಗಿದೆ ಎಂದು ಅಭಿಪ್ರಾಯಪಟ್ಟರು.


ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಮಾತನಾಡಿ, ಎಲ್ಲೆಲ್ಲಿ ಪ್ರತಿಭೆಗೆ ಮನ್ನಣೆಯಿದೆಯೋ ಅಲ್ಲೆಲ್ಲಾ ಹವ್ಯಕರ ಛಾಪು ಇರುವುದನ್ನು ನಾವು ಗಮನಿಸಬಹುದು. ಹವ್ಯಕ ಸಮಾಜ ಶಿಸ್ತುಬದ್ಧ ಸಮಾಜ. ಹವ್ಯಕರು ಸ್ವಾಭಿಮಾನಿಗಳು. ಸರ್ಕಾರದ ಮುಂದೆ ಮೀಸಲಾತಿಗಳಂತಹ ಬೇಡಿಕೆ ಇಟ್ಟು ಸಂದರ್ಭಗಳನ್ನು ನಾವು ನೋಡಲು ಸಾಧ್ಯವಿಲ್ಲ. ಧಾರ್ಮಿಕತೆಯಿಂದ ಆರಂಭಿಸಿ ಸಾಫ್ಟ್ವೇರ್ ತನಕವೂ ಹವ್ಯಕರ ಪ್ರಭಾವವಿದೆ. ಅಡಿಕೆ ಕೇವಲ ತಿಂದುಗುಳುವ ವಸ್ತುವಲ್ಲ. ಅದು ನಮ್ಮ ಸಂಪ್ರದಾಯದ ಜೊತೆಗೆ ಅನ್ಯೋನ್ಯ ಸಂಬಂಧವನ್ನೂ ಹೊಂದಿದೆ. ಅಂತಹ ಅಡಕೆಯ ಜೊತೆಗೆ ನಂಟು ಹೊಂದಿದವರು ಹವ್ಯಕರು. ಜಾತಿಜಾತಿಗಳ ಮಧ್ಯೆ ಸಾಮರಸ್ಯ ಅತ್ಯಗತ್ಯವಾಗಿದ್ದು, ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಸಾಮರಸ್ಯ ಅಗತ್ಯ. ಈ ದಿಶೆಯಲ್ಲಿ ಹವ್ಯಕ ಸಮಾಜ ಮುನ್ನುಡಿ ಹಾಕಿದೆ ಎಂದರು.


ಸಮ್ಮೇಳನಾಧ್ಯಕ್ಷರು ಹಾಗೂ ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಸವಾಲನ್ನು ಮೀರಿ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿತೋರಿಸಿದವರು ನಮ್ಮ ಪೂರ್ವಜರು. ನಾವು ನಮ್ಮ ಜವಾಬ್ದಾರಿಯನ್ನು ಹೆಚ್ಛ್ಗಿಸಿಕೋಂಡು ಸಮಾಜ ಸಂಘಟನೆಗೆ ತೊಡಗಿಸಿಕೊಳ್ಳೋಣ ಎಂದರು. ಹಳ್ಳಿಸೊಗಡಿನ ಹಳ್ಳಿಮನೆ ರಾಜಧಾನಿಯ ಅರಮನೆ ಮೈದಾನದಲ್ಲಿ ನಿರ್ಮಾಣವಾಗಿದೆ. ಇದನ್ನು ನೋಡುವುದೇ ಒಂದು ಸಂತಸದ ವಿಚಾರವಾಗಿದೆ.


ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡ್ಯೂರಪ್ಪ ಮಾತನಾಡಿ, ಭವ್ಯ ಭಾರತದ ಸಂಸ್ಕೃತಿಯನ್ನು ಜಗದಗಲ ವಿಸ್ತರಿಸಿದ ಕೀರ್ತಿ ಹವ್ಯಕ ಸಮಾಜದ್ದು. ಜನಸಂಖ್ಯಾ ದೃಷ್ಟಿಯಲ್ಲಿ ಸಣ್ಣದಾದರೂ ದೇಶಕ್ಕೆ ಈ ಸಮಾಜದ ಕೊಡುಗೆ ಅಪಾರ. ಪ್ರತಿಭೆಗೆ ಮತ್ತೊಂದು ಹೆಸರು ಹವ್ಯಕ ಸಮಾಜವೋ ಎಂಬಂತಿರುವ ಅಪರೂಪದ ಸಮಾಜ ಹವ್ಯಕ ಸಮಾಜ. ಸಮಾವೇಶದಲ್ಲಿ ವ್ಯಕ್ತವಾಗಿರುವ ಒಗ್ಗಟ್ಟು ಈ ಸಮಾಜಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಒಳಿತುಮಾಡುವುದು ನಿಶ್ಚಿತ ಎಂದರು.


ಮಾಜಿ ಕೇಂದ್ರಮಂತ್ರಿ ಸದಾನಂದ ಗೌಡ ಮಾತನಾಡಿ, ನಾನು ಎತ್ತರಕ್ಕೆ ಏರಲು ಹವ್ಯಕ ಸಮಾಜದ ಕೊಡುಗೆ ಅಪರಿಮಿತವಾಗಿದೆ. ಈ ಸಮಾಜದ ಜೊತೆ ನನ್ನ ಸಂಬಂಧ ಸುಮಧುರವಾಗಿದೆ ಎಂದರು.


ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರ್ನಳ್ಳಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮ, ಕರನಿರಾಕರಣೆ, ಉಪ್ಪಿನ ಸತ್ಯಾಗ್ರಹ ಮುಂತಾದ ಹೋರಾಟದಲ್ಲಿ ಹವ್ಯಕ ಸಮಾಜದ ತೊಡಗಿಕೊಳ್ಳುವಿಕೆ ದೊಡ್ದಮಟ್ಟದಲ್ಲಿದೆ. ಬ್ರಾಹ್ಮಣ ಸಮುದಾಯ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ನಾವು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.


ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಅಶೋಕ್ ಹಾರ್ನಳ್ಳಿ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮ, ಕರನಿರಾಕರಣೆ, ಉಪ್ಪಿನ ಸತ್ಯಾಗ್ರಹ ಮುಂತಾದ ಹೋರಾಟದಲ್ಲಿ ಹವ್ಯಕ ಸಮಾಜದ ತೊಡಗಿಕೊಳ್ಳುವಿಕೆ ದೊಡ್ದಮಟ್ಟದಲ್ಲಿದೆ. ಬ್ರಾಹ್ಮಣ ಸಮುದಾಯ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ನಾವು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ ಎಂದರು.


ಬ್ರಾಹ್ಮಣ ಅಭಿವೃದ್ಧಿ ಮಂಡಲಿಯ ಅಧ್ಯಕ್ಷರಾದ ಅಸಗೋಡು ಜಯಸಿಂಹ ಮಾತನಾಡಿ, ಬ್ರಾಹ್ಮಣ ಸಮಾಜ ಎತ್ತರಕ್ಕೆ ಬೆಳದಿದ್ದರೆ ಅದಕ್ಕೆ ಗುರುಗಳ ಅನುಗ್ರಹವೇ ಕಾರಣ. ಸಮುದಾಯಗಳಿಗೆ ನಾಯಕತ್ವ ಕೊಡುವ ಶಕ್ತಿ ಹವ್ಯಕರಲ್ಲಿದೆ. ಇದಕ್ಕೆ ರಾಮಕೃಷ್ಣ ಹೆಗಡೆಯವರೇ ಉದಾಹರನೇ ಎಂದರು.


ಸಮಾಜದ ವಿದ್ವಾಂಸರು ಹಾಗೂ ಚಿಂತಕರಿಂದ ೩ ಗೋಷ್ಟಿಗಳು ನಡೆದವು. ಸಮಾಜಕ್ಕೆ ಹೊಸ ಚಿಂತನೆಗಳನ್ನು ನೀಡುವುದರ ಜೊತೆಗೆ ಸಮಸ್ಯೆಗಳಿಗೆ ಪರಿಹಾರದ ದಾರಿಗಳನ್ನು ಸೂಚಿಸಿತು.


