ಕಲಬುರಗಿಯಲ್ಲಿ ಜೀವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ- ಡಾ. ಸಿ.ಎನ್ ಮಂಜುನಾಥ್ ವೀಕ್ಷಣೆ

Upayuktha
0

ವೈದ್ಯಕೀಯ ರಂಗ ಸೇವಾ ಕ್ಷೇತ್ರವಾಗಲಿ: ಮಾಲೀಕಯ್ಯ ಗುತ್ತೇದಾರ್




ಕಲಬುರಗಿ: ವೈದ್ಯಕೀಯ ರಂಗವು ವಾಣಿಜ್ಯ ದೃಷ್ಟಿ ಹೊಂದದೆ ಸೇವಾ ದೃಷ್ಟಿಯೊಂದಿಗೆ ಸಮಾಜಮುಖಿಯಾದಾಗ ಸಾರ್ಥಕತೆ ಹೊಂದುತ್ತದೆ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹೇಳಿದರು.


ಕಲಬುರಗಿಯ ಸಂತೋಷ್ ಕಾಲನಿಯಲ್ಲಿ ನೂತನವಾಗಿ ಆರಂಭಿಸಿದ "ಜೀವಾ- ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ"ಗೆ ಚಾಲನೆ ನೀಡಿದ ನಂತರ ಮಾತನಾಡಿ ಕಲ್ಯಾಣ ಕರ್ನಾಟಕದಲ್ಲಿ ಜೀವಾ ಆಸ್ಪತ್ರೆಯು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಾಗಬೇಕು ಹಾಗೂ ಉತ್ತಮ ನರ್ಸಿಂಗ್ ವ್ಯವಸ್ಥೆ ಸಿಗಬೇಕು. ನೂತನ ಆಸ್ಪತ್ರೆಯು ವಾಣಿಜ್ಯ ದೃಷ್ಟಿಕೋನ ಹೊಂದದೆ ಸೇವಾ ಮನೋಭಾವದಿಂದ ಕಾರ್ಯಾಚರಿಸಬೇಕು. ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳು ಜೀವ ಹಿಂಡುವ ಆಸ್ಪತ್ರೆಗಳೆಂಬ ಕುಖ್ಯಾತಿಗೆ ಒಳಗಾಗಿದ್ದು ಜೀವ ಹೋದರೂ ವೆಂಟಿಲೇಟರ್ ನಲ್ಲಿ ಇಟ್ಟು ಹಣ ಸುಲಿಗೆ ಮಾಡುತ್ತಾರೆಂಬ ಆಪಾದನೆ ಇದೆ. ಇಂತಹ ಅಪನಂಬಿಕೆಯನ್ನು ದೂರ ಮಾಡಿ ಮಾನವೀಯತೆಯೊಂದಿಗೆ ಸೇವಾ ನಿರತವಾಗಿ ಜನ ಪ್ರೀತಿಗೆ ಜೀವಾ ಆಸ್ಪತ್ರೆ ಪಾತ್ರವಾಗಬೇಕು ಎಂದು ಹೇಳಿದರು.


ಗುತ್ತೇದಾರ್ ಕುಟುಂಬವು ಸಮಾಜ ಸೇವೆಗೆ ಹೆಸರಾಗಿದ್ದು ಇದೀಗ ಆರೋಗ್ಯ ಕ್ಷೇತ್ರಕ್ಕೂ ಕಾಲಿಟ್ಟಿರುವುದು ಹೆಮ್ಮೆಯ ಸಂಗತಿ. ತಂದೆಯವರಾದ ವೆಂಕಯ್ಯ ಗುತ್ತೇದಾರ್ ಅವರಿಗೆ ತಮ್ಮ ಮಕ್ಕಳನ್ನು ವೈದ್ಯರಾಗಿಸಬೇಕೆಂಬ ಕನಸು ಇದ್ದರೂ ಅದು ಈಡೇರಲಿಲ್ಲ. ಇದೀಗ ಮೊಮ್ಮಕ್ಕಳಿಂದ ಆ ಕನಸು ನನಸಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ಇದಕ್ಕಾಗಿ ಜೀವಾ ಆಸ್ಪತ್ರೆ ವೈದ್ಯರ ತಂಡವನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.


ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕರು ಹಾಗೂ ಲೋಕಸಭಾ ಸದಸ್ಯರಾದ ಡಾ. ಸಿ.ಎನ್ ಮಂಜುನಾಥ್ ಅವರು ಉದ್ಘಾಟನೆಯ ಸಂದರ್ಭದಲ್ಲಿ ಭೇಟಿ ನೀಡಿ ಆಸ್ಪತ್ರೆಯ ಆಪರೇಷನ್ ಥಿಯೇಟರ್, ಸ್ಕ್ಯಾನಿಂಗ್ ಸೆಂಟರ್ ಹಾಗೂ ಆಸ್ಪತ್ರೆಯ ಎಲ್ಲಾ ಸೌಲಭ್ಯಗಳನ್ನು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.


ವೈದ್ಯಕೀಯ ಸೇವೆಯು ಮಾನವೀಯತೆಯ ಸೇವೆಯಾಗಿದ್ದು ಗುತ್ತೇದಾರ ಕುಟುಂಬವು ಆರೋಗ್ಯ ಕ್ಷೇತ್ರಕ್ಕೆ ಹೆಜ್ಜೆ ಇಟ್ಟಿರುವುದು ದೊಡ್ಡ ಬೆಳವಣಿಗೆಯಾಗಿದೆ. ವೈದ್ಯರು ಜೀವ ಉಳಿಸುವ ಪ್ರತ್ಯಕ್ಷ ದೇವರಾಗಿದ್ದು ಅಜ್ಜನ  ಅಂತಹ ದೊಡ್ಡ ಕನಸನ್ನು ಈಡೇರಿಸಿದ ಗುತ್ತೇದಾರ್ ಮೊಮ್ಮಕ್ಕಳು ನಿಜಕ್ಕೂ ಪ್ರಶಂಸನಾರ್ಹರು. ವೈದ್ಯೋ ನಾರಾಯಣ ಹರಿ ಎಂಬ ತತ್ವವನ್ನು ಪಾಲಿಸಿ ಜನಸೇವೆ ಮಾಡುವಂತಾಗಲಿ ಎಂದು ಚೌಡಾಪುರ ಚಿಣಮಗೇರಿ ಮಹಾಂತೇಶ್ವರ ಮಠದ ಶ್ರೀ ವೀರಮಹಾಂತ ಶಿವಯೋಗಿಗಳು ನುಡಿದರು.


ಗುತ್ತೇದಾರ್ ಕುಟುಂಬವು ಆಸ್ಪತ್ರೆ ನಿರ್ಮಾಣ ಮಾಡಬೇಕೆಂಬ ಬಹುಕಾಲದ ಕನಸು ಹೊಂದಿದ್ದು ಈಗ ಈಡೇರಿಕೆಯಾಗಿದೆ. ಉತ್ತಮ ವೈದ್ಯರ ತಂಡದೊಂದಿಗೆ ಆಸ್ಪತ್ರೆ ಆರಂಭದಿಂದಾಗಿ ವೈದ್ಯಕೀಯ  ಸೇವೆ ಪಡೆಯಬೇಕೆಂಬ ಬಡವರ ಆಸೆಯು ಈಡೇರಿದಂತಾಗಿದೆ. ಇಂದಿನ ದಿನಗಳಲ್ಲಿ ಆಹಾರ ಕೂಡ ವಿಷಪೂರಿತವಾಗಿದ್ದು ರೋಗರುಜಿನ ಹೆಚ್ಚಾಗುತ್ತಿದೆ. ಆರೋಗ್ಯ ಸಮಸ್ಯೆ ತೀವ್ರವಾಗಿ ಹೆಚ್ಚುತ್ತಿರುವುದರಿಂದ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೌಲಭ್ಯ ಪಡೆಯಲು ಈ ಆಸ್ಪತ್ರೆ ಮುಂದಾಗಲಿ ಎಂದು ಬಡದಾಳ ತೇರಿನ ಮಠದ ಶ್ರೀ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.