ಇದಕ್ಕೂ ಮೊದಲು ಸಂತರು ಹಾಗೂ ಗಣ್ಯರಿಗೆ ಭವ್ಯ ಸ್ವಾಗತದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು. ಅಹಿಚ್ಛತ್ರ ಜ್ಯೋತಿಯನ್ನು ಬೆಳಗುವ ಮೂಲಕ ಕಾರ್ಯಕ್ರಮ ವಿಧುಕ್ತವಾಗಿ ಉದ್ಘಾಟನೆಯಾಯಿತು. ಇದೇ ಸಂಧರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.


ಸಾಂಸ್ಕೃತಿಕ ಸೌರಭ:

ಕನ್ನಡದ ಪ್ರಥಮ ನಾಟಕ 'ಇಗ್ಗಪ್ಪ ವಿವಾಹ ಪ್ರಹಸನ' ನಾಟಕ ಹಾಗೂ ಶಾಸ್ತ್ರೀಯ ಸಂಗೀತ ಅರಮನೆ ಮೈದಾನಕ್ಕೆ ಗಂಧರ್ವಲೋಕವನ್ನು ಕರೆತಂದಿತು.



ಸಾಧಕ ರತ್ನ ಸನ್ಮಾನ:

ವಿವಿಧ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಿದ  ೮೧ ಹವ್ಯಕ ಸಾಧಕರನ್ನು 'ಹವ್ಯಕ ಸಾಧಕರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾಜ ಗಣ್ಯಮಾನ್ಯರು ಸಾಧಕರನ್ನು ಸನ್ಮಾನಿಸಿದರು.


ಸಾಧಕರ ಸಾಧನೆಯ ಹಾದಿ ಸುಲಭವಲ್ಲ. ಪ್ರತಿಕ್ಷಣ ಸಾಧಕನೊಬ್ಬ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಸಾಧಕನ ಸಾಧನೆ ನಿರ್ಧಾರವಾಗುತ್ತದೆ.

- ರಮೇಶ್ ಅರವಿಂದ್



ಕೃಷಿರತ್ನ ಪ್ರಶಸ್ತಿ:

ಕೃಷಿಕ್ಷೇತ್ರಕ್ಕೆ ಸಂಬಂಧಿಸಿ ವಿವಿಧ ಸಾಧನೆಯನ್ನು ಮಾಡಿದ 81 ಕೃಷಿಕರನ್ನು 'ಹವ್ಯಕ ಕೃಷಿರತ್ನ' ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.


ಜಾತಿಗಳು ಸಂಘಟಿತವಾಗಿ ತನ್ಮೂಲಕ ಹಿಂದೂ ಸಮಾಜವನ್ನು ಬಲಗೊಳಿಸುವುದು ಸ್ವಾಗತಾರ್ಹ ವಾಗಿದ್ದು, ಜಾತಿಸಂಘಟನೆಗಳು ಸಂಘರ್ಶಕ್ಕೆ ಕಾರಣವಾಗದೇ, ಸಂಘಟನೆಗೆ ಕಾರಣವಾದಾಗ ಅದು ಸಮಾಜಕ್ಕೆ ಒಳ್ಳೆಯದು. ರೈತರನ್ನು ಕೇವಲವಾಗಿ ಚಿತ್ರಿಸುವುದು ಸರಿಯಲ್ಲ. ರೈತರನ್ನು ಅನುಕಂಪದ ದೃಷ್ಟಿಯಲ್ಲಿ ನೋಡುವ ಬದಲು ಹೆಮ್ಮೆಯ ದೃಷ್ಟಿಯಿಂದ ನೋಡುವಂತಾಗಬೇಕು. ಏಕೆಂದರೆ ನಾಡಿಗೆ ಅನ್ನ ಕೊಡುವವನು ರೈತ. ಕೃಷಿ ಉತ್ಪನ್ನಗಳನ್ನು ದುಡ್ದಿನ ದೃಷ್ಟಿಯಿಂದ ಅಳೆಯುವ ಬದಲು ಭಾವನೆಯಿಂದ ನೋಡಬೇಕು.

- ಚಕ್ರವರ್ತಿ ಸೂಲಿಬೆಲೆ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top