ಆಸ್ಪತ್ರೆಯ ವೈದ್ಯ ಡಾ. ಅಜಯ್ ಗುತ್ತೇದಾರ್ ಪ್ರಾಸ್ತಾವಿಕವಾಗಿ ಮಾತನಾಡಿ, 30 ಬೆಡ್‌ಗಳು ಹಾಗೂ 10 ಐಸಿಯು ಬೆಡ್, ವೆಂಟಿಲೇಟರ್, ಶಸ್ತ್ರ ಚಿಕಿತ್ಸಾ ಸೌಲಭ್ಯದೊಂದಿಗೆ ಸುಸಜ್ಜಿತವಾಗಿದ್ದು ಜೊತೆಗೆ ಐಸಿಯು ಸೌಲಭ್ಯದೊಂದಿಗೆ ನಾಲ್ಕು ಮಕ್ಕಳ ಚಿಕಿತ್ಸೆಗೆ ಬೆಡ್ ಕೂಡ ಹೊಂದಿದೆ. ತುರ್ತು ಚಿಕಿತ್ಸೆ, ರೇಡಿಯೋಲಜಿ, ಸ್ಕ್ಯಾನಿಂಗ್, ಎಕ್ಸರೇ, ಫಾರ್ಮ ಮೆಡಿಕಲ್, ಲ್ಯಾಬೋರೇಟರಿ ಮುಂತಾದ ಸೌಲಭ್ಯಗಳನ್ನು ಹೊಂದಿದೆ. ಅಲ್ಲದೆ ಈ ಆಸ್ಪತ್ರೆಯು ಯಶಸ್ವಿನಿ ಹಾಗೂ ಆಯುಷ್ಮಾನ್ ಭಾರತ್ ಕಾರ್ಡ ಹೊಂದಿದವರಿಗೂ ಕೂಡ ಚಿಕಿತ್ಸೆ ನೀಡಲಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ, ಬಸವರಾಜ ದೇಶಮುಖ್, ಮಾಜಿ ಶಾಸಕರಾದ ಸುಭಾಷ್ ಆರ್. ಗುತ್ತೇದಾರ್, ಅಶೋಕ್ ಗುತ್ತೇದಾರ್ ಬಡದಾಳ, ಜೀವಾ ಆಸ್ಪತ್ರೆಯ  ರೇಡಿಯೋಲಜಿ ತಜ್ಞರಾದ  ಡಾ. ಸುಶೀಲ್ ಎ. ಗುತ್ತೇದಾರ್, ಪ್ರಸೂತಿ ತಜ್ಞೆ ಡಾ. ಶಿಫಾಲಿ ಅಜಯ್ ಗುತ್ತೇದಾರ್, ಚರ್ಮರೋಗ ತಜ್ಞರಾದ ಡಾ. ದಿವ್ಯಶ್ರೀ ಗುತ್ತೇದಾರ್, ಸುಮಿತ್ ಪಿ ಬೋಲ್ಗಾಂವಕರ ಅಕ್ಷಯ್ ಗುತ್ತೇದಾರ್, ಡಾ. ಶಿವರಾಜ್ ಪಾಟೀಲ್, ಡಾ. ಮಹಾಂತೇಶ ಹಾಲಮಳ್ಳಿ, ಎಂ. ಬಿ ಪಾಟೀಲ್, ಸತೀಶ್ ವಿ ಗುತ್ತೇದಾರ್, ಸಂತೋಷ್ ಗುತ್ತೇದಾರ್, ಜಮುನಾ ಅಶೋಕ್ ಗುತ್ತೇದಾರ್ ಮತ್ತಿತರು ಉಪಸ್ಥಿತರಿದ್ದರು. ಯುವ ಮುಖಂಡರಾದ ನಿತಿನ್ ವಿ. ಗುತ್ತೇದಾರ್ ಧನ್ಯವಾದವಿತ್ತರು. ಬಸಯ್ಯ ಗುತ್ತೇದಾರ್ ತೆಲ್ಲೂರ ಮತ್ತು ಬಾಬುರಾವ್ ಕೋಬಾಳ ಭಕ್ತಿ ಗೀತೆ ಗಾಯನ ಪ್ರಸ್ತುತಪಡಿಸಿದರು. ಕಾರ್ಯಕ್ರಮದ ಪೂರ್ವಭಾವಿಯಾಗಿ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಅವರ ಗೌರವಾರ್ಥ ಶ್ರದ್ಧಾಂಜಲಿ ಸಲ್ಲಿಸಿ ಸರಳ ಕಾರ್ಯಕ್ರಮ ಆಯೋಜಿಸಲಾಯಿತು. ವಿಜಯ್ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top